Latest Videos

ಪ್ರಸಿದ್ಧ ನಾಟ್ಯಗುರು ಹಿಮಾಲಯ ಪರಂಪರೆಯ ಶ್ರೀವಿದ್ಯಾ ಗುರುಗಳಾದದ್ದು ಹೇಗೆ? ಗುರು ಸಕಲಮಾ ಬಗ್ಗೆ ಒಂದಿಷ್ಟು..

By Bhavani BhatFirst Published May 22, 2024, 1:12 PM IST
Highlights

 ಇವರ ಹೆಸರು ಸಕಲಮಾ. ಮಹಾನ್ ಯೋಗಿನಿ, ಶ್ರೀವಿದ್ಯಾ ಗುರು. ಹಿಮಾಲಯದ ಮಹಾನ್ ಯೋಗಿ ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯ ಅತ್ಯುನ್ನತ ಶಾಂಭವ ದೀಕ್ಷೆ ಪಡೆದವರು. ಇದು ಶಾಂಭವಿ ದೀಕ್ಷೆ ಅಲ್ಲ, ಶಾಂಭವ ದೀಕ್ಷೆ! 

ಲೈಫಲ್ಲಿ ಟರ್ನಿಂಗ್ ಪಾಯಿಂಟ್ ಅನ್ನೋದು ಯಾವಾಗ ಬೇಕಿದ್ದರೂ ಬರಬಹುದು. ಆ ಟರ್ನಿಂಗ್‌ ಪಾಯಿಂಟ್‌ ನಮ್ಮನ್ನು ಯಾವ ಎತ್ತರಕ್ಕೂ ಕರೆದೊಯ್ಯಬಹುದು. ಪ್ರಸಿದ್ಧ ಶ್ರೀ ವಿದ್ಯಾ ಗುರು ಸಕಲಮಾ ಅವರ ಬದುಕಿನಲ್ಲೂ ಆಗಿದ್ದು ಹೀಗೇ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರೊಫೆಸರ್ ಆಗಿದ್ದವರು ಜ್ಯೋತಿ ಪಟ್ಟಾಭಿರಾಮ್‌. ಅದೇ ಸಮಯದಲ್ಲಿ ಭರತನಾಟ್ಯ ಗುರುವಾಗಿಯೂ ಸಾವಿರಾರು ಮಂದಿ ಶಿಷ್ಯರಿಗೆ ನಾಟ್ಯಕಲೆಯ ಪಾಠ ಮಾಡಿದವರು. ಒಂದು ಕಡೆ ಕಾಲೇಜು, ಇನ್ನೊಂದು ಕಡೆ ಭರತನಾಟ್ಯ ಕ್ಲಾಸು, ಮತ್ತೊಂದು ಕಡೆ ಸಂಸಾರ, ಮಗದೊಂದು ಕಡೆ ಯೋಗ ಸಾಧನೆ.. ಹೀಗೆ ಹಲವು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು ಬದುಕುತ್ತಿದ್ದವರ ಲೈಫ್‌ನಲ್ಲೂ ಒನ್‌ ಫೈನ್‌ ಡೇ ದೊಡ್ಡ ರೂಪಾಂತರವಾಗುತ್ತೆ. ಆ ಮಹಾ ತಿರುವು ಇವರ ಬದುಕನ್ನೇ ರೂಪಾಂತರಿಸಿಬಿಡುತ್ತೆ.

ಅಂದಹಾಗೆ ಸಕಲ ಮಾ ಅವರ ಮೂಲ ಹೆಸರು ಜ್ಯೋತಿ. ಮೂಲತಃ ಶಿವಮೊಗ್ಗದವರು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸಾಗರ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ಇವರಿಗೆ ಎಳೆಯ ಹರೆಯದಿಂದಲೇ ಒಂದು ಕನಸಿತ್ತು. ತನ್ನಿಂದಾದಷ್ಟು ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕು, ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ, ಬದುಕಿನ ಬಗ್ಗೆ ಅಭಿರುಚಿ ಬೆಳೆಸಬೇಕು ಎಂಬ ಹಂಬಲವದು. ಆ ಕನಸಿನ ಬೆನ್ನು ಹತ್ತಿ ತಮ್ಮ ಆಸಕ್ತಿಯ ಇಂಗ್ಲಿಷ್‌ ಸಾಹಿತ್ಯ ಮತ್ತು ಭಾಷಾ ವಿಭಾಗದಲ್ಲೇ ಉಪನ್ಯಾಸಕಿಯಾಗುತ್ತಾರೆ.

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

ಬಾಲ್ಯದಿಂದ ಇಷ್ಟಪಟ್ಟು ಕಲಿತ ಮತ್ತೊಂದು ವಿದ್ಯೆ ಎಂದರೆ ಭರತನಾಟ್ಯ. ಇದರಲ್ಲೂ ಪಾರಮ್ಯ ಸಾಧಿಸಿ ಭರತನಾಟ್ಯ ಗುರುವಾಗಿ ಬದಲಾಗುತ್ತಾರೆ. ಯೋಗಾಚಾರ್ಯ ಗುರೂಜಿ ಪಟ್ಟಾಭಿರಾಮ್ ಅವರು ಇವರ ಜೀವನ ಸಂಗಾತಿಯಾಗುತ್ತಾರೆ. ಪತಿ ಪತ್ನಿ ಇಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬೆಳೆಯುತ್ತಾರೆ. ಸಾಕಷ್ಟು ಜನರಿಗೆ ವಿದ್ಯೆ, ನಾಟ್ಯ, ಯೋಗವನ್ನು ಧಾರೆ ಎರೆದು ಅವರ ಬದುಕಿನಲ್ಲೂ ಬದಲಾವಣೆ ತರುತ್ತಾರೆ. ನೃತ್ಯಕ್ಷೇತ್ರದ ಇವರ ಮಹೋನ್ನತ ಸಾಧನೆಗೆ ಕರ್ನಾಟಕ ಸರ್ಕಾರ ಕೊಡಮಾಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಇಂಟರ್‌ನ್ಯಾಶನಲ್‌ ಪ್ರಶಸ್ತಿ, ಯೋಗ ನಾಟ್ಯಸರಸ್ವತಿ - ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬರುತ್ತವೆ.
 

ಇವರ ಬದುಕಿನ ರೂಪಾಂತರಣವಾಗಿದ್ದು ಹಿಮಾಲಯದ ಯೋಗಿ, ಜಗತ್ಪ್ರಸಿದ್ದ ಗುರು ಸ್ವಾಮಿ ರಾಮ ಅವರಿಂದ. ಮೈಸೂರಿನ ಜೆಎಸ್‌ಎಸ್‌ ಇನ್ಸ್ಟಿಟ್ಯೂಟ್‌ನಲ್ಲಿ 'ಶಿವಯೋಗ'ದ ಬಗ್ಗೆ ಆಯೋಜಿತವಾಗಿದ್ದ ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ನ ಉದ್ಘಾಟನೆಗೆ ಸ್ವಾಮಿ ರಾಮ ಅವರು ಬರುತ್ತಾರೆ. ಹಾಗೆ ಬಂದವರು ಜ್ಯೋತಿ ಅವರ ಬದುಕಿನಲ್ಲೂ ಬದಲಾವಣೆಯ ಗಾಳಿ ಬೀಸುವಂತೆ ಮಾಡುತ್ತಾರೆ. ಅಲ್ಲಿಯವರೆಗೆ ಸ್ವಾಮಿ ರಾಮ ಅವರ ಬಗ್ಗೆ ಕೇಳಿಯೂ ಗೊತ್ತಿಲ್ಲದ ಜ್ಯೋತಿ ಅವರು, ಸ್ವಾಮಿ ರಾಮ ಅವರ ಭೇಟಿಯ ಬಳಿಕ ಜನ್ಮ ಜನ್ಮಾಂತರದ ಗುರುವೋ ಎಂಬಂತೆ ಅವರ ಶಿಷ್ಯರಾಗಿ ಬದಲಾಗುತ್ತಾರೆ. ಅವರಿಂದ ಶ್ರೀವಿದ್ಯೆಯಲ್ಲಿ ಸರ್ವೋಚ್ಛವಾದ ಶಾಂಭವ ದೀಕ್ಷೆ ಪಡೆಯುತ್ತಾರೆ. ಇದು ಈಗ ಜನಪ್ರಿಯವಾಗುತ್ತಿರುವ ಶಾಂಭವಿ ದೀಕ್ಷೆ ಅಲ್ಲ, ಶ್ರೀವಿದ್ಯಾದ ಶಾಂಭವ ದೀಕ್ಷೆಯ ಮಹತ್ವ ಹಿರಿದಾದುದು. ಮುಂದೆ ಸ್ವಾಮಿ ರಾಮ ಅವರು ದೇಹ ತ್ಯಾಗದ ಬಳಿಕವೂ ಸೂಕ್ಷ್ಮ ಶರೀರದಲ್ಲಿ ಸ್ವಾಮಿ ರಾಮ ಅವರ ಮಾರ್ಗದರ್ಶನ ಮುಂದುವರಿಯುತ್ತದೆ.

ಒಂದು ಹಂತದಲ್ಲಿ ಸ್ವಾಮಿ ರಾಮ ಅವರು ಮೈಸೂರಿನ ಪ್ರಸಿದ್ಧ ವಿದ್ವಾಂಸ, ಅಪರೂಪದ ಶ್ರೀವಿದ್ಯಾ ಗುರು, ಮಹಾ ಮಹೋಪಾಧ್ಯಾಯ ಪದ್ಮಶ್ರೀ ಡಾ ಆರ್ ಸತ್ಯನಾರಾಯಣ ಅವರಲ್ಲಿ ದಕ್ಷಿಣ ಭಾರತದ ಪರಂಪರೆಯಲ್ಲಿ ಶ್ರೀವಿದ್ಯೆ ಕಲಿಯಲು ಇವರನ್ನು ಕಳಿಸುತ್ತಾರೆ. ರಾ ಸಾ ಗುರುಗಳು ದಕ್ಷಿಣದ ಶ್ರೀವಿದ್ಯೆಯನ್ನು ಧಾರೆ ಎರೆಯುತ್ತಾರೆ. ಈ ವೇಳೆ ಶ್ರೀವಿದ್ಯಾ, ಉಪನಿಷತ್ ಸೇರಿದಂತೆ ಅನೇಕ ಮಹಾನ್ ಗ್ರಂಥಗಳ ಅಧ್ಯಯನವನ್ನೂ ಮಾಡುತ್ತಾರೆ.

ಬೆಳ್ಳಂಬೆಳಗ್ಗೆ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಪಡೆದ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ

ಹೀಗೆ ಜ್ಯೋತಿ ಎಂಬ ಮಧ್ಯಮ ವರ್ಗದ ಕನಸು ಕಂಗಳ ಹೆಣ್ಣುಮಗಳು ಪೂರ್ಣಶಕ್ತ್ಯಾಂಬಾ ದೀಕ್ಷಾ ನಾಮದಲ್ಲಿ ಅಧ್ಯಾತ್ಮ ಸಾಧಕಿಯಾಗಿ, ಗುರುವಾಗಿ ಬದಲಾಗುತ್ತಾರೆ. ದೇಶ ಮಾತ್ರವಲ್ಲ, ವಿದೇಶದ ಅನೇಕ ಕಡೆ ಅಧ್ಯಾತ್ಮದ, ಯೋಗ, ಧ್ಯಾನದ ಬಗ್ಗೆ ಉಪನ್ಯಾಸ ನೀಡುತ್ತಾರೆ.

ಇಂದು ಪೂರ್ಣಶಕ್ತ್ಯಾಂಬಾ ಸಕಲ ಮಾ, ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ಶ್ರೀವಿದ್ಯಾ ಪರಂಪರೆಯಲ್ಲಿ ಶಿಖರಪ್ರಾಯವಾಗಿ ಸಾಧನೆ ಮಾಡಿ ಹಲವಾರು ಶಿಷ್ಯರನ್ನು ಬೆಳೆಸುತ್ತಿದ್ದಾರೆ. ಭಾರತದ ವಿವಿದೆಡೆ ಮಾತ್ರವಲ್ಲ, ವಿದೇಶದಲ್ಲೂ ಇವರ ಶಿಷ್ಯರಿದ್ದಾರೆ. ಇವರ ಆತ್ಮಚರಿತ್ರೆ 'ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು - ಸಕಾಲಿಕ ಮತ್ತು ಕಾಲಾತೀತ' ಶೀಘ್ರ ಪುಸ್ತಕರೂಪದಲ್ಲಿ ಹೊರಬರಲಿದೆ.

 

ಇದೇ ಭಾನುವಾರ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಬೆಳಗ್ಗೆ 10.30ಕ್ಕೆ ಈ ಕೃತಿಯ ಮುಖಪುಟ ಅನಾವರಣಗೊಳ್ಳಲಿದೆ. ಶ್ರೀಗುರು ಸಕಲಮಾ ಅವರ ಉಪಸ್ಥಿತಿಯಲ್ಲಿ ಸಂಸದ ತೇಜಸ್ವಿ ಸೂರ್ಯ, ಪ್ರಸಿದ್ಧ ಸಾಹಿತಿ ಕನ್ನಡಪ್ರಭ ಪತ್ರಿಕೆಯ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಹಾಗೂ ಕಾಂತಾರ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ಸಪ್ತಮಿ ಗೌಡ ಈ ಹೊತ್ತಿಗೆಯ ಕನ್ನಡ ಹಾಗೂ ಇಂಗ್ಲೀಷ್ ಭಾಷಾಂತರದ ಮುಖಪುಟವನ್ನು ಅನಾವರಣ ಮಾಡುತ್ತಾರೆ. ಈವೇಳೆ ಗುರು ಸಕಲಮಾ ಯೂಟ್ಯೂಬ್ ಅನಾವರಣವೂ ನಡೆಯಲಿದೆ.

click me!