ಬಿಲ್ವಪತ್ರೆ ನೀರು ಮತ್ತು ಹಾಲನ್ನು ಬಳಸಿಕೊಂಡು ಶ್ರೀ ಕೃಷ್ಣ ಮಠದ ಗರ್ಭಗುಡಿಯ ಮುಂಭಾಗದಲ್ಲಿರುವ ತುಳಸಿ ಕಟ್ಟೆಯ ಆವರಣದಲ್ಲಿ ನೆರವೇರಿದ ಅರ್ಘ್ಯ ಪ್ರದಾನ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಆ.20): ಉಡುಪಿಯ ಶ್ರೀ ಕೃಷ್ಣದೇವರಿಗೆ ಅಷ್ಟಮಿಯ ಪ್ರಯುಕ್ತ ನಿನ್ನೆ(ಶುಕ್ರವಾರ) ನಡುರಾತ್ರಿ 11:54ಕ್ಕೆ ಅರ್ಘ್ಯ ಪ್ರಧಾನ ನಡೆದಿದೆ. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಕೃಷ್ಣದೇವರಿಗೆ ಅರ್ಘ್ಯ ಸಮರ್ಪಿಸಿದರು. ಉಡುಪಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪ್ರಧಾನ ಧಾರ್ಮಿಕ ಆಚರಣೆಯಾಗಿರುವ ಅರ್ಘ್ಯ ಪ್ರದಾನ ಸುಮಹೂರ್ತದಲ್ಲಿ ಸಂಪನ್ನಗೊಂಡಿತು. ಅಷ್ಟಮಿಯ ದಿನ ಹಗಲಿಡೀ ಉಪವಾಸವಿರುವ ಸಂಪ್ರದಾಯವಿದೆ. ಅರ್ಘ್ಯಪ್ರಧಾನದ ಬಳಿಕ ದೇವರಿಗೆ ಸಮರ್ಪಿತವಾದ ಆಹಾರವನ್ನು ಸ್ವೀಕರಿಸಿ ಕೃರ್ತಾರ್ಥರಾಗುವ ಪದ್ಧತಿ ಇದೆ.
ಬಿಲ್ವಪತ್ರೆ ನೀರು ಮತ್ತು ಹಾಲನ್ನು ಬಳಸಿಕೊಂಡು ಶ್ರೀ ಕೃಷ್ಣ ಮಠದ ಗರ್ಭಗುಡಿಯ ಮುಂಭಾಗದಲ್ಲಿರುವ ತುಳಸಿ ಕಟ್ಟೆಯ ಆವರಣದಲ್ಲಿ ಅರ್ಘ್ಯ ಪ್ರದಾನ ನೆರವೇರಿತು. ಪರ್ಯಾಯ ಶ್ರೀಪಾದರು ಅರ್ಘ್ಯ ಪ್ರದಾನ ನಡೆಸಿದ ಬಳಿಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಭಕ್ತರು ಅರ್ಘ್ಯ ಪ್ರಧಾನ ನಡೆಸಿ ಕೃಷ್ಣ ದರ್ಶನ ಕೈಗೊಂಡರು. ಈ ಮೂಲಕ ಕೃಷ್ಣ ಜನ್ಮಾಷ್ಟಮಿ ಯ ಮೊದಲ ದಿನದ ಆಚರಣೆ ಪೂರ್ಣಗೊಂಡಿದೆ.
ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ: ಇದೇ ನಮ್ಮ ಭಾರತ..!
ಇಂದು ವಿಟ್ಲಪಿಂಡಿ ಉತ್ಸವ
ಶ್ರೀ ಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಶ್ರೀ ಕೃಷ್ಣ ಲೀಲೋತ್ಸವ ಇಂದು ನಡೆಯಲಿದೆ. ಸಾವಿರಾರು ಭಕ್ತರು ಕೃಷ್ಣಮಠದ ರಥ ಬೀದಿಗೆ ಆಗಮಿಸಲಿದ್ದಾರೆ. ವಿಟ್ಲಪಿಂಡಿ ಮಹೋತ್ಸವ ಎಂದು ಈ ಆಚರಣೆಯನ್ನು ಕರೆಯಲಾಗುತ್ತೆ. ಇದು ಚಾತುರ್ಮಾಸ್ಯ ಕಾಲವಾದ ಕಾರಣ ಕೃಷ್ಣದೇವರ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ. ಹಾಗಾಗಿ ಅಷ್ಟಮಿ ಆಚರಣೆಗೆಂದೇ ತಯಾರಿಸಲಾದ ಕೃಷ್ಣನ ಮಣ್ಣಿನ ಮೂರ್ತಿಯ ಮೆರವಣಿಗೆಯನ್ನು ರಥದೊಳಗಿರಿಸಿ ನಡೆಸಲಾಗುತ್ತೆ.
ಈ ವೇಳೆ ಸಾವಿರಾರು ವೇಷದಾರಿಗಳು ರಥಬೀದಿಗೆ ಬರಲಿದ್ದಾರೆ. ಈ ಮೂಲಕ ತಮ್ಮ ಸೇವೆ , ಹರಕೆ ನಡೆಸಿಕೊಡಲಿದ್ದಾರೆ. ಈ ದಿನ ಮಠಕ್ಕೆ ಬರುವ ಭಕ್ತರಿಗೆ ಉಂಡೆ ಚಕ್ಕುಲಿಗಳ ಪ್ರಸಾದ ವಿತರಣೆಯಾಗುತ್ತೆ. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನದಾಸೋಹ ನಡೆಸಲಾಗುವುದು.
ರಥ ಬೀದಿಯಲ್ಲಿ ಕಲೋತ್ಸವ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಲಾಂಛನ ಉಡುಪಿ, ಪರ್ಯಾಯ ಶ್ರೀ ಕೃಷ್ಣಾಪುರ ಮಠ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ವಕೀಲರ ಸಂಘ ಉಡುಪಿ ಮತ್ತು ದೃಶ್ಯ ಕಲಾ ಸಾಂಸ್ಕೃತಿಕ ವೇದಿಕೆ ಇವರುಗಳ ಸಹಯೋಗದಲ್ಲಿ ಅಪರೂಪದ ಕಲೋತ್ಸವ ನಡೆಯುತ್ತಿದೆ . ಕರ್ನಾಟಕದ 15 ಚಿತ್ರ ಕಲಾವಿದರುಗಳಿಂದ ಶ್ರೀ ಕೃಷ್ಣಂ ವಂದೇ ಜಗದ್ಗುರುಂ…ಎನ್ನುವ ವಿಷಯಕ್ಕೆ ಸಂಬಂಧಿಸಿ ಚಿತ್ರ ರಚನಾ ಪ್ರಾತ್ಯಕ್ಷಿಕೆ ನಡೆಯುತ್ತಿದೆ.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ
ಶ್ರೀ ಕಾಣಿಯೂರು ಮಠದ ಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕ್ಯಾನ್ ವಾಸ್ ಮೇಲೆ ಬಣ್ಣ ಹಾಕಿ ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅನುಗ್ರಹ ಸಂದೇಶ ನೀಡಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಶಾಂತವೀರ್ ಶಿವಪ್ಪರವರು, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶರ್ಮಿಳಾ ಎಸ್.,ಉಡುಪಿ ವಕೀಲರ ಸಂಘ (ರಿ.) ಉಡುಪಿ ಇದರ ಅಧ್ಯಕ್ಷರಾದ ಬಿ. ನಾಗರಾಜ್, ಮಧುರಂ ವೆಜ್ ವೈಟ್ ಲೋಟಸ್ ಉಡುಪಿ ಇದರ ಮಾಲಕರಾದ ಶ್ರೀ ಅಜಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅತಿಥಿಗಳು ಕ್ಯಾನ್ ವಾಸ್ ಗೆ ಬಣ್ಣ ತುಂಬಿ ಚಿತ್ರ ರಚನೆ ಮಾಡಿ ಉದ್ಘಾಟನೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿದರು. ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಲಾವಿದರು ಚಿತ್ರ ರಚನೆ ಮಾಡುವ ಸ್ಥಳಕ್ಕೆ ಬಂದು ಕಲಾವಿದರು ರಚಿಸಿದ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶೀರ್ವಾದ ವ್ಯಕ್ತಪಡಿಸಿದರು, ಮೈಸೂರು, ಮಂಡ್ಯ, ಉಡುಪಿಯ 15 ಜನ ಕಲಾವಿದರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ದೃಶ್ಯ ಕಲಾ ಸಾಂಸ್ಕೃತಿಕ ವೇದಿಕೆಯ ರಾಘವೇಂದ್ರ ಕೆ ಅಮೀನ್, ಲಾಂಛನ ಉಡುಪಿಯ ಶ್ರೀ ತೇಜಸ್ವಿ ಎಸ್ ಆಚಾರ್ಯ, ಅಜಯ್ ಬಿ. ರಾವ್, ನಿಶ್ಮಿತಾ ಸಿ. ಸನಿಲ್, ಚೇತನ್ ಐತಾಳ್, ಉಪಸ್ಥಿತರಿದ್ದರು, ಲಾಂಛನದ ಶ್ರೀ ಶಶಾಂಕ್ ಶಿವತ್ತಾಯ ಕಾರ್ಯಕ್ರಮ ನಿರ್ವಹಿಸಿದರು.