ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಬ್ರಾಹ್ಮೀ ಮುಹೂರ್ತಕ್ಕೂ ಮುನ್ನ ಎದ್ದು ಈ ಸಮಯದಲ್ಲಿ, ಧ್ಯಾನ, ಯೋಗ, ವಿದ್ಯಾಭ್ಯಾಸ, ಪೂಜೆ ಇತ್ಯಾದಿ ಒಳ್ಳೆಯ ಕೆಲಸಗಳನ್ನು ಮಾಡಲು ಹೇಳಲಾಗುತ್ತದೆ. ಇದಕ್ಕೆ ಕಾರಣವೇನು? ಈ ಸಮಯಕ್ಕೇಕೆ ಅಷ್ಟೊಂದು ಮಹತ್ವ?
ಬ್ರಾಹ್ಮೀ ಮುಹೂರ್ತಂ ಉತ್ತಿಷ್ಠಹೇತ್ ಸ್ವಸ್ಥೋ ರಕ್ಷಾರ್ಥಂ ಆಯುಷ:
ತತ್ರ ಸರ್ವಾರ್ಥ ಶಾನ್ತ್ಯರ್ಥಂ ಸ್ಮರೇಚ್ಚ ಮಧುಸೂದನಮ್
ಇದರ ಅರ್ಥ ಹೀಗಿದೆ- ಉತ್ತಮ ಆರೋಗ್ಯ, ಆಯಸ್ಸಿಗಾಗಿ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು.
ಸಾಮಾನ್ಯವಾಗಿ ನಮ್ಮ ಶಾಸ್ತ್ರಗಳಲ್ಲಿ ಬ್ರಾಹ್ಮೀ ಮುಹೂರ್ತ(Brahma Muhurta)ದಲ್ಲಿ ಎದ್ದು ಧ್ಯಾನ, ವಿದ್ಯಾರ್ಚನೆ, ಯೋಗ, ಪೂಜೆ, ಜಪತಪ ಮಾಡಬೇಕೆಂಬುದನ್ನು ಕೇಳಿರುತ್ತೀರಿ. ಇಷ್ಟಕ್ಕೂ ಈ ಬ್ರಾಹ್ಮೀ ಮುಹೂರ್ತ ಆರಂಭವಾಗುವುದ್ಯಾವಾಗ? ಈ ಸಂದರ್ಭದ ವಿಶೇಷಗಳೇನು? ಯಾಕೆ ಈ ಸಮಯದಲ್ಲಿ ಮಾಡುವ ಕೆಲಸ ಹೆಚ್ಚು ಶ್ರೇಯಸ್ಕರ ಎನಿಸಿಕೊಳ್ಳುತ್ತದೆ ತಿಳಿಯಬೇಕಾ?
ವೈಜ್ಞಾನಿಕ ಕಾರಣ(Scientific reason) ಇಲ್ಲಿದೆ..
ಸೂರ್ಯೋದಯಕ್ಕೂ ಮುಂಚಿನ 48 ನಿಮಿಷಗಳನ್ನು ಬ್ರಾಹ್ಮೀ ಮುಹೂರ್ತ ಎನ್ನಲಾಗುತ್ತದೆ. ಕೆಲವೆಡೆ ರಾತ್ರಿಯ ಕಡೆಯ ಭಾಗ ಅಂದರೆ 3.50ರಿಂದ 5.30ರವರೆಗೂ ಬ್ರಾಹ್ಮೀ ಮುಹೂರ್ತ ಎನ್ನಲಾಗುತ್ತದೆ. ಈ ಮುಂಜಾನೆಯ ಅವಧಿಯಲ್ಲಿ ಪರಿಸರದಲ್ಲಿ ಸ್ವಚ್ಛ ಆಮ್ಲಜನಕ ಹರಿದಾಡುತ್ತಿರುತ್ತದೆ. ಇದು ಸುಲಭವಾಗಿ ನಮ್ಮ ಹಿಮೋಗ್ಲೋಬಿನ್(haemoglobin)ನೊಂದಿಗೆ ಬೆರೆತು ಆಕ್ಸಿಹೆಮೊಗ್ಲೋಬಿನ್ ಅನ್ನು ರೂಪಿಸುತ್ತವೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚುತ್ತದೆ, ಶಕ್ತಿಯ ಮಟ್ಟ ಹೆಚ್ಚುತ್ತದೆ, ಒತ್ತಡ, ನೋವು, ಸೆಳೆತವನ್ನು ನಿವಾರಿಸುತ್ತದೆ ಮತ್ತು ಸಾಮಾನ್ಯ ರಕ್ತದ pH ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅರ್ಥ ತಿಳಿದು ನವಗ್ರಹ ಮಂತ್ರ ಪಠಿಸಿದರೆ, ಮನೆಯಲ್ಲಿ ಶಾಂತಿ ನೆಮ್ಮದಿ!
ಏಕಾಗ್ರತೆ(Concentration) ಹೆಚ್ಚು
ಬ್ರಾಹ್ಮೀ ಮುಹೂರ್ತವು ವಿದ್ಯಾರ್ಥಿಗಳಿಗೆ ಓದಲು, ಧ್ಯಾನ(meditation) ಮಾಡಲು ಅತ್ಯುತ್ತಮ ಸಮಯವಾಗಿದೆ. ಇದಕ್ಕೆ ಮೇಲೆ ಹೇಳಿದ ಕಾರಣ ಒಂದಾದರೆ, ರಾತ್ರಿಯ ನಿದ್ರೆಯಿಂದ ದೇಹ ಮತ್ತು ಮನಸ್ಸು ಹೊಸ ಚೈತನ್ಯ ಪಡೆದಿರುವುದು ಮತ್ತೊಂದು ಕಾರಣ. ಸ್ವಚ್ಛ ಗಾಳಿ ಮತ್ತು ಸೊಂಪಾದ ನಿದ್ದೆಯಿಂದಾಗಿ ನಮ್ಮ ಮನಸ್ಸು ಈ ಸಮಯದಲ್ಲಿ ಹೆಚ್ಚು ಫ್ರೆಶ್ ಆಗಿರುತ್ತದೆ. ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ. ಅಲ್ಲದೆ, ಈ ಸಮಯದಲ್ಲಿ ಗದ್ದಲ ಕಡಿಮೆ. ಹಕ್ಕಿಯ ಚಿಲಿಪಿಲಿ, ಗಾಳಿಯ ಸದ್ದು, ಹರಿವ ನೀರಿನ ಸದ್ದು ಮನಸ್ಸನ್ನು ಮತ್ತಷ್ಟು ತಾಜಾವಾಗಿರಿಸುತ್ತದೆಯೇ ಹೊರತು ಕದಡುವುದಿಲ್ಲ.
ಈ ಕಾರಣದಿಂದ ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನದಲ್ಲಿ ತೊಡಗುವುದು ಬಹಳ ಪ್ರಯೋಜನಕಾರಿಯಾಗಿದೆ. ಓದಿದ್ದೆಲ್ಲವೂ ಅರ್ಥವಾಗಿ, ನೆನಪಿನಲ್ಲಿ ಉಳಿಯುತ್ತವೆ. ಇದೇ ಕಾರಣಕ್ಕೆ ವೇದ ಕಾಲದಲ್ಲೂ ಋಷಿ-ಮುನಿಗಳು ತಮ್ಮ ಶಿಷ್ಯರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ವೇದಪಾಠ ಮನನ ಮಾಡಿಕೊಳ್ಳುವಂತೆ ಹೇಳುತ್ತಿದ್ದರು. ಆ ಕಾಲದಲ್ಲಿ ಗಡಿಯಾರ ಇಲ್ಲದ ಕಾರಣ ಸಮಯವನ್ನು ಮುಹೂರ್ತಗಳಲ್ಲಿ ಹೇಳುತ್ತಿದ್ದರು.
ಈ ಸಂದರ್ಭ ಧ್ಯಾನ ಮಾಡಲು ಕೂಡಾ ಸುಸಮಯವಾಗಿದೆ. ಯಾವುದೇ ಗೌಜು ಗದ್ದಲವಿಲ್ಲದ ಪ್ರಶಾಂತ ವಾತಾವರಣ ಸಿಗುವುದು. ಜೊತೆಗೆ, ಮನಸ್ಸು, ಮತ್ತು ದೇಹ ನಿದ್ರೆಯಿಂದ ಹೊಸ ತಾಜಾತನದಲ್ಲಿರುವುದು.
ಅದೂ ಅಲ್ಲದೆ, ಇದು ದೇವರು ಕೂಡಾ ಎಚ್ಚರವಾಗುವ ಸಮಯ ಎಂಬ ನಂಬಿಕೆ ಇದೆ. ಹೀಗಾಗಿ, ಪೂಜೆಯನ್ನು ಈ ಸಮಯದಲ್ಲಿ ಮಾಡಿದರೆ ತುಂಬಾನೇ ಒಳ್ಳೆಯದು. ಮನಸ್ಸು ಕೂಡಾ ಏಕಾಗ್ರತೆಯಲ್ಲಿ ದೇವರ ಧ್ಯಾನದಲ್ಲಿ ತೊಡಗುತ್ತದೆ.
ಅಲಂಕಾರ ಪ್ರಿಯನಾದ ತಿಮ್ಮಪ್ಪನನ್ನು ಮೆಚ್ಚಿಸುವ ವಿಧಾನವೇನು?
ಇನ್ನು ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ದೇಹದ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯೋಗ(yoga) ಮತ್ತಿತರೆ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಅದರ ಲಾಭ ಚೆನ್ನಾಗಿ ತಲುಪುತ್ತದೆ. ಇದಕ್ಕೆ ಮೇಲೆ ಹೇಳಿದ ಆಕ್ಸಿ ಹಿಮೋಗ್ಲೋಬಿನ್ ಕಾರಣವೂ ಸೇರಿದೆ.
ಇನ್ನು ಈ ಸಮಯದಲ್ಲಿ ದೇವಸ್ಥಾನಗಳು ಕೂಡ ತೆರೆಯುತ್ತವೆ. ಮುಂಜಾನೆ ಭಗವಂತನ ದರ್ಶನ ಮಾಡಿದಾಗ ವಿಶೇಷವಾದ ಶಕ್ತಿ ಕೂಡ ಪ್ರಾಪ್ತಿ ಆಗುತ್ತದೆ ಎನ್ನಲಾಗುತ್ತದೆ.