Bhai Dooj 2022: ಅ.27 ಅಣ್ಣನ ಆಯಸ್ಸು ಹೆಚ್ಚಿಸೋ ಯಮದ್ವಿತೀಯ, ಆಚರಣೆ ಹೇಗೆ?

By Suvarna News  |  First Published Oct 26, 2022, 11:20 AM IST

ಅಕ್ಟೋಬರ್ 27 ದೀಪಾವಳಿಯ ಕೊನೆಯ ದಿನ. ಇಂದು ಯಮದ್ವಿತೀಯ. ಈ ದಿನ ಸಹೋದರನು ತನ್ನ ಸಹೋದರಿಯ ಕೈಯಿಂದ ಆಹಾರವನ್ನು ಸೇವಿಸಿದರೆ, ಸಹೋದರನ ಆಯುಷ್ಯವು ದೀರ್ಘವಾಗಿರುತ್ತದೆ ಎಂಬ ನಂಬಿಕೆ ಇದೆ. 


ಅಕ್ಟೋಬರ್ 27 ದೀಪಾವಳಿಯ ಕಡೆಯ ದಿನ. ಈ ದಿನವನ್ನು ಉತ್ತರ ಭಾರತದಲ್ಲಿ ಭಾಯಿ ದೂಜ್ ಎಂದು ಆಚರಿಸಿದರೆ ದಕ್ಷಿಣದಲ್ಲಿ ಯಮದ್ವಿತೀಯ ಎಂದು ಆಚರಿಸಲಾಗುತ್ತದೆ. ಕಾರ್ತೀಕ ಮಾಸ ಶುಕ್ಲ ಪಕ್ಷದ ದ್ವಿತೀಯ ದಿನದಂದು ಸಹೋದರರು ವಿವಾಹಿತ ಸಹೋದರಿಯರ ಮನೆಗೆ ಹೋಗಿ ಭೋಜನ ಸ್ವೀಕರಿಸುವುದು ಈ ದಿನದ ವಿಶೇಷ. 

ಹಬ್ಬಾಚರಣೆ ಹೀಗೆ..
ನಮ್ಮಲ್ಲಿ ಅಣ್ಣತಂಗಿಯರ ಸಂಬಂಧವನ್ನು ಸಂಭ್ರಮಿಸುವ, ಬಲಪಡಿಸುವ ಸಾಕಷ್ಟು ಹಬ್ಬಗಳಿವೆ. ರಕ್ಷಾಬಂಧನ(raksha Bandhan), ಪಂಚಮಿ ಹಬ್ಬ ಹೀಗೆ.. ಇದೇ ಸಾಲಿಗೆ ಸೇರುವ ಮತ್ತೊಂದು ಹಬ್ಬ ಈ ಯಮದ್ವಿತೀಯ. 
ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಮೊದಲ ಹಬ್ಬ ರಕ್ಷಾಬಂಧನ. ಇದರಲ್ಲಿ ಸಹೋದರ ಸಹೋದರಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾನೆ. ಎರಡನೆಯ ಹಬ್ಬ ಭಾಯಿ ದೂಜ್, ಇದನ್ನು ಭೌ ಬೀಜ್, ಟಿಕ್ಕಾ, ಯಮ II ಮತ್ತು ಭತ್ರಿ ದ್ವಿತೀಯಾ(Bhai Dooj) ಎಂದೂ ಕರೆಯುತ್ತಾರೆ, ಇದರಲ್ಲಿ ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

Tap to resize

Latest Videos

ಈ ದಿನದಂದು ಸಹೋದರರು ತಮ್ಮ ವಿವಾಹಿತ ಸಹೋದರಿಯ ಮನೆಗೆ ಹೋಗಬೇಕು. ಆಕೆ ಸಹೋದರನ ಹಣೆಗೆ ತಿಲಕವಿಟ್ಟು ಆರತಿ ಎತ್ತಿ ಬರ ಮಾಡಿಕೊಳ್ಳಬೇಕು. ಆತನ ಬಾಯಿಗೆ ಸಿಹಿ ತಿಂಡಿಯನ್ನು ತಿನ್ನಿಸಿ ದೇವರಲ್ಲಿ ಆತನ ಧೀರ್ಘಾಯಸ್ಸಿಗಾಗಿ ಪ್ರಾರ್ಥಿಸಬೇಕು. ಇದಾದ ನಂತರ, ಸಹೋದರನು ಸಂತೋಷದ ತುಂಬು ಜೀವನ ನಡೆಸಲೆಂದು ಬೇಡಿ ಯಮರಾಜ(Yamraj)ನ ಹೆಸರಿನಲ್ಲಿ ನಾಲ್ಕು ಮುಖದ ದೀಪವನ್ನು ಬೆಳಗಿಸಿ ಮತ್ತು ಮನೆಯ ಹೊಸ್ತಿಲಿನ ಹೊರಗೆ ದಕ್ಷಿಣಾಭಿಮುಖವಾಗಿ ಇಡಬೇಕು. ನಂತರ ಹಬ್ಬದಡುಗೆಯ ಭೋಜನವನ್ನು ಅಣ್ಣನಿಗೆ ನೀಡಬೇಕು. ನಂತರ ಇಬ್ಬರೂ ಉಡುಗೊರೆಗಳನ್ನು ಪರಸ್ಪರ ಕೊಟ್ಟುಕೊಳ್ಳುತ್ತಾರೆ. ಒಂದು ವೇಳೆ ಸ್ವಂತ ಸಹೋದರಿ ಇಲ್ಲದಿದ್ದಲ್ಲಿ ಚಿಕ್ಕಪ್ಪ, ದೊಡ್ಡಪ್ಪನ ಮಗಳು ಇಲ್ಲವೇ, ಸ್ನೇಹಿತನ ಸಹೋದರಿಯರ ಮನೆಗೆ ಹೋಗಬಹುದು.  

ಯಮದ್ವಿತೀಯ ಹಿನ್ನೆಲೆ
ಇದೇ ಕಾರ್ತೀಕ ಮಾಸ ಶುಕ್ಲ ಪಕ್ಷದ ದ್ವಿತೀಯ ದಿನದಂದು ನರಕಾಧಿಪತಿಯಾದ ಯಮ ಧರ್ಮರಾಜನು ತನ್ನ ಸಹೋದರಿ ಯಮಿ (ನದಿ ಯಮುನ)ಯ ಮನೆಗೆ ಹೋಗುತ್ತಾನೆ. ಆಗ ಯಮಿಯು ಸಂಭ್ರಮದಿಂದ ಅಣ್ಣನಿಗೆ ತಿಲಕವಿಟ್ಟು ಬಹುವಾಗಿ ಉಪಚರಿಸುತ್ತಾಳೆ. ಅಣ್ಣನಿಗಾಗಿ ವಿಶೇಷ ಅಡುಗೆ ಮಾಡಿ ಬಡಿಸುತ್ತಾಳೆ. ಬಾಯಿ ತುಂಬಾ ಪ್ರೀತಿಯ ಮಾತುಗಳನ್ನಾಡುತ್ತಾಳೆ. ಇದರಿಂದ ಸಂತುಷ್ಠನಾದ ಯಮನು ಯಮಿಗೆ ನಿನಗೇನು ಬೇಕೋ ಕೇಳು ಎನ್ನುತ್ತಾನೆ. ಅದಕ್ಕೆ ಯಮಿಯು, ತನಗೆ ಯಾವುದೇ ವರ ಬೇಡ. ಬದಲಿಗೆ ಪ್ರತಿ ವರ್ಷ ನಮ್ಮ ಮನೆಗೆ ಹೀಗೇ ತಪ್ಪದೇ ಬರುತ್ತಿರು ಎನ್ನುತ್ತಾಳೆ. ಯಮಧರ್ಮನಿಗೆ ಇದರಿಂದ ಮತ್ತಷ್ಟು ಸಂತೋಷವಾಗುತ್ತದೆ. ಆಗ ಅವನು, 'ಯಾರು ಕಾರ್ತಿಕ ಶುದ್ಧ ದ್ವಿತೀಯದಂದು ಅಣ್ಣತಮ್ಮಂದಿರನ್ನು ಕರೆಸಿ ಅವರಿಗೆ ಭೋಜನವೀಯುತ್ತಾರೋ, ಆ ಸಹೋದರಿಯ ಮನೆಯಲ್ಲಿ ಭೋಜನ ಸ್ವೀಕರಿಸಿದ ಸಹೋದರನಿಗೆ ಧೀರ್ಘಾಯಸ್ಸು ಕರುಣಿಸುತ್ತೇನೆ, ಸಹೋದರನಿಗೆ ಭೋಜನವಿತ್ತ ಸಹೋದರಿಗೆ ವೈಧವ್ಯವು ಪರಿಹಾರವಾಗುವುದು' ಎಂದು ಹೇಳುತ್ತಾನೆ.
ಹಾಗಾಗಿ, ಸಹೋದರರ ಮತ್ತು ಪತಿಯ ಆಯಸ್ಸಿಗಾಗಿ ಕೋರಿ ಮಹಿಳೆಯರು ಯಮದ್ವಿತೀಯ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವು ಅಣ್ಣ ತಂಗಿಯರ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಆಶಯ ಹೊಂದಿದೆ.

1947ರ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದ ಶಾರದಾ ದೇಗುಲದಲ್ಲಿ Deepavali

ಭಾಯ್ ಧೂಜ್ 2022 ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದ ಎರಡನೇ ದಿನಾಂಕವು ಅಕ್ಟೋಬರ್ 26 ಬುಧವಾರದಂದು ಮಧ್ಯಾಹ್ನ 02:43 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಂದರೆ ಗುರುವಾರ, 27 ಅಕ್ಟೋಬರ್ ರಂದು ಮಧ್ಯಾಹ್ನ 12:46 ಕ್ಕೆ ಕೊನೆಗೊಳ್ಳುತ್ತದೆ. ಗುರುವಾರದಂದು ಬೆಳಿಗ್ಗೆ 06:48ರಿಂದ ಮಧ್ಯಾಹ್ನ 12:46ರವರೆಗೆ ಸಹೋದರನಿಗೆ ತಿಲಕ ಅನ್ವಯಿಸಲು ಮಂಗಳಕರ ಸಮಯವಿದೆ.

click me!