ಪುಷ್ಪಕ ವಿಮಾನ ನಿಜವಾಗಿಯೂ ರೀಮೇಕಾ? ಇಲ್ಲಿದೆ ಸತ್ಯ

By Suvarna Web DeskFirst Published Jan 6, 2017, 9:11 AM IST
Highlights

ರಮೇಶ್ ಅರವಿಂದ್ ಅಭಿನಯದ “ಪುಷ್ಪಕ ವಿಮಾನ” ಯಾವ ಸಿನಿಮಾದ ರೀಮೇಕ್ ಅಲ್ಲ ಎಂದು ಚಿತ್ರದ ನಿರ್ಮಾಪಕ ಎಆರ್ ವಿಖ್ಯಾತ್ ಹಾಗೂ ನಿರ್ದೇಶಕ ಎಸ್.ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು(ಜ. 06): ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಪ್ರೋಮೋ ಬಂದಾಗಿನಿಂದ ಬಹುತೇಕ ಮಂದಿ ವಿಕ್ರಮ್ ಅಭಿನಯದ “ದೈವ ತಿರುಮಗಳ್” ಎಂಬ ತಮಿಳು ಸಿನಿಮಾದ ರೀಮೇಕ್ ಎಂದೇ ಭಾವಿಸಿದ್ದರು. ಆದರೆ, ಅದು ಸತ್ಯವಲ್ಲ ಎಂಬ ನಿಜ ಗೊತ್ತಾಗಿದೆ. ಎರಡೂ ಚಿತ್ರಗಳ ನಾಯಕರು ಮಾನಸಿಕ ಅಸ್ವಸ್ಥರೆಂಬ ಅಂಶ ಹೊರತುಪಡಿಸಿದರೆ ಬೇರೆ ಯಾವ ಸಾಮ್ಯತೆಯೂ ಇಲ್ಲಿಲ್ಲ.

ತಮಿಳಿನ “ದೈವ ತಿರುಮಗಳ್” ಸಿನಿಮಾ ಹಿಂದಿಯ “ಮೈಂ ಐಸಾ ಹೀ ಹೂಂ” ಚಿತ್ರದ ರೀಮೇಕ್ ಆಗಿದೆ. 2005ರಲ್ಲಿ ಬಿಡುಗಡೆಯಾದ ಅಜಯ್ ದೇವಗನ್ ಅಭಿನಯದ ಆ ಹಿಂದಿ ಚಿತ್ರ ಕೂಡ 2001ರಲ್ಲಿ ತೆರೆ ಕಂಡ “ಐ ಆಮ್ ಸ್ಯಾಮ್” ಎಂಬ ಆಂಗ್ಲ ಚಿತ್ರದ ರೀಮೇಕ್.

ಆದರೆ, ರಮೇಶ್ ಅರವಿಂದ್ ಅಭಿನಯದ “ಪುಷ್ಪಕ ವಿಮಾನ” ಯಾವ ಸಿನಿಮಾದ ರೀಮೇಕ್ ಅಲ್ಲ ಎಂದು ಚಿತ್ರದ ನಿರ್ಮಾಪಕ ಎಆರ್ ವಿಖ್ಯಾತ್ ಹಾಗೂ ನಿರ್ದೇಶಕ ಎಸ್.ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.

ಕೊರಿಯನ್ ಸಿನಿಮಾದ ಪ್ರೇರಣೆ:
ಪುಷ್ಪಕ ವಿಮಾನದಲ್ಲಿ ಅಪ್ಪ-ಮಗನ ಬಾಂಧವ್ಯದ ಕಥೆ ಇದೆ. ಚಿತ್ರದಲ್ಲಿನ ನಾಯಕನ ಪಾತ್ರದ ವ್ಯಕ್ತಿತ್ವಕ್ಕೂ ಕೊರಿಯಾ ಭಾಷೆಯ “ಮಿರಾಕಲ್ ಇನ್ ಸೆಲ್ ನಂ. 7” ಸಿನಿಮಾದ ನಾಯಕನ ಪಾತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ ಎಂದು ಚಿತ್ರದ ನಿರ್ದೇಶಕ ರವೀಂದ್ರನಾಥ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆ ಕೊರಿಯಾ ಚಿತ್ರದ ರೀಮೇಕ್ ಹಕ್ಕನ್ನು ಚಿತ್ರದ ನಿರ್ಮಾಪಕರು ಪಡೆದುಕೊಂಡಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಅದ್ಭುತ ಕಥೆಗಳನ್ನು ಹೊಂದಿರುವ “ಲೈಫ್ ಈಸ್ ಬ್ಯೂಟಿಫುಲ್” ಹಾಗೂ “ದಿ ಪರ್ಸೂಟ್ ಆಫ್ ಹ್ಯಾಪಿನೆಸ್” ಚಿತ್ರಗಳಲ್ಲಿನ ಕೆಲ ಸನ್ನಿವೇಶಗಳನ್ನ ಪುಷ್ಪಕ ವಿಮಾನದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.

ಅಂದಹಾಗೆ, ಎರಡು ದಿನಗಳ ಹಿಂದೆ ಆಸ್ಕರ್ ಸಿನಿಮಾ ಪ್ರಶಸ್ತಿ ಸ್ಪರ್ಧೆಗೆ “ಪುಷ್ಪಕ ವಿಮಾನ” ಚಿತ್ರ ಆಯ್ಕೆಯಾಗಿರುವ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಸಂತಸದ ಅಲೆಯನ್ನೇ ಎಬ್ಬಿಸಿದೆ. ಈ ಚಿತ್ರ ಆಸ್ಕರ್ ಪ್ರಶಸ್ತಿ ಗೆಲ್ಲದಿದ್ದರೂ ಕಡೇಪಕ್ಷ ಫೈನಲ್’ವರೆಗಾದರೂ ತಲುಪಲಿ ಎಂಬುದು ಕನ್ನಡಿಗರ ಹಾರೈಕೆ.

click me!