ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶ್ರೀ ರಾಮನ ಪ್ರತಿಷ್ಠಾಪನೆ ಜ.22ರಂದು ನಡೆಯಲಿದೆ. ಹೀಗಿರುವಾಗ ಕರ್ನಾಟಕದಲ್ಲಿ ಶ್ರೀರಾಮನ ಆರಾಧನೆಯ ಕುರಿತು ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರಾದ ದೇವರಕೊಂಡಾರೆಡ್ಡಿ ಮಾಹಿತಿ ನೀಡಿದ್ದಾರೆ.
-ದೇವರಕೊಂಡಾರೆಡ್ಡಿ ನಿವೃತ್ತ ಪ್ರಾಧ್ಯಾಪಕರು, ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು
ನಮ್ಮ ಪುರಾಣಗಳ ಪ್ರಕಾರ ಭರತಖಂಡವನ್ನಾಳಿದ ರಾಜಮನೆತನಗಳನ್ನು ಎರಡು ಗುಂಪಾಗಿ ವಿಂಗಡಿಸುತ್ತೇವೆ. ಒಂದು ಚಂದ್ರವಂಶ, ಇನ್ನೊಂದು ಸೂರ್ಯವಂಶ. ಚಂದ್ರವಂಶದ ರಾಜರು ಮಥುರಾವನ್ನು ಕೇಂದ್ರವಾಗಿಸಿಕೊಂಡು ಆಳ್ವಿಕೆ ನಡೆಸಿದರು. ಇವರು ತಮ್ಮ ಮೂಲಪುರುಷರನ್ನು ಚಂದ್ರನಿಂದ ಆರಂಭಿಸುವರು. ಅಥವಾ ಚಂದ್ರನೇ ಇವರ ವಂಶದ ಮೂಲಪುರುಷ. ಸೂರ್ಯನಿಂದ ಅಥವಾ ಇಕ್ಷ್ವಾಕು ವಂಶದ ಮೂಲದಿಂದ ಬಂದವರು ಸೂರ್ಯ ವಂಶದವರು. ಪುರಾಣಗಳಲ್ಲಿ ಇವರ ಮೂಲದ ಬಗ್ಗೆ ವಿವರವಾಗಿ ಬರೆಯಲಾಗಿದೆ. ಎರಡೂ ವಂಶಗಳಿಗೆ ಮೂಲ ಬ್ರಹ್ಮ.
ಬ್ರಹ್ಮನಿಂದ ಮರೀಚ- ಕಶ್ಯಪ- ವೈವಸ್ವತಮನು- ಇಕ್ಷ್ವಾಕು. ಚಂದ್ರ ವಂಶಕ್ಕೂ ಮೂಲ ಬ್ರಹ್ಮ. ಬ್ರಹ್ಮನ ಮಗ ಅತ್ರಿ, ಅತ್ರಿಯ ಮಕ್ಕಳು ದೂರ್ವಾಸ ಮತ್ತು ಚಂದ್ರ. ಈ ಚಂದ್ರನ ಸಂತತಿಯವನೇ ಕೃಷ್ಣ. ಹಾಗೆಯೇ ಇಕ್ಷ್ವಾಕು (ಸೂರ್ಯ)ವಿನ ಸಂತತಿಯವರು ಮುಖ್ಯವಾಗಿ ರಾಮ. ಇವನ ಪೂರ್ವಜರು ಮತ್ತು ನಂತರದವರು ಸೂರ್ಯವಂಶದವರು.
ಚಂದ್ರವಂಶದವರು ಮಥುರಾ, ಹಸ್ತಿನಾವತಿಯಿಂದ ಆಳಿದವರು. ಪಾಂಡವರು-ಕೌರವರು, ಕುರುವಂಶ, ವೃಷ್ಣಿಕುಲ, ಕೃಷ್ಣಕುಲ, ಯಾದವರು, ಇತಿಹಾಸ ಕಾಲಕ್ಕೆ ಬಂದರೆ ಸೋಮವಂಶೀಯರು, ರಜಪೂತರು, ಗುರ್ಜರರು ಮೊದಲಾದವರು. ದಕ್ಷಿಣಕ್ಕೆ ಬಂದಾಗ ಗಂಗರು, ರಾಷ್ಟ್ರಕೂಟರು, ಕಳಚೂಳಿಗಳು, ದೇವಗಿರಿ ಯಾದವರು, ದ್ವಾರಸಮುದ್ರ ಹೊಯ್ಸಳರು, ವಿಜಯನಗರ ಅರಸರು, ಮೈಸೂರಿನ ಅರಸರು, ಕೇರಳದ ಅರಸರು ಇವರ ಮೂಲ ಯದುವಂಶ. ಯದುವಂಶವೆಂದರೆ ಮುಖ್ಯವಾಗಿ ಶ್ರೀಕೃಷ್ಣನ ಆರಾಧಕರು ಅಥವಾ ಅವನ ವಂಶದ ಮೂಲದಿಂದ ಬಂದವರು. ಮುಖ್ಯವಾಗಿ ಭರತಖಂಡದ ಪಶ್ಚಿಮ ಭಾಗವನ್ನಾಳಿದ ರಾಜರು. ಇದಕ್ಕೆ ಕಾರಣ ಶ್ರೀಕೃಷ್ಣ ಉತ್ತರದ ಮಥುರೆಯಿಂದ ಈಗಿನ ಗುಜರಾತ್ ಪ್ರದೇಶದ ದ್ವಾರಕೆಗೆ ಬಂದದ್ದು. ಈ ಕಾರಣದಿಂದ ಪಶ್ಚಿಮ ಭಾರತದಲ್ಲಿ ಕೃಷ್ಣನ ಆರಾಧನೆ ಮುಖ್ಯವಾಗಿ ಭಾಗವತ ಸಂಪ್ರದಾಯದ ಆಚರಣೆ ಹಾಗೂ ಆರಾಧನೆ ನಡೆಯುತ್ತದೆ. ಈ ಆರಾಧನೆ ಎಂದರೆ ಕೃಷ್ಣ, ವಾಸುದೇವ, ಬಲರಾಮ, ಪ್ರದ್ಯುಮ್ನ, ಸಂಕರ್ಷಣ ಮುಂತಾದ ಪಂಚವೀರರು ಹಾಗೂ ವಿಷ್ಣುವಿನ ಅವತಾರಗಳ ಪ್ರತಿಷ್ಠಾಪನೆ ಮತ್ತು ಆರಾಧನೆಗೆ ಒತ್ತು ನೀಡಿದವರು.
ರಾಮಮಂದಿರದ ಬಾಲರಾಮನ ಪೂರ್ಣ ಚಿತ್ರ ಅನಾವರಣ: ಪ್ರತಿಷ್ಠಾಪನೆಗೂ ಮುನ್ನ ವಿಗ್ರಹದ ಮುಖ ತೋರಿಸಬಹುದೇ?
ದಕ್ಷಿಣದ ರಾಜರಲ್ಲಿ ಕೃಷ್ಣನ ಹೆಸರು
ಹೀಗಾಗಿ ಪಶ್ಚಿಮ ಹಾಗೂ ಯಾದವ ಮೂಲದ ಅರಸರ ಪ್ರದೇಶದಲ್ಲಿ ಕೃಷ್ಣ ಆರಾಧನೆ ಮತ್ತು ಪ್ರತಿಷ್ಠಾಪನೆ ಕಾರ್ಯಗಳು ನಡೆದಿವೆ. ಪ್ರಸಿದ್ಧ ದೇವಾಲಯಗಳು ಇವರ ಹೆಸರಿನಲ್ಲಿ ತಲೆ ಎತ್ತಿವೆ. ಅನೇಕ ಪ್ರಸಿದ್ಧ ಸಂತರು ಇವರ ಗುಣಗಾನ ಮಾಡಿ ಕಾವ್ಯ ರಚನೆ ಮಾಡಿದ್ದಾರೆ. ದಕ್ಷಿಣದಲ್ಲಿ ಆಳ್ವಿಕೆ ನಡೆಸಿದ ರಾಜರ ಹೆಸರುಗಳಲ್ಲಿ (ಕನ್ನ) ಕೃಷ್ಣನ ಹೆಸರಿರುವುದು ಬಹುಮುಖ್ಯ. ಕ್ರಿ.ಶ. ಒಂದನೇ ಶತಮಾನದಲ್ಲಿ ಬಂದ ಗ್ರೀಕರು ಈ ಮತಕ್ಕೆ ಮತಾಂತರವಾಗಿ ವಿದಿಶ ನಗರಗಳಲ್ಲಿ ವಿಷ್ಣು ದೇವಾಲಯದ ಮುಂದೆ ಗರುಡ ಧ್ವಜವನ್ನು ಮಾಡಿಸಿದ ಉಲ್ಲೇಖವಿದೆ.
ಮುಂದೆ ಈ ಭಾಗವತ ಪಂಥವೇ ಪ್ರಮುಖವಾಗಿ, ಭರತಖಂಡದ ಪ್ರಾಚೀನ ಅರಸರಲ್ಲಿ ಅನೇಕರು ತಮ್ಮನ್ನು ನೇರವಾಗಿ ಭಾಗವತ ಪಂಥೀಯರೆಂದು ಹೇಳಿಕೊಂಡರು. ಇವರ ಹೇಳಿಕೆಯನ್ನು ಶಾಸನಗಳು ಸಮರ್ಥಿಸುತ್ತವೆ. ಮುಂದೆ ದಕ್ಷಿಣದಲ್ಲಿ ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಮೀರಾಬಾಯಿ, ಚೈತನ್ಯ ಪ್ರಭು ಮುಂತಾದವರ ಮೂಲಕ ಪಶ್ಚಿಮದಿಂದ ದಕ್ಷಿಣದಿಂದ ಭರತಖಂಡದಲ್ಲೆಲ್ಲಾ ಭಾಗವತ ಪಂಥದ ಕಥಾರೂಪಗಳು, ಸಾಹಿತ್ಯ ಮತ್ತು ದೇವಾಲಯ ಶಿಲ್ಪಗಳು ರಚನೆಯಾದವು.
ಇಕ್ಷ್ವಾಕು ವಂಶದಲ್ಲೇ ರಾಮ ಪ್ರಸಿದ್ಧ
ಸೂರ್ಯವಂಶ ಆಥವಾ ಇಕ್ಷ್ವಾಕು ವಂಶ ಆಳಿದ ರಾಜರಲ್ಲಿ ಭರತ, ತ್ರಿಶಂಕು, ಹರಿಶ್ಚಂದ್ರ, ಭಗೀರಥ, ದಲೀಪ, ರಘು, ದಶರಥ ಮತ್ತು ಅವನ ಮಗ ರಾಮ ಪ್ರಮುಖರು. ರಾಮನು ವಿಷ್ಣುವಿನ ಅವತಾರವೆಂದು ಪುರಾಣಗಳಲ್ಲಿ ವರ್ಣಿಸಿರುವುದರಿಂದ ಈ ಇಕ್ಷ್ವಾಕು ವಂಶದಲ್ಲಿಯೇ ಪ್ರಸಿದ್ಧಿ ಪಡೆದ. ಇದರೊಂದಿಗೆ ಇವನ ಬಗ್ಗೆ ರಚನೆಯಾದ ಕೃತಿ “ರಾಮಾಯಣ”ವು ಪುರಾಣವೆಂಬ ಪ್ರಸಿದ್ಧಿ ಪಡೆಯಿತು. ಇದರೊಂದಿಗೆ ಇದು ಆದಿಕಾವ್ಯವೆಂಬ ವಿಶೇಷಣವನ್ನು ಪಡೆಯಿತು. ಹೀಗಾಗಿ ಆದಿಕಾವ್ಯ ನಾಯಕ ಆದರ್ಶಪುರುಷನಾದ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ : ಮೋದಿ ಯಮ ನಿಯಮ ವ್ರತದ ವಿಶೇಷತೆಯೇನು?
ಸೂರ್ಯವಂಶದ ರಾಜರು ಆಳಿದ ಪ್ರಮುಖ ದೇಶಗಳೆಂದರೆ ಕೋಸಲ, ವಿದೇಹಿ, ಕಾಶಿ ರಾಜ್ಯಗಳು. ಈ ರಾಜ್ಯಗಳು ಭರತಖಂಡದ ಗಂಗಾನದಿಯ ಪೂರ್ವ ಭಾಗದಲ್ಲಿವೆ ಎಂಬುದು ಗಮನಾರ್ಹ. ವಾಸುದೇವ ಕೃಷ್ಣನ ನೆಲೆ ಚಂದ್ರವಂಶದ ಮಥುರಾವಾದರೆ, ಸೂರ್ಯವಂಶದ ರಾಮನ ನೆಲೆ ಕೋಸಲ ರಾಜಧಾನಿ ಅಯೋಧ್ಯೆ. ಜೈನರ ಪ್ರಥಮ ತೀರ್ಥಂಕರ, ಬೌದ್ಧ ಧರ್ಮದ ಬುದ್ಧ ಇವರು ಸೂರ್ಯವಂಶದವರೇ. ಏಕೆಂದರೆ ಇವರ ನೆಲೆ ಗಂಗಾನದಿಯ ಪೂರ್ವಭಾಗ.
ರಾಮ ಯಾವುದೇ ಜಾತಿ ನಾಯಕನಲ್ಲ
ರಾಮನ ಆರಾಧನೆ ಇಕ್ಷ್ವಾಕು ವಂಶದವರಿಂದ ಪ್ರಾರಂಭವಾದರೂ ಇದು ಒಂದು ಸೀಮಿತ ವಲಯಕ್ಕೆ ಮಿತಿಯಾಯಿತು. ಯಾದವರಂತೆ ಇದನ್ನು ಭರತಖಂಡದಾದ್ಯಂತ ಬೇಗ ಬೇಗ ಹರಡಲಿಲ್ಲ. ಕಾರಣ ರಾಮ ಯಾವುದೇ ಗುಂಪಿನ ಜಾತಿ ಅಥವಾ ಮತಕ್ಕೆ ಸೀಮಿತವಾಗಿರಲಿಲ್ಲ. ಹೀಗಾಗಿ ರಾಮನನ್ನು ಪುರುಷೋತ್ತಮನೆಂದು ಎಲ್ಲರೂ ಆರಾಧಿಸುತ್ತಾರೆಯೋ ಹೊರತು ಒಂದು ಜಾತಿಯ ನಾಯಕನಂತೆ ನೋಡಲಿಲ್ಲ.
ಆದರ್ಶಪುರುಷನಂತೆ ಜನರು ಹೃದಯದಲ್ಲಿ ಇರಿಸಿಕೊಂಡರು. ರಾಮನಿಗೆ ಸ್ವತಂತ್ರ ದೇವಾಲಯಗಳನ್ನು ಪ್ರಾಚೀನ ಕಾಲದಲ್ಲಿ ರಚಿಸದಿದ್ದರೂ ರಾಮಾಯಣಕ್ಕೆ ಸಂಬಂಧಿಸಿದಂತೆ ಘಟನೆಗಳನ್ನು ದೇವಾಲಯಗಳ ಗೋಡೆಗಳಲ್ಲಿ ಬಿಡಿಸಿದ್ದಾರೆ. ಅವುಗಳಲ್ಲಿ ರಾವಣ ಕೈಲಾಸವನ್ನೆತ್ತಿರುವ ದೃಶ್ಯ. ಈ ದೃಶ್ಯ ಶಿವನ ದೇವಾಲಯಗಳಲ್ಲಿ ಶಿವ ಪಂಚವಿಂಶತಿ ಲೀಲೆಯ ಭಾಗವಾಗಿ ಬಂದಿದೆ.
ರಾವಣ ಶಿವ ಭಕ್ತ. ಆದರೆ, ಇವನ ಗರ್ವವನ್ನು ಶಿವ ಇಳಿಸಿದ ಘಟನೆಯನ್ನು ಎಲ್ಲೋರದ ಕೈಲಾಸ ದೇವಾಲಯ, ಹಳೇಬೀಡು, ಪಟ್ಟದ ಕಲ್ಲು, ಮುಂತಾದ ಕಡೆಗಳಲ್ಲಿ ಕಾಣುತ್ತೇವೆ. ಕದಂಬರು ಕರ್ನಾಟಕದ ಪ್ರಾರಂಭದ ರಾಜರಾದರು. ಅವರ ಆರಂಭದ ಹೆಸರುಗಳು ಕಂಗವರ್ಮ, ಭಗೀರಥ, ರಘು ಕಾಕುಸ್ಥ ಎಂದಿವೆ. ಇವರು ಬ್ರಾಹ್ಮಣರಾದ ಕಾರಣ ಇವರು ಇಕ್ಷ್ವಾಕು ವಂಶಕ್ಕೆ ಸೇರಿದವರಲ್ಲ. ಗೋತ್ರ ಸೂತ್ರವುಳ್ಳವರನ್ನು ಬಿಟ್ಟರೆ ಉಳಿದ ಯಾವ ರಾಜರೂ ಇಕ್ಷ್ವಾಕು ವಂಶದ ರಾಜರ ಹೆಸರನ್ನು ಇಟ್ಟುಕೊಳ್ಳಲಿಲ್ಲ. ದಕ್ಷಿಣ ಕರ್ನಾಟಕದ ಗಂಗರು ತಮ್ಮನ್ನು ವೃಷ್ಟಿ ಕುಲವೆಂದು ಕರೆದುಕೊಂಡಿದ್ದಾರೆ. ದುರ್ವಿನೀತ ತನ್ನನ್ನು ಕೃಷ್ಣ ಕುಲದವನೆಂದು ಹೇಳಿಕೊಂಡಿದ್ದಾನೆ. ಈ ಕಾರಣದಿಂದಾಗಿ ಇವರು ರಾಮನನ್ನು ನೆನೆಯುವುದಾಗಲಿ, ರಾಮನ ಹೆಸರನ್ನು ಇಟ್ಟುಕೊಳ್ಳುವುದಾಗಲಿ ಮಾಡಲಿಲ್ಲ. ಬಾದಾಮಿ ಚಾಲುಕ್ಯರು ತಮ್ಮ ದೇವಾಲಯಗಳಲ್ಲಿ ತ್ರಿವಿಕ್ರಮ ಅವತಾರ ವರಾಹ ಅವತಾರ ಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ.
ಚಾಲುಕ್ಯರ ದೇಗುಲದ ಗೋಡೆಗಳಲ್ಲಿ ರಾಮ
ರಾಮ ಶಿಲ್ಪಗಳು ಇಲ್ಲಿ ಕಾಣ ಬರುವುದಿಲ್ಲ. ಮುಂದೆ ಚಾಲುಕ್ಯರು ಸುಮಾರು ಕ್ರಿ.ಶ. 700 ರಲ್ಲಿ ಶೈವ ಮತಾನುಯಾಯಿಗಳಾದರು. ಆದರೆ ತಮ್ಮ ದೇವಾಲಯಗಳಲ್ಲಿ ಸಂದರ್ಭ ಬಂದಾಗ ಗೋಡೆಗಳಲ್ಲಿ ರಾಮಾಯಣ ಕಥಾನಕ ಶಿಲ್ಪಗಳನ್ನು ಬಿಡಿಸಿದ್ದಾರೆ. ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಶಿವ ದೇವಾಲಯಗಳನ್ನು ರಾಮೇಶ್ವರ ಲಿಂಗವೆಂದು ಕರೆದಿದ್ದಾರೆ. ಶಹಾಪುರ ತಾಲೂಕಿನ ಶಿರವಾಳ ಮೊದಲಾದ ಕಡೆ ಬಾವಿಗಳನ್ನು ಮಾಡಿಸಿದಾಗ ಬಾವಿಯಲ್ಲಿ ರಾಮಾಯಣ ಕಥಾನಕ ಶಿಲ್ಪಗಳನ್ನು ಬಿಡಿಸಿದ್ದಾರೆ. ಇವರು ತಮ್ಮನ್ನು ಯದುವಂಶದವರೆಂದು ಕರೆದುಕೊಂಡಿದ್ದರು. ರಾಮನನ್ನು ಶಿವನಲ್ಲಿ ಸಮೀಕರಿಸಿದ್ದರು. ಆದರೂ ರಾಷ್ಟ್ರಕೂಟರ ಹೆಸರುಗಳು ಕೃಷ್ಣನಿಗೆ ಸಂಬಂಧಿಸಿದ್ದೇ ಆಗಿದ್ದವು. ಹೀಗಾಗಿ ಇವರ ಕಾಲದಲ್ಲಿ ಕರ್ನಾಟಕದಲ್ಲಿ ಗರ್ಭ ಗೃಹದ ಪೂಜಾ ಮೂರ್ತಿಯಾಗಿ ಸ್ಥಾಪನೆಗೊಳ್ಳಲಿಲ್ಲ. ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಅಲ್ಲಲ್ಲಿ ಭಾಗವತ ಪಂಥದ ದೇವಾಲಯಗಳು ರಚನೆಯಾಗಿದ್ದರೂ ಗರ್ಭಗೃಹದಲ್ಲಿ ನರಸಿಂಹನಿಗೆ ಪ್ರಾಧಾನ್ಯತೆ. ಇದಲ್ಲದೇ ಇವರ ಆಳ್ವಿಕೆಯ 200 ವರ್ಷಗಳ ಆಳ್ವಿಕೆಯಲ್ಲಿ ಪ್ರಧಾನ ಮತವಾಗಿದ್ದುದ್ದು, ಲಕುಲೀಶ ಕಾಳಮುಖ. ಇವರು ಮೂರು ದೇವರುಗಳ ಪೂಜಕರು. ಅವರೆಂದರೆ ಶಿವ-ವಿಷ್ಣು-ಬ್ರಹ್ಮ. ಬ್ರಹ್ಮನನ್ನು ವಿಗ್ರಹ ರೂಪದಲ್ಲಿಯೂ ಲಿಂಗದರೂಪದಲ್ಲಿಯೂ ಪೂಜಿಸುತ್ತಿದ್ದರು.
ಹಿರೇಮಗಳೂರಿನದ್ದು ರಾಜ್ಯದ ಮೊದಲ ರಾಮ ದೇಗುಲ
ಗೋಡೆಗಳಲ್ಲಿ, ಅಧಿಷ್ಠಾನದಲ್ಲಿ ಚಿಕಣಿ ಶಿಲ್ಪಗಳ ರೂಪದಲ್ಲಿ ರಾಮನ ರಾಮಾಯಣ ಕಥಾ ಶಿಲ್ಪಗಳನ್ನು ಬಿಡಿಸಿದ್ದಾರೆ. ಇವರ ಪ್ರಮುಖ ಸಾಮಂತರಾಗಿದ್ದ ಹೊಯ್ಸಳರ ಕಾಲದ ಬಹಳಷ್ಟು ದೇವಾಲಯಗಳಲ್ಲಿಯೂ ರಾಮನ ಸ್ವತಂತ್ರ ವಿಗ್ರಹವನ್ನು ಪೂಜಾಗೃಹದಲ್ಲಿರಿಸಿರಲಿಲ್ಲ. ಆದರೆ ರಾಮಾಯಣದ ಕಥಾ ರೂಪದ ಶಿಲ್ಪಗಳನ್ನು ದೇವಾಲಯದ ಗೋಡೆಗಳಲ್ಲಿ ಕೆತ್ತಿ ಅಳವಡಿಸಲಾಗಿದೆ. ಅಧಿಷ್ಠಾನ ಭಾಗದಲ್ಲಿ ಕಥಾನಕ ಶಿಲ್ಪಗಳಲ್ಲಿ ತೋರಿಸಲಾಗಿದೆ. ಶ್ರೀ ವೈಷ್ಣವ ಮತದ ಫ್ರಭಾವವಿದ್ದರೂ ಸ್ವತಂತ್ರ ರಾಮದೇವರ ಗುಡಿಗಳನ್ನು ನಿರ್ಮಿಸಲಿಲ್ಲ. ಚಿಕ್ಕಮಗಳೂರು ಬಳಿಯ ಹಿರೇಮಗಳೂರಿನ ರಾಮ ದೇವರ ವಿಗ್ರಹಗಳು ಶಿಲ್ಪ ಲಕ್ಷಣದಿಂದ ಹೊಯ್ಸಳರ ಕಾಲಕ್ಕೆ ಸೇರುತ್ತವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದು ನಿಜವಾದಲ್ಲಿ ಬಹುಶಃ ಕರ್ನಾಟಕದಲ್ಲಿ ರಾಮನಿಗಾಗಿ ನಿರ್ಮಿತವಾದ ಶ್ರೀ ರಾಮನ ಮೊದಲ ದೇವಾಲಯ ಇದು. ಇಲ್ಲಿ ಲಕ್ಷ್ಮಣ, ರಾಮ, ಸೀತೆಯರನ್ನು ಶಿಲ್ಪಗಳಲ್ಲಿ ಬಿಡಿಸಿದ್ದು ಇಂದಿಗೂ ಪೂಜೆಗೊಳ್ಳುತ್ತಿದೆ.
ಮುಂದೆ ದಕ್ಷಿಣ ಭಾರತದ ಮೇಲೆ ಘೋರಿ ಮತ್ತು ಖಿಲ್ಜಿ ಸಂತತಿಯವರು ದಾಳಿ ಮಾಡಿದ ಮೇಲೆ ದಕ್ಷಿಣದ ಪಾರಂಪರಿಕ ರಾಜ್ಯಗಳು ಬಹುತೇಕ ನಾಶವಾದವು. ಈ ನಾಶದ ಮರುಭೂಮಿಯಲ್ಲಿ ಓಯಸಿಸ್ಸಿನಂತೆ ಹುಟ್ಟಿಬಂದದ್ದೇ ವಿಜಯನಗರ ಅಥವಾ ಕರ್ನಾಟಕ ಸಾಮ್ರಾಜ್ಯ. ಈ ಸಾಮ್ರಾಜ್ಯದ ಮೂಲ ಪುರುಷ ಯದುವಂಶದವನು. ಇಷ್ಟದೈವ ಹಂಪೆಯ ಶ್ರೀ ವಿರೂಪಾಕ್ಷ. ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದವರೆಗೆ ಇದೇ ಸ್ಥಿತಿ ಮುಂದುವರೆಯುತ್ತದೆ. ಈ ಮಧ್ಯೆ ಚೌಡಾಯಿ ಎಂಬುವವಳು ಈಗಿನ ಹಜರಾಮರ ದೇವಾಲಯದ ಹಿಂಬದಿಯಲ್ಲಿ ಕ್ರಿ.ಶ. ಸುಮಾರು 1400ರಲ್ಲಿ ಹನುಮಂತ ದೇವರನ್ನು ಪ್ರತಿಷ್ಠಾಪಿಸಿದ ವಿಷಯವನ್ನು ತಿಳಿಸುತ್ತದೆ. ಇದೇ ಸ್ಥಳದಲ್ಲಿ ಇರುವ ರಾಮಚಂದ್ರ ಹಜರಾ ದೇವಾಲಯವು ಇಮ್ಮಡಿ ದೇವರಾಯನ ಕಾಲದಲ್ಲಿ ರಚಿತವಾಗುತ್ತದೆ. ಬಹುಶಃ ಈ ಕಾಲಕ್ಕೆ ಈಗಿನ ಆಂಧ್ರ ಪ್ರದೇಶದ ಅನೇಕ ಭಾಗಗಳು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದವು. ಈ ಕಾರಣದಿಂದ ಅಧಿಕಾರಿಗಳು ವಿಜಯನಗರಕ್ಕೆ ಅಥವಾ ಹಂಪಿಗೆ ಬಂದಿರಬೇಕು. ಈ ದೇವಾಲಯದಲ್ಲಿ ದೇವರಾಯನನ್ನು ಹೊಗಳುವ ಶಾಸನವೊಂದು ದೊರೆತಿದ್ದು, ಇದರ ಕಾಲ ಕ್ರಿ.ಶ. 1450. ಇಲ್ಲಿಂದ ಮುಂದೆ ಹಂಪಿಯಲ್ಲಿಯೇ ವಿಜಯ ನಗರ ಸಾಮ್ರಾಜ್ಯದಾದ್ಯಂತ ಶ್ರೀ ರಾಮನ ಗುಡಿಗಳು ಅವನ ಬೇರೆ ಬೇರೆ ಹೆಸರಿನಲ್ಲಿ ರಚನೆಯಾಗುತ್ತವೆ.
ಆಂಧ್ರದಲ್ಲಿ ಬಹು ಹಿಂದೆಯೇ ಇಕ್ಷ್ವಾಕುಗಳು ಆಳ್ವಿಕೆ ಮಾಡುತ್ತಿದ್ದುದ್ದನ್ನೂ ಹಿಂದೆಯೇ ಹೇಳಿದೆ. ಹೀಗಾಗಿ ಸೂರ್ಯವಂಶ ಪ್ರಭಾವ ವಲಯದಲ್ಲಿ ಹಿಂದೆ ಹಂಪಿಯಲ್ಲಿ ರಾಮನ ಬಿಂಬಗಳು ಹೆಚ್ಚಾಗಲು ಕೃಷ್ಣದೇವರಾಯನ ಒಡಿಶಾ ಯಾತ್ರೆಯು ಮುಖ್ಯ. ಒಡಿಶಾ ಯಾತ್ರೆಯು ಆಂಧ್ರ ಮೂಲಕ ಒಡಿಶಾ ಪ್ರದೇಶಕ್ಕೆ ಹೋಗಿತ್ತು. ಕೃಷ್ಣದೇವರಾಯ ವಾಪಸ್ಸು ಬರುವಾಗ ಒಡಿಶಾದಿಂದ ಕೆಲವು ರಾಜ್ಯದ ರಾಜರನ್ನು(ಮಹಾಪಾತ್ರರನ್ನು) ಸೆರೆಹಿಡಿದುಕೊಂಡು ಬಂದ. ಇವರ ಜೊತೆಯಲ್ಲಿ ಕಲಾಕಾರರು ಹಂಪೆಗೆ ಬಂದರು. ಹಾಗೆಯೇ ಆಂಧ್ರದಿಂದ ಶಿಲ್ಪಿಗಳೂ ರಾಮನ ಭಕ್ತರೂ ಬಂದರು. ಇದಕ್ಕೆ ಮೊದಲೇ ದಕ್ಷಿಣದ ಉಡುಪಿಯಿಂದ ಅಕ್ಷ್ಯೋಭ್ಯತೀರ್ಥರು ಇಲ್ಲಿ ಬಂದಿದ್ದರು. ಈ ಕಾರಣದಿಂದ ಇತರೆ ದೇವತೆಗಳ ಜೊತೆಗೆ ಹನುಮಂತನ ಪ್ರತಿಷ್ಠಾಪನೆ ಮತ್ತು ಪೂಜೆ ಪ್ರಾರಂಭವಾಯಿತು. ಅಹೋಬಿಲದ ಕಡೆಯಿಂದ ಬಂದ ಶ್ರೀ ವೈಷ್ಣವ ನರಸಿಂಹನ ಜೊತೆಗೆ ರಾಮನನ್ನು ಪೂಜೆಗೆ ತಂದರು.
ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀರಾಮ
ವಿಜಯನಗರ ಸಾಮ್ರಾಜ್ಯವನ್ನಾಳಿದ ಸಾಳುವ, ತುಳುವ ಮತ್ತು ಅರವೀಡು ವಂಶದವರು ಬಹುಮುಖ್ಯವಾಗಿ ಶ್ರೀ ವೈಷ್ಣವ ಮತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲದೆ ಅದರ ಪೋಷಕರಾಗಿದ್ದರು. ಹೀಗಾಗಿ ಇವರ ಆಳ್ವಿಕೆಯಲ್ಲಿ ಇವರಿಂದ ಪ್ರಭಾವಿತರಾದ ಮಾಂಡಳಿಕ ಅರಸರು ತಮ್ಮ ಆಳ್ವಿಕೆ ಪ್ರದೇಶಗಳಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜಿಸಿದ್ದಾರೆ. ಈ ಕಾರಣದಿಂದ ರಾಮನ ದೇವಾಲಯಗಳು ಸ್ವತಂತ್ರವಾಗಿ ತಲೆ ಎತ್ತಿದವು. ಇದುವರೆಗೂ ಈ ದೇವಾಲಯದ ಗೋಡೆಗಳ ಅಧಿಷ್ಠಾನದಲ್ಲಿ ರಾಮಾಯಣ ಕಥಾನಕ, ಶಿಲ್ಪಕ್ಕೆ ಸೀಮಿತವಾಗಿದ್ದ ರಾಮ ಸ್ವತಂತ್ರ ದೇವರಾಗಿ ಪ್ರತಿಷ್ಠಾಪನೆಗೊಂಡು ಪೂಜೆ ಪಡೆಯುತ್ತಿದ್ದಾನೆ. ವಿಜಯನಗರ ಪತನಾನಂತರ ವಿಜಯನಗರದಲ್ಲಿ ವ್ಯಾಪಾರಿಗಳು, ಬ್ರಾಹ್ಮಣರು, ಇತರೆ ಜನ ದಕ್ಷಿಣ ಭಾರತದ ಬೇರೆ ಬೇರೆ ಕಡೆ ಕಡೆಗೆ ಚದುರಿದರು. ಇವರೊಂದಿಗೆ ವಿಜಯನಗರದ ಪ್ರಭಾವ ವಲಯದಲ್ಲಿದ್ದ ದೇವರು, ಸಂಗೀತ, ಕಲೆ, ವಾಸ್ತು ಮೊದಲಾದವೂ ಚದುರಿದವು. ಗೋದಾವರಿ ಪ್ರದೇಶದ ಭದ್ರಾಚಲದಲ್ಲಿ ರಾಮದಾಸು ಎಂಬುವರು ಅಲ್ಲಿನ ಮುಸ್ಲಿಂ ಅರಸನ್ನು ಒಪ್ಪಿಸಿ ದೇವಾಲಯ ನಿರ್ಮಿಸಿದರು. ರಾಮನ ಮೇಲಿನ ನೂರಾರು ಹಾಡುಗಳನ್ನು ರಚಿಸಿದರು.
ಮೈಸೂರು ಅರಸರ ರಾಮ ಜನಪ್ರಿಯ
ಈ ಹಾಡುಗಳ ಮೂಲಕ ರಾಮಭಜನೆ ಜನಪ್ರಿಯವಾಯಿತು. ಇದೇ ರೀತಿ ದಕ್ಷಿಣಾದಿ ಸಂಗೀತದಲ್ಲಿ ತ್ಯಾಗರಾಜರು ಪ್ರಸಿದ್ಧರಾಗಿ ರಾಮದೇವರನ್ನು ತಮ್ಮ ಸಂಗೀತದ ಮೂಲಕ ಪ್ರಸಿದ್ಧಿಗೊಳಿಸಿದರು. ಇಂದಿಗೂ ದಕ್ಷಿಣದ ಸಂಗೀತವನ್ನು ಕಲಿಯಬೇಕಾದಲ್ಲಿ ತ್ಯಾಗರಾಜರ ಕೀರ್ತನೆಗಳೇ ಪ್ರಮುಖವಾದವು. ಮೈಸೂರು ಅರಸರ ಕಾಲದಲ್ಲಿ ರಾಜಧಾನಿ ಮೈಸೂರಿನ ಹೊರಗಿನ ಪಟ್ಟಣಗಳಲ್ಲಿ ರಾಮಮಂದಿರವೆಂಬ ಭಜನಾ ಮಂದಿರಗಳು ಪ್ರಾರಂಭವಾದವು. ಈ ಮೂಲಕವೂ ರಾಮನ ಪೂಜೆಯು ಜನಪ್ರಿಯವಾಯಿತು.
ಕರ್ನಾಟಕದಲ್ಲಿ ಪ್ರಸಿದ್ಧವಾದ ರಾಮ ಕ್ಷೇತ್ರಗಳೆಂದರೆ ಆವನಿಯ ರಾಮೇಶ್ವರ ದೇವಾಲಯ. ಇದರಲ್ಲಿ ರಾಮೇಶ್ವರ ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ ಹೆಸರಿನಲ್ಲಿ ಪೂಜೆಗೊಳ್ಳುವ ಲಿಂಗಗಳಿವೆ. ಈ ದೇವಾಲಯಗಳು ಕ್ರಿ.ಶ. 10 ನೇ ಶತಮಾನಕ್ಕೆ ಸೇರುವ ನೊಳಂಬರ ಕಾಲದ ರಚನೆಗಳು. ಇದೇ ಅವನಿ ಬೆಟ್ಟದ ಮೇಲೆ ಸೀತಾದೇವಿಯು ಲವಕುಶರಿಗೆ ಜನ್ಮ ನೀಡಿದ ಸ್ಥಳವೆಂದು ತೋರಿಸುವ ಗುಹೆ ಇದೆ. ಉಳಿದಂತೆ ಹಿಂದೆ ಹೇಳಿದಂತೆ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿತವಾದ ರಾಮಲಿಂಗೇಶ್ವರ ದೇವಾಲಯಗಳಿವೆ. ಆದರೆ, ಇಲ್ಲಿ ರಾಮನ ವಿಗ್ರಹವಿಲ್ಲ. ರಾಮ ಈಶ್ವರನ ಸಂಯೋಗದ ಲಿಂಗಗಳಿವೆ.
ಹಂಪಿಯ ಹಜಾರ ರಾಮಚಂದ್ರ ದೇವಾಲಯದಲ್ಲಿ ಈಗ ವಿಗ್ರಹಗಳಿಲ್ಲ. ಅದೇ ಹಂಪಿ ಪರಿಸರದ ಕಮಲಾಪುರದ ಪಟ್ಟಾಭಿರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ತುಂಗಭದ್ರಾ ತೀರದ ಕೋದಂಡರಾಮ ದೇವಾಲಯ ಇನ್ನೂ ಅನೇಕ ಅಪ್ರಸಿದ್ಧ ರಾಮನ ದೇವರುಗಳು. ಇವೆಲ್ಲ ವಿಜಯನಗರ ಪ್ರವರ್ಧಮಾನ ಕಾಲದಲ್ಲಿ ರಚಿತವಾದ ದೇವಾಲಯಗಳು. ಇವುಗಳಲ್ಲಿ ಈಗ ಕೋದಂಡರಾಮ ಮತ್ತು ಮಾಲ್ಯವಂತ ರಘುನಾಥ ದೇವಾಲಯದಲ್ಲಿ ಮಾತ್ರ ಪೂಜೆ ನಡೆಯುತ್ತಿದೆ. ದಕ್ಷಿಣದಲ್ಲಿ ಕಾವೇರಿ ತೀರದಲ್ಲಿ ಚುಂಚನ ಕಟ್ಟೆಯ ಶ್ರೀರಾಮ ದೇವಸ್ಥಾನ ಇದೆ. ಇಲ್ಲಿ ಪ್ರತಿ ವರ್ಷ ದೊಡ್ಡ ದನಗಳ ಜಾತ್ರೆ ನಡೆಯುತ್ತದೆ. ಉಳಿದಂತೆ ಪೂರ್ವ ಕರ್ನಾಟಕದ ಅನೇಕ ಕಡೆಗಳಲ್ಲಿ 300-200 ವರ್ಷಗಳೀಂದೀಚೆಗೆ 300-200 ವರ್ಷಗಳಿಂದೀಚೆಗೆ ರಚಿತವಾದ ದೇವಾಲಯಗಳಿವೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಚಂದ್ರವಂಶದವರ ಆಳ್ವಿಕೆ ಹಿಂದಿನಿಂದಲೂ ಇದ್ದದ್ದರಿಂದ ಕೃಷ್ಣನ ಪ್ರಾಧಾನ್ಯತೆ ಇತ್ತು. ಸೂರ್ಯವಂಶದ( ಇಕ್ಷ್ವಾಕು) ರಾಜರ ಆಳ್ವಿಕೆ ಇಲ್ಲದ್ದರಿಂದ ರಾಮನ ದೇವಾಲಯಗಳು ಬಹು ಇತ್ತೀಚೆಗೆ ನಿರ್ಮಿತವಾದವು. ರಾಮಾಯಣದ ಶಿಲ್ಪಗಳು ದೇವಾಲಯದ ಗೋಡೆಗಳಿಗೆ ಅಧಿಷ್ಠಾನದ ಕಥಾನಕ ಶಿಲ್ಪಗಳಿಗೆ ಸೀಮಿತವಾಗಿತ್ತು.