ಅಪ್ಪು ರೂಪಕದ ಗಣೇಶ ಮೂರ್ತಿಗೆ ಬಹುಬೇಡಿಕೆ

By Kannadaprabha NewsFirst Published Aug 22, 2022, 11:53 AM IST
Highlights
  • ಅಪ್ಪು ರೂಪಕದ ಗಣೇಶ ಮೂರ್ತಿಗೆ ಬಹುಬೇಡಿಕೆ
  • ಅದ್ಧೂರಿ ಗಣೇಶ ಉತ್ಸವಕ್ಕೆ ನಗರದಲ್ಲಿ ಭರ್ಜರಿ ತಯಾರಿ
  • ಮಾರುಕಟ್ಟೆಯಲ್ಲಿ ಹಬ್ಬದ ಕಳೆ

ಹುಬ್ಬಳ್ಳಿ (ಆ.22): ನಗರದೆಲ್ಲೆಡೆ ಅದ್ಧೂರಿ ಗಣೇಶ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಜತೆಗೆ ಈ ಬಾರಿ ಗಣೇಶ ಮೂರ್ತಿ ತಯಾರಕರಿಗೆ ಪವರ್‌ಸ್ಟಾರ್‌ ಪುನೀತ್‌ರಾಜಕುಮಾರ ಅಭಿಮಾನಿಗಳಿಂದ ಅಪ್ಪು ರೂಪಕದ ಗಣೇಶ ಮೂರ್ತಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಕಳೆದ ಎರಡು ವರ್ಷ ಕಳೆಗುಂದಿದ್ದ ಗಣೇಶ ಉತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಮನೆಮಾಡಿದೆ. ಗ್ರಾಮೀಣ ಹಾಗೂ ನಗರ ಭಾಗದ ಪುನೀತ್‌ರಾಜ್‌ಕುಮಾರ್‌ ಅಭಿಮಾನಿಗಳು ತಮಗೆ ಅಪ್ಪು ರೂಪಕದ ಗಣೇಶ ಮೂರ್ತಿಯೇ ಬೇಕು ಎಂದು ಗಣೇಶ ಮೂರ್ತಿ ತಯಾರಕರ ಮನೆ ಮುಂದೆ ಮುಗಿಬಿದ್ದಿದ್ದಾರೆ.

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ವಾಣಿಜ್ಯ ನಗರದ ಮರಾಠಾ ಗಲ್ಲಿ, ದಾಜಿಬಾನ ಪೇಟ, ಬಮ್ಮಾಪುರ ಓಣಿ, ಹೊಸೂರು, ಗೋಪನಕೊಪ್ಪ ಸೇರಿ ಹಲವು ಭಾಗಗಳಲ್ಲಿ 6 ತಿಂಗಳ ಹಿಂದೆ ಆರಂಭಗೊಂಡ ಮೂರ್ತಿ ತಯಾರಿಕೆ ಕಾರ್ಯ ಈಗ ಬಹುತೇಕ ಅಂತಿಮ ಹಂತ ತಲುಪಿದೆ. ಹಲವೆಡೆ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡಿವೆ. ಬಾಲಗಣಪತಿ, ಶಿವಾಜಿ, ವಿಷ್ಣು, ಈಶ್ವರ, ಸೂರ್ಯನಾರಾಯಣ, ಸಾಯಿಬಾಬಾ, ಲಾಲ್‌ಬಾಗ್‌ ಸೇರಿ 25ಕ್ಕೂ ಹೆಚ್ಚಿನ ರೂಪಕಗಳಲ್ಲಿ ಗಣೇಶನ ಮೂರ್ತಿ ತಯಾರಿಸಲಾಗುತ್ತಿದೆ.

ಪವರ್‌ಸ್ಟಾರ್‌ ಇಲ್ಲದ ಮೊದಲ ಗಣೇಶ ಉತ್ಸವ ಆಚರಣೆ ಇದಾಗಿದೆ. ಹಾಗಾಗಿ ಅವರ ಅಭಿಮಾನಿಗಳು ಅವರ ಸ್ಮರಣೆಯೊಂದಿಗೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿ ಅಪ್ಪು ರೂಪಕದ ಗಣೇಶನನ್ನು ಪ್ರತಿಷ್ಠಾಪಿಸಿ ಮನೆಯಲ್ಲಿ ಪೂಜೆ ಸಲ್ಲಿಸಲು ಮುಂದಾಗಿದ್ದು, ಮೂರ್ತಿ ತಯಾರಕರ ಬಳಿ ಅಪ್ಪು ಭಾವಚಿತ್ರ ಹಿಡಿದು ಅದೇ ರೀತಿ ಮೂರ್ತಿ ರಚಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಈದ್ಗಾದಲ್ಲಿ ಗಣೇಶ ಚತುರ್ಥಿ; ನಾಳೆ ಹಿಂದೂಪರ ಸಂಘಟನೆಗಳ ಹೋರಾಟ

ಐದು ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಮ್ಮ ಕುಟುಂಬ ತೊಡಗಿದೆ. ಅದರಲ್ಲಿ ಈ ವರ್ಷ ತುಂಬಾ ವಿಶೇಷವೆನಿಸಿದೆ. ಸಾರ್ವಜನಿಕರು ಬಗೆಬಗೆಯ ಗಣೇಶ ಮೂರ್ತಿ ಕೇಳುವುದು ಸಾಮಾನ್ಯ. ಆದರೆ ಈ ಬಾರಿ ಅಪ್ಪು ಅಭಿಮಾನಿಗಳು ಕೋಟು ಧರಿಸಿರುವ ಚಿತ್ರದ ರೂಪಕ ಬಳಸಿ ಗಣೇಶಮೂರ್ತಿ ನಿರ್ಮಿಸುವಂತೆ ಹೇಳುತ್ತಿದ್ದಾರೆ. ಅದರಂತೆ ಈ ಮೊದಲು ಒಬ್ಬರಿಗೆ ಮಾಡಿಕೊಡಲಾಗಿತ್ತು. ಅದನ್ನು ನೋಡಿದ ಹಲವರು ತಮಗೂ ಅದೇ ರೀತಿ ಬೇಕು ಎಂದು ಕೇಳುತ್ತಿದ್ದಾರೆ ಎನ್ನುತ್ತಾರೆ ಬಮ್ಮಾಪುರ ಓಣಿಯ ಮೂರ್ತಿ ತಯಾರಕ ರಿತೇಶ ಕಾಂಬಳೆ.

ಈ ವರ್ಷ ಒಟ್ಟು 300 ಗಣೇಶ ಮೂರ್ತಿ ತಯಾರಿಸಲಾಗಿದೆ. ಒಂದು ಸಾವಿರದಿಂದ .10 ಸಾವಿರದವರೆಗೆ ದರ ಇದೆ. ಒಂದು ಅಪ್ಪು ರೂಪಕದ ಗಣೇಶ ಮೂರ್ತಿ ತಯಾರಿಸಲು ಕನಿಷ್ಠ ಮೂರು ದಿನ ವ್ಯಯಿಸಬೇಕು. ಬೆಲೆ ಸುಮಾರು .6,000-6,500 ನಿಗದಿಪಡಿಸಲಾಗಿದೆ ಎನ್ನುತ್ತಾರೆ ರಿತೇಶ.

ಎಲ್ಲೆಡೆ ಈ ಬಾರಿ ಅದ್ಧೂರಿ ಹಬ್ಬ ಆಚರಣೆ ಮಾಡುತ್ತಿರುವುದರಿಂದ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಬಹಳ ಜನರು ಪುನೀತ್‌ ರಾಜಕುಮಾರ್‌ ಭಾವಚಿತ್ರವುಳ್ಳ ಗಣೇಶ ಮೂರ್ತಿ ಕೇಳುತ್ತಿದ್ದಾರೆ. ಕೆಲವು ಆರ್ಡರ್‌ ತೆಗೆದುಕೊಳ್ಳಲಾಗಿದೆ. ಸಮಯ ಕಡಿಮೆ ಇರುವುದರಿಂದ ಇನ್ನು ಹಲವರಿಗೆ ಆಗುವುದಿಲ್ಲ ಎಂದು ಹೇಳಲಾಗಿದೆ.

-ವಿಜಯಕುಮಾರ ಕಾಂಬಳೆ, ಮೂರ್ತಿ ತಯಾರಕ, ಬಮ್ಮಾಪುರ ಓಣಿ

ಮನೆಯಲ್ಲಿ ಪ್ರತಿವರ್ಷ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ. ದೇವರಂತೆ ಕೆಲಸ ಮಾಡಿರುವ ಅಪ್ಪು ಅವರ ಸಾಮಾಜಿಕ ಕಳಕಳಿ ಮೆಚ್ಚಿ ಪುನೀತ್‌ರಾಜ್‌ಕುಮಾರ ರೂಪಕದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಕುಟುಂಬಸ್ಥರು ನಿರ್ಧರಿಸಿದ್ದೇವೆ.

ತಿಪ್ಪಣ್ಣ ಲಕ್ಷಂಪುರ, ಅಪ್ಪು ರೂಪಕದ ಗಣೇಶ ಮೂರ್ತಿ ಖರೀದಿಸಿದ ಗ್ರಾಹಕ

click me!