
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತೆಲಂಗಾಣ ಶಾಸಕ ಮಲ್ಲಾರೆಡ್ಡಿ ಆಡಿದ ಮಾತುಗಳು ಇದೀಗ ಸ್ಯಾಂಡಲ್‌ವುಡ್ ಮಾತ್ರವಲ್ಲ, ಟಾಲಿವುಡ್‌ನಲ್ಲೂ ಭಾರಿ ಚರ್ಚೆಗೆ ಕಾರಣವಾಗಿವೆ. ಹೈದರಾಬಾದ್‌ನ ಗುಂಡ್ಲಪೋಚಂಪಲ್ಲಿಯಲ್ಲಿರುವ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು.
ವೇದಿಕೆಗೆ ಆಗಮಿಸಿದ ಶಾಸಕ ಮಲ್ಲಾರೆಡ್ಡಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಮಾತನಾಡಿ ಇಡೀ ಕಾರ್ಯಕ್ರಮದ ಗಮನ ಸೆಳೆದರು. ಯಶ್ ತಮ್ಮ ವಿಶ್ವವಿದ್ಯಾಲಯಕ್ಕೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “ಇವತ್ತು ನಮ್ಮ ಯೂನಿವರ್ಸಿಟಿಗೆ ಇಂಡಿಯಾದ ನಂಬರ್ 1 ಹೀರೋ ಬಂದಿದ್ದಾರೆ” ಎಂದು ಯಶ್ ಅವರನ್ನು ಹಾಡಿಹೊಗಳಿದರು. ‘ಟಾಕ್ಸಿಕ್’ ಚಿತ್ರದ ಕಾರ್ಯಕ್ರಮ ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೂ ಸಂತಸ ತಂದಿದೆ ಎಂದು ಹೇಳಿದರು.
ಕ್ರೌಡ್ ನೋಡಿ ಮಲ್ಲಾರೆಡ್ಡಿಗೂ ಭಯ!
ಕಾರ್ಯಕ್ರಮಕ್ಕೆ ಸೇರಿದ್ದ ಭಾರೀ ಜನಸ್ತೋಮವನ್ನು ಕಂಡು ಆರಂಭದಲ್ಲಿ ತಮಗೇ ಭಯವಾಗಿತ್ತು ಎಂಬುದನ್ನು ಮಲ್ಲಾರೆಡ್ಡಿ ಹಾಸ್ಯಭರಿತವಾಗಿ ಹೇಳಿಕೊಂಡರು. ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ವೆಂಕಟ್ ಅಣ್ಣ, ನನಗೆ ಮೊದಲು ಭಯ ಇತ್ತು. ಕ್ರೌಡ್ ನೋಡಿ ನಿಜಕ್ಕೂ ಭಯ ಆಗಿ ಈವೆಂಟ್ ಕ್ಯಾನ್ಸಲ್ ಅಂತ ಹೇಳಿಬಿಟ್ಟಿದ್ದೆ” ಎಂದು ಹೇಳಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಯಕ್ರಮ ನಡೆದ ಸ್ಥಳದ ಮಹತ್ವವನ್ನು ಪ್ರಸ್ತಾಪಿಸಿದ ಮಲ್ಲಾರೆಡ್ಡಿ, ಈ ಆವರಣ ಅತ್ಯಂತ ಪವಿತ್ರವಾಗಿದ್ದು, ಹಿಂದೆ ಇಲ್ಲಿ ಅಶ್ವಮೇಧ ಯಾಗ ನಡೆದಿತ್ತು ಎಂದು ಹೇಳಿದರು. ಹಾಗಾಗಿ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮವೂ ಶುಭ ಫಲ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಟಾಕ್ಸಿಕ್’ಗೆ 2,100 ಕೋಟಿ ರೂ. ಕಲೆಕ್ಷನ್?
ಆದರೆ ಮಲ್ಲಾರೆಡ್ಡಿ ಅವರ ಭಾಷಣದಲ್ಲಿ ಹೆಚ್ಚು ಗಮನ ಸೆಳೆದಿದ್ದು ‘ಟಾಕ್ಸಿಕ್’ ಸಿನಿಮಾದ ಬಾಕ್ಸಾಫೀಸ್ ಭವಿಷ್ಯವಾಣಿ! ಬಾಲಿವುಡ್‌ನ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ ಅವರು, ತಾವು ಆ ಚಿತ್ರದ ಕಲೆಕ್ಷನ್ ಬಗ್ಗೆ ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ ಎಂದು ಹೇಳಿದರು. ನಂತರ ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ ಮಲ್ಲಾರೆಡ್ಡಿ, “ಈ ಸಿನಿಮಾದಿಂದ 2,100 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತೆ. ನಿಮಗೆ ದುಡ್ಡೋ ದುಡ್ಡು ಆಗುತ್ತೆ” ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರಿಗೆ ಭರ್ಜರಿ ಭವಿಷ್ಯ ನುಡಿದರು. ‘ಅನಿಮಲ್’ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದಂತೆ, ‘ಟಾಕ್ಸಿಕ್’ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಾಷಣದ ಕೊನೆಯಲ್ಲಿ ಯಶ್ ಅವರನ್ನು ಪ್ರೀತಿಯಿಂದ ವೇದಿಕೆಗೆ ಆಹ್ವಾನಿಸಿದ ಮಲ್ಲಾರೆಡ್ಡಿ, ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಆಸೆಯನ್ನೂ ವ್ಯಕ್ತಪಡಿಸಿದರು. “ಯಶ್ ಅಣ್ಣ, ಒಂದು ಸಲ ಸ್ಟೇಜ್‌ಗೆ ಬನ್ನಿ ಅಣ್ಣ. ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬೇಕು. ನನ್ನ ಮಕ್ಕಳೆಲ್ಲ ನೋಡ್ತಾರೆ” ಎಂದು ಹೇಳಿದ ಅವರು, ಯಶ್ ಅವರನ್ನು ಮತ್ತೊಮ್ಮೆ ಹೊಗಳಿದರು. “ನೀವು ಇಂಡಿಯಾದಲ್ಲಿ ಬ್ಲಾಕ್‌ಬಸ್ಟರ್ ಮಾಡ್ತೀರ. ನಿಮ್ಮ ಹಾಗೆ ಹೀರೋನ ನಾನು ನೋಡಿಯೇ ಇಲ್ಲ” ಎಂದು ಯಶ್ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಸದ್ಯ ಮಲ್ಲಾರೆಡ್ಡಿ ಅವರ ಈ 2,100 ಕೋಟಿ ರೂ. ಕಲೆಕ್ಷನ್ ಭವಿಷ್ಯವಾಣಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ‘ಟಾಕ್ಸಿಕ್’ ನಿಜಕ್ಕೂ ಅವರು ಹೇಳಿದಷ್ಟು ದೊಡ್ಡ ಮೊತ್ತವನ್ನು ಗಳಿಸಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.