'ನಾನು ಇಂದಿರಾ ಸೊಸೆ, ಯಾರಿಗೂ ಹೆದರುವುದಿಲ್ಲ': ಇ.ಡಿ. ಸಮನ್ಸ್‌ ಬೆನ್ನಲ್ಲೇ ಸೋನಿಯಾ ಗಾಂಧಿ ಹಳೆ ವೀಡಿಯೊ ವೈರಲ್

By Suvarna News  |  First Published Jun 9, 2022, 4:17 PM IST

ಸೋನಿಯಾ ಗಾಂಧಿಯವರ ವೈರಲ್ ವೀಡಿಯೊ ಕುರಿತಾದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ವೈರಲ್ ಆಗಿರುವ ವಿಡಿಯೋ ಸುಮಾರು 7 ವರ್ಷ ಹಳೆಯದು. ಇಡಿ ಇತ್ತೀಚೆಗೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದ ನೋಟಿಸ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ


ನವದೆಹಲಿ (ಜೂ. 09): ಕಾಂಗ್ರೆಸ್‌ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ (Rahul Gandgi) ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನೋಟಿಸ್‌ ಜಾರಿಗೊಳಿಸಿದೆ. ಸೋನಿಯಾ ಅವರಿಗೆ ಜೂ.8ಕ್ಕೆ ಹಾಜರಾಗಲು ಹಾಗೂ ರಾಹುಲ್‌ ಅವರಿಗೆ ಜೂನ್‌ 2ರ ಗುರುವಾರವೇ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಲಾಗಿತ್ತು. ಆದರೆ ಕೋವಿಡ್‌ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿಚಾರಣೆಗಾಗಿ 3 ವಾರಗಳ ಕಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. 

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಸೋನಿಯಾ ಗಾಂಧಿ, "ನಾನು ಇಂದಿರಾ ಗಾಂಧಿಯವರ (Indira Gandhi) ಸೊಸೆ, ಯಾರಿಗೂ ಹೆದರುವುದಿಲ್ಲ" ಎಂದು ಹೇಳುತ್ತಿದ್ದಾರೆ. ಇ.ಡಿ ನೋಟಿಸ್ ನೀಡಿದ ನಂತರ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ವೈರಲ್‌ ವಿಡಿಯೋವೊಂದಿಗೆ ಬರೆಯಲಾಗಿದೆ. 

Tap to resize

Latest Videos

undefined

ಆದರೆ ಫ್ಯಾಕ್ಟ್‌ ಚೆಕ್‌ನಲ್ಲಿ ಈ ವಿಡಿಯೋ ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ತಿಳಿದುಬಂದಿದೆ. ವೀಡಿಯೊ ಸುಮಾರು 7 ವರ್ಷಗಳಷ್ಟು ಹಳೆಯದಾಗಿದ್ದು, ಇಡಿ ಇತ್ತೀಚೆಗೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದ ನೋಟಿಸ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. 

Claim: ಸೋನಿಯಾ ಗಾಂಧಿಯವರ ಈ ವೀಡಿಯೊವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ ಮತ್ತು "ಸಾರ್ವಜನಿಕ ಖಜಾನೆಯಿಂದ ಕಳ್ಳತನ ಮಾಡಿದ್ದಕ್ಕಾಗಿ ಇಡಿ ಸೋನಿಯಾರನ್ನು ವಿಚಾರಣೆಗೆ ಕರೆದಾಗ, ಸೋನಿಯಾ ನಾನು ಇಂದಿರಾ ಅವರ ಸೊಸೆ ಎಂದು ಹೇಳಿದರು" ಎಂದು ಬರೆಯಲಾಗಿದೆ. 

"ಕೆಲವು ಬೀದಿ ಕಳ್ಳರು ಕಳ್ಳತನ ಮಾಡಿದಾಗ, ಪೊಲೀಸರು ಹಿಡಿಯಲು ಬಂದಾಗ, ನನ್ನ ಚಿಕ್ಕಪ್ಪ ಎಂಎಲ್ಎ- ಅಂಕಲ್ ಮಂತ್ರಿ ಎಂದು ಹೇಳುತ್ತಾರೆ, ಅದೇ ರೀತಿ ಸರ್ಕಾರದ ಖಜಾನೆಯಿಂದ ಕದ್ದಿದ್ದಕ್ಕಾಗಿ ಇ.ಡಿ ಸೋನಿಯಾರನ್ನು ವಿಚಾರಣೆಗೆ ಕರೆದಾಗ, ಸೋನಿಯಾ ನಾನು ಇಂದಿರಾ ಅವರ ಮಗಳು ಎಂದು ಹೇಳಿದ್ದಾರೆ" ಎಂದು ಹಿಂದಿಯಲ್ಲಿ ವಿಡಿಯೋ ಶಿರ್ಷಿಕೆಯಲ್ಲಿ ಬರೆಯಲಾಗಿದೆ. ಇದೇ ವಿಡಿಯೋವನ್ನು ವಿವಿಧ ಶಿರ್ಷಿಕೆಗಳೊಂದಿಗೆ ಹಲವರು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಮತ್ತು ನೋಡಬಹುದು. 

Fact Check: ವೈರಲ್ ವೀಡಿಯೊದ ಹಿಂದಿನ ಅಸಲಿಯತ್ತು ತಿಳಿಯಲು, ನಾವು ಹಲವಾರು ಕೀವರ್ಡ್‌ಗಳನ್ನು ಬಳಸಿಕೊಂಡು  ಗೂಗಲ್‌ ಸರ್ಚ್‌ ಮಾಡಿದಾಗ ನವಭಾರತ್ ಟೈಮ್ಸ್ (Navbharat Times) ವೆಬ್‌ಸೈಟ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದು 8 ಡಿಸೆಂಬರ್, 2015 ರಂದು ಪ್ರಕಟವಾಗಿದೆ. ವರದಿಯ ಪ್ರಕಾರ, ಸೋನಿಯಾ ಗಾಂಧಿ 2015 ರಲ್ಲಿ ಇದನ್ನು ಹೇಳಿದ್ದರು. ದೆಹಲಿಯ ವಿಚಾರಣಾ ನ್ಯಾಯಾಲಯವು ತನ್ನ ಮತ್ತು ರಾಹುಲ್ ಗಾಂಧಿ ಮತ್ತು ಇತರ ಐವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಾಜರಾಗುವಂತೆ ಕೇಳಿತ್ತು. 

ಆದರೆ ಸಮನ್ಸ್ ರದ್ದುಗೊಳಿಸುವಂತೆ ಕಾಂಗ್ರೆಸ್ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿತ್ತು, ಆದರೆ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು. ನ್ಯಾಯಾಲಯದಲ್ಲಿ ಕಾಂಗ್ರೆಸ್ ನಾಯಕರು ವಂಚಿಸಿದ್ದಾರೆ ಎಂದು ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದರು. ಇತರ ಹಲವು ಸುದ್ದಿ ವೆಬ್‌ಸೈಟ್‌ಗಳು ಕೂಡ ಈ ಸುದ್ದಿಯನ್ನು ಪ್ರಕಟಿಸಿವೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧಿಕೃತ ಯುಟ್ಯೂಬ್ ಚಾನಲ್‌ನಲ್ಲಿ ಕೂಡ ನಾವು ಈ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಇದನ್ನು 8ನೇ ಡಿಸೆಂಬರ್ 2015 ರಂದು ಅಪ್‌ಲೋಡ್ ಮಾಡಲಾಗಿದೆ. ಅದೇ ಮಾಹಿತಿಯನ್ನು ಶೀರ್ಷಿಕೆ ಮತ್ತು ವಿವರಣೆಯಲ್ಲಿ ನೀಡಲಾಗಿದೆ. ಎನ್‌ಡಿಟಿವಿ (NDTV) ಕೂಡ ಇದೇ ವರದಿಯನ್ನು ಪ್ರಕಟಿಸಿತ್ತು

Conclusion: ಹೀಗಾಗಿ ಸೋನಿಯಾ ಗಾಂಧಿಯವರ ವೈರಲ್ ವೀಡಿಯೊ ಕುರಿತಾದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಕಂಡುಬಂದಿದೆ. ವೈರಲ್ ಆಗಿರುವ ವಿಡಿಯೋ ಸುಮಾರು 7 ವರ್ಷ ಹಳೆಯದು. ಇಡಿ ಇತ್ತೀಚೆಗೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದ ನೋಟಿಸ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ: ಬಿಜೆಪಿ ಕಚೇರಿಯಿಂದಲೇ 'ಸಾಮ್ರಾಟ್ ಪೃಥ್ವಿರಾಜ್' ಪ್ರಮೋಷನ್? ಅಕ್ಷಯ್-ಶಾ ವೈರಲ್‌ ಫೋಟೋ ಸತ್ಯಾಂಶವೇನು?

ಇದನ್ನೂ ಓದಿ: 'ಗೋ ಬ್ಯಾಕ್‌ ಮೋದಿ' ಎಂದ ತಮಿಳುನಾಡು ಬಿಜೆಪಿ ಶಾಸಕಿ? ಇಲ್ಲಿದೆ ವೈರಲ್‌ ಫೋಟೋ ಅಸಲಿ ಕಹಾನಿ

click me!