Asianet Suvarna News Asianet Suvarna News

ವೈಕುಂಠ ಸೇರಿದ ಮಹಾಲಕ್ಷ್ಮಿ, ಗಾಯಕ ಗರ್ತಿಕೆರೆ ರಾಘಣ್ಣನವರಿಗೆ ಪತ್ನಿ ವಿಯೋಗ

ಅನುರೂಪದ ದಾಂಪತ್ಯಕ್ಕೊಂದು ನಿದರ್ಶನವಾಗಿದ್ದ ಗರ್ತಿಕೆರೆ ರಾಘಣ್ಣ ಮತ್ತು ಮಹಾಲಕ್ಷ್ಮಮ್ಮನವರ ಅರವತ್ತಾರು ವರ್ಷದ ಸುದೀರ್ಘ ದಾಂಪತ್ಯ ಕೊನೆಗೊಂಡಿದೆ. ರಾಘಣ್ಣನವರ ಧರ್ಮಪತ್ನಿ ಮಹಾಲಕ್ಷ್ಮಮ್ಮ ಇಂದು ಬೆಳಗ್ಗೆ ನಾಲ್ಕೂಕಾಲು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಖ್ಯಾತ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡಿಗೆ ಸಾಹಿತ್ಯ ಬರೆದಿರುವ ಗಜಾನನ ಶರ್ಮ ಸಂತಾಪ ಸೂಚಿಸಿದ್ದಾರೆ.

Shivamoga : Mahalakshmi, Garthikere Raghanna's Wife Is No More Vin
Author
First Published Dec 16, 2022, 3:44 PM IST

ಸಾಹಿತಿ: ಗಜಾನನ ಶರ್ಮ

ಅನುರೂಪದ ದಾಂಪತ್ಯ (Married life)ಕ್ಕೊಂದು ನಿದರ್ಶನವಾಗಿದ್ದ ಗರ್ತಿಕೆರೆ ರಾಘಣ್ಣ ಮತ್ತು ಮಹಾಲಕ್ಷ್ಮಮ್ಮನವರ ಅರವತ್ತಾರು ವರ್ಷದ ಸುದೀರ್ಘ ದಾಂಪತ್ಯಕ್ಕೆ  ಕೊನೆಗೊಂಡಿದೆ. ರಾಘಣ್ಣನವರ ಧರ್ಮಪತ್ನಿ ಮಹಾಲಕ್ಷ್ಮಮ್ಮ ಇಂದು ಬೆಳಗ್ಗೆ (Morning) ನಾಲ್ಕೂಕಾಲು ಗಂಟೆಗೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ವಯೋವೃದ್ಧ ಪತಿ ರಾಘಣ್ಣನವರೊಡನೆ, ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಮತ್ತು ಹಲವು ಮೊಮ್ಮಕ್ಕಳಿಂದ ತುಂಬಿದ ಸಂಸಾರವನ್ನು  ಬಿಟ್ಟು ತಾವು ಕಣ್ಮುಚ್ಚಿದ್ದಾರೆ. ಆದರ್ಶ ಗೃಹಿಣಿ (Hpmemaker)ಯಾಗಿದ್ದ, ರಾಘಣ್ಣನ ಬದುಕಿನ ಸುಖ ಕಷ್ಟಗಳಲ್ಲಿ ಏಳು ಬೀಳುಗಳಲ್ಲಿ ಸಹಜ ಸಹಭಾಗಿನಿಯಾಗಿದ್ದ ಮಹಾಲಕ್ಷ್ಮಮ್ಮ  ಗಾಯಕ ರಾಘಣ್ಣನವರನ್ನು ಒಂಟಿ (Alone)ಯಾಗಿಸಿ ಹೊರಟುಹೋಗಿದ್ದಾರೆ. ಖ್ಯಾತ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡಿಗೆ ಸಾಹಿತ್ಯ ಬರೆದಿರುವ ಗಜಾನನ ಶರ್ಮ ಸಾವಿಗೆ ಸಂತಾಪ (Condolence) ಸೂಚಿಸಿದ್ದಾರೆ.

ಗರ್ತಿಕೆರೆ ರಾಘಣ್ಣ ಮತ್ತು ಮಹಾಲಕ್ಷ್ಮಮ್ಮನವರ ವಿವಾಹ  ಕೇವಲ ಐವತ್ತು ರೂಪಾಯಿ ವೆಚ್ಚದಲ್ಲಿ ನಡೆದಿತ್ತು. ಬಡತನಕ್ಕೆ ಬಗ್ಗದ, ಕಷ್ಟಗಳಿಗೆ ಜಗ್ಗದ ಅವರ ಬದುಕು ಬೇಂದ್ರೆಯವರ ಕವನ' ನಾನು  ಬಡವಿ, ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು. ಅದಕು, ಇದಕು ಎದಕು..'ಎಂಬಂತೆ ಸದಾ ಖುಷಿಯಿಂದ ಜೀವನ ನಡೆಸಿದರು. ಕೋಟಿ ರೂಪಾಯಿ ವೆಚ್ಚದ ಮದುವೆಗಳು ತಿಂಗಳುಗಳ ಕಾಲವೂ ಬದುಕದ ಇಂದಿನ ಕಾಲಘಟ್ಟದಲ್ಲಿ ಈ ಅತ್ಯಪೂರ್ವ ದಾಂಪತ್ಯದ ಒಂದೆರಡು ಘಟನೆಗಳನ್ನು ನೆನೆದು, ಬದುಕಿನ ಸದ್ಗುಣಗಳ ಸಾಂಧ್ರವಾಗಿದ್ದ ಮಹಾಲಕ್ಷ್ಮಮ್ಮನವರ ಜೀವಕ್ಕೆ ಶ್ರದ್ಧಾಂಜಲಿ.

25 ವರ್ಷದಿಂದ ಒಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು !

ಕೇವಲ ಐವತ್ತು ರೂಪಾಯಿಗೊಂದು ಮದುವೆ
ರಘುರಾಮ ಅಡಿಗರು ಹಾಗೂ ಸೋದರರು ರಾಘಣ್ಣನವರ ತಾಯಿ ಮೂಕಾಂಬಿಕಮ್ಮನವರ ತಮ್ಮಂದಿರು. ಗರ್ತಿಕೆರೆಯಲ್ಲಿ ಅವರದೊಂದು ಹೋಟೆಲ್ ಹೆಸರಿನ ಬಿಡಾರ. ಎತ್ತಿನ ಗಾಡಿಯಲ್ಲಿ ರಾತ್ರಿ ಶಿವಮೊಗ್ಗ ನಗರಕ್ಕೆ ಹೋಗುವವರ ತಂಗುದಾಣ. ರಘುರಾಮ ಅಡಿಗರದ್ದು 'ಮದ್ದಲೆ'ಯ ಕೈ. ಹಣದ ಗಳಿಕೆ ಕಡಿಮೆಯಿದ್ದರೂ ಜನ ಬಳಕೆ ಹೆಚ್ಚು. ಊರಿಗೆ ಬರುವವರೆಲ್ಲರೂ ಯಕ್ಷಗಾನದ ಕೊನೆಗೆ ಉಳಿಯುತ್ತಿದ್ದುದು ಇವರ ಮನೆಯಲ್ಲೇ. ಅಡಿಗರಿಗೆ ಜಾತಕ ಕುಂಡಲಿಗಳಲ್ಲಿ ನಂಬಿಕೆ. 'ಯಜ್ಞನಾರಾಯಣ ಸೋಮಯಾಜಿ'ಗಳೆಂಬುವವರು ಅವರಿಗೆ ತುಂಬಾ ಬೇಕಾದವರು. ಅವರೊಮ್ಮೆ ಬಂದಾಗ, ಅವರೆದುರು ತಮ್ಮ 17ರ ವಯಸ್ಸಿನ ಮಗಳ ಜಾತಕವನ್ನು ತೋರಿಸಿ, ಯಾರಾದರೂ ಗಂಡುಗಳನ್ನು ತೋರಿಸಲು ಕೋರಿಕೆಯಿಡುತ್ತಾರೆ. ಸೋಮಯಾಜಿಗಳೂ ಇಂತಹ ವ್ಯವಹಾರಗಳಲ್ಲಿ ಬಹಳ ನುರಿತವರೇ.

'ಅಡಿಗರೇ ಮನೆಯಲ್ಲೇ ತುಪ್ಪ ಇಟ್ಟುಕೊಂಡು ಬೆಣ್ಣೆಗೆ ಯಾಕೆ ಹುಡುಕುವುದು? ರಾಘುಗೇ ಕೊಟ್ಟುಬಿಡಿ' ಎಂದು ಬಿಡುತ್ತಾರೆ. ರಾಘುವಿನ ಬಗ್ಗೆ ಹೊರಗೆ ತಾತ್ಸಾರವಿಲ್ಲದಿದ್ದರೂ, ನಿಶ್ಚಿತ ಉದ್ಯೋಗವಾಗಲೀ, ಒಂದಿಷ್ಟು ಆಸ್ತಿಯಾಗಲೀ ಇಲ್ಲದ ಇವನಿಗೆ ಕೊಡುವುದು ಹೇಗೆ ಎಂಬ ಭಾವನೆ ಅಂತರ್ಯದಲ್ಲಿ ಇದ್ದಿತೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಮಯಾಜಿಗಳ ಮಾತನ್ನಂತೂ ಮೀರುವಂತಿಲ್ಲ. ಅಂತೂ ಎರಡೂ ಕಡೆಯವರ ಒಪ್ಪಿಗೆ ದೊರೆತು ೨೦ರ ತಾರುಣ್ಯದ ರಾಘಣ್ಣನ ಮದುವೆ 17ರ ತರುಣಿ ಮಾವನ ಮಗಳು ಮಹಾಲಕ್ಷ್ಮಿಯ ಜೊತೆಗೆ ನಿಶ್ಚಯವಾಯಿತು.

ಗಂಡ ಹೆಂಡತಿ ಅಂದ್ರೆ ಜಗಳ ಆಡದೆಯೂ ಇರ್ತಾರಾ? ಇರಬಹುದಂತೆ!

ಮದುವೆ ಮಾಡಬೇಕು ಸರಿ, ಆದರೆ ಖರ್ಚಿಗೇನು ಮಾಡಬೇಕು? ಎಲ್ಲರೂ ಬಡತನವನ್ನೇ ಉಂಡುಟ್ಟು ಹೊದೆಯುವವರು. ಅಂದಮೇಲೆ ಮದುವೆ ಹೇಗೆ? ಎಲ್ಲಿ? ಸಾಗರದಲ್ಲಿ ಒಂದು ಅಗಡಿ ನಾರಾಯಣ ಆಶ್ರಮವಿತ್ತು. ಈಗಲೂ ಇದೆ. ಅದರ ಆಗಿನ ಮ್ಯಾನೇಜರು 'ಶ್ರೀನಿವಾಸ' ಎಂಬುವವರು. ಅವರು ಕ್ಯಾಂಪಿಗೆ ಬಂದಾಗಲೆಲ್ಲಾ ಉಳಿಯುತ್ತಿದ್ದುದು ಅಡಿಗರ ಮನೆಯಲ್ಲಿ. ಸರಿ, ರಾಘಣ್ಣನ ಮದುವೆ ಹೇಗೆಂದು ಚರ್ಚೆಯಾಗುವ ವೇಳೆ ಅವರೂ ಅಲ್ಲಿಯೇ ಕ್ಯಾಂಪ್ ಹೂಡಿರಬೇಕೇ? ಅವರೇ ಸಾಗರದ ಆಶ್ರಮದಲ್ಲಿ ಮಾಡಿಬಿಡಿ ಎಂದು ಸಲಹೆ ನೀಡಿದರು. ತೇಲುವವನಿಗೊಂದು ಹುಲ್ಲು ಕಡ್ಡಿ! ಮಾನ ಹೋಗುವ ವೇಳೆಯಲ್ಲಿ ಮೂರುಗೇಣು ಬಟ್ಟೆ! ಅದೂ ತಾನಾಗಿಯೇ ದೊರೆಯುತ್ತಿದೆ. ಅಂದಮೇಲೆ ಬಿಡುವರುಂಟೇ?

ಸರಿ 1950ನೇ ಇಸವಿ ಜೂನ್ 20ನೇ ತಾರೀಖು. ಗರ್ತಿಕೆರೆಯಿಂದ ಸಾಗರಕ್ಕೆ ಹೋಗುತ್ತಿದ್ದ ಸರ್ವಿಸ್ ಬಸ್ಸಿನಲ್ಲಿ 17 ಜನರ ದಿಬ್ಬಣ. ಒಂದು ರೂಪಾಯಿ ಚಾರ್ಜ್ ಇದ್ದ ಆ ಕಾಲದ ಬಸ್ಸಿನಲ್ಲಿ ರಾಘಣ್ಣನ ಕುಟುಂಬಕ್ಕೆ ವಿಶೇಷ ರಿಯಾಯ್ತಿ. ಗರ್ತಿಕೆರೆಯಿಂದ ಸಾಗರಕ್ಕೆ ಒಂದು ರೂಪಾಯಿ ಚಾರ್ಜ್ ಇದ್ದ ಆ ಕಾಲದಲ್ಲಿ ಈ ಮದುವೆ ದಿಬ್ಬಣಕ್ಕೆ ಹೋಗಿಬರುವುದೂ ಸೇರಿ 17 ಜನಕ್ಕೆ 17 ರೂಪಾಯಿ.

ಅಗಡಿ ಆಶ್ರಮದಲ್ಲಿ ಎರಡು ದಿನದ ಮದುವೆ
ಮದುವೆಗೆಂದು ತೆಗೆದ ಜವಳಿಗೆ ತಗುಲಿದ ವೆಚ್ಚ ಕೇಳಿ ಹೌಹಾರಬೇಡಿ. 25 ರೂಪಾಯಿಗಳ ಅದ್ದೂರಿ ಜವಳಿ. ಎರಡು ದಿನದ ಮದುವೆ ಮುಗಿಸಿ ಹೊರಡುವಾಗ ಆಶ್ರಮಕ್ಕೆ 25 ರೂಪಾಯಿ ಗುರು ಕಾಣಿಕೆ. ಆಶ್ರಮದ ಗುರುಗಳು ಅದನ್ನು ಇವರಿಗೇ ಉಡುಗೊರೆಯಾಗಿ ಮರಳಿ ನೀಡುತ್ತಾರೆ. ಒಟ್ಟು ಮದುವೆಯ ಖರ್ಚುವೆಚ್ಚ ತಾಳೆ  ಹಾಕೋಣ; ಯಾಕೆಂದರೆ ಅದು ರಾಘವ ಮಹಾಲಕ್ಷ್ಮೀ ಕಲ್ಯಾಣ!
ಹೋಗಿ-ಬರುವ ಬಸ್‌ಚಾರ್ಜ್:  17ರೂಪಾಯಿ
ತಾಳಿ     :   8 ರೂಪಾಯಿ
ಜವಳಿ     : 25 ರೂಪಾಯಿ
ಒಟ್ಟು     :   50 ರೂಪಾಯಿ

1956ರ  ಜೂನ್ 21ರಂದು ಮದುವೆ
ರಾಘಣ್ಣ ಬೊಚ್ಚುಬಾಯಲ್ಲಿ ತಮ್ಮ ಮದುವೆಯ ಕತೆ ಹೇಳುವುದನ್ನು ಕೇಳುವುದಕ್ಕೆ ಖುಷಿಯಾಗುತ್ತದೆ.  ಈ 50 ರೂಪಾಯಿ ಖರ್ಚು ಆಗಿದ್ದನ್ನು ಹೊರತುಪಡಿಸಿದರೆ, ಈ ಮದುವೆಯಿಂದ ಸಂಭವಿಸಿದ ಒಂದೇ ಬದಲಾವಣೆಯೆಂದರೆ ಬೇರೆ ಬೇರೆ ಮನೆಯಲ್ಲಿ ಮಲಗುತ್ತಿದ್ದ ನಾನು, ಮಹಾಲಕ್ಷ್ಮಿ ಒಂದೇ ಮನೆಯಲ್ಲಿ ಮಲಗತೊಡಗಿದೆವು. ಅಷ್ಟೆ! ಮೊದಲು ಹೋಗು, ಬಾ ಎನ್ನುತ್ತಿದ್ದವಳು ಈಗ ಹೋಗಿ, ಬನ್ನಿ ಎನ್ನತೊಡಗಿದಳು. ಇದನ್ನು ಬಿಟ್ಟರೆ ಮದುವೆ... ನಮ್ಮ ಜೀವನದಲ್ಲಿ ಬಹಳ ವ್ಯತ್ಯಾಸವನ್ನೇನೂ ಉಂಟು ಮಾಡಲಿಲ್ಲ, ಮುಂದೆ ಮಕ್ಕಳಾದದ್ದನ್ನು ಹೊರತುಪಡಿಸಿ” ಎನ್ನುತ್ತಾ ಹಾಸ್ಯ ಚಟಾಕಿ ಹಾರಿಸುತ್ತಾರೆ.

Follow Us:
Download App:
  • android
  • ios