ಮನುಷ್ಯ ಜೀವನದಲ್ಲಿ ಉನ್ನತಿ ಕಾಣಲು ಗೊತ್ತು ಗುರಿಗಳಿರಬೇಕಿದ್ದು ಗುರಿ ಮತ್ತು ಗುರು ಇಲ್ಲದ ಜೀವನ ವ್ಯರ್ಥ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ತಿಪಟೂರು (ಜು.16) : ಮನುಷ್ಯ ಜೀವನದಲ್ಲಿ ಉನ್ನತಿ ಕಾಣಲು ಗೊತ್ತು ಗುರಿಗಳಿರಬೇಕಿದ್ದು ಗುರಿ ಮತ್ತು ಗುರು ಇಲ್ಲದ ಜೀವನ ವ್ಯರ್ಥ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ನಗರದ ಶ್ರೀ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಜರುಗಿದ ಆಷಾಢ ಮಾಸದ ಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ಜೀವನದಲ್ಲಿ ಏನೆಲ್ಲವನ್ನು ಸಾಧಿಸುವ ಛಲ ಹೊಂದಿದ್ದಾನೆ. ಮನುಷ್ಯ ನೀರು ಶುದ್ಧಿ ಮಾಡುವ, ಗಾಳಿ ಶುದ್ಧಿ ಮಾಡುವುದನ್ನು ಕಲಿತ. ಆದರೆ ತನ್ನನ್ನು ತಾನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೊಟ್ಟಮಾತು, ಇಟ್ಟನಂಬಿಕೆ ಸುಳ್ಳಾದರೆ ಆತನಿಗೆ ಯಾವುದೇ ಬೆಲೆ ಸಿಗುವುದಿಲ್ಲ. ಮುಖವಾಡದ ಬದುಕು ಮೂರು ದಿನವಾದರೆ ಬಣ್ಣದ ಬದುಕು ಆರು ದಿನ ಅಷ್ಟೆ. ಆದರೆ ನಿಯತ್ತಿನ ಬದುಕಿನಿಂದ ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯವಾಗುತ್ತದೆ. ಸಂಪತ್ತು ಉಳ್ಳಾತ ಶ್ರೀಮಂತನಲ್ಲ. ಸಂತಸ ಉಳ್ಳಾತನೇ ನಿಜವಾದ ಶ್ರೀಮಂತ ಎಂಬುದನ್ನು ನೆನಪಿಡಬೇಕಾಗುತ್ತದೆ. ಸತ್ಯದ ದಾರಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕಗಳು ಎದುರಾಗುತ್ತವೆ. ಅವುಗಳಿಗೆ ಅಂಜದೇ ಅಳುಕದೇ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟಬುತ್ತಿ. ಮನುಷ್ಯ ಎಷ್ಟೇ ಸಿರಿವಂತನಾದರೂ ಗುಣಕ್ಕೆ ಬೆಲೆ ಜಾಸ್ತಿ ಎಂದರು.
ಗೋ ಹತ್ಯೆ, ಮತಾಂತರ ನಿಷೇಧ ಕಾನೂನು ರದ್ದು ಬೇಡ: ರಂಭಾಪುರಿ ಶ್ರೀ
ಯಡಿಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಬುದ್ಧಿವಂತನಾದಂತೆ ಧರ್ಮ ಸಂಸ್ಕೃತಿ ಆದರ್ಶಗಳನ್ನು ಮರೆಯುತ್ತಿದ್ದಾನೆ. ಜನ್ಮ ಕೊಟ್ಟತಾಯಿ, ಜೀವನ ಪಾಠ ಕಲಿಸಿದ ತಂದೆ, ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಮತ್ತು ಅರಿವು ನೀಡುವ ಗುರುವನ್ನು ಎಂದಿಗೂ ಮರೆಯಬಾರದೆಂದರು.
ಹೊನ್ನವಳ್ಳಿ ರಂಭಾಪುರಿ ಶಾಖಾ ಮಠದ ಶಿವಪ್ರಕಾಶ ಶಿವಾಚಾರ್ಯರು ನಾಂದಿ ನುಡಿ ಸೇವೆ ಸಲ್ಲಿಸಿದರು. ಕಂಚಾಘಟ್ಟಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಅಂಬಲದೇವರಹಳ್ಳಿ ಉಜನೀಶ್ವರ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಲೋಕೇಶ್ವರ, ಶಿವಶಂಕರ್, ರುದ್ರಮುನಿಸ್ವಾಮಿ, ನ್ಯಾಯವಾದಿ ಜಿ.ನಂದಕುಮಾರ್, ಎಚ್.ಎನ್.ಗಂಗಾಧರ ಮತ್ತಿತರರಿದ್ದರು.
ಸೇವಾ ಸಲ್ಲಿಸಿದ ದಾನಿಗಳಿಗೆ ಮತ್ತು ಗಣ್ಯರಿಗೆ ರಂಭಾಪುರಿ ಜಗದ್ಗುರು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಟಿ.ಎಸ್.ಶಿವಪ್ರಸಾದ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಪ್ರಾರ್ಥಿಸಿದರು. ವಕೀಲೆ ಶೋಭಾ ಜಯದೇವ ನಿರೂಪಿಸಿದರು. ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮೂಹಕ್ಕೆ ಶುಭ ಹಾರೈಸಿದರು.
ಸನಾತನ ಧರ್ಮದ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಿ: ಡಾ.ವೀರಸೋಮೇಶ್ವರ ಜಗದ್ಗುರುಗಳು
ಲೋಕೇಶ್ವರ್‌ಗೆ ಉತ್ತಮ ಸ್ಥಾನ ಸಿಗಲಿ: ಶ್ರೀ
ತಿಪಟೂರು ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ ಅವರು ವಿಧಾನಸಭೆಗೆ ನಡೆದ ಚುನಾವಣಾ ಸ್ಪರ್ಧೆಯಲ್ಲಿ ತಮಗಿದ್ದ ಅವಕಾಶವನ್ನು ತ್ಯಾಗ ಮಾಡಿ, ಪಕ್ಷದ ಕೆ. ಷಡಕ್ಷರಿಯವರನ್ನು ಶಾಸಕರಾಗಿ ಗೆಲ್ಲಿಸಲು ಪ್ರಾಮಾಣಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಶಾಸಕರಾಗಿ ಚುನಾಯಿತರಾಗಿರುವ ಕೆ. ಷಡಕ್ಷರಿಯವರು, ಲೋಕೇಶ್ವರ ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಲಿಗಳಲ್ಲಿ ಉತ್ತಮ ಸ್ಥಾನಮಾನ ಸಿಗುವಂತೆ ಪಕ್ಷಕ್ಕೆ ಹಾಗೂ ಮುಖಂಡರಿಗೆ ಒತ್ತಡ ಹಾಕಬೇಕಾಗಿದೆ. ಉತ್ತಮ ನಾಯಕರು ಹಾಗೂ ಸಮಾಜಸೇವೆಗೆ ತಮ್ಮನ್ನೇ ಮುಡಿಪಾಗಿಟ್ಟುಕೊಂಡಿರುವ ಲೋಕೇಶ್ವರ ಅವರ ಪರ ನಾನೂ ಸಹ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟು ಉತ್ತಮ ಸ್ಥಾನಮಾನ ನೀಡಲು ಒತ್ತಡ ತರುತ್ತೇನೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.