ಜಾತ್ರೆ ಅಂದರೆ ದೇವರ ಪೂಜೆ, ಉತ್ಸವ ಮೆರವಣಿಗೆ ಇವೆಲ್ಲಾ ಕಾಮನ್. ಆದರೆ ಈ ಜಾತ್ರೆಯಲ್ಲಿ ರೈತರನ್ನು ಪ್ರೋತ್ಸಾಹಿಸಲು ವಿವಿಧ ರೋಚಕ ಕ್ರೀಡೆಗಳನ್ನು ನಡೆಸಲಾಗುತ್ತದೆ. ಆ ಮೂಲಕ ಊರ ಹಬ್ಬ ರೈತರ ಹಬ್ಬವಾಗಿ ಸಾವಿರಾರು ಜನರನ್ನು ಸೆಳೆಯುತ್ತದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ನ.26): ಜಾತ್ರೆ ಅಂದರೆ ದೇವರ ಪೂಜೆ, ಉತ್ಸವ ಮೆರವಣಿಗೆ ಇವೆಲ್ಲಾ ಕಾಮನ್. ಆದರೆ ಈ ಜಾತ್ರೆಯಲ್ಲಿ ರೈತರನ್ನು ಪ್ರೋತ್ಸಾಹಿಸಲು ವಿವಿಧ ರೋಚಕ ಕ್ರೀಡೆಗಳನ್ನು ನಡೆಸಲಾಗುತ್ತದೆ. ಆ ಮೂಲಕ ಊರ ಹಬ್ಬ ರೈತರ ಹಬ್ಬವಾಗಿ ಸಾವಿರಾರು ಜನರನ್ನು ಸೆಳೆಯುತ್ತದೆ. ಸೂಜಿ ಮೊನೆಯಷ್ಟು ಅಲಗಾಡದಂತೆ ಬಿಗಿಯಾಗಿ ಕಟ್ಟಿರುವ ಚಕ್ರಗಳು. ಆದರೂ ಗಾಳಿ ವೇಗದಲ್ಲಿ ಅದನ್ನೇ ಎಳೆದು ಮುನ್ನುಗ್ಗುವ ಮಜಬೂತ ಓರಿಗಳು. ಗೆಲ್ಲಲೇ ಬೇಕು ಎಂದು ಓಡುವ ರೈತರು, ರೈತ ಮಹಿಳೆಯರು. ಇದೇನು ಯಾವುದೋ ಕ್ರೀಡಾಕೂಟ ಎಂದುಕೊಳ್ಳಬೇಡಿ.
undefined
ಇದು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಶ್ರೀ ಬನಶಂಕರಿ ದೇವರ ಜಾತ್ರಾ ಉತ್ಸವದಲ್ಲಿ ಕಂಡು ಬರುವ ಆಕರ್ಷಣೀಯ ಮತ್ತು ಸಂತಸದ ಕ್ಷಣಗಳು. ಹೌದು! ಇದು ಇಲ್ಲಿನ ಗ್ರಾಮ ದೇವತೆಯ ಹಬ್ಬವಾದರೂ ಕೃಷಿ ಪ್ರಧಾನವಾದ ಊರಾಗಿರುವ ಇಲ್ಲಿನ ರೈತರು ಮತ್ತು ಹಳ್ಳಿಕಾರು ಓರಿಗಳ ಸಾಕಣಿಕೆಯನ್ನು ಪ್ರೋತ್ಸಾಹಿಸಲು ಚಕ್ರಕಟ್ಟಿದ ಎತ್ತಿನಗಾಡಿಯ ಓಟದ ಸ್ಪರ್ಧೆ, ರೈತರಿಗೆ 100, 200, 300 ಮತ್ತು 400 ಮೀಟರ್ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಪ್ರರ್ತಿ ವರ್ಷ ಏರ್ಪಡಿಸಲಾಗುತ್ತದೆ.
Kodagu: ವಿರಾಜಪೇಟೆಯ ಮೊಗರಗಲ್ಲಿಯಲ್ಲಿ 'ನಮ್ಮ ಕ್ಲಿನಿಕ್' ಪ್ರಾರಂಭ
ಅದೇ ರೀತಿ ಈ ಬಾರಿಯೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಎಂದು ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಹೇಳಿದರು. ರಾಜ್ಯಮಟ್ಟದಲ್ಲಿ ನಡೆಯುವ ಈ ಎತ್ತಿನಗಾಡಿ ಓಟದ ಸ್ಪರ್ಧೆಗೆ ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಶಕ್ತಿಶಾಲಿಯಾದ ಎತ್ತುಗಳೊಂದಿಗೆ ಎತ್ತಿನಗಾಡಿ ಓಟದ ಸ್ಪರ್ಧೆಗೆ ಭಾಗವಹಿಸಿದ್ದರು. ಮನ್ನೂರು ಮೀಟರ್ ದೂರದ ಈ ಓಟದ ಸ್ಪರ್ಧೆಯಲ್ಲಿ ಯಾವ ರೈತರ ಎತ್ತುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಗುರಿಮುಟ್ಟುತ್ತವೆಯೋ ಎಂಬುದು ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸುವ ಸಾವಿರಾರು ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದವು.
ಗಾಡಿಯ ನೊಗಕ್ಕೆ ಎತ್ತುಗಳು ಕೊರೊಳೊಡ್ಡುತ್ತಿದ್ದಂತೆ ಅವುಗಳ ಮಾಲೀಕರು ಅಬ್ಬರಿಸಿ ಚಾಟಿ ಬೀಸಿ ತಮ್ಮ ಗುರಿಯತ್ತ ಎತ್ತುಗಳನ್ನು ಮುನ್ನುಗ್ಗಿಸತ್ತಿದ್ದರೆ, ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ನಡೆಯುವ ಈ ರೋಚಕ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಸಾವಿರಾರು ಜನರು ರಣಕೇಕೆ ಹಾಕಿ ಎಂಜಾಯ್ ಮಾಡುತ್ತಿದ್ದರು. ಎಷ್ಟೋ ಎತ್ತುಗಳು ಜನರ ದಂಡನ್ನು ನೋಡಿ ಬೆದರಿ ಎತ್ತೆತ್ತಲೋ ಓಡಿದರೆ ಸಾಕಷ್ಟು ಜೋಡಿಗಳು ಕೋಲ್ಮಿಂಚಿನಂತೆ ಚಿಮ್ಮಿ 8,10 ಸೆಕೆಂಡುಗಳಲ್ಲಿ ಗುರಿಮುಟ್ಟಿ ನೆರೆದಿದ್ದವರನ್ನು ಅಚ್ಚರಿಗೊಳಿಸಿದವು. ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜಾತ್ರೆಗೆ ಭಾಗವಹಿಸಿದ್ದ ಸಾವಿರಾರು ಜನರು ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ನೋಡಿ ಎಂಜಾಯ್ ಮಾಡಿದ್ರು.
Kodagu: ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧ: ಶಾಸಕರ ಬೆಂಬಲ
ಇಂದಿನ ಅಧುನಿಕ ಯುಗದಲ್ಲಿ ಯುವಕ, ಯುವತಿಯರು ಮೊಬೈಲ್ ಹಿಂದೆ ಬಿದ್ದು, ಗ್ರಾಮೀಣ ಸಂಸ್ಕೃತಿಯನ್ನು ಮರೆಯುತ್ತಿರುವ ಕಾಲ ಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಖುಷಿಯಿಂದ ಎಂಜಾಯ್ ಮಾಡಿದ್ರು ಎಂದು ಜಾತ್ರೆಯಲ್ಲಿ ಭಾಗವಹಿಸಿದ್ದ ಅಮೃತ ಹೇಳಿದರು. ಇನ್ನೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಗ್ರಾಮೀಣ ಕ್ರೀಡಾಕೂಟವನ್ನು ಹೆಬ್ಬಾಲೆಯ ಮಾದರಿ ಯುವಕ ಸಂಘದಿಂದ ಆಯೋಜಿಸಲಾಗಿತ್ತು. ಪುರುಷರು, ಮಹಿಳೆಯರಿಗೆ 100, 200 ಹಾಗೂ 400 ಮೀಟರ್ ಓಟ ಸ್ಪರ್ಧೆ, ಮೂರು ಕಾಲಿನ ಓಟ, ರಂಗೋಲಿ ಸ್ಪರ್ಧೆ, ಸೇರಿದಂತೆ ಸಂಗೀತ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ಸಂತಸ ಪಟ್ಟರು. ಒಟ್ಟಿನಲ್ಲಿ ಗ್ರಾಮದ ಬನಶಂಕರಿ ಜಾತ್ರಾ ಮಹೋತ್ಸವ ಊರ ಹಬ್ಬವಷ್ಟೇ ಅಲ್ಲ, ರೈತರನ್ನು ಪ್ರೋತ್ಸಾಹಿಸುವ ಹಬ್ಬವಾಗಿದ್ದಂತು ಸತ್ಯ.