
ವರದಿ : ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.17): ವೈಕುಂಠ ಏಕಾದಶಿಗೆ ಇನ್ನೇನು ದಿನಗಣನೆ ಶುರುವಾಗಿದೆ. ಧನುರ್ ಮಾಸದಲ್ಲಿ ಬರುವ ಈ ಏಕಾದಶಿಯಂದು ವಿಷ್ಣುವು ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ದಿನ. ಹೀಗಾಗಿ ದಕ್ಷಿಣ ಭಾರತದಲ್ಲಿ ಈ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗಾಗಿ ಬೆಂಗಳೂರಿನ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಆಚರಣೆಗೆ ಸಿದ್ದತೆ ಮಾಡಿಕೊಂಡಿದೆ. ಜನವರಿ 2 ರಂದು ವೈಕುಂಠ ಏಕಾದಶಿ ಇರುವುದರಿಂದ ನಗರದ ಟಿಟಿಡಿಯಲ್ಲಿ ಈ ಬಾರಿ ಮೂರು ದಿನಗಳ ಕಾಲ ವೈಕುಂಠ ದ್ವಾರದ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಹಬ್ಬದ ಪ್ರಯುಕ್ತ ವೆಂಟಕೇಶ್ವರನಿಗೆ ವಿಶೇಷ ಆಭರಣ ಅಲಂಕಾರ ಇರಲಿದ್ದು. ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ತಿರುಪತಿಯಿಂದ 1 ಲಕ್ಷ ಲಡ್ಡು ವಿತರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನು ಹಬ್ಬದ ದಿನ ಗರ್ಭಿಣಿಯರಿಗೆ ಹಾಗೂ ಅಂಗವಿಕಲರಿಗೆ ಉಚಿತ ಪ್ರವೇಶ ಹಾಗೂ VVIP ಪ್ರವೇಶ ನೀಡಲಾಗುತ್ತೆ.
ಇನ್ನು ಭಕ್ತರ ಅನುಕೂಲಕ್ಕೆ 200 ರೂಪಾಯಿ ಟಿಕೆಟ್ ಅನ್ನು ಕೂಡ ಖರೀದಿಸಲು ಅವಕಾಶ ನೀಡಿದ್ದಾರೆ. ಕಳೆದ ವರ್ಷ 75 ಸಾವಿರ ಭಕ್ತಾದಿಗಳು ಆಗಮಿಸಿದ್ದು, ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಭಕ್ತಾದಿಗಳು ಬರುವ ನಿರೀಕ್ಷೆ ಇದೆ ಅಂತಾ ಕಮೀಟಿ ನಿರ್ಧಾರಿಸಿದೆ.
ಮುಂಜಾನೆ 1.30 ರಿಂದ 2.00 ರವರೆಗೆ ಮೊದಲನೇ ನೈವೇದ್ಯಯ ಘಂಟೆ, ಎರಡನೇ ಘಂಟೆ ಮುಂಜಾನೆ 9 ರಿಂದ 9.30 ಹಾಗೂ ಮೂರನೇಯ ಘಂಟೆ ಸಂಜೆ 4 ರಿಂದ 4.30 ಕ್ಕೆ ಬಾರಿಸಲಾಗುತ್ತದೆ. ಭಗವಂತನನ್ನು ಎಬ್ಬಿಸಲು ಮುಂಜಾನೆ 3 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ, ಭಕ್ತರು ಶ್ರೀ ವೆಂಕಟೇಶ್ವರ ಸುಪ್ರಭಾತ ಸ್ತೋತ್ರವನ್ನು ಹಾಡುವರು. ಶ್ರೀ ಶ್ರೀನಿವಾಸ ಗೋವಿಂದನಿಗೆ ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ ಮತ್ತು ಚಾಮರಗಳಿಂದ ಭವ್ಯವಾದ ಆರತಿಯನ್ನು ಅರ್ಪಿಸಲಾಗುವುದು.
ತಿರುಪತಿ: ವೈಕುಂಠ ಏಕಾದಶಿ ವೇಳೆ ತಿಮ್ಮಪ್ಪನ ವಿಶೇಷ ದರ್ಶನ ರದ್ದು
ಮುಂಜಾನೆ 3.45 ಕ್ಕೆ ವೆಂಕಟೇಶ ದೇವರ ಮೂಲ ವಿಗ್ರಹಕ್ಕೆ ವೈಭವದ ಅಭಿಷೇಕ ಮಾಡಲಾಗುವುದು. ಭಗವಂತನಿಗೆ ಪಂಚಾಮೃತ, ಪಂಚಗವ್ಯ, ಹಣ್ಣುಗಳ ರಸ, ಗಿಡ ಮೂಲಿಕೆ ಜಲ ಮತ್ತು ಇತರ ಅನೇಕ ಶುಭ ವಸ್ತುಗಳಿಂದ ಅಭಿಷೇಕ ಮಾಡುವಾಗ ಭಕ್ತರು ಬ್ರಹ್ಮ ಸಂಹಿತ ಮತ್ತು ಇತರ ಪ್ರಾರ್ಥನೆಗಳನ್ನು ಪಠಿಸುವರು. ಮುಂಜಾನೆ 5.00 ಕ್ಕೆ ವೈಕುಂಠ ದ್ವಾರ ವಿಧಿಗಳ ಜೊತೆಗೆ ಪ್ರಧಾನ ದೇವಸ್ಥಾನದ ಅಂಗಳದ ಉತ್ತರದ ದ್ವಾರವನ್ನು ವೈಕುಂಠ ದ್ವಾರ ಎಂದು ಅಲಂಕರಿಸಲಾಗುತ್ತದೆ.
ವೈಕುಂಠ ಸೇರಿದ ಮಹಾಲಕ್ಷ್ಮಿ, ಗಾಯಕ ಗರ್ತಿಕೆರೆ ರಾಘಣ್ಣನವರಿಗೆ ಪತ್ನಿ ವಿಯೋಗ
ದರ್ಶನವು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಇರುತ್ತದೆ. ಭಗವಂತನ ದರ್ಶನ ಮತ್ತು ವೈಕುಂಠ ದ್ವಾರ ಪ್ರವೇಶ ಜೊತೆಗೆ ಪ್ರಸಾದದ ತಯಾರಿ ಮತ್ತು ವಿತರಣೆಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ. ವೆಂಕಟೇಶನ ಅನುಗ್ರಹ ಪಡೆಯಲು ಅಂದಾಜು ಒಂದು ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು, ಎಲ್ಲರಿಗೂ ಉಚಿತ ಪ್ರಸಾದವನ್ನು ಹಂಚಲು ವ್ಯವಸ್ಥೆ ಮಾಡಲಾಗಿದೆ.