ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?

By Suvarna News  |  First Published Sep 17, 2022, 10:41 AM IST

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಅಲ್ಲಿನ ಆನೆ ಆಶೀರ್ವಾದ ಮಾಡಿದೆ. ಹಿಂದೂ ಸಂಸ್ಕೃತಿಯಲ್ಲಿ ಆನೆಯಿಂದ ಆಶೀರ್ವಾದ ಮಾಡಿಸಿಕೊಳ್ಳುವುದರ ಮಹತ್ವ ಏನೆಂದು ನೋಡೋಣ..


ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಶುಕ್ರವಾರ ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ದೇಗುಲದಲ್ಲಿ ಪ್ರಾರ್ಥಿಸಿದರು. ಈ ಸಮಯದಲ್ಲಿ ದೇವಾಲಯದ ಆನೆ ಅವರ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಹೀಗೆ ಆನೆಗಳಿಂದ ಆಶೀರ್ವಾದ ಪಡೆವ ಸಂಪ್ರದಾಯವಿದೆ. ಆನೆಯು ತಲೆಯ ಮೇಲೆ ಸೊಂಡಿಲಿಟ್ಟರೆ ಏನರ್ಥ? ಏಕಾಗಿ ಆನೆಯನ್ನು ಪೂಜಿಸಲಾಗುತ್ತದೆ?

ಆನೆಗಳನ್ನು ಏಕೆ ಪೂಜಿಸುತ್ತಾರೆ?
ಹಿಂದೂ ಸಂಸ್ಕೃತಿಯಲ್ಲಿ ಆನೆ(Elephant)ಯನ್ನು ಗಣೇಶ ಎಂದು ಪೂಜಿಸಲಾಗುತ್ತದೆ. ಆನೆಗಳು ಗಣೇಶನ ಜೀವರೂಪ. ವಾಸ್ತುವಿನಲ್ಲಿ ಆನೆಯು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದು ದೈವತ್ವದ ಸಂಪರ್ಕದೊಂದಿಗೆ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪ್ರಾಚೀನ ಕಾಲದಲ್ಲಿ ವಿಸ್ತೃತ ಕುಟುಂಬದ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಪೂಜಾ ವಿಧಿವಿಧಾನಗಳ ಭಾಗವಾಗಿ ದಕ್ಷಿಣ ಭಾರತದ ದೇವಾಲಯಗಳಲ್ಲಿ ಆನೆಗಳನ್ನು ಸಾಕಲಾಗುತ್ತದೆ. ಅಂಬಾನಿ ಪ್ರಾರ್ಥಿಸಿದ ತಿರುಪತಿ ದೇವಸ್ಥಾನದಲ್ಲಿ ಪೂಜೆಗಾಗಿ ಆನೆಗಳನ್ನು ಸಾಕಲಾಗುತ್ತದೆ. ಅವುಗಳಿಗೆ ದೇವಾಲಯ(Temple)ದ ಅಧಿಕಾರಿಗಳು ಆಹಾರವನ್ನು ನೀಡುತ್ತಾರೆ ಮತ್ತು ಆಚರಣೆಯಂತೆ, ಅಂಬಾನಿ ಕೂಡ ಆನೆಗೆ ಆಹಾರ ನೀಡಿದರು. 

Tap to resize

Latest Videos

ಆನೆಗಳು ದಕ್ಷಿಣ ಭಾರತದಲ್ಲಿ ದೇವಾಲಯಗಳ ಭಾಗವಾಗಿವೆ. ಮೈಸೂರು ದಸರಾ(Dussera)ದಲ್ಲಿ ದೇವರ ಪಲ್ಲಕ್ಕಿ ಹೊತ್ತು ರಾಜಗಾಂಭೀರ್ಯದಲ್ಲಿ ಮೆರವಣಿಗೆ ಹೋಗುವ ಆನೆಗಳು ವಿಶ್ವಪ್ರಸಿದ್ಧವಾಗಿವೆ. ಅಂತೆಯೇ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ದೇವಾಲಯಗಳ ಸಂಕೀರ್ಣದೊಳಗೆ ಆನೆಗಳಿರುತ್ತವೆ. ಇವು ದೇವರ ಪಲ್ಲಕ್ಕಿ ಉತ್ಸವ ಇತ್ಯಾದಿ ಸಂದರ್ಭದಲ್ಲಿ ದೇವರನ್ನು ಬೆನ್ನ ಮೇಲೆ ಹೊತ್ತು ತಿರುಗಿಸುತ್ತವೆ. ನಿತ್ಯ ಪೂಜೆಗೆ ಪಾತ್ರವಾಗುತ್ತವೆ. ಕೆಲವೆಡೆ ಪೂಜೆಯ ಸಂದರ್ಭದಲ್ಲಿ ಗಂಟೆ ಬಾರಿಸುವ ಆನೆಗಳೂ ಇವೆ. ಹಬ್ಬ ಹರಿದಿನಗಳಲ್ಲಿ ಆನೆಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಗಣಪತಿ ಸ್ವರೂಪವಾದ ಆನೆಗಳು ಭಕ್ತರಿಂದ ಕಾಣಿಕೆ, ಬಾಳೆಹಣ್ಣು, ಕಾಯಿ ಸ್ವೀಕರಿಸಿ ಅವರ ತಲೆಯ ಮೇಲೆ ಸೊಂಡಿಲಿಟ್ಟು(Trunk) ಆಶೀರ್ವದಿಸುತ್ತವೆ. 

ಇನ್ನು ಕೆಲ ಮಠದ ಆನೆಗಳು ಊರೂರಿಗೆ ನಡಿಗೆಯಲ್ಲಿ ತೆರಳಿ ಮನೆಮನೆಗೂ ಹೋಗಿ ಪೂಜೆ ಮಾಡಿಸಿಕೊಂಡು ದಿವ್ಯ ದರ್ಶನವನ್ನು ಜನರಿಗೆ ನೀಡುತ್ತವೆ. ಈ ರೀತಿ ಊರಿಗೆ ಆನೆ ಬಂದರೆ ಸಾಕ್ಷಾತ್ ಗಣಪನೇ ತಮ್ಮ ಮನೆಗೆ ಬಂದಂತೆ ಜನರು ಸಂಭ್ರಮಿಸುತ್ತಾರೆ. ಈ ಆನೆಗಳಿಗೆ ಬಾಳೆಹಣ್ಣು, ಅಕ್ಕಿ, ಕಾಯಿ, ಹಣ ನೀಡುವುದರ ಜೊತೆಗೆ ಅರಿಶಿನ ಕುಂಕುಮವಿಟ್ಟು, ಆರತಿ ಎತ್ತುತ್ತಾರೆ. ಕಡೆಯಲ್ಲಿ ಅದರಿಂದ ಆಶೀರ್ವಾದ ಪಡೆದು ಹರ್ಷಚಿತ್ತರಾಗುತ್ತಾರೆ.

Astrology Tips: ಹಳೆ ಪೊರಕೆ ಎಸೆಯುವ ಮುನ್ನ ಇದು ನೆನಪಿರಲಿ

ಆನೆಯ ಆಶೀರ್ವಾದದ ಲಾಭ
ಆನೆಗಳು ಆಶೀರ್ವಾದ(Blessings) ಮಾಡಿದರೆ ಮಕ್ಕಳಲ್ಲಿ ಧೈರ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ಹಿರಿಯರಿಗೆ ಬಯಸಿದ ಇಷ್ಟಾರ್ಥಗಳು ಈಡೇರುತ್ತವೆ ಎನ್ನಲಾಗುತ್ತದೆ. ಆನೆಯು ಗಣಪತಿಯ ಸ್ವರೂಪವಾದ್ದರಿಂದ ಅವುಗಳ ಆಶೀರ್ವಾದವು ಸಿದ್ಧಿ ಬುದ್ದಿ ಎರಡನ್ನೂ ಕರುಣಿಸುತ್ತದೆ. ಬುದ್ಧಿವಂತಿಕೆ, ಜ್ಞಾನ ಹೆಚ್ಚುತ್ತದೆ. ವಿಘ್ನ ನಿವಾರಕವಾಗಿರುವುದರಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ನೀಗುತ್ತವೆ. ಕೆಲವೊಮ್ಮೆ ಹೀಗೆ ಆಶೀರ್ವಾದ ಮಾಡಿದ ಆನೆಯ ಬಾಲದ ಕೂದಲನ್ನು ಜನರು ಕೇಳಿ ಪಡೆದುಕೊಳ್ಳುತ್ತಾರೆ. ಇದನ್ನು ಉಂಗುರಕ್ಕೆ ಹಾಕಿ ಧರಿಸಿದರೆ ಬದುಕಲ್ಲಿ ಧೈರ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. 
ಕರ್ನಾಟಕದ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿರುವ ಲಕ್ಷ್ಮಿಯು ಭಕ್ತರನ್ನು ಆಶೀರ್ವದಿಸಲು ಪ್ರಸಿದ್ಧವಾದ ಆನೆಗಳಲ್ಲಿ ಒಂದಾಗಿದೆ. ಇದಲ್ಲದೆ, ಶೃಂಗೇರಿ ಶಾರದಾ ಪೀಠದಲ್ಲಿ ಕೂಡಾ ಆನೆಗಳು ಭಕ್ತರನ್ನು ಹರಸುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!