Fact Check: 'ಕೊರೋನಾಗೆ ಬಲಿಯಾದವ್ರಿಗೆ ಸರ್ಕಾರಿ ಪರಿಹಾರ ಇಲ್ಲ'

By Kannadaprabha NewsFirst Published May 30, 2021, 7:56 AM IST
Highlights

* 4 ಲಕ್ಷ ರು. ಪರಿಹಾರ ಸಿಗುತ್ತೆ ಎಂಬುದೆಲ್ಲಾ ಸುಳ್ಳು
* ಪರಿಹಾರ ಆದೇಶ 2020ರಲ್ಲೇ ಹಿಂಪಡೆದಿದೆ ಸರ್ಕಾರ
* ಆಕಸ್ಮಿಕ ಅಥವಾ ದುರಂತದಲ್ಲಿ ಮೃತದಾದವರಿಗೆ ಮಾತ್ರ ಪರಿಹಾರ 
 

ಬೆಂಗಳೂರು(ಮೇ.30): ಕೊರೋನಾ ಸೋಂಕಿನಿಂದ ಮೃತರಾದ ಪ್ರತಿಯೊಬ್ಬರ ಕುಟುಂಬಗಳಿಗೆ ತಲಾ 4 ಲಕ್ಷ ರು. ಪರಿಹಾರ ನೀಡುವ ಆದೇಶವನ್ನು ಜಾರಿ ಮಾಡಿದ ದಿನದಂದೇ ಹಿಂಪಡೆಯಲಾಗಿದೆ. ಹೀಗಾಗಿ ಮೃತ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ ಎಂಬ ಸಂದೇಶಗಳು ಸತ್ಯಕ್ಕೆ ದೂರವಾದವು ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.

‘ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೊರೋನಾದಿಂದ ಮೃತರಾದವರ ಕುಟುಂಬಗಳಿಗೆ ತಲಾ 4 ಲಕ್ಷ ರು. ವನ್ನು ರಾಜ್ಯ ಸರ್ಕಾರ ನೀಡಲಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್‌) ಪರಿಹಾರ ನೀಡುವಂತೆ ಆದೇಶಿಸಿದೆ’ ಎಂಬ ಆದೇಶ ಪ್ರತಿ ವೈರಲ್‌ ಆಗುತ್ತಿದೆ. ಅಲ್ಲದೆ, ಮೃತರ ಕುಟುಂಬದ ಸದಸ್ಯರು ಸಲ್ಲಿಸಬೇಕಾದ ಅರ್ಜಿ ನಮೂನೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಬಗ್ಗೆ ‘ಕನ್ನಡಪ್ರಭ’ ಪರಿಶೀಲಿಸಿದಾಗ, ಕೇಂದ್ರ ಸರ್ಕಾರವು 2020ರ ಮಾಚ್‌ರ್‍ನಲ್ಲಿ ಇಂತಹ ಆದೇಶ ಮಾಡಿದ್ದು ಸತ್ಯ ಎಂಬುದು ತಿಳಿದುಬಂದಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವರಿಗೆ ವಿಪತ್ತು ನಿರ್ವಹಣಾ ಕಾಯಿದೆ 2015ರ ನಿಯಮಗಳ ಅಡಿ 4 ಲಕ್ಷ ರು. ಪರಿಹಾರ ನೀಡುವಂತೆ ಹಾಗೂ ಇದಕ್ಕೆ ಎಸ್‌ಡಿಆರ್‌ಎಫ್‌ ನಿಧಿ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪತ್ರ ಬರೆದಿತ್ತು.

Fact Check : ‘ಕೋವಿಪ್ರಿ’ಗೆ ರೆಮ್‌ಡಿಸಿವಿರ್‌ಗೆ ಪರ್ಯಾಯ, ಸುರಕ್ಷಿತವೇ.?

ಈ ಆದೇಶ ಮಾಡುವಾಗ ಕಲಬುರಗಿಯ ವೃದ್ಧ ಹಾಗೂ ದೆಹಲಿಯ ಜನಕಪುರಿಯಲ್ಲಿನ ಮಹಿಳೆ ಸೇರಿ ಎರಡು ಸಾವು ಮಾತ್ರ ದೇಶದಲ್ಲಿ ಸಂಭವಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದ ದಿನದಂದಲೇ ಹಿಂಪಡೆದಿತ್ತು. ಹೀಗಾಗಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಕರ್ನಾಟಕ ಸೇರಿದಂತೆ ಯಾವ ರಾಜ್ಯವೂ ಮಾಡುತ್ತಿಲ್ಲ. ಆಕಸ್ಮಿಕ ಅಥವಾ ದುರಂತದಲ್ಲಿ ಮೃತದಾದವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣ:

ಇದೇ ವೇಳೆ ಕೊರೋನಾ ಸೋಂಕಿನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಪರಿಹಾರ ನೀಡುವ ಸಂಬಂಧ ಸುಪ್ರೀಂಕೋರ್ಟ್‌ ಕೊರೋನಾದಿಂದ ಮೃತಪಟ್ಟವರಿಗೆ ಮರಣ ಪತ್ರ ನೀಡಲು ಏಕರೂಪದ ಮಾರ್ಗಸೂಚಿ ಅನುಸರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ಕುರಿತು ಇನ್ನೂ ಅಂತಿಮ ತೀರ್ಪು ಹೊರಬಿದ್ದಿಲ್ಲ ಎಂದು ತಿಳಿದುಬಂದಿದೆ.

ಕೊರೋನಾದಿಂದ ಮೃತಪಟ್ಟವರ ಅವಲಂಬಿತರಿಗೆ 4 ಲಕ್ಷ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರ 2020ರ ಮಾಚ್‌ರ್‍ನಲ್ಲಿ ಆದೇಶಿಸಿತ್ತು. ಆದರೆ, ಆದೇಶ ಹೊರಡಿಸಿದ ದಿನದಂದೇ ಅದನ್ನು ಹಿಂಪಡೆದಿದೆ. ಹೀಗಾಗಿ ಪ್ರಸ್ತುತ ಕೊರೋನಾ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ನಮ್ಮ ಮುಂದಿಲ್ಲ​ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.  
 

click me!