ಕೊರೋನಾ ಸೋಂಕು ಹರಡದಂತೆ ತಡೆಯಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ[ಮಾ.19]: ದಿನದಿಂದ ದಿನಕ್ಕೆ ಕೊರೋನಾ ವೈರಸ್ ಭೀತಿ ಹೆಚ್ಚುತ್ತಿದೆ. ಇಷ್ಟುದಿನ ಚೀನಾ ಕೊರೋನಾ ವೈರಸ್ ಕೇಂದ್ರ ಬಿಂದುವಾಗಿದ್ದು, ಇದೀಗ ಯುರೋಪ್ನಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಇತ್ತ ಭಾರತದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಈ ನಡುವೆ ಕೊರೋನಾ ಸೋಂಕು ಹರಡದಂತೆ ತಡೆಯಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲು ನಿರ್ಧರಿಸಿದ್ದಾರೆ. https://www.narendrmodiawasyaojna.in/?m=1 ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಸ್ಕ್ಗಳನ್ನು ಆರ್ಡರ್ ಮಾಡಿ ಎಂದು ಹಿಂದಿಯಲ್ಲಿ ಹೇಳಲಾದ ಸಂದೇಶ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ.
undefined
ಆದರೆ ನಿಜಕ್ಕೂ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲು ನಿರ್ಧರಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಏಕೆಂದರೆ ಈ ಸುದ್ದಿ ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಅಲ್ಲದೆ ಸ್ವಚ್ಛ ಭಾರತ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ರೀತಿಯ ಯಾವುದೇ ಮಾಹಿತಿ ಇಲ್ಲ.
ಜೊತೆಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೆಸರು, ಫೋನ್ ನಂಬರ್, ಪಿನ್‌ಕೋಡ್ ಮುಂತಾದ ವಿವರಗಳನ್ನು ಕೇಳುತ್ತದೆ. ಅನಂತರ ಇದನ್ನು 10 ವಾಟ್ಸ್ಆ್ಯಪ್ ಬಳಕೆದಾರರಿಗೆ ಕಳುಹಿಸುವುದು ಕಡ್ಡಾಯ ಎಂಬ ಸೂಚನೆ ಬರುತ್ತದೆ. ನಿಜಕ್ಕೂ ಸರ್ಕಾರಿ ವೆಬ್ಸೈಟ್ ಆಗಿದ್ದರೆ ಈ ರೀತಿ ಇರುವುದಿಲ್ಲ. ಜಾಹೀರಾತುಗಳ ಮೂಲಕ ಹಣ ಗಳಿಸಲು ನಕಲಿ ವೆಬ್ಸೈಟ್ ಸೃಷ್ಟಿಸಿ ಇಂತಹ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.