ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ: ಕಾವೇರಿ ಮಾತೆಗೆ ವಜ್ರ, ವೈಢೂರ್ಯಗಳಿಂದ ಅಲಂಕಾರ

By Sathish Kumar KH  |  First Published Jul 17, 2023, 10:00 PM IST

ಕೊಡಗು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ‘ಪೊಲಿಂಕಾನ ಉತ್ಸವ’ ಜರುಗಿತು. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.17): ಕೊಡಗು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ‘ಪೊಲಿಂಕಾನ ಉತ್ಸವ’ ವಿಶೇಷ ಪೂಜೆ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಲ್ಲಿ ದೇವತರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯ ವೇಳೆ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿಸಿ ಅದರೊಳಗೆ ಕರಿಮಣಿ, ಚಿನ್ನದ ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಸೇರಿದಂತೆ ಮತ್ತಿತರ ಆಭರಣಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಗಂಡೇಶ್ವರ ದೇವಾಲಯದ ಸುತ್ತ ಮಂಗಳವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಪ್ರದಕ್ಷಿಣೆ ಮಾಡಲಾಯಿತು. ನಂತರ ದೇವಾಲಯದ ಮುಂಭಾಗದಲ್ಲಿ ಇರುವ ತ್ರಿವೇಣಿ ಸಂಗಮದವರೆಗೆ ಮೆರವಣಿಗೆ ಸಾಗಿದ ಬಳಿಕ ಅಲ್ಲಿಯೂ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಸಂಗಮಗದಲ್ಲಿ ವಿಸರ್ಜಿಸಲಾಯಿತು. 

Tap to resize

Latest Videos

undefined

ಭೀಮನ ಅಮವಾಸ್ಯೆ: ಪಾದಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಕಿಡ್ನಾಪ್‌ ಮಾಡಿದ ಪತಿರಾಯ

ಪೊಲಿಂಕಾನ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಪವಿತ್ರ ತೀರ್ಥ ಕ್ಷೇತ್ರವಾದ ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಈ ಸಂದರ್ಭ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಪುನಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಅದೇ ರೀತಿ ಭಕ್ತಿಯಿಂದ ನಡೆದಿದೆ ಎಂದರು.

ಮಳೆಗಾಗಿ ದೇವರಲ್ಲಿ ಪ್ರಾರ್ಥನೆ:  ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಈ ಬಾರಿ ಕಡಿಮೆ ಇದೆ. ಹೀಗಾಗಿ ಮಾತೆ ಕಾವೇರಿ ಕರುಣೆ ತೋರಿಸಿ ಸಮೃದ್ಧಿ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ. ಭಾಗಮಂಡಲ ಭಗಂಡೇಶ್ವರ ದೇವಾಯಲಯದ ಪ್ರಧಾನ ಅರ್ಚಕರಾದ ಹರೀಶ್ ಮತ್ತು ರವಿಕುಮಾರ್ ಅವರು ಆಷಾಢ ಮಾಸದ ಅಮಾವಾಸ್ಯೆ ದಿನದಂದು ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬಾಳೆದಿಂಡಿನಿಂದ ಅಲಂಕರಿಸಿದ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪೊಲಿಂಕಾನ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 

ಕೊಡಗು 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಮನೆಗಳು ಸಿಕ್ತಿಲ್ಲ

ವಜ್ರ ವಢೂರ್ಯಗಳಿಂದ ಕಾವೇರಿಗೆ ಅಲಂಕಾರ:  ಗ್ರಾಮಸ್ಥರಾದ ಕುದುಕುಳಿ ಭರತ್ ಅವರು ನಾಡಿನ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇದಾಗಿದೆ. ವಜ್ರ ವೈಡೂರ್ಯಗಳಿಂದ ಅಲಂಕರಿಸಿ ಕಾವೇರಿ ಮಾತೆಗೆ ಬೇಕಾದ ವಸ್ತುಗಳನ್ನು ಬಾಗಿನ ಅರ್ಪಿಸುವ ಕಾರ್ಯಕ್ರಮವು ಪೊಲಿಂಕಾನದ ವಿಶೇಷ ಪೂಜಾ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು. ಜೀವನದಿ ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರು, ನಾಡಿನ ಜನರಲ್ಲಿ ಸುಭಿಕ್ಷೆ ತರುವಂತಾಗಬೇಕು ಎಂದು ಪೊಲಿಂಕಾನ ಉತ್ಸವದಲ್ಲಿ ಪ್ರಾರ್ಥಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. 

ಪೊಲಿಂಕಾನ ಉತ್ಸವದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ಪಾರುಪತ್ತೆದಾರರಾದ ಕೆ.ಪಿ.ಪೊನ್ನಣ್ಣ, ಕುದುಪಜೆ ಪ್ರಕಾಶ್, ಎ.ಎಸ್.ಶ್ರೀಧರ ಇತರರು ಇದ್ದರು. ಪುಣ್ಯ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಕೂಡ ಪೊಲಿಂಕಾನ ಉತ್ಸವವನ್ನು ಕಣ್ತುಂಬಿಕೊಂಡು ಭಗಂಡೇಶ್ವರ, ಕಾವೇರಿ ಮಾತೆಗೆ ನಮಿಸಿ ಭಕ್ತಿ ಭಾವ ಮೆರೆದರು. 

click me!