ವಿವಾಹದ ಬಳಿಕ ಕುಜ ದೋಷವಿದ್ದದ್ದು ತಿಳಿದರೆ ಈ ರೀತಿ ಮಾಡಿ!

By Suvarna NewsFirst Published Jun 17, 2020, 6:23 PM IST
Highlights

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಮಂಗಳನ ಪ್ರಭಾವ ಹೆಚ್ಚಾಗಿದ್ದರೆ ಅದಕ್ಕೆ ಮಂಗಳದೋಷ ಎನ್ನುತ್ತಾರೆ. ವಿವಾಹಕ್ಕೂ ಮೊದಲೇ ಈ ದೋಷಗಳಿದ್ದರೆ ನಿವಾರಣೆ ಮಾಡಿಕೊಳ್ಳಬೇಕು. ಮದುವೆ ಆದ ಮೇಲೆ ಕುಜದೋಷವಿದೆ ಎಂದು ತಿಳಿದು ಬಂದರೆ, ಅದಕ್ಕೆ ಗಾಬರಿಪಡುವ ಅವಶ್ಯಕತೆಯಿಲ್ಲ ತಕ್ಕ ಪರಿಹಾರೋಪಾಯಗಳನ್ನು ಮಾಡಿಕೊಂಡರೆ ಒಳಿತಾಗುವುದು.

ವಿವಾಹವೆಂದರೆ ಎರಡು ಕುಟುಂಬಗಳು ಸೇರಿ ಮಾತನಾಡಿ, ಹುಡುಗ ಮತ್ತು ಹುಡುಗಿಯ ಜಾತಕಗಳನ್ನು ಪರೀಕ್ಷಿಸಿ ಹೊಂದುವುದಾದರೆ ಮಾತ್ರ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಾರೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಜಾತಕಗಳ ಹೊಂದಾಣಿಕೆ ನೋಡಲು ಆಗಿರುವುದಿಲ್ಲ. ಯಾವುದೋ ಕಾರಣಕ್ಕೆ ಅವಸರದಲ್ಲಿ ಮದುವೆ ಆಗಿಬಿಟ್ಟಿರುತ್ತದೆ. ಅಂತಹ ಸಂದರ್ಭದಲ್ಲಿ ಮದುವೆಯ ನಂತರ ಜಾತಕದಲ್ಲಿರುವ ದೋಷಗಳ ಬಗ್ಗೆ ತಿಳಿಯುತ್ತದೆ. 

ಸಂಸಾರದಲ್ಲಿ ಅನ್ಯೋನ್ಯತೆ ಇರದಿರುವುದು, ಧನನಷ್ಟವಾಗುವುದು, ಆರೋಗ್ಯದ ಸಮಸ್ಯೆ ಎದುರಾಗುವುದು ಆದಾಗ ಎಲ್ಲೋ ಏನೋ ಸರಿಯಿಲ್ಲವೆಂದು ಅರಿವಿಗೆ ಬರುತ್ತದೆ. ಆಗ ಜಾತಕವನ್ನು ಪರಿಶೀಲಿಸಿದಾಗ ಪತಿ ಅಥವಾ ಪತ್ನಿಗೆ ಕುಜದೋಷವಿದೆ ಎಂದು ತಿಳಿಯುತ್ತದೆ. ಮದುವೆ ನಡೆದು ಹೋಗಿರುತ್ತದೆ, ಸಂಸಾರ ಆರಂಭಿಸಿಯಾಗಿರುತ್ತದೆ. ಹಾಗಂತ ಆ ಸಮಸ್ಯೆಗೆ ಪರಿಹಾರವಿಲ್ಲವೆಂದಲ್ಲ. ಇಂಥ ಸಂದರ್ಭದಲ್ಲಿ ಕುಜದೋಷವಿರುವ ವಿಷಯ ತಿಳಿದು ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ. ನಿರ್ಲಕ್ಷ್ಯ ಮಾಡುವುದೂ ಒಳ್ಳೆಯಲ್ಲ. ಇದಕ್ಕೂ ಪರಿಹಾರವಿದೆ.

ಹುಡುಗ ಅಥವಾ ಹುಡುಗಿಯ ಜಾತಕದ ಮೊದಲನೆ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಅದಕ್ಕೆ ಮಂಗಳ ದೋಷ ಅಥವಾ ಕುಜದೋಷವೆಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮಂಗಳ ದೋಷವಿರುವ ವ್ಯಕ್ತಿಯನ್ನು ಮಂಗಳ ದೋಷವಿರುವ ಜಾತಕದೊಂದಿಗೆ ವಿವಾಹ ಮಾಡಿದರೆ ಆಗ ದೋಷವಿರುವುದಿಲ್ಲ. 

ಇದನ್ನು ಓದಿ: ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು!...

ಹಾಗಾಗದೇ ಇದ್ದಲ್ಲಿ ಒಬ್ಬರಿಗೆ ದೋಷವಿದ್ದು, ಇನ್ನೊಬ್ಬರಿಗೆ ಇಲ್ಲದಿದ್ದಾಗ ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುತ್ತವೆ. ನೆಮ್ಮದಿ ಇಲ್ಲದಿರುವುದು, ಸಂತಾನಕ್ಕೆ ಸಮಸ್ಯೆ ಉಂಟಾಗುವುದು, ಇಷ್ಟ-ಕಷ್ಟಗಳಲ್ಲಿ ಭಿನ್ನಾಭಿಪ್ರಾಯ, ವಿಚ್ಛೇದನ ಪಡೆದುಕೊಳ್ಳುವ ಸಂದರ್ಭವೂ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಮಂಗಳದೋಷವಿದ್ದರೆ, ಅದನ್ನು ನಿವಾರಣೆ ಮಾಡಿಕೊಳ್ಳದೇ ವಿವಾಹ ಮಾಡುವುದಿಲ್ಲ. ವಿವಾಹದ ನಂತರ ತಿಳಿದಾಗ ಅದರ ನಿವಾರಣೆಗೆ ಸಮಯ ತೆಗೆದುಕೊಳ್ಳದೇ ತಕ್ಷಣಕ್ಕೆ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು. ಈ ಕೆಳಗಿನ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಕುಜದೋಷದಿಂದ ಉಂಟಾಗುವ ಯಾವುದೇ ತೊಂದರೆ ನಿಮಗಾಗುವುದಿಲ್ಲ. ಕುಜದೋಷ ಸಂಪೂರ್ಣ ನಿವಾರಣೆಯಾಗುತ್ತದೆ.

ವಿವಾಹದ ನಂತರ ಮಂಗಳದೋಷ ಇರುವುದು ತಿಳಿದರೆ ಹೀಗೆ ಮಾಡಿ 
- ಮಂಗಳದೋಷದ ನಿವಾರಣೆಗೆ ಅಥವಾ ಮಂಗಳ ಗ್ರಹವನ್ನು ಶಾಂತಗೊಳಿಸಲು ಶ್ರೀ ಮಂಗಳನಾಥ ಅಥವಾ ಅಂಗಾರೇಶ್ವರನ ವಿಶೇಷ ಪೂಜೆ ಮಾಡಬೇಕು. ಇದರಿಂದ ದೋಷವಿರುವರಿಗೆ ದೋಷದ ಪ್ರಭಾವ ಕಡಿಮೆಯಾಗಿ, ಒಳಿತಾಗುತ್ತದೆ.

ಇದನ್ನು ಓದಿ: ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣ ಯಾವುದೆಂದು ತಿಳಿಯಿರಿ!...

- ವಿವಾಹದ ನಂತರ ತಿಳಿದಾಗ, ವೈವಾಹಿಕ ಜೀವನದಲ್ಲಿ ತೊಂದರೆಯಾಗುತ್ತಿದೆ ಎಂದಾದರೆ ಪ್ರತಿ ಮಂಗಳವಾರ ಶಿವನ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಒಂದೂ ಕಾಲು ಕೆ.ಜಿ ಕೆಂಪು ಮಸೂರವನ್ನು ಅರ್ಪಿಸಬೇಕು. ಮಂಗಳನ ಪೂಜೆಯನ್ನು ಶಿವಲಿಂಗದ ರೂಪದಲ್ಲಿ ಮಾಡಲಾಗುತ್ತದೆ ಮತ್ತು ಮಸೂರವನ್ನು ಮಂಗಳನಿಗೆ ಅನ್ನವೆಂದು ನೀಡಲಾಗುತ್ತದೆ.

- ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ಪರಿಹಾರವಾಗಬೇಕಾದರೆ ಶಿವನ ಜೊತೆಯಲ್ಲಿ ಪಾರ್ವತಿಯನ್ನು ಆರಾಧಿಸಬೇಕು. ಪಾರ್ವತಿಯ ಉಪಾಸನೆ ಮಾಡುವುದರಿಂದಲೂ ಮಂಗಳ ದೋಷ ನಿವಾರಣೆಯಾಗುತ್ತದೆ ಮತ್ತು ವಿಚ್ಛೇದನದ ಹಂತಕ್ಕೆ ಬಂದಿರುವ ಜೋಡಿಗಳು ಇದನ್ನು ಮಾಡುವುದರಿಂದ ಅವರ ಸಂಬಂಧ ಸರಿಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

- ಮಂಗಳ ದೋಷವಿರುವ ವ್ಯಕ್ತಿಯು ಮಂಗಳನ ಹವಳ ರತ್ನವನ್ನು ಸಂಬಂಧಪಟ್ಟವರ ಸಲಹೆಯನ್ನು ಪಡೆದು ಧರಿಸಿದರೆ ದೋಷ ನಿವಾರಣೆಯಾಗುವ ಸಂಭವ ಹೆಚ್ಚಿರುತ್ತದೆ. ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.

ಇದನ್ನು ಓದಿ: ಜೂನ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!...

- ಜ್ಯೋತಿಷ್ಯ ಶಾಸ್ತ್ರದ ಅನುಸಾರ ಹಲವು ಬಾರಿ 28 ವರ್ಷದ ನಂತರ ಮಂಗಳ ದೋಷ ತಾನಾಗೇ ನಿವಾರಣೆಯಾಗಿರುತ್ತದೆ. ಅದು ಮೇಷ, ಕಟಕ, ವೃಶ್ಚಿಕ ಅಥವಾ ಮಕರ ರಾಶಿಯಾಗಿದ್ದರೂ ಸಹ ದೋಷದ ಪ್ರಭಾವ ತೀರಾ ಕಡಿಮೆಯಾಗಿರುತ್ತದೆ ಎನ್ನುವುದು ಜ್ಯೋತಿಷಿಗಳ ಅಭಿಪ್ರಾಯ.

- ತೀರಾ ಕಠಿಣ ಪರಿಸ್ಥಿತಿಯಲ್ಲಿದ್ದಾಗ ಮಾತ್ರ ಮಂಗಳ ಯಂತ್ರವನ್ನು ಉಪಯೋಗಿಸಬೇಕು. ಅಂದರೆ ಸಂತಾನವಾಗಲು ಹೆಚ್ಚೆಚ್ಚು ಸಮಸ್ಯೆಗಳು ಎದುರಾದರೆ, ದಾಂಪತ್ಯ ವಿಚ್ಛೇದನದ ಹಂತ ತಲುಪಿದರೆ, ದಾಂಪತ್ಯ ಸುಖಕ್ಕೆ ಅಡೆ-ತಡೆ ಬಂದಾಗ ಮಾತ್ರ ಈ ಯಂತ್ರವನ್ನು ಉಪಯೋಗ ಮಾಡಬೇಕು. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಈ ಯಂತ್ರವನ್ನು ಉಪಯೋಗಿಸುವುದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಮ್ಮತಿಸುವುದಿಲ್ಲ. 

ಚಿರು ಸಾವಿಗೆ ಕಾರಣವಾಯಿತೇ ಅಷ್ಟಮ ಕುಜ ದೋಷ

Latest Videos

click me!