ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ
ಕುಂಚಾವರಂ ಅರಣ್ಯಪ್ರದೇಶದ ತಾಂಡಾಗಳಲ್ಲಿ ಎಲ್ಲಿಲ್ಲದ ದೀಪಾವಳಿ ಸಂಭ್ರಮ
ಮನೆ ಮನೆಗೆ ದೀಪದೊಂದಿಗೆ ತೆರಳಿ ಬೆಳಗಿದ ಯುವತಿಯರು
ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಪ್ರದೇಶದಲ್ಲಿನ ಅರಣ್ಯವಾಸಿ ಬಂಜಾರ ಜನಾಂಗವು ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಸಂಪ್ರದಾಯದಂತೆ ತಮ್ಮದೇ ಆದ ವಿಶಿಷ್ಟ ಮತ್ತು ವಿಶೇಷತೆಯಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬವು ಗಡಿಪ್ರದೇಶದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ತಾಲೂಕಿನಲ್ಲಿ ಬಂಜಾರ ಸಮುದಾಯದ ಹಳೆಯ ಪದ್ದತಿ ಸಂಸ್ಕೃತಿಯನ್ನು ಹೊಂದಿರುವ ವೇಷಭೂಷಣಗಳನ್ನು ತೊಟ್ಟು ಲಂಬಾಣಿ ಭಾಷೆ ಹಾಡಿನೊಂದಿಗೆ ನೃತ್ಯವನ್ನು ಮಾಡುತ್ತಾ ಆನಂದಿಸುವ ಯುವತಿಯರಲ್ಲಿಯೇ ಹೆಚ್ಚಾಗಿ ದೀಪಾವಳಿ ಹಬ್ಬದ ಸಂಭ್ರಮವನ್ನು ಕಾಣಬಹುದಾಗಿದೆ.
ತಾಲೂಕಿನ ಕುಂಚಾವರಂ ಅರಣ್ಯಪ್ರದೇಶದ ತಾಂಡಾಗಳಲ್ಲಿ ಎಲ್ಲಿಲ್ಲದ ದೀಪಾವಳಿ ಸಂಭ್ರಮ ಆಚರಿಸಲಾಗುವುದು.
ಹಬ್ಬದ ಕೆಲವು ದಿನಗಳ ಮುಂಚೆಯೇ ಪೂರ್ವ ತಯಾರಿಯಲ್ಲಿ ಇರುವ ಯುವತಿಯರು ಪ್ರತಿ ನಿತ್ಯ ರಾತ್ರಿ ಲಂಬಾಣಿ ನೃತ್ಯ ಮಾಡುತ್ತಾರೆ. ಅಲ್ಲದೇ ತಮ್ಮ ಜನಾಂಗದ ಬಂಧು ಬಳಗವನ್ನು ಒಂದೂಗೂಡಿಸುವ ಮತ್ತು ಏಕತೆ ಮೂಡಿಸುವ ಉದ್ದೇಶದಿಂದ ಯುವತಿಯರು ನೃತ್ಯ ಮಾಡುವ ಸಂಸ್ಕೃತಿ ಮತ್ತು ಸಂಪ್ರದಾಯ ಇಂದಿಗೂ ಪ್ರತಿಯೊಂದು ತಾಂಡಾಗಳಲ್ಲಿ ಕಾಣಬಹುದಾಗಿದೆ.
Diwali 2022: ಬಲಿ ಚಕ್ರವರ್ತಿ ಯಾರು? ಬಲಿಪಾಡ್ಯಮಿಯ ಹಿನ್ನೆಲೆ ಏನು?
ಅನೇಕ ಶತಮಾನಗಳ ತಲೆಮಾರಿನಿಂದ ಬಂದಿರುವ ಲಂಬಾಣಿ ಸಮುದಾಯದ ಸಂಸ್ಕೃತಿಯನ್ನು ಇಂದಿಗೂ ತೆಲಂಗಾಣ ಗಡಿಪ್ರದೇಶದ ಕುಂಚಾವರಂ ತಾಂಡಾಗಳಲ್ಲಿ ಕಾಣಬಹುದಾಗಿದೆ.
ದೀಪಾವಳಿ ಹಬ್ಬದ ಅಮವಾಸ್ಯೆ ದಿನದಂದು ರಾತ್ರಿ ಯುವತಿಯರು ವಿವಿಧ ಹೂವುಗಳಿಂದ ಲ ಕ್ಷ್ಮಿ ಪೂಜೆ ಸಲ್ಲಿಸಿದ ನಂತರ ವಿವಿಧ ವೇಷಭೂಷಗಳಿಂದ ಸಿಂಗರಿಸಿದ ಯುವತಿಯರು ಕೈಯಲ್ಲಿ ಹುಲ್ಲಿನಿಂದ ತಯಾರಿಸಿದ ಹಣತೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಮನೆಯವರಿಗೆಲ್ಲರಿಗೂ, ಅವರ ಹತ್ತಿರವಿರುವ ಸಾಕು ಆಕಳು, ಎತ್ತುಗಳಿಗೆ ಆರತಿ ಬೆಳಗಿಸಿ ಹರಸಿ ಆನಂದಿಸುತ್ತಾರೆ.
ತಾಂಡಾದ ನಾಯಕ, ಕಾರಭಾರಿ ಡಾಂವ್ ಸಾಣ್ ಮತ್ತು ಗಣ್ಯವ್ಯಕ್ತಿಗಳ ಮನೆಗೆ ಭೇಟಿ ನೀಡಿ ಆರತಿ ಬೆಳಗಿಸಿ ಮನೆ ಮಂದಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಹಾರೈಸುತ್ತಾರೆ. ಲಂಬಾಣಿ ಭಾಷೆಯಲ್ಲಿ 'ವರ್ಷಧಾರೆ ಕೋರ ದವಾಳಿ ತೋನ ಮೇರಾ ಲಕ್ಷಿ ತೋನ ಮೇರಾ ಗಾವಡಿ ತೋನ ಮೇರಾ' ಜನಪದ (ಎಲ್ಲರಿಗೂ ಸುಖ,ಶಾಂತಿ,ಸಂತೋಷ ತರಲಿ,ನೆಮ್ಮದಿ ಸಿಗಲಿ) ಹಾಡನ್ನು ಹಾಡಿದ ನಂತರ ಮನೆಯವರು ನೀಡುವ ಅಲ್ಪಕಾಣಿಕೆಯನ್ನು ಸ್ವೀಕರಿಸುವುದು ಸಂಪ್ರದಾಯವಾಗಿದೆ.
ಬಲಿಪಾಡ್ಯ ದಿವಸ ತಾಂಡಾದ ಯುವತಿಯರು ಬೆಳಗಿನ ಕೊರೆಯುವ ಚಳಿ ಲೆಕ್ಕಿಸದೇ ಮುಂಜಾನೆ ಮಂಜಿನಲ್ಲಿ ಎದ್ದು ತುಪ್ಪದಿಂದ ತಲೆಕೂದಲು ಎಣ್ಣಿ ಸ್ನಾನ ಮಾಡಿ ಶುಭ್ರವಾದ ಹೊಸಬಟ್ಟೆಯನ್ನು ಧರಿಸಿ ಹತ್ತಿರದಲ್ಲಿ ಇರುವ ಕುಂಚಾವರಂ ವನ್ಯಜೀವಿ ಧಾಮ ತೆರಳಿ ಅರಣ್ಯಪ್ರದೇಶದಲ್ಲಿ ಬೆಳೆದಿರುವ ವಿವಿಧ ಜಾತಿಯ ಬಣ್ಣದ ಹೂವುಗಳನ್ನು ಆರಿಸಿಕೊಂಡು ಬಿದಿರಿನ ಬುಟ್ಟಿಯಲ್ಲಿ ಹಾಕಿಕೊಂಡು ಸೂರ್ಯೋದಯ ನಂತರ ಎಲ್ಲರೂ ತಮ್ಮ ತಾಂಡಾಗಳಿಗೆ ಬಂದು ತಮ್ಮ ಕುಲದೈವ ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಾಲಯ, ಮರಿಯಮ್ಮದೇವಿ ದೇವಾಲಯಗಳಿಗೆ ಹೋಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ಅರ್ಪಿಸುತ್ತಾರೆ.
ತಾಂಡಾದ ಪ್ರತಿಯೊಂದು ಮನೆ ಮನೆಗೆ ತೆರಳಿ ದನದ ಕೊಟ್ಟಿಗೆಯಲ್ಲಿ ಸಗಣಿ ಕುಪ್ಪಿಗಳನ್ನು ಸಿದ್ದಪಡಿಸಿ ಅವುಗಳಿಗೆ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ. ಕುಂಚಾವರಂ ಅರಣ್ಯಪ್ರದೇಶ ವಾಸಿಗಳಲ್ಲಿ ದೀಪಾವಳಿ ವಿಜ್ರಂಬಣೆಯಿಂದ ಆಚರಿಸುತ್ತಾರೆ. ತಾಂಡಾ ನಾಯಕರು ಗಣ್ಯವ್ಯಕ್ತಿಗಳು ಬೇರೆಡೆ ಇದ್ದರೂ ಸಹಾ ತಮ್ಮ ತಾಂಡಾದಲ್ಲಿಯೇ ತಮ್ಮ ಕುಟುಂಬದ ಸದಸ್ಯದರೊಂದಿಗೆ ಬೆರೆತು ದೀಪಾವಳಿ ಹಬ್ಬ ಆಚರಿಸುವುದು ಒಂದು ವಿಶೇಷತೆ ಕಾಣಬಹುದಾಗಿದೆ..
ದೇಗುಲ, ಗೋಶಾಲೆ, ಹಾಲು ಸಂಘಗಳಲ್ಲಿಂದು ಗೋ ಪೂಜೆ: ಸಚಿವ ಚವ್ಹಾಣ್
ದೀಪಾವಳಿ ಹಬ್ಬದ ಅಮವಾಸ್ಯೆಯ ಸಂಜೆ ದೇವರ ನಾಮಸ್ಮರಣೆಯೊಂದಿಗೆ ಅಪ್ಪ,ಅಮ್ಮ,ತಮ್ಮ,ಅಣ್ಣ,ಗುರು ಹಿರಿಯರ ಗುಣಗಾನ ಮಾಡಿ ನಮಸ್ಕರಿಸುತ್ತಾರೆ. ವರ್ಸೆರ ದಾಡೇರ್ ಕೋರ ದವಾಳಿ ತೋನ್ ಮೇರಾ ಸೇವಾಲಾಲ್ ತೋನ್ ಮೇರಾ ಮಾರಿಯಮ್ಮತೋನ ಮೇರಾ ಎಂಬ ಹಾಡಿನೊಂದಿಗೆ ಶುಭಾಶಯ ಹಾಡು ಹಾಡುವುದರೊಂದಿಗೆ ಪ್ರತಿ ತಾಂಡಾಗಳ ಮನೆಗಳಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿದೆ.