
ಬೆಂಗಳೂರು(ಅ. 21): ಕಾಲಿವುಡ್ ಮಾಸ್ ಹೀರೋ ವಿಜಯ್ ನಟನೆಯ 'ಮೆರ್ಸಲ್' ತಮಿಳು ಸಿನಿಮಾ ಸೂಪರ್'ಹಿಟ್ ಆಗುತ್ತಿದೆ; ಜೊತೆಜೊತೆಗೆ ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮೆರ್ಸಲ್ ಸಿನಿಮಾದಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಗಳನ್ನು ಲೇವಡಿ ಮಾಡಲಾಗಿದೆ ಎಂಬುದು ಬಿಜೆಪಿ ಪಕ್ಷದವರ ವಿರೋಧವಾಗಿದೆ. ಮೆರ್ಚಲ್ ಸಿನಿಮಾದಲ್ಲಿ ಜಿಎಸ್'ಟಿ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಟೀಕಿಸುವ ಕೆಲ ಸಂಭಾಷಣೆಗಳನ್ನು ಅಳಿಸಿಹಾಕಬೇಕೆಂದು ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಆಗ್ರಹಿಸಿದೆ. ಜಿಎಸ್'ಟಿ ವಿರುದ್ಧ ಸಿನಿಮಾದಲ್ಲಿ ಸುಳ್ಳುಗಳನ್ನು ಹೇಳಲಾಗಿದೆ. ನಿರ್ಮಾಪಕರು ಈ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಕೂಡ ಆಗ್ರಹಿಸಿದ್ದಾರೆ.
ಆದರೆ, 'ಮೆರ್ಸಲ್' ಸಿನಿಮಾ ತಂಡವು ಯಾವುದೇ ಕಾರಣಕ್ಕೂ ಸಂಭಾಷಣೆ ಅಥವಾ ದೃಶ್ಯಗಳನ್ನು ಕಟ್ ಮಾಡುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ದೀಪಾವಳಿಗೆ ಬಿಡುಗಡೆಯಾದ 'ಮೆರ್ಸಲ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ತಮಿಳುನಾಡು ರಾಜ್ಯವೊಂದರಲ್ಲೇ 22 ಕೋಟಿ ಬಾಚಿಕೊಂಡಿದೆ. ಈಗ ವಿವಾದದ ಧೂಳೂ ಎದ್ದಿರುವುದರಿಂದ ಮೊದಲ ವಾರದಲ್ಲಿ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗಾದಲ್ಲಿ, ಈ ಸಾಧನೆ ಮಾಡಿದ ಮೊದಲ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಗೂ 'ಮೆರ್ಸಲ್' ಪಾತ್ರವಾಗಲಿದೆ.
ಜಿಎಸ್'ಟಿ ಬಗ್ಗೆ ಏನಿದೆ?
'ಮೆರ್ಸಲ್' ಸಿನಿಮಾದಲ್ಲಿ ಹೀರೋ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿರುತ್ತಾನೆ. ಜಿಎಸ್'ಟಿಯಿಂದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಧ್ವನಿ ಎತ್ತುತ್ತಾನೆ. ಖಾಸಗಿ ಆಸ್ಪತ್ರೆಯ ವೈದ್ಯರು ಮಾಡುತ್ತಿರುವ ಸುಲಿಗೆ ಹಾಗೂ ಸರಕಾರಿ ಆಸ್ಪತ್ರೆಯ ದುರವಸ್ಥೆಯ ಬಗ್ಗೆ ಪ್ರಹಾರ ಮಾಡುತ್ತಾನೆ. ಒಂದು ದೃಶ್ಯದಲ್ಲಿ ಜಿಎಸ್'ಟಿ ಮತ್ತು ವೈದ್ಯ ಕ್ಷೇತ್ರದ ವಿಚಾರದಲ್ಲಿ ಸಿಂಗಾಪುರಕ್ಕೂ ಭಾರತಕ್ಕೂ ಹೋಲಿಕೆ ಮಾಡಿ ಕೇಂದ್ರ ಸರಕಾರವನ್ನು ಟೀಕಿಸುತ್ತಾನೆ. ಸಿಂಗಾಪುರದಲ್ಲಿ ಜಿಎಸ್'ಟಿ ಕೇವಲ 7% ಇದೆ. ಆದರೆ ಅಲ್ಲಿ ಎಲ್ಲರಿಗೂ ಉಚಿತ ವೈದ್ಯಕೀಯ ಸೌಲಭ್ಯವಿದೆ. ಭಾರತದಲ್ಲಿ ಜಿಎಸ್'ಟಿ ಬರೋಬ್ಬರಿ 28% ಇದ್ದರೂ ಆಸ್ಪತ್ರೆಗಳಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ನಾಯಕನಟ ಆರ್ಭಟಿಸುತ್ತಾನೆ.
ಸುಳ್ಳು ಎನ್ನುತ್ತಿದೆ ಬಿಜೆಪಿ:
ಸಿನಿಮಾದಲ್ಲಿ ಜಿಎಸ್'ಟಿ ಬಗ್ಗೆ ಹೇಳಿರುವ ವಿಚಾರ ಸುಳ್ಳು ಎಂದು ಬಿಜೆಪಿ ಹೇಳಿದೆ. ಸಿಂಗಾಪುರದಲ್ಲಿ 7% ಜಿಎಸ್'ಟಿ ಇದ್ದರೂ ಆರೋಗ್ಯವಿಮೆಗಾಗಿ ಪ್ರತೀ ವ್ಯಕ್ತಿಯ ಆದಾಯದಲ್ಲಿ 10% ಹಣ ಮುರಿದುಕೊಳ್ಳಲಾಗುತ್ತದೆ. ಹೀಗಾಗಿ ಅಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಸಾಧ್ಯವಾಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ವಾದಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.