ಭಾದ್ರಪದ ಮಾಸ ಯಾವಾಗ ಆರಂಭ, ಹಬ್ಬಹರಿದಿನಗಳೇನು, ಮಹತ್ವವೇನು?

By Suvarna NewsFirst Published Aug 22, 2022, 12:12 PM IST
Highlights

ಶ್ರಾವಣ ಕಳೆದು ಭಾದ್ರಪದಕ್ಕೆ ಸನ್ನಿಹಿತವಾಗುತ್ತಿದ್ದೇವೆ. ಈ ಭಾದ್ರಪದ ಮಾಸದ ವಿಶೇಷತೆಗಳೇನು, ಯಾವೆಲ್ಲ ಹಬ್ಬಹರಿದಿನಗಳು ಈ ಮಾಸದಲ್ಲಿ ಬರುತ್ತವೆ, ಈ ಮಾಸದ ಆಚಾರ, ವಿಚಾರಗಳೇನು ನೋಡೋಣ..

ಚಾತುರ್ಮಾಸದ ಎರಡನೇ ತಿಂಗಳಾದ ಭಾದ್ರಪದ ಶ್ರಾವಣದ ನಂತರ ಬರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಭಾದ್ರಪದ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ವಿಷ್ಣು, ಗಣೇಶ ಮತ್ತು ಶಿವನನ್ನು ಪೂಜಿಸಲಾಗುತ್ತದೆ. ದೊಡ್ಡ ಹಬ್ಬವಾದ ಗೌರಿ - ಗಣೇಶ ಚತುರ್ಥಿ ಕೂಡಾ ಭಾದ್ರಪದ ಮಾಸದಲ್ಲಿ ಬರುತ್ತದೆ. ಭಾದ್ರ ಎಂದರೆ ಕಲ್ಯಾಣಪ್ರದ ಎಂದರ್ಥ. ಭಾದ್ರಪದ ಎಂದರೆ ಉತ್ತಮ ಫಲಿತಾಂಶಗಳನ್ನು ನೀಡುವ ವ್ರತದ ಮಾಸ ಎಂದಾಗಿದೆ. ಈ ತಿಂಗಳ ಹುಣ್ಣಿಮೆಯಂದು ಪೂರ್ವ ಭಾದ್ರಪದ ಅಥವಾ ಉತ್ತರ ಭಾದ್ರಪದ ನಕ್ಷತ್ರ ಇರುವುದರಿಂದ ಈ ಮಾಸಕ್ಕೆ ಭಾದ್ರಪದ ಎನ್ನಲಾಗುತ್ತದೆ. 

ಶ್ರಾವಣ ಶಿವನಿಗೆ ಮುಖ್ಯವಾದಂತೆ ಭಾದ್ರಪದ ಮಾಸಕ್ಕೆ ಋಷಿಕೇಶ ಅಧಿಪತಿ. ಋಷಿಕೇಶ ಎಂದರೆ ನಾಲ್ಕು ಮುಖ, 8 ಭುಜ ಹೊಂದಿರುವ ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದಾನೆ. ಈ ಮಾಸದಲ್ಲಿ ಕೆಲ ಪ್ರಮುಖ ಹಬ್ಬಗಳಿದ್ದರೆ, ನಂತರದಲ್ಲಿ ಪಿತೃಪಕ್ಷ ಬರುತ್ತದೆ. 

ಈ ಮಾಸ ಯಾವಾಗಿಂದ ಆರಂಭ, ಈ ಮಾಸದಲ್ಲಿ ಆಚರಿಸಬೇಕಾದ  ಹಬ್ಬಗಳೇನು ಮತ್ತು ಪಾಲಿಸಬೇಕಾದ ನಿಯಮಗಳೇನು, ಮಾಡಬಾರದ ಕೆಲಸಗಳೇನು ಎಲ್ಲವನ್ನೂ ನೋಡೋಣ. 

ಭಾದ್ರಪದ ಮಾಸ 2022 ದಿನಾಂಕ(Date)
ಪಂಚಾಂಗದ ಪ್ರಕಾರ ಈ ಬಾರಿ ಕರ್ನಾಟಕದಲ್ಲಿ ಆಗಸ್ಟ್ 28 ಭಾನುವಾರದಿಂದ ಸೆಪ್ಟೆಂಬರ್ 25ರವರೆಗೆ ಭಾದ್ರಪದ ಮಾಸ ಇರುತ್ತದೆ. ಹಿಂದೂ ಧರ್ಮದಲ್ಲಿ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಬದಲಿಗೆ ಪೂಜೆ, ಪಠಣ, ಉಪವಾಸ ಇತ್ಯಾದಿಗಳಿಗೆ ಈ ತಿಂಗಳು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಅಪ್ಪು ರೂಪಕದ ಗಣೇಶ ಮೂರ್ತಿಗೆ ಬಹುಬೇಡಿಕೆ

ಈ ಮಾಸದ ಹಬ್ಬಹರಿದಿನಗಳು(Festivals and vrats in Bhadrapada)
ಭಾದ್ರಪದ ಮಾಸವು ಸ್ವರ್ಣ ಗೌರಿ ವ್ರತದಿಂದ ಆರಂಭವಾಗುತ್ತದೆ. ತದನಂತರ ವಿನಾಯಕ ಚತುರ್ಥಿ, ಋಷಿಪಂಚಮಿ ವ್ರತ, ವಿಶ್ವಕರ್ಮ ಜಯಂತಿ, ತಿರುಪತಿ ತಿಮ್ಮಪ್ಪನ ರಥೋತ್ಸವ, ಅನಂತ ಪದ್ಮನಾಭ ವ್ರತ, ಅನಂತನ ಹುಣ್ಣಿಮೆ ಹಿಂಬಾಲಿಸುತ್ತವೆ. ಬಳಿಕ ಪಿತೃಪಕ್ಷ ಆರಂಭವಾಗುತ್ತದೆ. ಇದಕ್ಕೆ ಮಹಾಲಯ ಪಕ್ಷ ಎಂದೂ ಹೇಳಲಾಗುತ್ತದೆ. ಈ ಸಮಯದುದ್ದಕ್ಕೂ ಪಿತೃ ಕಾರ್ಯಗಳೇ ನಡೆಯುತ್ತವೆ. ಕಡೆಯಲ್ಲಿ ಮಹಾಲಯ ಅಮಾವಾಸ್ಯೆಯೊಂದಿಗೆ ಭಾದ್ರಪದ ಮಾಸದ ಆಚರಣೆಗಳು ಮುಗಿಯುತ್ತವೆ. 

ಭಾದ್ರಪದ ಮಾಸ 2022ರಲ್ಲಿ ಏನು ಮಾಡಬಾರದು?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಾದ್ರಪದ ಮಾಸದಲ್ಲಿ ಬೆಲ್ಲ, ಮೊಸರು ಮತ್ತು ಅದರಿಂದ ತಯಾರಿಸಿದ ಯಾವುದನ್ನಾದರೂ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದನ್ನು ಸೇವಿಸಿದರೆ ಹೊಟ್ಟೆಯ ಸಮಸ್ಯೆ ಎದುರಾಗಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾದ್ರಪದ ಮಾಸವನ್ನು ಭಕ್ತಿ ಮತ್ತು ವಿಮೋಚನೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ತಿಂಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಮಾಂಸ ಮತ್ತು ಮದ್ಯ ಸೇವಿಸಬಾರದು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ತಿಂಗಳಲ್ಲಿ ಇತರರು ನೀಡಿದ ಅನ್ನವನ್ನು ತಿನ್ನುವುದು ಅಥವಾ ತೆಂಗಿನ ಎಣ್ಣೆಯನ್ನು ಬಳಸುವುದು ಮನೆಯಲ್ಲಿ ಬಡತನ ತರುತ್ತದೆ.
ಈ ತಿಂಗಳಲ್ಲಿ ಭಾನುವಾರದಂದು ಉಪ್ಪು ತಿನ್ನುವುದು ಮತ್ತು ಕ್ಷೌರ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಈ ರಾಶಿಗಳ ಆ್ಯಟಿಟ್ಯೂಡ್ ತಡ್ಕೊಳಕಾಗಲ್ಲ ಗುರೂ!

ಭಾದ್ರಪದ ಮಾಸದ ನಿಯಮಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಾಸದಲ್ಲಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದು ಶ್ರೇಯಸ್ಕರ.
ಈ ಮಾಸದಲ್ಲಿ ಅಗತ್ಯವಿರುವವರಿಗೆ ದೇಣಿಗೆ ನೀಡುವುದು ಶ್ರೀಕೃಷ್ಣನ ವಿಶೇಷ ಅನುಗ್ರಹವನ್ನು ನೀಡುತ್ತದೆ. ಈ ಮಾಸದಲ್ಲಿ ಶ್ರೀಕೃಷ್ಣನ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸಬೇಕು. ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಈ ತಿಂಗಳಲ್ಲಿ ಸ್ವಾತ್ವಿಕ ಆಹಾರವನ್ನು ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಭಾದ್ರಪದ ಮಾಸದಲ್ಲಿ ಹಸುವಿನ ಹಾಲು ಸೇವಿಸಿ ಶ್ರೀಕೃಷ್ಣನಿಗೆ ಪಂಚಗವ್ಯ ಅರ್ಪಿಸುವುದರಿಂದ ವಂಶಾಭಿವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

click me!