
ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್’, ‘ರಾಮಾಯಣ 1’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್ ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್ ವೇಗಾಸ್‌ನ ಸಿನಿಮಾಕಾನ್ 2026ನಲ್ಲಿ ಕಾಣಿಸಿಕೊಂಡು, ಅಲ್ಲಿ ನಡೆದ ಸರಣಿ ಸಂದರ್ಶನಗಳಲ್ಲಿ ಹೇಳಿದ ಪ್ರಮುಖ 6 ಅಂಶಗಳು ಇಲ್ಲಿವೆ.
1. ರಾಮಾಯಣ ಮೊದಲ ಭಾಗದಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಜೊತೆ ಮುಖಾಮುಖಿಯಾಗಿ ನಟಿಸಿಲ್ಲ.
2. ಒಬ್ಬ ನಟನಾಗಿ ನನಗೆ ಪಾತ್ರ ನಿರ್ವಹಿಸುವಾಗ ಆತಂಕ ಇರೋದಿಲ್ಲ. ಆದರೆ ರಾವಣನ ಪಾತ್ರ ಮಾಡಬೇಕು ಅಂದಾಗ ಕೊಂಚ ಬೆದರಿದೆ. ಭಾರತದ ಮೂಲೆ ಮೂಲೆಯ ಜನರಿಗೂ ರಾವಣ ಗೊತ್ತು. ಎಳೆಯ ಮಕ್ಕಳಿಗೆ ಕಥೆ ಹೇಳಲು ಶುರು ಮಾಡುವುದೇ ರಾಮಾಯಣದಿಂದ. ನೂರಾರು ಕಲಾಪ್ರಕಾರಗಳಲ್ಲಿ ಸಾವಿರಾರು ಬಗೆಯಲ್ಲಿ ರಾವಣನನ್ನು ತೋರಿಸಲಾಗಿದೆ. ಇಂಥಾ ದೈತ್ಯನನ್ನು ನನ್ನೊಳಗೆ ಆವಾಹಿಸಿಕೊಳ್ಳಬೇಕು ಅಂದಾಗ ಅದು ಬಹುದೊಡ್ಡ ಜವಾಬ್ದಾರಿ.
3. ಪ್ರತೀ ಪಾತ್ರಕ್ಕೂ ಅದರದೇ ದೃಷ್ಟಿಕೋನ ಇರುತ್ತದೆ. ಅಹಂಕಾರ ಮತ್ತು ಆತ್ಮವಿಶ್ವಾಸದ ನಡುವೆ ಇರುವುದು ಬಲು ತೆಳುವಾದ ಗೆರೆ. ಆ ಗೆರೆ ದಾಟುವ ಪಾತ್ರವಾಗಿ ನನಗೆ ರಾವಣ ಕಾಣುತ್ತಾನೆ. ಆತನ ಪಾತ್ರ ನಿರ್ವಹಿಸುವಾಗ ಸಣ್ಣ ಪ್ರಮಾದವಾದರೂ ಬಹುದೊಡ್ಡ ತಪ್ಪಾಗುತ್ತದೆ. ಬಹಳ ಎಚ್ಚರಿಕೆಯಿಂದ ಈ ಪಾತ್ರ ನಿರ್ವಹಿಸಿದ್ದೇನೆ.
4. ರಾಮಾಯಣ ಭಾರತದ ಸಿನಿಮಾ ಅಷ್ಟೇ ಅಲ್ಲ. ಇದು ಭಾರತದಿಂದ ಬರುತ್ತಿರುವ ಜಗತ್ತಿನ ಸಿನಿಮಾ. ಭಾರತೀಯ ಸಿನಿಮಾಗಳು ಜಾಗತಿಕ ಸಿನಿಮಾರಂಗದಲ್ಲಿ ನೆಲೆಯೂರಲು ಟಾಕ್ಸಿಕ್ ಹಾಗೂ ರಾಮಾಯಣಗಳು ಸೇತುವೆಯಾಗಲಿವೆ.
5. ಟಾಕ್ಸಿಕ್ ಒಂದು ಗ್ಯಾಂಗ್‌ಸ್ಟರ್ ಸಿನಿಮಾವೇ. ಆದರೆ ಇದು ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾಕ್ಕಿಂತ ಸಂಪೂರ್ಣ ಭಿನ್ನ. ಸಮಾಜದ ದೃಷ್ಟಿಯಲ್ಲಿ ವಿಲನ್‌ನಂತಿರುವ ವ್ಯಕ್ತಿಯ ಬದುಕಿನ ಕರಾಳ ಮುಖವನ್ನು ಇದು ಭಾವನಾತ್ಮಕವಾಗಿ, ಆಳವಾಗಿ, ತೀವ್ರವಾಗಿ ಹಾಗೇ ಮಾನವೀಯ ದೃಷ್ಟಿಕೋನದಲ್ಲಿ ಹೊಸ ಬಗೆಯಲ್ಲಿ ಪ್ರಸ್ತುತಪಡಿಸುತ್ತದೆ.
6. ಮನಸ್ಸಿನ ಸೂಕ್ಷ್ಮವನ್ನು ಲೇಯರ್‌ಗಳಾಗಿ ವಿವರಿಸುವ ಕಾರಣ ಟಾಕ್ಸಿಕ್ ಚಿತ್ರವನ್ನು ಸೈಕಲಾಜಿಕಲ್ ಥ್ರಿಲ್ಲರ್ ಥರದಲ್ಲೂ ನೋಡಬಹುದು. ಟಾಕ್ಸಿಕ್‌ನಲ್ಲಿ ಒರಿಜಿನಾಲಿಟಿ ಇದೆ. ಸಿದ್ಧ ಮಾದರಿಯ ಜನಪ್ರಿಯ ಸ್ಟೋರಿ ಟೆಲ್ಲಿಂಗ್ ತಂತ್ರಗಳನ್ನು ಮೀರಿದ್ದೇವೆ. ಇದು ಏಕಕಾಲಕ್ಕೆ ವಾಸ್ತವವೂ, ಕಲ್ಪನೆಯೂ ಎರಡೂ ಹೌದು. ದೊಡ್ಡವರ ಫೇರಿಟೇಲ್ ಅಂತ ನಾವು ಹೇಳಿದ್ದಕ್ಕೂ ಬಲವಾದ ಕಾರಣವಿದೆ.
7. ನನಗೆ ಮಾಮೂಲಿ ಹೀರೋ ಪಾತ್ರ ಮಾಡುವುದಕ್ಕಿಂತ ಡಾರ್ಕ್ ಶೇಡ್‌ನ ಅಂದರೆ ವ್ಯಕ್ತಿಯ ಕರಾಳ ವ್ಯಕ್ತಿತ್ವದ ಮೇಲೆ ಹೆಚ್ಚು ಫೋಕಸ್ ಆಗಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ಇಂಥಾ ಪಾತ್ರಗಳಲ್ಲಿ ನಟನೆಗೆ ಬೌಂಡರಿ ಇರೋದಿಲ್ಲ. ನಮ್ಮ ಪ್ರತಿಭೆ ತೋರಿಸಲು ಒಂದೊಳ್ಳೆ ಅವಕಾಶ ಇರುತ್ತದೆ.
8. ಟಾಕ್ಸಿಕ್ ಸಿನಿಮಾದಲ್ಲಿ ವಿಶ್ವಮಟ್ಟದ ತಂತ್ರಜ್ಞರಿದ್ದಾರೆ. ಗೀತು ಮೋಹನ್‌ದಾಸ್ ಅವರಂಥಾ ಸಿನಿಮಾದ ಕಥೆಯನ್ನು ಭಿನ್ನ ಬಗೆಯಲ್ಲಿ ನಿರೂಪಿಸುವ ನಿರ್ದೇಶಕರಿದ್ದಾರೆ. ರಾಷ್ಟ್ರದಲ್ಲಿ ಬಹಳ ಹೆಸರು ಮಾಡಿರುವ ಐವರು ನಾಯಕಿಯರಿದ್ದಾರೆ.
9. ಸುಮ್ಮನೆ ಒಂದು ಸಿನಿಮಾ ನೋಡಬೇಕು ಅಂತಿದ್ರೆ ಹಿಂದಿನ ಸಾಲಿನಲ್ಲಿ ಕೂತು ಚಿತ್ರ ನೋಡ್ತೇನೆ. ಪಾಪ್‌ಕಾರ್ನ್ ತಿನ್ನುತ್ತ ಸಿನಿಮಾ ಎನ್‌ಜಾಯ್ ಮಾಡುತ್ತೇನೆ. ಅದೇ ಒಬ್ಬ ಅಭಿಮಾನಿಯಾಗಿ ಚಿತ್ರವನ್ನು ನೋಡುವ ರೀತಿಯೇ ಬೇರೆ ಇರುತ್ತೆ. ಆಗ ಮುಂದಿನ ಸಾಲಿನಲ್ಲಿ ಕೂರುತ್ತೇನೆ. ಇಡೀ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತೇನೆ. ನಾಣ್ಯಗಳನ್ನು ಸ್ಕ್ರೀನ್ ಮೇಲೆ ಎಸೆಯುತ್ತ ಎಲ್ಲರೊಂದಿಗೆ ಮಜವಾಗಿ ಸಿನಿಮಾವನ್ನು ಆಸ್ವಾದಿಸುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.