ಗರ್ಭಾವಸ್ಥೆಯ ಬಗ್ಗೆ ಲೆಕ್ಕವಿಲ್ಲದಷ್ಟು ಪುರಾಣಗಳು, ಮೂಢನಂಬಿಕೆಗಳು ಮತ್ತು ಹಳೆಯ ಹೆಂಗಸರ ಕತೆಗಳಿವೆ. ಅವುಗಳಲ್ಲಿ ವಾಸ್ತವ ಏನೋ, ಕತೆ ಎಷ್ಟೋ ತಿಳಿಯದೆ ಗರ್ಭಿಣಿಯರು ಕಂಗಾಲಾಗುತ್ತಾರೆ. ನೀವು ಕೂಡಾ ಗರ್ಭಿಣಿಯಾಗಿದ್ದಲ್ಲಿ ಪ್ರತಿ ದಿನ ಇಂಥ ಹಲವಾರು ಮಾತುಗಳನ್ನು ಕೇಳುತ್ತಿರುತ್ತೀರಿ. ಅಂಥ ಕೆಲ ಪ್ರಸಿದ್ಧ ಮಾತುಗಳ ಸತ್ಯಾಸತ್ಯತೆಯನ್ನು ಅವಲೋಕಿಸೋಣ ಬನ್ನಿ..
ಪ್ರತಿ ಹೆಣ್ಣಿಗೂ ಗರ್ಭಿಣಿಯಾದಾಗ ಹಲವು ನಂಬಿಕೆ, ಮೂಢನಂಬಿಕೆಯ ಮಾತುಗಳು ಅವಳನ್ನು ಹಿಂಬಾಲಿಸುತ್ತವೆ. ಹೊಟ್ಟೆ ನೋಡಿದವರೆಲ್ಲ ಏನೋ ತಾವು ಕೇಳಿದ ಮಾತು ಹೇಳಿ ಒಳಗಿರುವುದು ಹೆಣ್ಣೋ ಗಂಡೋ ಎಂದು ರಿಪೋರ್ಟ್ ಕೊಡಲು ಶುರು ಮಾಡುತ್ತಾರೆ. ಆಕೆ ಕಾಫಿ ಕುಡಿದ್ರೆ ಮಗು ಕಪ್ಪಾಗುತ್ತೆ ಎನ್ನುವುದರಿಂದ ಹಿಡಿದು, ಕುರೂಪದ ಪ್ರಾಣಿ ನೋಡಿದ್ರೆ ಮಗು ಹಾಗೆಯೇ ಇರುತ್ತೆ ಎಂಬವರೆಗೆ ಗರ್ಭಿಣಿಯರನ್ನು ಮೂಢನಂಬಿಕೆಗಳು ಹಿಂಬಾಲಿಸುತ್ತವೆ. ಇವೆಲ್ಲ ಮೂಢನಂಬಿಕೆ ಎನಿಸಿದರೂ ಯಾವ ಗರ್ಭಿಣಿಯೂ ಅದನ್ನು ಪರೀಕ್ಷಿಸಿ ನೋಡುವ ಧೈರ್ಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಆಕೆಗೆ ಹುಟ್ಟಲಿರುವ ಮಗುವಿನ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿರುತ್ತವೆ. ಆದರೆ, ನಾವಿಂದು ಇಂಥ ಹಲವು ಮಾತುಗಳು ನಂಬಿಕೆಗಳೋ, ಮೂಢನಂಬಿಕೆಗಳೋ ಎಂಬ ಬಗ್ಗೆ ಅವಲೋಕನ ಕೈಗೊಂಡಿದ್ದೇವೆ.
ತಾಯಿಯ ಸೌಂದರ್ಯ
ಜನಪ್ರಿಯ ಅಡಗೂಲಜ್ಜಿ ವಿಶ್ಲೇಷಣೆಯಂತೆ ಹೊಟ್ಟೆಯಲ್ಲಿ ಹೆಣ್ಣುಮಗುವಿದ್ದರೆ ಅದು ತಾಯಿಯ ಸೌಂದರ್ಯ ಕಸಿಯುತ್ತದೆ. ಹೀಗಾಗಿ, ಗರ್ಭಿಣಿ ಪೇಲವವಾಗಿ ಕಾಣಿಸುತ್ತಾಳೆ. ಅದೇ ಗರ್ಭಿಣಿ ಹೆಚ್ಚು ಕಳೆಗಟ್ಟಿದರೆ ಮಗು ಗಂಡು ಎಂದು ಹೇಳಲಾಗುತ್ತದೆ. ಆದರೆ, ಸತ್ಯವೇನೆಂದರೆ, ಗರ್ಭಿಣಿಯ ಹೊಟ್ಟೆಯಲ್ಲಿ ಹೆಣ್ಣಿರಲಿ, ಗಂಡಿರಲಿ- ಪ್ರತಿಯೊಬ್ಬಾಕೆಯು ಬಹಳಷ್ಟು ಹಾರ್ಮೋನ್ ಬದಲಾವಣೆ ಸೇರಿದಂತೆ ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ಅದು ಒಂದೊಂದು ಬಾರಿ ಒಂದಿರಬಹುದು. ಈ ಯಾವುದೇ ಬದಲಾವಣೆ ಲಿಂಗವನ್ನು ನಿರ್ಧರಿಸುವುದಿಲ್ಲ.
ವಾಕರಿಕೆ
ಗರ್ಭಾವಸ್ಥೆಯಲ್ಲಿ ಕೆಲ ಹೆಂಗಸರಿಗೆ ಮೊದಲ ತ್ರೈಮಾಸಿಕದಲ್ಲಿ ವಿಪರೀತ ಎನ್ನುವಷ್ಟು ವಾಕರಿಕೆ, ಸಂಕಟಗಳಿರುತ್ತವೆ. ಕೆಲವರಿಗೆ ಏನೂ ಇರುವುದಿಲ್ಲ. ವಾಕರಿಕೆ ಹೆಚ್ಚಿದ್ದಷ್ಟೂ ಹೆಣ್ಣು ಮಗು ಹೊಟ್ಟೆಯಲ್ಲಿರಬಹುದು ಎನ್ನಲಾಗುತ್ತದೆ. ಮಗುವಿನ ಕೂದಲು ಉದ್ದಗಿದ್ದರೆ ಹೀಗಾಗುತ್ತದೆ ಎನ್ನುವವರೂ ಇದ್ದಾರೆ! ಮಗುವಿನ ಕೂದಲು ಪುರಾಣದ ಮಾತಾಯಿತು, ಆದರೆ, 2004ರ ಒಂದು ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿಗೆ ಚಿಕಿತ್ಸೆ ಪಡೆಯುವ ಮಹಿಳೆಯರು ಶೇಖಡಾವಾರು ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರಂತೆ!
ಶನಿಯ ವಕ್ರಿ ಸಂಚಾರ; 5 ರಾಶಿಗಳಿಗೆ ನಾಕೂವರೆ ತಿಂಗಳು ಸಂಚಕಾರ
ಮಸಾಲೆಯಿಂದ ಮಗುವಿಗೆ ಕುರುಡುತನ
ಗರ್ಭಾವಸ್ಥೆಯಲ್ಲಿ ಸೇವಿಸುವ ಮಸಾಲೆಯುಕ್ತ ಆಹಾರಗಳು ಮಗುವಿನ ಕಣ್ಣುಗಳನ್ನು ಸುಡಬಹುದು ಮತ್ತು ಕುರುಡುತನಕ್ಕೆ ಕಾರಣವಾಗಬಹುದು ಎಂದು ಪುರಾಣವು ಸೂಚಿಸುತ್ತದೆ. ಆದರೆ ಇದು ನಿಜವಲ್ಲ. ಹಾಗಿದ್ದೂ, ಮಸಾಲೆ ಕಡಿಮೆ ಸೇವಿಸುವುದು ಒಳಿತು. ಏಕೆಂದರೆ, ಅತಿಯಾದ ಮಸಾಲೆಯುಕ್ತ ಆಹಾರಗಳು ಗರ್ಭಿಣಿ ಮಹಿಳೆಗೆ ಎದೆಯುರಿ ಅಪಾಯವನ್ನು ಹೆಚ್ಚಿಸಬಹುದು. ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು. ಮತ್ತೊಂದು ಅಡಗೂಲಜ್ಜಿ ಕತೆ ಎಂದರೆ ಗರ್ಭಾವಸ್ಥೆಯಲ್ಲಿ ಪುನರಾವರ್ತಿತ ಎದೆಯುರಿ ಇದ್ದರೆ, ಮಗು ತಲೆಯ ತುಂಬಾ ಕೂದಲಿನೊಂದಿಗೆ ಜನಿಸುತ್ತದೆ ಎಂಬುದು.
ಹಗ್ಗಗಳನ್ನು ದಾಟಬಾರದು..
ಕೆಲವು ಸಂಸ್ಕೃತಿಗಳಲ್ಲಿ, ಗರ್ಭಿಣಿಯಾಗಿದ್ದಾಗ ಹಗ್ಗಗಳ ಮೇಲೆ ಹೆಜ್ಜೆ ಹಾಕುವುದನ್ನು ತಪ್ಪಿಸಲು ಗರ್ಭಿಣಿಯರಿಗೆ ಸಲಹೆ ನೀಡುತ್ತದೆ. ಏಕೆಂದರೆ ಹಾಗೆ ಮಾಡುವುದರಿಂದ ಹೊಕ್ಕುಳಬಳ್ಳಿಯು ಮಗುವಿನ ಕುತ್ತಿಗೆಗೆ ಸಿಕ್ಕಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇದೊಂದು ಶುದ್ಧ ಮೂಢನಂಬಿಕೆಯಾಗಿದ್ದು ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಗರ್ಭಿಣಿ ಕೂದಲನ್ನು ಕತ್ತರಿಸಬಾರದು..
ಗರ್ಭಿಣಿಯಾಗಿದ್ದಾಗ ಮಹಿಳೆಯ ಕೂದಲನ್ನು ಕತ್ತರಿಸಿದರೆ, ಮಗುವಿಗೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ ಎನ್ನಲಾಗುತ್ತದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಆದರೆ, ಗರ್ಭಿಣಿಯು ತಲೆಕೂದಲಿಗೆ ರಸಾಯನಿಕಯುಕ್ತ ಬಣ್ಣಗಳನ್ನು ಹಚ್ಚುವುದರಿಂದ ಭ್ರೂಣಕ್ಕೆ ತೊಂದರೆಯಾಗುತ್ತದೆ.
ವಾರ ಭವಿಷ್ಯ: ಅದೃಷ್ಟರಹಿತ ವಾರದಿಂದ ಮೇಷಕ್ಕೆ ಎಲ್ಲದರಲ್ಲೂ ಎದುರಾಗುವ ಅಡೆತಡೆ
ಕೊಳಕು ಪ್ರಾಣಿಗಳು
ಹಲವಾರು ಸಂಸ್ಕೃತಿಗಳಲ್ಲಿ ಅಸ್ತಿತ್ವದಲ್ಲಿರುವ ಹಳೆಯ ಅಜ್ಜಿಯರ ಕಥೆಯು ಗರ್ಭಿಣಿ ಮಹಿಳೆ ಅಹಿತಕರ ಅಥವಾ ಕೊಳಕು ಪ್ರಾಣಿಯನ್ನು ನೋಡಿದಾಗ, ಆಕೆಯ ಮಗು ಆ ಪ್ರಾಣಿಯ ಹೋಲಿಕೆಯನ್ನು ತೆಗೆದುಕೊಳ್ಳುತ್ತದೆ ಎಂದು ಸೂಚಿಸುತ್ತದೆ. ಈ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಹಾಗೂ ಯಾವುದೇ ಮಗುವೂ ಅಸಹ್ಯವಾಗಿರುವುದಕ್ಕೆ ಸಾಧ್ಯವಿಲ್ಲ.
ಕೂಸು ಹುಟ್ಟುವ ಮುನ್ನ
ಕೆಲವು ಸಂಸ್ಕೃತಿಗಳಲ್ಲಿ, ಮಗು ಬರುವ ಮೊದಲು ಮಗುವಿನ ಉಡುಗೊರೆಗಳನ್ನು ಖರೀದಿಸುವುದು, ಸ್ವೀಕರಿಸುವುದು ದುಷ್ಟಶಕ್ತಿಗಳನ್ನು ಆಕರ್ಷಿಸುತ್ತದೆ ಅಥವಾ ಗರ್ಭಪಾತದಂತಹ ದುರದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಬಾರದು ಎನ್ನುವುದು ಇದಕ್ಕೇ. ಆದರೆ ಇದು ಮೂಢನಂಬಿಕೆಯಾಗಿದೆ. ವಾಸ್ತವವೇನೆಂದರೆ, ಅತಿಯಾಗಿ ಮಗುವಿನ ಬಗ್ಗೆ ಕನಸು ಕಟ್ಟಿಕೊಂಡಾಗ ಅಕಸ್ಮಾತ್ ಸಮಸ್ಯೆಯಾದರೆ ಆಘಾತ ಹೆಚ್ಚಿರುತ್ತದೆ ಎಂಬುದು ಈ ಮಾತಿಗೆ ಕಾರಣ.