ಚಿಕ್ಕಮಗಳೂರು: ಹೊರನಾಡಿನಲ್ಲಿ ಸಂಭ್ರಮದ ಅನ್ನಪೂರ್ಣೇಶ್ವರಿ ಬ್ರಹ್ಮ ರಥೋತ್ಸವ..!

By Girish GoudarFirst Published Mar 13, 2024, 9:10 PM IST
Highlights


ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸುವ ಮೂಲಕ ರಥೋತ್ಸವದ ಮೆರಗನ್ನ ಹೆಚ್ಚಿಸಿದ್ರು. ತೇರಿನ ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಹರಕೆ ತೀರಿಸಿ, ಅನ್ನಪೂರ್ಣೇಶ್ವರಿಯ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದ್ರು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.13):  ಕಾಫಿನಾಡ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿಂದು ಬ್ರಹ್ಮರಥೋತ್ಸವ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ರಥೋತ್ಸವದ ಅಂಗವಾಗಿ ಆದಿಶಕ್ತಿ ಅನ್ನಪೂರ್ಣೆಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನ ನೇರವೇರಿಸಲಾಯ್ತು. ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸುವ ಮೂಲಕ ರಥೋತ್ಸವದ ಮೆರಗನ್ನ ಹೆಚ್ಚಿಸಿದ್ರು. ತೇರಿನ ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಹರಕೆ ತೀರಿಸಿ, ಅನ್ನಪೂರ್ಣೇಶ್ವರಿಯ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದ್ರು...

ರಥ ಎಳೆದ ಸಾವಿರಾರು ಭಕ್ತರು  : 

ಕಾಫಿನಾಡು ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನಪೂರ್ಣೆಯ ನೆಲೆವೀಡಾಗಿರೋ ಹೊರನಾಡಿಗೆ ವಿಶೇಷ ಸ್ಥಾನ. ಕ್ಷೇತ್ರದಲ್ಲಿ ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದ್ದು, ಇಂದು ಅದ್ದೂರಿಯಾಗಿ ದೇವಿಯ ರಥೋತ್ಸವ ಜರಗಿತು. ಒಟ್ಟು ಐದು ದಿನಗಳ ಕಾಲ ನಡೆಯೋ ಈ ವಾರ್ಷಿಕ ಆಚರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಸಾವಿರಾರು ಭಕ್ತರು ಪಾಲ್ಗೊಂಡಿದ್ರು. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದ್ದು, ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಪ್ರಾರ್ಥನೆ ಮಾಡಿ ರಥವನ್ನ ಎಳೆದು ಭಕ್ತಿ ಸಮರ್ಪಿಸಿದರು. 

ಕರ್ಕಾಟಕ ರಾಶಿಗೆ ಪಂಚಮುಖಿ ರುದ್ರಾಕ್ಷಿಯಿಂದ ಏನು ಪ್ರಯೋಜನ ಗೊತ್ತಾ?

ವರ್ಷಕ್ಕೊಮ್ಮೆ ರಥದಲ್ಲಿ ಕೂತು ಭಕ್ತರಿಗೆ ದರ್ಶನ : 

ಮಧ್ಯಾಹ್ನ 12.30ರ ಸುಮಾರಿಗೆ ಅನ್ನಪೂರ್ಣೆಶ್ವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿ ಛತ್ರಿ ಚಾಮರಗಳ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನ ತಂದು ರಥದಲ್ಲಿ ಕೂರಿಸಲಾಯ್ತು. ನಂತರದ ನೆರೆದಿದ್ದ ಭಕ್ತರು ರಥಕ್ಕೆ ಕಾಯಿಯನ್ನ ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಕಾಫಿ, ಕಾಳು ಮೆಣಸು ಅಡಿಕೆ, ಮಲೆನಾಡಿನ ಬೆಳೆಗಳನ್ನ ರಥಕ್ಕೆ ಭಕ್ತರು ತೂರಿದರು.  ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆಗಳನ್ನ ಸಲ್ಲಿಸಿದರು. ವರ್ಷಪೂರ್ತಿ ಗರ್ಭಗುಡಿಯಲ್ಲೇ ಕೂತು ಭಕ್ತರಿಗೆ ದರ್ಶನ ನೀಡೋ ಅನ್ನಪೂರ್ಣೇಶ್ವರಿ ವರ್ಷಕ್ಕೊಮ್ಮೆ ರಥದಲ್ಲಿ ಕೂತು ತನ್ನ ಭಕ್ತರಿಂದಲೇ ತನ್ನ ರಥವನ್ನ ಎಳೆಸಿಕೊಂಡು ಸಂತಸ ಪಟ್ಟು ದರ್ಶನ ನಿಡ್ತಾಳೆ ಅನ್ನೋ ನಂಬಿಕೆ ಭಕ್ತರದ್ದು. 

ಒಟ್ಟಾರೆ, ಅನ್ನಪೂರ್ಣೇಯ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯೋ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದೆ. ಹಗಲಿನಲ್ಲಷ್ಟೆ ಅಲ್ಲದೆ ರಾತ್ರಿ ವೇಳೆಯೂ ವಿಶೇಷವಾದ ರಥೋತ್ಸವ ನಡೆಯುತ್ತಿದೆ. ನಾಳೆ ಬೆಳಗ್ಗೆ ಶಯನೋತ್ಸವ ಹಾಗೂ ಸಂಜೆ ಓಕುಳಿ ಸಂಪ್ರೋಕ್ಷಣೆಯೊಂದಿಗೆ ಪಂಚಮ ದಿನಗಳ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.

click me!