Buddha Purnima: ಬುದ್ಧ ಮಾನವತೆಯ ಮಂದಹಾಸ ತೊರೆದು ಹೋದವನು ತೋರಿದ ದಾರಿ

By Kannadaprabha NewsFirst Published May 15, 2022, 10:03 AM IST
Highlights

ಪ್ರತಿಯೊಬ್ಬರೂ ‘ಎದುರುಗಿದ್ದವನನ್ನು ಸೋಲಿಸಿಯೇ ಗೆಲ್ಲುತ್ತೇನೆ’ ಎನ್ನುವ ಮನಸ್ಥಿತಿ ಬೆಳೆಸಿಕೊಂಡಿರುವ ಕಾಲದಲ್ಲಿ ಮತ್ತೆ ಮತ್ತೆ ಬುದ್ಧ ನೆನಪಾಗುತ್ತಾನೆ. ‘ನೀನು ಸಾವಿರ ಯುದ್ಧ ಗೆಲ್ಲುವ ಮೊದಲು ನಿನ್ನನು ನೀನು ಗೆಲ್ಲು. ಆವಾಗ ಮಾತ್ರ ನಿನಗೆ ಜಯವಾಗುತ್ತದೆ’ ಎಂದಿದ್ದ ಗೌತಮ ಬುದ್ಧನ ಮಾತುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಇಂದು ಬದ್ಧ ಪೂರ್ಣಿಮೆಯ ದಿನ. ಶಾಂತಿಯ ಬೆಳಕಿನ ಮೂರ್ತ ರೂಪದಂತಿರುವ ಬುದ್ಧ ತಮ್ಮನ್ನು ಪ್ರಭಾವಿಸಿದ್ದು ಹೇಗೆ ಎಂಬುದನ್ನು ಇಲ್ಲಿ ಹಲವರು ಹೇಳಿಕೊಂಡಿದ್ದಾರೆ.

ಬುದ್ಧನ ಸ್ಥಿತಿ ತಲುಪೋ ಪ್ರಯತ್ನ ಮಾಡೋಣ

ಧನಂಜಯ್‌, ನಟ

ಬುದ್ಧ ನನ್ನ ಯಾಕೆ ಪ್ರಭಾವಿಸಿದ, ಯಾಕೆ ಆತ ನನಗೆ ಇಷ್ಟಎಂದರೆ ಮನುಷ್ಯ ಮನುಷ್ಯನಾಗಿಯೇ ಯೋಜನೆ ಮಾಡು. ನಿನ್ನಂತೆಯೇ ಇತರೆ ಮನುಷ್ಯರಿಗೂ, ಪ್ರಾಣಿ, ಜೀವಿಗಳಿಗೂ ಈ ಜಗತ್ತಿನ ಬದುಕುವ ಹಕ್ಕು ಇದೆ ಎಂದು ತುಂಬಾ ಸರಳವಾಗಿ ಹೇಳಿದ ವ್ಯಕ್ತಿ ಬುದ್ಧ. ಹುಟ್ಟುವಾಗ ನಮಗೆ ಯಾವುದೇ ಆಸೆ, ಆಕಾಂಕ್ಷೆಗಳು, ಮನವಿಗಳು ಇರಲ್ಲ. ಬೆಳೆಯುತ್ತ ನಾನು, ನನ್ನದು ಎನ್ನುವ ಆಲೋಚನೆಯಲ್ಲಿ ಆಸೆಗಳು ಹುಟ್ಟಿಕೊಳ್ಳುತ್ತವೆ. ಕೋಪ, ದ್ವೇಷ ಬೆಳೆಸಿಕೊಳ್ಳುತ್ತೇವೆ. ಆದರೆ, ನನ್ನ ಪ್ರಕಾರ ಬುದ್ಧ, ಆಗಷ್ಟೆಹುಟ್ಟಿದ ಮಗುವಿನಂತೆ. ಎಲ್ಲವನ್ನೂ ತೊರೆದು ಜಗತ್ತನ್ನು ನೋಡಿದ ಆತನ ಪರಿ ಇದೆಯಲ್ಲ, ಅದು ಎಲ್ಲರಿಗೂ ಸಾಧ್ಯವಾಗಲ್ಲ. ಆದರೆ, ಬುದ್ಧನ ಆ ಮಗುವಿನ ಸ್ಥಿತಿ ತಲುಪುವುದಕ್ಕೆ ನಾವೆಲ್ಲ ಪ್ರಯತ್ನಿಸಿದರೆ ಬಹುಶಃ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಯಾರು ಈ Laughing Buddha? ಮನೆಯಲ್ಲಿಡುವ ಲಾಭಗಳೇನು?

ಬುದ್ಧನ ನಾಡು ಶ್ರೀಲಂಕ ತೆಗೆದುಕೊಳ್ಳಿ, ಬುದ್ಧ ಅವರಿಗೆ ಮೂರ್ತಿಯಾಗಿ ಕಂಡಿರಬೇಕು. ಬುದ್ಧ ಅರಿವಿನ ಬೆಳಕು, ಪ್ರಕೃತಿಯ ಜೀವ ಎಂದುಕೊಂಡಿದ್ದರೆ ಬಹುಶಃ ಶ್ರೀಲಂಕಾದ ಇಂದಿನ ಪರಿಸ್ಥಿತಿಗೆ ಬರುತ್ತಿರಲಿಲ್ಲ. ನಮ್ಮೊಳಗಿನ ಯುದ್ಧಗಳನ್ನು ನಾವು ಗೆಲ್ಲಬೇಕು. ಎದುರಿಗಿದ್ದವರ ಜತೆಗೆ ಯುದ್ಧಕ್ಕಿಂತ ಪ್ರೀತಿ ಹಂಚಿಕೊಳ್ಳಬೇಕು. ಆದರೆ, ಏನಾಗಿದೆ ಈಗ ಬುದ್ಧ, ಬಸವ ಅವರನ್ನು ಮೂರ್ತಿಗಳನ್ನಾಗಿ ಮಾಡಿಟ್ಟು ಅವರ ವಿಚಾರಗಳನ್ನು ಮರೆಯುತ್ತಿದ್ದೇವೆ. ಇಡೀ ಮೂರ್ತಿ ಮಾಡುವುದರಲ್ಲಿ ಬ್ಯುಸಿ ಆಗಿದೆ. ಯಾವಾಗ ವಿಚಾರಗಳನ್ನು ಮರೆತಾಗ ದ್ವೇಷ ಹುಟ್ಟಿಕೊಳ್ಳುತ್ತದೆ. ನಾನೇ ಶ್ರೇಷ್ಠ ಎನ್ನುವ ಅಹಂ ಬೆಳೆಯುತ್ತದೆ. ಬುದ್ಧ, ಬಸವ, ಅಂಬೇಡ್ಕರ್‌ ಅವರೆಲ್ಲ ಇಂಥದ್ದೇ ಪರಿಸ್ಥಿತಿಯಲ್ಲಿ ಜನ್ಮಿಸಿದವರು ಅಲ್ಲವೇ? ಆದರೆ, ಅವರು ಆ ದುಗುಡ, ದ್ವೇಷ, ಅಸಮಾನತೆಗೆ ಇಂತಿಶ್ರೀ ಹೇಳುವ ನಿಟ್ಟಿನಲ್ಲಿ ಪಯಣ ಆರಂಭಿಸಿದವರು. ಈಗ ಬುದ್ಧನ ವಿಚಾರಗಳನ್ನೂ ನಮ್ಮೊಂದಿಗೆ ತೆಗೆಕೊಂಡು ಹೋಗಬೇಕಿದೆ.

ವರ್ತಮಾನದಲ್ಲಿ ಬುದ್ಧನ ಶಾಂತಿ ಬೋಧೆಯ ಅಗತ್ಯತೆ

- ಎಚ್‌ಎಸ್‌ ವೆಂಕಟೇಶ್‌ಮೂರ್ತಿ, ಕವಿ

ಸುಮಾರು ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಉತ್ತರಾಪಥದ ಹದಿನಾರು ಗಣರಾಜ್ಯಗಳಲ್ಲಿ ಒಂದಾದ ಶಾಕ್ಯರ ಪ್ರಜಾಸತ್ತೆಯಲ್ಲಿ ದೊರೆ ಶುದ್ಧೋದನನ ಮಗನಾಗಿ ಸಿದ್ಧಾರ್ಥನು ಜನಿಸಿದನು. ಬಾಲ್ಯದಿಂದಲೂ ಸೂಕ್ಷ್ಮ ಮನಸ್ಸಿನ ಸಿದ್ಧಾರ್ಥ ಲೋಕದ ನಶ್ವರತೆ ಮತ್ತು ಜೀವಿಗಳ ಶೋಕದ ಬಗ್ಗೆ ಚಿಂತಿಸುತ್ತಿದ್ದನು, ವೈರಾಗ್ಯದ ಕಡೆ ಅವನ ಮನಸ್ಸು ಬಲಿಯತ್ತಿತ್ತು. ಹೇಗಾದರೂ ಮಾಡಿ ಲೋಕದ ಶೋಕವನ್ನು ಪರಿಹರಿಸುವ ಮಾರ್ಗವನು ಶೋಧಿಸಲೇಬೇಕೆಂದು ತನ್ನ ಇಪತ್ತೊಂಬತ್ತನೇ ವಯಸ್ಸಿನಲ್ಲಿ ರಾಜ್ಯ ಕೋಶ ತಂದೆ ತಾಯಿ ಪತ್ನಿ ಮಗುವನ್ನು ತೊರೆದು ಅನಿಕೇತನತ್ವದ ದೀಕ್ಷೆ ವಹಿಸಿ ಸನ್ಯಾಸಿಯಾಗಿ ಏಳು ವರ್ಷಗಳ ಕಾಲ ಕಠಿಣವಾದ ತಪಸ್ಸಿನಲ್ಲಿ ತೊಡಗಿದನು. ದೇಹ ದಂಡನೆಯ ಈ ಮಾರ್ಗ ಫಲ ಕೊಡದ ಕಾರಣ ದೇಹವನ್ನು ಅತಿಯಾಗಿ ದಂಡಿಸುವ ಅಥವಾ ಅತಿಯಾಗಿ ಕೊಬ್ಬಿಸುವ ಎರಡೂ ಅತಿಗಳನ್ನು ತ್ಯಜಿಸಿ ಮಧ್ಯಮ ಮಾರ್ಗದಲ್ಲಿ ಧ್ಯಾನಾಸಕ್ತನಾಗಿ ವಾರಣಾಸಿಯ ಸಮೀಪದ ಉರುವೇಲೆ ಎಂಬಲ್ಲಿ ಬೋಧಿ ವೃಕ್ಷದ ಕೆಳಗೆ ವೈಶಾಖಿ ಪೂರ್ಣಿಮೆಯ ದಿವಸ ಬೋಧಿಯನ್ನು ಪಡೆದು ಬುದ್ಧನಾದನು.

ಮನೆಯಲ್ಲಿ ಸಮೃದ್ಧಿ ಬೇಕೆಂದರೆ Laughing Buddhaನನ್ನು ಇಲ್ಲಿಡಿ..

ನಾಲ್ಕು ಆರ್ಯ ಸತ್ಯಗಳನ್ನು ಕಂಡುಕೊಂಡನು. 1.ದುಃಖವಿದೆ, 2.ದುಃಖಕ್ಕೆ ಕಾರಣವಿದೆ, 3.ದುಃಖಕ್ಕೆ ಪರಿಹಾರವಿದೆ, 4.ಅಷ್ಟಾಂಗ ಮಾರ್ಗವನ್ನು ಅನುಸರಿಸುವ ಮೂಲ ಶೋಕ ಮುಕ್ತನಾಗುವುದು ಸಾಧ್ಯ. ಆಸೆಯೆ ದುಃಖಕ್ಕೆ ಮೂಲ ಎಂದು ತಿಳಿದನು. ಲೋಕ ನಶ್ವರ ಸ್ವರೂಪದ್ದು, ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಿರುವಾಗ ಆತ್ಮ ಶಾಶ್ವತ ಎಂದು ಹೇಳುವುದು ಹೇಗೆ? ಇದೇ ಬುದ್ಧನ ಅನಾತ್ಮವಾದ ನಿಸ್ವಾರ್ಥದಿಂದ ಪರರಿಗಾಗಿ ಬದುಕಬೇಕು -ಎಂಬುದು ಬುದ್ಧನ ವಿಚಾರ ತಾನು ಕಂಡುಕೊಂಡ ಹೊಸ ಬೆಳಕನ್ನು ವ್ಯಾಕುಲಿತ ಜೀವಿಗಳಿಗೆ ಬೋಧಿಸುವ ಮೂಲಕ ಹೊಸ ಧರ್ಮವನ್ನು ಸ್ಥಾಪಿಸಿದನು. ದೈವದ ಹಂಗಿಲ್ಲದ ಯಜ್ಞ ಯಾಗಗಳ ಉಪಾಧಿ ಇಲ್ಲದ ಅಹಿಸಾತ್ಮಕವಾದ ಬೌದ್ಧಮತ ಲೋಕಪ್ರಿಯವಾಯಿತು ತನ್ನ ಎಂಭತ್ತನೇ ತುಂಬು ವಯಸ್ಸಲ್ಲಿ ವೈಶಾಖ ಪೂರ್ಣಿಮೆಯಂದು ಭಗವಾನ್‌ ಬುದ್ಧನು ಮಲ್ಲರ ರಾಜಧಾನಿ ಕುಶಿನಾರದ ಸಮೀಪದ ಸಾಲವನದಲ್ಲಿ ವೈಶಾಖ ಪೂರ್ಣಿಮೆಯ ಇರುಳು ಯೋಗ ಸಮಾಧಿಯ ಮೂಲಕ ಪರಿನಿರ್ವಾಣ ಪಡೆದನು. ಈವತ್ತಿನ ಹಿಂಸೆ ಧಾವಂತ ಭೋಗಲಾಲಸೆ ಯುದ್ಧ ಪಿಪಾಸೆಯ ಜಗತ್ತಿನಲ್ಲಿ ಕೋವಿಡ್‌ ಅವಗಢದಿಂದ ನಶ್ವರತೆ ನಮ್ಮ ನಿತ್ಯಾನುಭವ ಆಗುತ್ತಿರುವ ವರ್ತಮಾನದಲ್ಲಿ ಬುದ್ಧನ ಲೋಕ ಮೈತ್ರಿಯ ಶಾಂತಿ ಸಂಧಾನದ ಬೋಧೆ ಇಡೀ ವಿಶ್ವದ ತುರ್ತು ಅಗತ್ಯವಾಗಿದೆ.

ಬುದ್ಧನ ನಿಸ್ವಾರ್ಥ ಪ್ರೀತಿ ನನಗೆ ಇಷ್ಟ

-ಇಂದ್ರಕುಮಾರ್‌ ಎಚ್‌ ಬಿ, ಸಾಹಿತಿ

ಆಚರಣೆಗಿಂತ ಪ್ರೇಮಕ್ಕೆ ಬದುಕಿನ ಅರ್ಥೈಸಿಕೊಳ್ಳುವುದಕ್ಕೆ ಹೆಚ್ಚು ಗಮನ ಕೊಡುವವನು ಬುದ್ಧ. ಒಳಗಿನ ಮನುಷ್ಯನ ಪರಿಚಯ ಮಾನವೀಯತೆಯನ್ನು ಪರಿಚಯ ಮಾಡಿಸುವವನು. ಸರ್ವ ಶ್ರೇಷ್ಠ ಅನ್ನುವುದನ್ನು ಒಪ್ಪದೆ ಎಲ್ಲರೂ ಶ್ರೇಷ್ಠ ಎನ್ನುವ ನೋಟ ಅವನದು. ಶಾಂತಮಯ ನಿಸ್ವಾರ್ಥ ಪ್ರೀತಿಯ ಲೋಕ ಅವನದು. ಆಚರಣೆ ಆಧಾರದ ಧರ್ಮ ಸೃಷ್ಟಿಗಿಂತಲು ಅರಿವಿನ ಮಾನಸಿಕತೆ ವೃದ್ಧಿಸಿದ ಮನೋವೈಜ್ಞಾನಿಕತೆ ಅವನದು. ಬುದ್ಧನ ಸಂಗ ಆಸೆಗಳನು ಮರೆಸಿ ಅಪರಿಮಿತ ಅನುಭವದೆಡೆಗೆ ನೋಡುವಂತೆ ಮಾಡುವಂಥದು.

ಐದೇ ದಿನದಲ್ಲಿ ನಾಲ್ಕು ರಾಶಿ ಪರಿವರ್ತನೆ, ಜೊತೆಗೆ ಗ್ರಹಣ, ಹಬ್ಬ ಹುಣ್ಣಿಮೆ..

ಭೌಗೋಳಿಕ ವ್ಯಾಪ್ತಿಯಲ್ಲೂ ಅವನ ಆರಾಧಕರು ವಿಶ್ವದಲ್ಲೆಲ್ಲ ಹರಡಿರುವರು. ಬಿಟ್ಟುಕೊಡುವುದರಲ್ಲಿನ ಸುಖ, ದಯೆ, ಮಮಕಾರ, ಹಂಚಿಕೊಳ್ಳುವಿಕೆಯನ್ನು ಕಲಿಸುವವನು. ಮನುಷ್ಯ ಸಹಜ ತಿಳುವಳಿಕೆಯನು ಎತ್ತರಿಸುವವನು. ಎಲ್ಲ ಜೀವಿಗಳಿಗೂ ಸಮಾನ ಪ್ರೀತಿ ದಯೆಯ ನೋಟವನು ಉದ್ದೀಪಿಸುವವನು. ‘ಬುದ್ಧ’ನಾಗುವುದು - ಪರಿಪೂರ್ಣನಾಗುವುದೆ ಸರಿ. ಸತ್ಯ ಸಂಗದ ಪರಿಚಯ ಮಾಡಿಸುವವ ನನಗೆ ಇಷ್ಟ.

ಬುದ್ಧ ಪೂರ್ಣಿಮೆ ಪ್ರಜ್ಞೆಯ ದಿನವಾಗಲಿ

- ವೈಎನ್‌ ಮಧು, ಸಾಹಿತಿ

ಬುದ್ಧ ಒಂದು ಮನೋಭಾವ. ಎಲ್ಲರೂ ಗಳಿಸಬೇಕಾದ ಮನೋಭಾವ. ನಾವು ಮತದ ಆಚರಣೆಗಳನ್ನು ಆಚರಿಸಿದ ಮಾತ್ರಕ್ಕೆ ಬುದ್ಧರಾಗುವುದಿಲ್ಲ. ಶ್ರಮಪಟ್ಟು ಗಳಿಸಿಕೊಳ್ಳಬೇಕು. ಅತ್ಯಂತ ಮಾನವೀಯ, ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಸಮನ್ವಯಧಾರಿ ಮನೋಭಾವವಿದು. ಒಳಗನ್ನು ಅರಿತು ಸರಿಪಡಿಸಿಕೊಳ್ಳುವ ಮೂಲಕ ಜಗತ್ತನ್ನು ಅರಿತು ನೆಮ್ಮದಿಯ ತಾಣವನ್ನಾಗಿಸುವುದು. ಭಾರತೀಯರಾದ ನಮಗೆ ಗೌತಮ ಬುದ್ಧ ನಮ್ಮ ನೆಲದಲ್ಲಿ ಹುಟ್ಟಿದ್ದ ಎಂಬುದೇ ಅತ್ಯಂತ ಹೆಮ್ಮೆಯ ಸಂಗತಿ. ನಮ್ಮ ನೆಲವೇ ಹಾಗೆ. ಅನೇಕ ಜ್ಞಾನಶಾಖೆಗಳನ್ನು ಹುಟ್ಟುಹಾಕಿದ ಫಲವತ್ತಾದ ನೆಲೆ. ಅಂತಹ ನೆಲವನ್ನು ನಾವಿಂದು ಗಬ್ಬೆಬ್ಬಿಸಿದ್ದೇವೆ. ಗೌತಮನು ಮಡದಿ ತೊರೆದು ಹೋದ ವಿಚಾರ ಕೇಳಿಸಿಕೊಳ್ಳುತ್ತಿರುತ್ತೇವೆ. ನನ್ನ ಪ್ರಕಾರ ಒಬ್ಬ ಇಂಟೆನ್ಸ್‌ ಲವರ್‌ ಮಾತ್ರ ಆ ಕೆಲಸಕ್ಕೆ ಕೈಹಾಕಬಲ್ಲ. ಇಂದು ಎಲ್ಲರ ಮನೆಯಲ್ಲಿ ಕಾರಲ್ಲಿ ಹೊಟೆಲಲ್ಲಿ ಗೌತಮನ ಪ್ರಶಾಂತ ಮೂರ್ತಿಯನ್ನು ಕಾಣಬಹುದು. ಅದೊಂದು ರೂಪಕ. ಸಾಮಾನ್ಯನು ತಾನು ತಲುಪಬೇಕಾದ ಸ್ಥಿತಿಯನ್ನು ಸದಾ ಕಣ್ಣೆದುರಿಟ್ಟುಕೊಂಡಿರುವ ರೂಪಕ. ಎಚ್ಚರಿಕೆಯ ಗಂಟೆ. ಹಾಗಾಗಿ ಬುದ್ಧ ಪುರ್ಣಿಮೆಯನ್ನು ಒಂದು ಮತವನ್ನಾಗಿ ನೋಡದೆ ಒಬ್ಬ ವ್ಯಕ್ತಿಯ ಹುಟ್ಟಿದ ದಿನವನ್ನಾಗಿ ನೋಡದೆ ಎಲ್ಲರೂ ಪ್ರಜ್ಞಾಪೂರ್ವಕವಾಗಿ ಅರ್ಥಪೂರ್ಣವಾಗಿ ಆಚರಿಸಬೇಕಾದ ದಿವಸ.

click me!