
ಬೆಂಗಳೂರು(ಆ.21): ಗೂಗಲ್ ಸಿಇಒ ಸುಂದರ್ ಪಿಚೈ 27 ವರ್ಷಗಳ ಬಳಿಕ ತಮಗೆ ಪಾಠ ಮಾಡಿದ್ದ ಗಣಿತ ಶಿಕ್ಷಕಿಯನ್ನು ನೆನಪಿಸಿಕೊಂಡು ಅವರನ್ನು ನೋಡಲು ಕರ್ನಾಟಕದ ಸಾಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದರು ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
6 ನಿಮಿಷಗಳ ವಿಡಿಯೋವನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ. ವಿಡಿಯೋದಲ್ಲಿ ಪೋಡಿಯಂನಲ್ಲಿ ನಿಂತ ವ್ಯಕ್ತಿಯೊಬ್ಬರು ತಮ್ಮ ಶಿಕ್ಷಕಿ ಮೊಲ್ಲಿ ಅಬ್ರಾಹಂ ಅವರನ್ನು ಭೇಟಿಯಾಗಲು ಎಷ್ಟುಕಾತುರನಾಗಿದ್ದೆ ಎನ್ನುವುದನ್ನು ವಿವರಿಸುತ್ತಾರೆ. ಮತ್ತು ಶಿಕ್ಷಕಿ ಇರುವ ಸ್ಥಳ ಮೈಸೂರು ಎಂದು ತಿಳಿದ ತಕ್ಷಣ ತಮ್ಮ ಪ್ರವಾಸ ಹೇಗಿತ್ತು ಎಂಬುದರ ವಿಡಿಯೋವನ್ನೂ ತೋರಿಸುತ್ತಾರೆ. ಇದನ್ನು ನೋಡಿದ ನೆಟ್ಟಿಗರು ಶಿಕ್ಷಕಿ ಮತ್ತು ಸುಂದರ್ ಪಿಚೈ ಅವರ ಮರು ಸಮ್ಮಿಲನವನ್ನು ಹಾಡಿ ಹೊಗಳಿದ್ದಾರೆ.
ಆದರೆ ನಿಜಕ್ಕೂ ಸುಂದರ್ ಪಿಚೈ 27 ವರ್ಷಗಳ ಬಳಿಕ ಮೈಸೂರಿನಲ್ಲಿ ಗಣಿತ ಶಿಕ್ಷಕರನ್ನು ಭೇಟಿಯಾದರೇ ಎಂದು ಬೂಮ್‌ಲೈವ್ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.
ಟರ್‌ನ್ಯಾಷನಲ್ ಕೆರಿಯರ್ ಆ್ಯಂಡ್ ಕೌನ್ಸೆಲಿಂಗ್ ಸಂಸ್ಥೆಯ ಸಂಸ್ಥಾಪಕ ಗಣೇಶ್ ಕೊಹ್ಲಿ ಎಂಬುವರು ತಮ್ಮ ಸಾಧನೆಗೆ ಕಾರಣಕರ್ತರಾದ ಗಣಿತ ಶಿಕ್ಷಕಿ ಮೊಲ್ಲಿ ಅಬ್ರಾಹಂ ಅವರನ್ನು 20 ವರ್ಷಗಳ ಬಳಿಕ ಭೇಟಿ ಆಗಿದ್ದರು. ಅದರ ವಿಡಿಯೋವನ್ನೂ ಮಾಡಿದ್ದರು. ಸದ್ಯ ಅದೇ ವಿಡಿಯೋ ಸುಂದರ್ ಪಿಚೈ ಅವರ ಹೆಸರನಲ್ಲಿ ಸಾಮಾಜಿಕ ಜಾಲಾಣಗಳಲ್ಲಿ ವೈರಲ್ ಆಗುತ್ತಿದೆ.