Fact Check: ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

By Suvarna News  |  First Published Dec 29, 2021, 5:27 PM IST

ತಿರುಪತಿ ದೇವಾಲಯದ ಪುರೋಹಿತರೊಬ್ಬರ ಮನೆಗೆ ಐಟಿ ಅಧಿಕಾರಿಗಳು  ದಾಳಿ ಮಾಡಿದಾಗ  ಅಪಾರ ಪ್ರಮಾಣ ಆಸ್ತಿ ಪತ್ತೆಯಾಗಿದೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ. ಆದರೆ 2016 ರ ಹಳೆಯ ಪ್ರಕರಣವನ್ನು ವೆಲ್ಲೂರು ಪೊಲೀಸರು ಇತ್ತೀಚಿನ ಕಾರ್ಯಾಚರಣೆ ಛಾಯಾಚಿತ್ರ ಹಾಗೂ ವಿಡಿಯೋ ಜತೆ ಲಿಂಕ್ ಮಾಡುವ ಮೂಲಕ ಇತ್ತೀಚಿನ ಪ್ರಕರಣವೆಂದು ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.


Fact Check: ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ (Tirupati Temple) ಕೂಡ ಒಂದು. ದೇಶದ ವಿವಧ ರಾಜ್ಯಗಳಿಂದ ಪ್ರತಿವರ್ಷ ಲಕ್ಷಾಂತರ ಜನ ಈ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ದೇಶದಲ್ಲೇ ಅತ್ಯಂತ ಶ್ರೀಮಂತ ಎಂದು ಹೇಳಲಾಗುವ ದೇವಸ್ಥಾನದಲ್ಲಿರುವ ಆಸ್ತಿ-ಪಾಸ್ತಿ ರಕ್ಷಣೆ ಮಾಡುವುದು ಸಾಹಾಸವೇ ಸರಿ. ಆದರೆ ತಿರುಪತಿ ದೇವಾಲಯದ ಪುರೋಹಿತರೊಬ್ಬರ ಮನೆಗೆ ಐಟಿ ಅಧಿಕಾರಿಗಳು  ದಾಳಿ ಮಾಡಿದಾಗ  ಅಪಾರ ಪ್ರಮಾಣ ಆಸ್ತಿ ಪತ್ತೆಯಾಗಿದೆ ಎಂದು ಹೇಳುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ.

ತಿರುಮಲ ತಿರುಪತಿ ದೇವಸ್ಥಾನದ (TTD) ಮಂಡಳಿಯ ಸದಸ್ಯ ಜೆ ಶೇಖರ್ ರೆಡ್ಡಿ (J Sekhar Reddy) ಅವರಿಂದ ಇದನ್ನು ವಸೂಲಿ ಮಾಡಲಾಗಿದೆ ಎಂದು ಕೆಲವರು ಹೇಳಿದ್ದರೇ ಇನ್ನೂ ಕೆಲವರು ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆ ಮೇಲೆ ದಾಳಿ ನಡೆದಾಗ ಸಿಕ್ಕಿರುವ ಹಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬಾರಿ ಹಂಚಿಕೊಳ್ಳಲಾಗಿದೆ. ಆದರೆ ಇದು ಜನರನ್ನು ದಾರಿ ತಪ್ಪಿಸಯವ ಮಾಹಿತಿಯಾಗಿದ್ದು  ವಿಡಿಯೋ ಮತ್ತು ಫೋಟೊಗೂ ಹಾಗೂ ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಡಲಾಗಿರುವ ಸಂದೇಶಕ್ಕೂ ಸಂಬಂಧವಿಲ್ಲ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.  

Latest Videos

Claim

1)"ಆತ್ಮೀಯ ಸ್ನೇಹಿತರೇ, ಇವರು ತಿರುಪತಿ ತಿರುಮಲ ದೇವಸ್ಥಾನದ 17 ಟ್ರಸ್ಟಿಗಳಲ್ಲಿ ಒಬ್ಬರಾದ ಶ್ರೀ ಜೆ ಶೇಖರ್ ರೆಡ್ಡಿ. ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 60 ಕೋಟಿ ಮೌಲ್ಯದ 127 ಕೆಜಿ ಚಿನ್ನದ ಬಿಸ್ಕೆಟ್, ವಜ್ರ ಸೇರಿದಂತೆ 106 ಕೋಟಿ ನಗದು ವಶ! ಟಿಟಿಡಿಯ ಇತರ 16 ಟ್ರಸ್ಟಿಗಳ ಕತೆ ಏನು? ನೀವು ದಾನ ಮಾಡುವ ಮೊದಲು ಯೋಚಿಸಿ! ಒಂದೋ ಅದನ್ನು ಮತಾಂತರಕ್ಕಾಗಿ ಅಥವಾ ವೈಯಕ್ತಿಕ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ" ಎಂದು ಆಂಗ್ಲ ಭಾಷೆಯಲ್ಲಿ ಸಂದೇಶಗಳನ್ನು ಹರಿಬಿಡಲಾಗಿದೆ

2) "ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ , ಹಾಗೂ ವಜ್ರ ಎಷ್ಟು ಗೊತ್ತಾ ???128 ಕೆಜಿ ಚಿನ್ನ , 150 ಕೋಟಿ ಕ್ಯಾಶ್ , 70 ಕೋಟಿ ಬೆಲೆಯ ವಜ್ರ .ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ. ಹಣ , ಚಿನ್ನ , ವಜ್ರ ದೇವರಿಗೆ ಬೇಕೇ ??ಒಬ್ಬರ ಹತ್ತಿರ ಇಷ್ಟು ಸಿಕ್ಕಿದೆ ಅಂದಮೇಲೆ , ಇನ್ನು ಉಳಿದ 15 ಪುರೋಹಿತರ ಮನೆಯಲ್ಲಿ ಎಷ್ಟು ಇರಬಹುದು ??" ಎಂದು ವಿಡಿಯೋ ಹಾಗೂ ಫೋಟೊಗಳ ಜತೆಗೆ ಕನ್ನಡಲ್ಲಿಯೇ ಶೇರ್‌ ಮಾಡಲಾಗಿದೆ.

ಇದೇ ರೀತಿಯ ಫೊಸ್ಟ್‌ ಹಾಗೂ ಸಂದೇಶಗಳನ್ನು ಸಾಮಾಜಿಕ ಜಲಾತಾಣಗಳಲ್ಲಿ ಹಲವು ಬಾರಿ ಶೇರ್‌ ಮಾಡಲಾಗಿದೆ. ಈ ಫೊಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. . ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಅಪ್‌ಲೋಡ್‌ ಮಾಡಲಾಗಿದೆ. ಅವುಗಳನ್ನು ನೀವು ನೋಡಬಹುದು.

 

Fact Check:

ಇತ್ತೀಚೆಗೆ ವೆಲ್ಲೂರಿನಲ್ಲಿ ಜೋಸ್ ಅಲುಕ್ಕಾಸ್ ಆಭರಣ ಅಂಗಡಿಯಿಂದ 15 ಕೆಜಿಗೂ ಹೆಚ್ಚು ಚಿನ್ನವನ್ನು ಕಳವು ಮಾಡಲಾಗಿತ್ತು. ಇದಾದ ಬಳಿಕ ಪೊಲೀಸರು  ವಶಪಡಿಸಿಕೊಂಡ ಫೋಟೋಗಳನ್ನು ಪುರೋಹಿತರ ಮನೆಗೆ ತೆರಿಗೆ ವಿಭಾಗದ ಅಧಿಕಾರಿಗಳು ರೈಡ್‌ ಮಾಡಿದ ವಿಡಿಯೋ ಎಂದು ಹಂಚಿಕೊಳ್ಳಲಾಗಿದೆ. ಆದರೆ ಜೆ ಶೇಖರ್  ರೆಡ್ಡಿಗೆ ಸೇರಿದ ಆಸ್ತಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ ವಶಪಡಿಸಿಕೊಂಡಿದ್ದು ನಿಜ, ಆದರೆ ಆ ಘಟನೆ ನಡೆದಿದ್ದು 2016ರಲ್ಲಿ. ಹಾಗಾಗಿ 2016 ರ ಹಳೆಯ ಪ್ರಕರಣವನ್ನು ವೆಲ್ಲೂರು ಪೊಲೀಸರು ಇತ್ತೀಚಿನ ಕಾರ್ಯಾಚರಣೆ ಛಾಯಾಚಿತ್ರಗಳೊಂದಿಗೆ ಲಿಂಕ್ ಮಾಡುವ ಮೂಲಕ ಇತ್ತೀಚಿನ ಪ್ರಕರಣವೆಂದು ಹಂಚಿಕೊಳ್ಳಲಾಗಿದೆ.

ಶೇಖರ್ ರೆಡ್ಡಿ ಯಾರು?

ಡಿಸೆಂಬರ್ 2016 ರಲ್ಲಿ ಪ್ರಕಟವಾದ ವರದಿಗಳಗನ್ನು ಗಮನಿಸಿದಾಗ, ಅದು ರೆಡ್ಡಿಗೆ ಸೇರಿದ ಆಸ್ತಿಯ ಮೇಲೆ ನಡೆಸಿದ ದಾಳಿಯ ಬಗ್ಗೆ  ಹೇಳುತ್ತದೆ. 9 ಡಿಸೆಂಬರ್ 2016 ರಂದು ಡೆಕ್ಕನ್ ಕ್ರಾನಿಕಲ್‌ನಲ್ಲಿ ಪ್ರಕಟವಾದ ವರದಿಯು, "ಚೆನ್ನೈನಲ್ಲಿ ಆದಾಯ ತೆರಿಗೆ ದಾಳಿಯಲ್ಲಿ 100 ಕೋಟಿ ರೂಪಾಯಿ ನಗದು, 120 ಕೆಜಿ ಚಿನ್ನ ವಶಪಡಿಸಿಕೊಂಡಿದೆ" ಎಂದು ಖಚಿತಪಡಿಸುತ್ತದೆ. ಈ ವರದಿಯನ್ನು ನೀವು ಇಲ್ಲಿ ಓದಬಹುದು. 

"ಟಿಟಿಡಿ ಮಂಡಳಿಯ ಸದಸ್ಯ ಜೆ ಶೇಖರ್ ರೆಡ್ಡಿ ಒಡೆತನದ ನಿವಾಸಗಳು ಮತ್ತು ಕಚೇರಿಗಳಿಂದ" ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ. ರೆಡ್ಡಿ ಅವರ ನಿವಾಸದಲ್ಲಿ ಹೊಸದಾಗಿ ಬಿಡುಗಡೆಯಾದ 2,000 ರೂಪಾಯಿ ನೋಟುಗಳಲ್ಲಿ ಕೋಟಿಗಟ್ಟಲೆ ನಗದು ಸಿಕ್ಕಿದ್ದರಿಂದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಈ ಬಗ್ಗೆ ಇಂಡಿಯಾ ಟುಡೆ (India Todya) ಮಾಡಿರುವ ವರದಿಯನ್ನು ನೀವು ಇಲ್ಲಿ ಗಮನಿಸಬಹುದು.

ಆದಾಗ್ಯೂ, ಸೆಪ್ಟೆಂಬರ್ 2020 ರಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ ರೆಡ್ಡಿ ಮತ್ತು ಅವರ ಕೆಲವು ಸಹಚರರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತ್ತು.  2019 ರಲ್ಲಿ, ಆಂಧ್ರ ಪ್ರದೇಶ ಸರ್ಕಾರದಿಂದ ವಿಶೇಷ ಆಹ್ವಾನಿತರಾಗಿ ನಾಮನಿರ್ದೇಶನಗೊಂಡ ನಂತರ ಅವರು ಮತ್ತೆ ಟಿಟಿಡಿ ಮಂಡಳಿಗೆ ಮರಳಿದ್ದರು. ದಾಳಿ ಮತ್ತು ಬಂಧನದ ನಂತರ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿತ್ತು.

ಹಾಗಾದ್ರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಯಾವುದು?

ಸೋಷಿಯಲ್‌ ಮೀಡಿಯಾಗಳಲ್ಲಿ  ಹರಿದಾಡುತ್ತಿರುವ  ಆಭರಣಗಳನ್ನು ತೋರಿಸುವ  ವಿಡಿಯೋ ಹಾಗೂ ಫೋಟೋಗಳು  ವೆಲ್ಲೂರು ಪೊಲೀಸರು ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಗೆ ಸಂಬಂಧಪಟ್ಟಿವೆ.  ವರದಿಯ ಪ್ರಕಾರ, ತಮಿಳುನಾಡಿನ ವೆಲ್ಲೂರಿನಲ್ಲಿರುವ ಜೋಸ್ ಅಲುಕ್ಕಾಸ್ (Jos Alukkas) ಆಭರಣ ಮಳಿಗೆಯೊಂದಕ್ಕೆ ಕೆಲವು ಅಪರಿಚಿತರು ನುಗ್ಗಿ 8 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 15 ಕೆಜಿ ಚಿನ್ನಾಭರಣವನ್ನು ಕದ್ದಿದ್ದಾರೆ. ಅಪರಾಧಿಗಳಲ್ಲಿ ಒಬ್ಬನನ್ನು ವೆಲ್ಲೂರು ಪೊಲೀಸರು ಸೋಮವಾರ, ಡಿಸೆಂಬರ್ 20 ರಂದು ಬಂಧಿಸಿದ್ದಾರೆ ಮತ್ತು 15.9 ಕೆಜಿ ಕದ್ದ ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯು ಬಂಧಿತ ವ್ಯಕ್ತಿಯನ್ನು ಪಳ್ಳಿಕೊಂಡದ ಕೂಚಿಪಾಳ್ಯಂನ ಟೀಕಾರಾಮನ್ (Teekaraman) ಎಂದು ಗುರುತಿಸಿದೆ, ಅವರು ಮೇಸ್ತ್ರಿಯಾಗಿದ್ದು  ಅವರ ವಿರುದ್ಧ ದ್ವಿಚಕ್ರ ವಾಹನ ಮತ್ತು ಲ್ಯಾಪ್‌ಟಾಪ್ ಕಳ್ಳತನದ ಪ್ರಕರಣಗಳು ಕೂಡ ದಾಖಲಾಗಿವೆ. ಈ ಬಗ್ಗೆ News18 TamilNadu ವರದಿಯನ್ನು ನೀವು ಇಲ್ಲಿ ನೋಡಬಹುದು.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ "ಜೆ ಶೇಖರ್ ರೆಡ್ಡಿ. ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ" ಎಂದು ಹೇಳಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳು ತಪ್ಪು ಮಾಹಿತಿಯನ್ನು ರವಾನಿಸುತ್ತಿವೆ. ಜೆ ಶೇಖರ್  ರೆಡ್ಡಿಗೆ ಸೇರಿದ ಆಸ್ತಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ ವಶಪಡಿಸಿಕೊಂಡಿದ್ದು ನಿಜ ಆದರೆ ಆ ಘಟನೆ ನಡೆದದ್ದು 2016ರಲ್ಲಿ ಮತ್ತು ವೈರಲ್‌ ಆಗಿರುವ ವಿಡಿಯೋ 2021ರದ್ದು ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.

click me!