ಬೆಳಗಾವಿ: ನಿರ್ಬಂಧದ ನಡುವೆಯೂ ಉಳವಿ, ಯಲ್ಲಮ್ಮನಗುಡ್ಡಕ್ಕೆ ಚಕ್ಕಡಿ ಯಾತ್ರೆ..!

By Kannadaprabha NewsFirst Published Feb 4, 2023, 7:09 PM IST
Highlights

ಚರ್ಮಗಂಟು ರೋಗ ಹಿನ್ನೆಲೆ ಈ ಎರಡು ಜಾತ್ರೆಗಳಿಗೆ ಚಕ್ಕಡಿ ಮೂಲಕ ಪ್ರಯಾಣಕ್ಕೆ ನಿರ್ಬಂಧಿಸಿ ಜಿಲ್ಲಾಡಳಿತಗಳು ನಿರ್ಬಂಧ ಹೇರಿರುವುದು ಇದೀಗ ಕಗ್ಗಂಟಾಗಿಸಿದೆ.

ಜಗದೀಶ ವಿರಕ್ತಮಠ 

ಬೆಳಗಾವಿ(ಫೆ.04): ಬನದ ಹುಣ್ಣಿಮೆಯಂದು ಉತ್ತರ ಕರ್ನಾಟಕ ಭಾಗದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಜರುಗುವ ಜಾತ್ರೆಗಳ ಪೈಕಿ ಉಳವಿ ಹಾಗೂ ಯಲ್ಲಮ್ಮನ ಗುಡ್ಡ ಜಾತ್ರೆಗಳು ಈ ಭಾಗದ ಜನರಲ್ಲಿ ಸಂಭ್ರಮವನ್ನು ಉಂಟು ಮಾಡುತ್ತವೆ. ಆದರೆ, ಚರ್ಮಗಂಟು ರೋಗ ಹಿನ್ನೆಲೆ ಈ ಎರಡು ಜಾತ್ರೆಗಳಿಗೆ ಚಕ್ಕಡಿ ಮೂಲಕ ಪ್ರಯಾಣಕ್ಕೆ ನಿರ್ಬಂಧಿಸಿ ಜಿಲ್ಲಾಡಳಿತಗಳು ನಿರ್ಬಂಧ ಹೇರಿರುವುದು ಇದೀಗ ಕಗ್ಗಂಟಾಗಿಸಿದೆ.

ಹಲವು ದಶಕಗಳಿಂದ ಉಳವಿಯ ಶ್ರೀ ಚನ್ನಬಸವೇಶ್ವರ ಹಾಗೂ ಸವದತ್ತಿಯ ಶ್ರೀ ರೇಣುಕಾ ಯಲ್ಲಮದೇವಿ ಜಾತ್ರೆಗೆ ನಾಡಿನ ವಿವಿಧ ಮೂಲೆಗಳಿಂದ ಚಕ್ಕಡಿ, ಟ್ರಾಕ್ಟರ್‌ಗಳ ಮೂಲಕ ಗ್ರಾಮಸ್ಥರು, ಕುಟುಂಬಸ್ಥರು ಹೋಗಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಎತ್ತು, ಆಕಳುಗಳಿಗೆ ಚರ್ಮಗಂಟು ರೋಗ ಬೆಂಬಿಡದೇ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಅಸುನೀಗಿವೆ.

GANJA CASE: ಬೆಳಗಾವಿಯ ಟಿಳಕವಾಡಿ ಸಿಪಿಐ, ಇಬ್ಬರು ಸಿಬ್ಬಂದಿ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು

ಈ ಮಧ್ಯೆಯೂ ರೈತರು ತಮ್ಮ ಸಂಪ್ರದಾಯವನ್ನು ಮುರಿಯದೆ, ಚಕ್ಕಡಿ ಹಾಗೂ ಟ್ರಾಕ್ಟರ್‌ಗಳ ಮೂಲಕ ಯಲ್ಲಮ್ಮನ ಗುಡ್ಡಕ್ಕೆ ಹಾಗೂ ಉಳವಿಯತ್ತ ಪ್ರಯಾಣ ಬೆಳಸಿದ್ದಾರೆ. ಆದರೆ, ಚರ್ಮಗಂಟು ಬಾಧೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರವಾರ, ಬೆಳಗಾವಿ ಜಿಲ್ಲಾಡಳಿತಗಳು ಚಕ್ಕಡಿಗಳ ಮೂಲಕ ಜಾತ್ರೆಗೆ ಪ್ರಯಾಣಿಸುವುದನ್ನು ನಿರ್ಬಂಧಿಸಿರುವುದು ಇದೀಗ ಕಗ್ಗಂಟಾಗಿಸಿದೆ.

ರೈತರು ಈಗಾಗಲೇ ಚಕ್ಕಡಿಗಳಿಗೆ ಬಣ್ಣ ಬಳಿಯುವುದು, ಗಾಲಿಗಳನ್ನು ಸಿದ್ಧಪಡಿಸುವುದು, ಎತ್ತು ಹಾಗೂ ಹೋರಿಗಳ ಕೊಂಬುಗಳಿಗೆ ಬಣ್ಣ ಹಚ್ಚುವುದರ ಜನತೆ ಇನ್ನಿತರ ಅಲಂಕಾರಿಕ ಸಾಮಗ್ರಿಗಳ ಮೂಲಕ ಸಿಂಗಾರ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದಿಂದಾಗಿ ಕೆಲವು ರೈತರು ತಮ್ಮ ಜಾನುವಾರಗಳನ್ನು ಕೈಗೆ ಬಂದ ದರಕ್ಕೆ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವು ರೈತರ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧೆಯಿಂದಾಗಿ ಎತ್ತುಗಳಲ್ಲಿ ಅಶಕ್ತತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಈ ಬಾರಿ ಜಾತ್ರೆಗಳಿಗೆ ಚಕ್ಕಡಿ ಹೂಡುವುದನ್ನು ಕೈ ಬಿಟ್ಟಿದ್ದಾರೆ.

ಈ ಮಧ್ಯೆ ಕೆಲವು ರೈತರು ಜಿಲ್ಲಾಡಳಿತ ಈ ನಿರ್ಬಂಧವನ್ನು ಲೆಕ್ಕಿಸದೇ ತಮ್ಮ ಸಂಪ್ರದಾಯ, ಸಂಭ್ರಮಕ್ಕೆ ಯಾವುದೇ ಅಡೆತಡೆ ಆಗದಂತೆ ಪ್ರತಿವರ್ಷದಂತೆ ಚಕ್ಕಡಿಗಳನ್ನು ಸಿಂಗಾರ ಮಾಡಿಕೊಂಡು ಜಾತ್ರೆಗಳಿಗೆ ಪ್ರಯಾಣಿಸುತ್ತಿದ್ದಾರೆ. ಇನ್ನೂ ಕೆಲವರು ಜಿಲ್ಲಾಡಳಿತ ಕ್ರಮಕ್ಕೆ ಮನ್ನಣೆ ನೀಡಿ ಚಕ್ಕಡಿ ಬದಲಿಗೆ, ಟ್ರಾಕ್ಟರ್‌, ಗೂಡ್‌್ಸ ವಾಹನಗಳ ಮೂಲಕ ಯಲ್ಲಮ್ಮನಗುಡ್ಡ ಹಾಗೂ ಉಳವಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಚರ್ಮಗಂಟು ರೋಗಕ್ಕೆ ಬಾಧಿತವಾಗಿರುವ ಜಾನುವಾರುಗಳು ಮೊದಲಿನ ಸ್ಥಿತಿಗೆ ಬರಲು ಹಲವು ತಿಂಗಳು ಕಾಯಬೇಕು. ಜಾನುವಾರುಗಳಲ್ಲಿ ಕಾಣಿಸಿಕೊಂಡ ಜಾನುವಾರಗಳಿಗೆ ಗಂಟು ಹುನ್ನಾಗಿ ಸೋರುತ್ತಿವೆ. ಈ ನೋವು ವಾಸಿಯಾಗಬೇಕಾದರೆ ಹಲವು ತಿಂಗಳುಗಳನ್ನೇ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ರೈತಾಪಿ ವರ್ಗ ಕಂಗಾಲಾಗಿದೆ.

click me!