ಕಾಲ ಎಷ್ಟೇ ಬದಲಾದರೂ ಆಚರಣೆಗಳು ಇಂದಿಗೂ ಬದುಕಿವೆ. ಮಹಾನಗರಗಳಲ್ಲಿ ಕೆಲ ಹಳೆಯ ಪದ್ಧತಿಗಳನ್ನು ಮರೆತಿರಬಹುದು. ಆದರೆ ಸಂಭ್ರಮಕ್ಕೆ ಕೊರತೆಯಿಲ್ಲ. ಗ್ರಾಮೀಣ ಭಾಗದಲ್ಲಿ ಸಂಭ್ರಮಾಚರಣೆಯ ಜೊತೆಗೆ ಸಂಪ್ರದಾಯ ಹಾಗೂ ಸಂಸ್ಕೃತಿಯ ಸೊಗಡೂ ಬೆರೆತು ದೀಪಾವಳಿ ಅದ್ಧೂರಿಯಾಗಿರುತ್ತದೆ. ನಮಗೆ ಜೀವ ನೀಡಿದ ಭೂತಾಯಿ ಹಾಗೂ ಜೀವನ ನೀಡಿದ ಗೋವುಗಳನ್ನು ಸ್ಮರಿಸುವುದು ಈ ಹಬ್ಬದ ಮೂಲ ಆಶಯ.
ಬಸವರಾಜ ಯರಗುಪ್ಪಿ, ಲಕ್ಷ್ಮೇಶ್ವರ
ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು
ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ,
ಕತ್ತಲು ಕರಗುವಂತೆ ಕಷ್ಟಕರಗಲಿ,
ದೀಪದ ಬೆಳಕಿನಂತೆ ಸಂತೋಷ ಬರಲಿ
ಜೀವನ ಆನಂದವಾಗಿರಲಿ
ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ
ನಮ್ಮಲ್ಲಿರುವ ಕೋಪ ಅಹಂ ದೂರವಾಗಲಿ
ಪ್ರೀತಿಯ ಬೆಳಕು ಹರಡಲಿ
ದೀಪಾವಳಿ ಹಬ್ಬದ ಶುಭಾಶಯ ಕೋರುವ ತರಹೇವಾರಿ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿನಿಮಯವಾಗುತ್ತಿವೆ. ವಾಟ್ಸ್‌ಆ್ಯಪ್, ಫೇಸ್ಬುಕ್, ಟ್ವೀಟರ್, ಇನ್‌ಸ್ಟಾಗಳಲ್ಲಿ ಒಬ್ಬರಿಗೊಬ್ಬರು ಶುಭ ಕೋರುತ್ತಿದ್ದಾರೆ. ಕಾಲ ಬದಲಾದಂತೆ ಹಬ್ಬದ ಶುಭಾಶಯ ವಿನಿಮಯದ ರೀತಿ ಬದಲಾಗಿದೆ. ಜೊತೆಗೇ, ಕುಟುಂಬದ ಎಲ್ಲ ಸದಸ್ಯರೂ ಕೂಡಿ ಹಬ್ಬ ಆಚರಿಸುವುದು ಕೂಡ ವಿರಳವಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹಬ್ಬಗಳ ಸಂಭ್ರಮ ಮೂಲ ರೂಪದಲ್ಲೇ ಉಳಿದಿರುವುದು ಸಂತಸದ ಸಂಗತಿ.
ನರಕ ಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವಚ್ಛವಾಗಿ ತೊಳೆದು ಸಿಂಗಾರ ಮಾಡಿ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವ ಮೂಲಕ ಹಬ್ಬ ಆರಂಭವಾಗುತ್ತದೆ. ನರಕ ಚತುರ್ದಶಿಯಂದು ಅಭ್ಯಂಗಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಲಕ್ಷ್ಮೀಪೂಜೆ, ಬಲಿಪಾಡ್ಯಮಿ ದಿನ ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಹರಡುತ್ತದೆ. ಹೊಸ ಬಟ್ಟೆ ತೊಟ್ಟು, ದೀಪಗಳನ್ನಿಟ್ಟು ಈ ಹಬ್ಬ ಆಚರಿಸುವ ಖುಷಿಯೇ ಬೇರೆ.
ಬುಡಕಟ್ಟುಗಳಿಂದ ಬಂದ ಹಬ್ಬ
ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ ಎಂದು ಗ್ರಾಮೀಣ ಜನಪದದಲ್ಲಿ ಒಂದು ಮಾತಿದೆ. ಅದರಂತೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬಕ್ಕೆ ‘ಹಟ್ಟಿಹಬ್ಬ’ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ‘ಹಟ್ಟೆವ್ವನ ಪೂಜೆ’ ಎಂಬ ವಿಶಿಷ್ಟ ಆಚರಣೆ ಇರುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ‘ಹಟ್ಟಿಹಬ್ಬ ಅಥವಾ ಗೂಳವ್ವನ ಹಬ್ಬ’ ಎಂದು ಆಚರಿಸುವುದನ್ನು ಅಲ್ಲಿ ಕಾಣುತ್ತೇವೆ. ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ ಅಥವಾ ಕೊಟ್ಟಿಗೆ. ಇದನ್ನು ಕಾಯುವ ದೇವತೆಯೇ ಹಟ್ಟೆವ್ವ. ಹಟ್ಟೆವ್ವನ ಸಾಂಕೇತಿಕ ಪ್ರತಿಮೆಗಳನ್ನು ತಯಾರಿಸಲು ಸಗಣಿಯನ್ನು ಬಳಸುತ್ತಾರೆ.
ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ
ಹೊಟ್ಟಿಲೆಕ್ಕವ್ವ, ಹಟ್ಟಿಲೆಕ್ಕವ್ವ
ಪಟ್ಟಿಬೇಡಿ ಅಳತಾಳ, ಪಟ್ಟಿಬೇಡಿ ಅಳತಾಳ ಒಂದೂರಲ್ಲ ಎರಡೂರಲ್ಲ
ಊರೂರ ಸುತ್ತಾಳ..
ಜುಮುಕಿ ಬೇಡಿ ಅಳತಾಳ
ಕಾಲುಂಗುರ ಬೇಡಿ ಅಳತಾಳ..
ಈ ರೀತಿಯ ಹಾಡು ಹಿಂದೆ ಹೇಳುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಇಲ್ಲಿ ಹೊಟ್ಟಿಎನ್ನುವ ಪದದ ಮೂಲ ಹಟ್ಟಿಎಂಬುದಾಗಿದೆ. ಅಂದಿನಿಂದ ಕಾಲ ಎಷ್ಟೇ ಬದಲಾದರೂ ಆಚರಣೆಗಳು ಇಂದಿಗೂ ಬದುಕಿವೆ. ಮಹಾನಗರಗಳಲ್ಲಿ ಕೆಲ ಪದ್ಧತಿಗಳನ್ನು ಮರೆತಿರಬಹುದು. ಆದರೆ, ಇತರ ನಗರ, ಪಟ್ಟಣ ಹಳ್ಳಿ ಹಳ್ಳಿಗಳಲ್ಲಿ ಈ ಪದ್ಧತಿ ರೂಢಿಯಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಒಂದು ದಿನ ದನಗಳನ್ನು ಕಿಚ್ಚು ಹಾಯಿಸಿ ಮಾರನೇ ದಿನ ಹೋರಿ ಬೆದರಿಸುವ ಸ್ಪರ್ಧೆಗಳಿರುತ್ತವೆ. ಈ ಎಲ್ಲವನ್ನೂ ಅವಲೋಕಿಸಿದಾಗ ಇದೊಂದು ಪುರಾತನ ಬುಡಕಟ್ಟುಗಳಿಂದ ಬಂದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಹಟ್ಟಿಹಬ್ಬದ ಹಿನ್ನೆಲೆ
ಈ ಹಬ್ಬಕ್ಕೂ ಮಹಾಭಾರತದಲ್ಲಿ ಜರುಗಿದ ಘಟನೆಗೂ ಹೋಲಿಕೆಯುಂಟು. ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸ ಕಳೆಯುತ್ತಿದ್ದ ಪಾಂಡವರು ವಿರಾಟನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಬಂದಿರುವ ನೆನಪಿನಲ್ಲಿ, ಅಂದರೆ, ಪಾಂಡವರು ಇದೇ ದಿನ ತಮ್ಮ ಅಜ್ಞಾತವಾಸ ಮುಗಿಸಿ ತಮ್ಮ ಗೋವುಗಳೊಂದಿಗೆ ಪುರಪ್ರವೇಶ ಮಾಡಿದರೆಂಬ ನಂಬಿಕೆಯಿಂದಾಗಿ ಈ ದಿನ ಹಟ್ಟೆವ್ವ ಇಡುವ ಸಂಪ್ರದಾಯವಿದೆ.
ದೇವಾಲಯದ ಪರದೆ ತಾನಾಗೇ ತೆರೆಯಿತು; ಇದು ದೇವೀರಮ್ಮನ ಪವಾಡದೇವಾಲಯದ ಪರದೆ ತಾನಾಗೇ ತೆರೆಯಿತು; ಇದು ದೇವೀರಮ್ಮನ ಪವಾಡ
ಕುರುಬರು, ಗೊಲ್ಲರಿಗೆ ವಿಶೇಷ ಹಬ್ಬ
ದೀಪಾವಳಿಯ ಮೂಲ ಹೆಸರು ಮತ್ತು ಪ್ರಾದೇಶಿಕವಾಗಿ ಕರೆಯುವ ಹೆಸರು ಹಟ್ಟಿಹಬ್ಬ. ಪುರಾತನ ಕಾಲದಿಂದ ಪಶುಪಾಲಕರಾದ ಹಟ್ಟಿಕಾರರಿಂದ ಈ ಹಬ್ಬ ಬಂದಿರುವುದರಿಂದ ಈ ಹೆಸರು ಬಂದಿದೆ. ಹಟ್ಟಿಎಂದರೆ ಕುರಿಯ ದೊಡ್ಡಿ. ಅಂದರೆ ಕುರಿ ಮತ್ತು ಇತರ ಪಶುಪಾಲನೆ ಮಾಡುತ್ತಾ ಒಂದು ಕಡೆ ನಿಂತರೆ ಅದೇ ಹಟ್ಟಿ. ನಾಗರೀಕತೆಯ ಮೊದಲ ಹಂತವೇ ಈ ಹಟ್ಟಿಗಳು. ಹಟ್ಟಿಗಳೇ ಮುಂದೆ ಗ್ರಾಮಗಳಾಗಿ, ಗ್ರಾಮಗಳು ಮುಂದುವರೆದು ನಗರಗಳಾಗಿವೆ. ಹಟ್ಟಿಗಳ ಗುಂಪಿಗೆ ನಾಯಕನಾದವನೇ ಮುಂದೆ ನಾಯಕ, ಗೌಡ, ರಾಜ. ಹಲವು ಹಟ್ಟಿಗಳ ನಾಯಕ ಮಹಾರಾಜ. ಈ ರೀತಿಯಾಗಿ ಸಂಸ್ಕೃತಿ ವಿಕಸನಗೊಳ್ಳುತ್ತಾ ಹೋಗಿದೆ. ಪ್ರಾಚೀನ ನಾಗರಿಕತೆಯ ನಾಯಕರೆಲ್ಲರೂ ಪಶುಪಾಲಕರೇ ಆಗಿದ್ದು, ಇಲ್ಲಿ ಕೃಷ್ಣನನ್ನು ಉದಾಹರಿಸಬಹುದು. ಈ ರೀತಿಯ ಆಚರಣೆಗಳಲ್ಲಿ ಪಶುಪಾಲಕರಾದ ಕುರುಬರು, ಗೊಲ್ಲರದು ವಿಶಿಷ್ಟಆಚರಣೆಗಳಿವೆ ಎನ್ನುವ ಪ್ರತೀತಿ ಇದೆ.
ಹಟ್ಟಿಹಬ್ಬದಾಚರಣೆ ಹೇಗೆ?
ಈ ಕಾರ್ಯಕ್ಕಾಗಿ ಹಟ್ಟಿಯನ್ನು ಸ್ವಚ್ಛಗೊಳಿಸುವ ಜೊತೆಗೆ ದಿನವಿಡೀ ತಮ್ಮ ದನಕರುಗಳು ಹಾಕಿದ ಸಗಣಿಯನ್ನು ತಿಪ್ಪೆಗುಂಡಿಗೆ ಹಾಕದೆ ತಮಗೆ ಹಟ್ಟಿಲೆಕ್ಕವ್ವ ಮೂರ್ತಿ ಹಾಗೂ ಪಾಂಡವರ ಮೂರ್ತಿಗಳನ್ನು ಮಾಡಿ ಇಡಲು ಬೇಕಾಗುವ ಸಗಣಿಯನ್ನು ಮಡಿಯಿಂದ ಒಂದೆಡೆ ತಗೆದಿಟ್ಟಿರುತ್ತಾರೆ. ಈ ಸೆಗಣಿಯಿಂದ ಎರಡು ದೊಡ್ಡ ಹಾಗೂ 40ರಿಂದ 50 ಸಣ್ಣ ಹಟ್ಟೆವ್ವಗಳನ್ನು ತಯಾರಿಸಿಡುತ್ತಾರೆ. ಸಣ್ಣ ಸಣ್ಣ ‘ಹಟ್ಟೆವ್ವ’ಗಳನ್ನು ವರ್ತುಲಾಕಾರದಲ್ಲಿ ಅಥವಾ ಚೌಕಾಕಾರದಲ್ಲಿ ಎರಡು ಸಾಲುಗಳಲ್ಲಿ ಇಡುತ್ತಾರೆ. ನಡುವೆ ದಾರಿಯ ರೀತಿಯಲ್ಲಿ ಜಾಗ ಬಿಡುತ್ತಾರೆ. ವರ್ತುಲದ ನಡುವೆ ದೊಡ್ಡ ಹಟ್ಟೆವ್ವಗಳನ್ನು ಇಡುತ್ತಾರೆ. ದೊಡ್ಡ ಹಟ್ಟೆವ್ವನನ್ನು ‘ಹಿರೇ ಹಟ್ಟೆವ್ವ’ ಎಂದು ಕರೆಯುತ್ತಾರೆ. ಹಿರೇ ಹಟ್ಟೆವ್ವನ ನೆತ್ತಿಯಲ್ಲಿ ಅರಳಿನ ಜೋಳದ ತೆನೆ, ಉತ್ತರಾಣಿ ಕಡ್ಡಿ ಹಾಗೂ ಮೂಗಿಗೆ ಮೂಗುತಿಯಾಗಿ ಮೆಣಸಿನಕಾಯಿ ಮತ್ತು ಮಾನಿ ಹುಲ್ಲಿನಲ್ಲಿ ಕಡ್ಡಿಗಳಿಂದ ಹೆಣೆದು ತಯಾರಿಸಿದ ನಾಗರ ಹೆಡೆಯನ್ನು ಚುಚ್ಚಿ ಇರಿಸುತ್ತಾರೆ. ಅದೆ ರೀತಿ ಈ ಹಟ್ಟೆವ್ವಗಳನ್ನು ಅಡುಗೆಮನೆಯ ಬಾಗಿಲಿಗೆ, ದೇವರಮನೆ ಬಾಗಿಲಿಗೆ, ಹಿತ್ತಿಲ ಬಾಗಿಲಿಗೆ ಮತ್ತು ‘ಮುಚ್ಚಿ’ ಬಾಗಿಲಿಗೆ (ತ್ರಿಕೋನಾಕಾರದಲ್ಲಿ) ಮೂರು ಮೂರರಂತೆ ಇರಿಸುತ್ತಾರೆ. ಹೀಗೆ ಸಗಣಿಯಿಂದ ಹಟ್ಟೆವ್ವನನ್ನು ಮತ್ತು ಪಾಂಡವರನ್ನು ಮಾಡಿ, ಹಟ್ಟೆವ್ವನನ್ನು ಇಟ್ಟಿರುವ ಸ್ಥಳದವರೆಗೂ ಆಕಳ ಹೆಜ್ಜೆಗಳನ್ನು ತಮ್ಮ ಕೈ ಮುಟಗಿ ಮಾಡಿ ಅದಕ್ಕೆ ಕೆಮ್ಮಣ್ಣು ಮತ್ತು ಬಿಳಿ ಸುಣ್ಣವನ್ನು ಬಳಸಿ ಹೆಜ್ಜೆ ಮೂಡಿಸುತ್ತಾರೆ.
ಪ್ರತಿ ರಾಶಿಚಕ್ರದಿಂದ ನಾವು ಕಲಿಯಬೇಕಾದ ವಿಷಯ ಏನಂದ್ರೆ..
ದೇವರ ಜಗಲಿ, ಮುಂದಿನ ಹಿಂದಿನ ಬಾಗಿಲು ಕುಂಟಿ, ರಂಟಿ, ಚಕ್ಕಡಿ ಮೇಲೆ, ಹಗೇವು, ಒಲೆ ಮೇಲೆ, ಒರಳಿನ ಮೇಲೆ ಹಾಗೂ ಹಿತ್ತಲದಾಗ ಕುಂಬಳ ಬಳ್ಳಿ ಹತ್ತಿರ ಹಟ್ಟೆವ್ವನನ್ನು ಅಂದರೆ ಲಕ್ಷ್ಮೀ ಮೂರ್ತಿ ಮಾಡಿ ಇಡುತ್ತಾರೆ. ಅವುಗಳಿಗೆ ಉತ್ತರಾಣಿ ಕಡ್ಡಿ, ಹೊನ್ನಾರಿಕೆ ಹೂವು, ಪುಂಡಿ ಹೂ, ಚೆಂಡು ಹೂ, ಗುರೆಳ್ಳು ಹೂ, ಕೋಲಾಣಿ ಹಾಗೂ ಇನ್ನಿತರ ಹಲವು ವಿಧದ ಹೂವುಗಳಿಂದ ಅಲಂಕರಿಸಿ ಎಲ್ಲಾ ಹಟ್ಟೆವ್ವಗಳಿಗೂ ಕುಂಕುಮ, ಮೊಸರು, ಹೂವುಗಳನ್ನು ಮುಡಿಸಿ ಪೂಜಿಸುತ್ತಾರೆ. ಅಂದು ಶ್ಯಾವಿಗೆ ಹಾಗೂ ಅನ್ನವನ್ನು ಮಾಡಿ ಎಡೆ ಹಿಡಿಯುವರು. ಈ ದಿನಗಳಲ್ಲಿ ಶ್ಯಾವಿಗೆ ಊಟ ಮಾಡುವರು. ಸಕ್ಕರೆ ಶ್ಯಾವಿಗೆ, ಬೆಲ್ಲದ ಶ್ಯಾವಿಗೆ ಹಾಲು ಹಾಕಿ ಊಟಕ್ಕೆ ಹೆಚ್ಚು ಬಳಕೆ ಮಾಡುವರು. ಇದನ್ನು ಹಟ್ಟಿಹಬ್ಬದ ವಿಶೇಷ ಸಿಹಿ ಅಡುಗೆ ಎಂದು ಪರಿಗಣಿಸಲಾಗುತ್ತದೆ. ಅದೆ ರೀತಿ ಹೋಳಿಗೆ, ಅನ್ನ, ಸಾರು, ತುಪ್ಪ ಇತ್ಯಾದಿಗಳನ್ನು ಅರ್ಪಿಸಿ ತೆಂಗಿನಕಾಯಿ ಒಡೆದು ಹಿರೇ ಹಟ್ಟೆವ್ವನ ಮುಂದೆ ಇಡುತ್ತಾರೆ.
ಸಂಜೆಯ ವೇಳೆಗೆ ಈ ಹಟ್ಟೆವ್ವಗಳನ್ನು ಮನೆಯ ಮಾಳಿಗೆ ಕುಂಬಿಯ ಮೇಲೆ, ಹಿತ್ತಿಲ ಬಾಗಿಲು ಮತ್ತು ‘ಮುಚ್ಚಿ’ ಬಾಗಿಲ ಮೇಲೆ ಸಾಲಾಗಿ ಇರಿಸುತ್ತಾರೆ. ಹಿರೇ ಹಟ್ಟೆವ್ವಗಳನ್ನು ಬಾಗಿಲ ಮೇಲೆ, ಸಣ್ಣ ಹಟ್ಟೆವ್ವಗಳ ನಡುವೆ ಇರಿಸುತ್ತಾರೆ. ಮತ್ತೊಮ್ಮೆ ಹೂವುಗಳಿಂದ ಅಲಂಕರಿಸುತ್ತಾರೆ.
ಮಹಿಳೆಯರಿಂದ ಪೂಜೆ
ನಮ್ಮ ಗ್ರಾಮೀಣ ಭಾಗದ ಜನರು ವಿದೇಶಿ ಸಂಸ್ಕೃತಿಯ ಆಕ್ರಮಣದ ನಡುವೆಯೂ ಹಟ್ಟೆವ್ವನ ಪೂಜೆಯನ್ನು ಪ್ರತಿ ವರ್ಷವೂ ಆಚರಿಸುತ್ತ ಬಂದಿದ್ದಾರೆ. ಈ ಹಟ್ಟೆವ್ವನ ಪೂಜೆ ಮಾಡುವವರು ಮಹಿಳೆಯರೇ. ಹಳ್ಳಿಯ ಮನೆ ಮನೆಯ ಹಟ್ಟಿಕೊಟ್ಟಿಗೆಗಳಲ್ಲಿ ಹಟ್ಟೆವ್ವ ಪೂಜೆಗೊಂಡು ಮನೆ ಮಾಳಿಗೆ ಶೃಂಗಾರಗೊಳ್ಳುತ್ತಿರುವುದು ಕೇವಲ ಅಂಧಾನುಕರಣೆ ಎಂದು ಮೂಗು ಮುರಿಯುವವರು ಇರಬಹುದು. ಆದರೆ ದನಕರುಗಳ ಸಗಣಿಯ ಮಹತ್ವವನ್ನು ಸಾರುವ ಮತ್ತು ಸಗಣಿಯ ಗೊಬ್ಬರದ ಶ್ರೇಷ್ಠತೆಯನ್ನು ಗೌರವಿಸುವ ರೀತಿಯಲ್ಲಿ ಸಗಣಿಯ ಹಟ್ಟೆವ್ವ ದೇವತೆಯಾಗಿ ಪೂಜೆಗೊಳ್ಳುತ್ತಿದ್ದಾಳೆ ಎನ್ನುವುದು ನಮ್ಮ ಕೃಷಿ ಸಂಸ್ಕೃತಿಯ ಹಿರಿಮೆಯ ಸಂಕೇತ.
ಕಾಲ ಎಷ್ಟೇ ಬದಲಾದರೂ ಆಚರಣೆಗಳು ಇಂದಿಗೂ ಬದುಕಿವೆ. ಮಹಾನಗರಗಳಲ್ಲಿ ಕೆಲ ಹಳೆಯ ಪದ್ಧತಿಗಳನ್ನು ಮರೆತಿರಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಈ ದಿನ ಭೂತಾಯಿಗೆ ನಮಿಸಿ, ಸುಖವಾಗಿ ಜೀವನ ನಡೆಸಲು ಅನುವು ಮಾಡಿಕೊಡುವಂತೆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ನಮ್ಮೊಡನೆ ನಮಗೆ ಆಧಾರಸ್ತಂಭವಾಗಿರುವ ಗೋವುಗಳ ರಕ್ಷಣೆ ಮಾಡುವುದು ದೀಪಾವಳಿಯ ವಿಶೇಷ ಆಶಯ.