
ಇಂದು ಅಂದರೆ ಮಾರ್ಚ್ 14, ಅಮಲಕಿ ಏಕಾದಶಿ(Amalaki Ekadashi). ಅಮಲಕಿ ಎಂದರೆ ಆಮ್ಲಾ- ನೆಲ್ಲಿಕಾಯಿ. ಅಮಲಕಿ ಏಕಾದಶಿಯಲ್ಲಿ ನೆಲ್ಲಿಕಾಯಿ ಮರ, ಹಾಗೂ ನೆಲ್ಲಿಕಾಯಿ ಬಳಕೆಗೆ ವಿಶೇಷ ಮಹತ್ವವಿದೆ. ಏನಿದು ಅಮಲಕಿ ಏಕಾದಶಿ, ಇದನ್ನು ಏಕಾಗಿ ಆಚರಿಸಬೇಕು ಎಲ್ಲವನ್ನೂ ತಿಳಿಯೋಣ.
ಪ್ರತಿ ಮಾಸದ ಏಕಾದಶಿಯಂದು ಭಕ್ತರು ವಿಷ್ಣು(Lord Vishnu)ವಿನ ಪೂಜೆ ಮಾಡಿ ಉಪವಾಸ ಆಚರಣೆ ಮಾಡುತ್ತಾರೆ. ಈ ಬಾರಿ ಶುಕ್ಲಪಕ್ಷದ ಫಲ್ಗುಣ ಏಕಾದಶಿಯು ಮಾ.14ರಂದು ಬಂದಿದ್ದು, ಇದನ್ನು ಅಮಲಕಿ ಏಕಾದಶಿ ಎನ್ನಲಾಗುತ್ತದೆ. ಈ ಅಮಲಕಿ ಏಕಾದಶಿಗೂ ನೆಲ್ಲಿಮರ(Indian Gooseberry)ಕ್ಕೂ ಸಂಬಂಧವಿದೆ. ಪದ್ಮಪುರಾಣದ ಪ್ರಕಾರ ಈ ಮರದಲ್ಲಿ ಮಹಾವಿಷ್ಣು ಹಾಗೂ ಪತ್ನಿ ಮಹಾಲಕ್ಷ್ಮೀ ನೆಲೆಸಿರುತ್ತಾರೆ. ಮೊದಲು ವ್ರತ ಕಥಾ ಏನೆಂದು ನೋಡೋಣ.
ವ್ರತ ಕಥಾ
ಅಮಲಕಿ ಏಕಾದಶಿ ವ್ರತಕ್ಕೆ ಸಂಬಂಧಿಸಿದ ಒಂದು ಕಥೆಯ ಪ್ರಕಾರ, ಬ್ರಹ್ಮ(Lord Brahma)ದೇವನ ಕಣ್ಣೀರಿನಿಂದ ಆಮ್ಲಾ ಮರವು ಹೊರಹೊಮ್ಮಿತು. ಕಥೆ ಹೀಗಿದೆ.. ಭಗವಾನ್ ವಿಷ್ಣು(Lord Vishnu)ವಿನ ಹೊಕ್ಕುಳದಿಂದ ಹೊರ ಬಂದ ನಂತರ, ಬ್ರಹ್ಮನು ತನ್ನನ್ನು ಯಾರು ಸೃಷ್ಟಿಸಿದ್ದು ಮತ್ತು ತನ್ನ ಅಸ್ತಿತ್ವದ ಉದ್ದೇಶವೇನು ಎಂದು ತಿಳಿಯಲು ಬಯಸಿದನು. ಇದಕ್ಕೆ ಉತ್ತರವನ್ನು ಹುಡುಕಲು ಬ್ರಹ್ಮದೇವರು ತೀವ್ರ ತಪಸ್ಸು ಮಾಡಿದರು. ಬ್ರಹ್ಮನ ಶ್ರದ್ಧೆಗೆ ಮೆಚ್ಚಿದ ವಿಷ್ಣುವು ಅವನ ಮುಂದೆ ಕಾಣಿಸಿಕೊಂಡನು. ಮತ್ತು ತನ್ನ ಸೃಷ್ಟಿಕರ್ತನನ್ನು ನೋಡಿದ ನಂತರ, ಬ್ರಹ್ಮ ದೇವರಿಗೆ ಸಂತೋಷದಿಂದ ಕಣ್ಣೀರು ಬಂತು. ಬ್ರಹ್ಮನ ಭಕ್ತಿಗೆ ಮೆಚ್ಚಿದ ವಿಷ್ಣುವು ಅವನನ್ನು ಆಶೀರ್ವದಿಸಿದನು. ಬ್ರಹ್ಮನ ಕಣ್ಣೀರು(Tears) ಆಮ್ಲಾ ವೃಕ್ಷಗಳಾಗಿ ಮಾರ್ಪಡುತ್ತದೆ ಮತ್ತು ಈ ಮರಗಳ ಹಣ್ಣುಗಳು ತನಗೆ ಪ್ರಿಯವಾಗುತ್ತವೆ ಎಂದು ಹೇಳಿದನು. ಅಷ್ಟೇ ಅಲ್ಲ, ಫಾಲ್ಗುಣ ಶುಕ್ಲ ಪಕ್ಷ ಏಕಾದಶಿ ತಿಥಿಯಂದು ಯಾರು ನೆಲ್ಲಿಕಾಯಿ ಮರವನ್ನು ಪೂಜಿಸುವರೋ ಅವರು ತನ್ನ ಅನುಗ್ರಹಕ್ಕೆ ಪಾತ್ರವಾಗುತ್ತಾರೆ ಎಂದೂ ಹೇಳಿದನು. ಹೀಗಾಗಿ, ಇಂದು ವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಜೊತೆಗೆ, ನೆಲ್ಲಿಮರಕ್ಕೂ ಪೂಜೆ ನಡೆಸಲಾಗುತ್ತದೆ. ಅದೂ ಅಲ್ಲದೆ, ನೆಲ್ಲಿಮರದ ವಿವಿಧ ಭಾಗಗಳಲ್ಲಿ ದೇವಾನುದೇವತೆಗಳು ನೆಲೆಸಿದ್ದಾರೆ ಎಂದೂ ನಂಬಲಾಗಿದೆ.
Palmistry Prediction: ಹಸ್ತ ರೇಖೆಯಿಂದ ತಿಳಿಯಿರಿ ನಿಮ್ಮ ವೃತ್ತಿ ಜೀವನ ಹೇಗಿರುತ್ತೆ ಎಂದು..
ಆಚರಣೆ ಹೇಗೆ?
ಅಮಲಕಿ ಏಕಾದಶಿಯ ಹಿಂದಿನ ರಾತ್ರಿಯಿಡೀ ಜಾಗರಣೆ ನಡೆಸುತ್ತಾ ವಿಷ್ಣು ಸಹಸ್ರನಾಮ ಪಠಣ ಮಾಡುವ ಭಕ್ತರು, ಬೆಳಗ್ಗೆ ಎದ್ದು ಸ್ನಾನ ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸುತ್ತಾರೆ. ನಂತರ ಧ್ಯಾನ ಮಾಡಿ ವಿಷ್ಣುವಿನ ಎದುರು ಕುಳಿತು ದೀಪ ಹಚ್ಚುತ್ತಾರೆ. ನಂತರ ವಿಷ್ಣುವಿಗೆ ಪ್ರಿಯವಾದ ಹೂವುಗಳು, ನೈವೇದ್ಯ ನೆರವೇರಿಸಿ, 'ಓಂ ನಮೋ ಭಗವತೇ ವಾಸುದೇವಾಯ' ಶ್ಲೋಕವನ್ನು ಸಾಕಷ್ಟು ಬಾರಿ ಜಪಿಸುತ್ತಾರೆ. ಬಳಿಕ ನೆಲ್ಲಿಮರದ ಕೆಳಗೆ ಕಳಸ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಮನೆಯ ಆಸುಪಾಸಿನಲ್ಲಿ ನೆಲ್ಲಿಮರ ಇಲ್ಲವೆಂದಾದರೆ ನೆಲ್ಲಿಕಾಯನ್ನು ವಿಷ್ಣುವಿಗೆ ನೈವೇದ್ಯ ಮಾಡಬಹುದು. ನಂತರ ಅಗತ್ಯ ಇರುವವರಿಗೆ ದಾನ ಮಾಡುತ್ತಾರೆ. ತದ ನಂತರ ಉಪವಾಸ ಮುರಿದು ಸಾತ್ವಿಕ ಫಲಾಹಾರ ಸೇವಿಸಲಾಗುತ್ತದೆ.
Traits Of Scorpio: ವೃಶ್ಚಿಕ ರಾಶಿಯ ಪುರುಷರ ಸ್ವಭಾವಗಳೇನೇನು ಗೊತ್ತಾ?
ಇಂದು ಈ ವ್ರತ ಆಚರಿಸಿದವರಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡಿದಷ್ಟು, ಯಜ್ಞ ಯಾಗಾದಿಗಳನ್ನು ಮಾಡಿದಷ್ಟು ಪುಣ್ಯ ಬರುವುದಾಗಿ ನಂಬಿಕೆ ಇದೆ. ಸಂತಾನ ಆಪೇಕ್ಷಿತ ದಂಪತಿಯು ಈ ದಿನ ನೆಲ್ಲಿಮರಕ್ಕೆ ಪೂಜಿಸುವುದರಿಂದ ಸಂತಾನ ಭಾಗ್ಯ ಪಡೆಯುತ್ತಾರೆ. ವ್ರತ ಆಚರಿಸಿ ಬೇಡಿದ ಭಕ್ತರಿಗೆ ವಿಷ್ಣುವು ಕೇಳಿದ್ದೆಲ್ಲವನ್ನೂ ನೀಡುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.