
ಇದೊಂದು ಬಾಲಿವುಡ್ ಅಮರ ಪ್ರೇಮಕಥೆ
ಮುಂಬೈ: ಬಾಲಿವುಡ್ ಇತಿಹಾಸದಲ್ಲಿ ಕೆಲವು ಪ್ರೇಮಕಥೆಗಳು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಅಷ್ಟೇ ರೋಚಕವಾಗಿರುತ್ತವೆ. ಅಂತಹ ಜೋಡಿಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವವರು ನಮ್ಮ ಧರ್ಮೇಂದ್ರ (Dharmendra) ಮತ್ತು ಹೇಮಾ ಮಾಲಿನಿ (Hema Malini). 'ಶೋಲೆ' ಸಿನಿಮಾದ ವೀರು ಮತ್ತು ಬಸಂತಿಯ ಕೆಮಿಸ್ಟ್ರಿ ತೆರೆಯ ಮೇಲೆ ಬೆಂಕಿ ಹಚ್ಚಿದ್ದರೆ, ತೆರೆಯ ಹಿಂದೆ ನಡೆದ ಇವರ ಲವ್ ಸ್ಟೋರಿ ಅದಕ್ಕಿಂತಲೂ ಡ್ರಾಮಾಟಿಕ್ ಆಗಿತ್ತು. ಬರೋಬ್ಬರಿ ಐದು ದಶಕಗಳಿಂದ ಒಟ್ಟಿಗೆ ಇರುವ ಈ ಜೋಡಿಯ ಪ್ರೀತಿಯ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಆರಂಭದಲ್ಲಿ ಹೇಮಾ ಮಾಲಿನಿಯವರು ಧರ್ಮೇಂದ್ರ ಅವರನ್ನು ಮದುವೆಯಾಗುವ ಯೋಚನೆಯನ್ನೇ ಮಾಡಿರಲಿಲ್ಲವಂತೆ! ಹಾಗಾದರೆ ಸ್ನೇಹಿತರಾಗಿದ್ದವರು ಜೀವನಸಂಗಾತಿಗಳಾಗಿದ್ದು ಹೇಗೆ? ಇಲ್ಲಿದೆ ಸ್ವತಃ 'ಡ್ರೀಮ್ ಗರ್ಲ್' ಬಿಚ್ಚಿಟ್ಟ ರಹಸ್ಯ.
ಸ್ನೇಹ ಪ್ರೀತಿಗೆ ತಿರುಗಿದ ಆ ಕ್ಷಣ
ರಾಮ್ ಕಮಲ್ ಮುಖರ್ಜಿ ಬರೆದಿರುವ ಹೇಮಾ ಮಾಲಿನಿ ಅವರ ಜೀವನ ಚರಿತ್ರೆಯಾದ 'ಹೇಮಾ ಮಾಲಿನಿ: ಬಿಯಾಂಡ್ ದ ಡ್ರೀಮ್ ಗರ್ಲ್' ಪುಸ್ತಕದಲ್ಲಿ, ನಟಿ ತಮ್ಮ ಮನದದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನ 'ಹೀ-ಮ್ಯಾನ್' ಧರ್ಮೇಂದ್ರ ಅವರತ್ತ ಹೇಮಾ ಆಕರ್ಷಿತರಾಗಿದ್ದರೂ, ಈ ಸಂಬಂಧಕ್ಕೆ ಭವಿಷ್ಯವಿದೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ.
"ಆರಂಭದಲ್ಲಿ ನಾವಿಬ್ಬರೂ ಕೇವಲ ಒಳ್ಳೆಯ ಸ್ನೇಹಿತರಾಗಿದ್ದೆವು. ನನಗೆ ಅವರ ಕಂಪನಿ ಇಷ್ಟವಾಗುತ್ತಿತ್ತು. ನಾವು ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದೆವು. ಎಷ್ಟರಮಟ್ಟಿಗೆ ಅಂದರೆ, ಕೇವಲ ದಿನಗಳು ಅಥವಾ ವಾರಗಳಲ್ಲ, ತಿಂಗಳುಗಟ್ಟಲೆ ನಾವು ಶೂಟಿಂಗ್‌ನಲ್ಲಿ ಜೊತೆಯಾಗಿ ಇರುತ್ತಿದ್ದೆವು. ಹೀಗೆ ಸದಾ ಜೊತೆಗಿರುವುದು ಒಂದು ಅಭ್ಯಾಸವಾಗಿ ಹೋಯಿತು. ಸಮಯ ಕಳೆದಂತೆ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಇದ್ದ ಭಾವನೆಯನ್ನು ವರ್ಣಿಸಲು ಪದಗಳೇ ಸಿಗುತ್ತಿರಲಿಲ್ಲ.
ನಿಜ ಹೇಳಬೇಕೆಂದರೆ, ನಾನು ಅವರನ್ನು ಮದುವೆಯಾಗುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ತಮಾಷೆ ಏನೆಂದರೆ, ನಾನು ಮದುವೆಯಾದರೆ ಅದು 'ಧರ್ಮೇಂದ್ರ ಅವರಂತಹ' ವ್ಯಕ್ತಿಯ ಜೊತೆ ಆಗಬೇಕು ಅಂದುಕೊಳ್ಳುತ್ತಿದ್ದೆ, ಆದರೆ ಅವರನ್ನೇ ಮದುವೆಯಾಗುತ್ತೇನೆ ಎಂದುಕೊಂಡಿರಲಿಲ್ಲ," ಎಂದು ಹೇಮಾ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅದು 70ರ ದಶಕ. ಆಗಿನ ಫಿಲ್ಮ್ ಮ್ಯಾಗಜೀನ್‌ಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ 'ಅಫೇರ್' ಬಗ್ಗೆ ಬಿಸಿ ಬಿಸಿ ಸುದ್ದಿಗಳು ಪ್ರಕಟವಾಗುತ್ತಿದ್ದವು. ಇದು ಹೇಮಾ ಅವರ ಮನೆಯಲ್ಲಿ ಬಿರುಗಾಳಿ ಎಬ್ಬಿಸಿತ್ತು. "ಪತ್ರಿಕೆಗಳಲ್ಲಿ ನಮ್ಮ ಬಗ್ಗೆ ಏನೇನೋ ಬರುತ್ತಿತ್ತು, ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗಿತ್ತು. ನನ್ನ ತಂದೆ ಗಾಬರಿಗೊಂಡು ಜ್ಯೋತಿಷಿಗಳನ್ನು, ಪಂಡಿತರನ್ನು ಮನೆಗೆ ಕರೆಸಲು ಶುರುಮಾಡಿದರು. ನನ್ನ ಜಾತಕದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲ ಅವರಿಗೆ. ನನ್ನ ಮದುವೆ ತಡವಾಗುತ್ತಿರುವುದು ಅವರಿಗೆ ಚಿಂತೆ ತಂದಿತ್ತು. ಹೀಗಾಗಿ ಅವರು ನನ್ನ ಶೂಟಿಂಗ್ ಸೆಟ್‌ಗಳಿಗೆ ನನ್ನ ಜೊತೆಗೇ ಬರಲು ಶುರು ಮಾಡಿದರು," ಎಂದು ಹೇಮಾ ಆ ಆತಂಕದ ದಿನಗಳನ್ನು ವಿವರಿಸಿದ್ದಾರೆ.
ಕಾರಿನಲ್ಲಿ ನಡೆಯುತ್ತಿದ್ದ 'ಸೀಟ್' ಸಮರ!
1975ರಲ್ಲಿ ರಮಾನಂದ್ ಸಾಗರ್ ಅವರ 'ಚರಸ್' ಸಿನಿಮಾ ಶೂಟಿಂಗ್‌ಗಾಗಿ ಚಿತ್ರತಂಡ ಮಾಲ್ಟಾಗೆ ಹೋಗಿತ್ತು. ಆಗ ನಡೆದ ಒಂದು ಘಟನೆ ಈಗ ನೆನಪಿಸಿಕೊಂಡರೆ ನಗು ತರಿಸುತ್ತದೆ. ಶೂಟಿಂಗ್ ಸಮಯದಲ್ಲಿ ಕಲಾವಿದರು ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಆಗ ಹೇಮಾ ಅವರ ತಂದೆ, ಧರ್ಮೇಂದ್ರ ಅವರು ತಮ್ಮ ಮಗಳ ಪಕ್ಕದಲ್ಲಿ ಕೂರಬಾರದು ಎಂದು ಪ್ಲಾನ್ ಮಾಡುತ್ತಿದ್ದರು.
"ನನ್ನ ತಂದೆಗೆ ಧರ್ಮೇಂದ್ರ ನನ್ನ ಪಕ್ಕದಲ್ಲಿ ಕೂರುವುದು ಇಷ್ಟವಿರುತ್ತಿರಲಿಲ್ಲ. ಧರ್ಮೇಂದ್ರ ಅವರಿಗೆ ಅರ್ಥವಾಗಬಾರದು ಎಂದು ತಂದೆ ತಮಿಳಿನಲ್ಲಿ ನನಗೆ ಮೂಲೆ ಸೀಟ್‌ನಲ್ಲಿ ಕೂರುವಂತೆ ಆರ್ಡರ್ ಮಾಡುತ್ತಿದ್ದರು ಮತ್ತು ಅವರು ಮಧ್ಯದಲ್ಲಿ ಕೂರುತ್ತಿದ್ದರು. ಆದರೆ ಧರ್ಮೇಂದ್ರ ಸುಮ್ಮನೆ ಬಿಡ್ತಾರಾ? ಅವರು ಯಾವುದಾದರೂ ಬುದ್ಧಿವಂತಿಕೆಯ ನೆಪ ಹೇಳಿ, ಹೇಗಾದರೂ ಮಾಡಿ ಬಂದು ನನ್ನ ಪಕ್ಕದಲ್ಲೇ ಕೂರುತ್ತಿದ್ದರು. ಕೊನೆಗೆ ನಾನು ಮಧ್ಯದ ಸೀಟ್‌ನಲ್ಲಿ, ಧರ್ಮೇಂದ್ರ ನನ್ನ ಪಕ್ಕದಲ್ಲಿ ಮತ್ತು ಅಪ್ಪ ಇನ್ನೊಂದು ಕಡೆ ಕೂರುವಂತಾಗುತ್ತಿತ್ತು!" ಎಂದು ಹೇಮಾ ಆ ರೊಮ್ಯಾಂಟಿಕ್ ಹಾಗೂ ಫನ್ನಿ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.
ಎಷ್ಟೇ ಅಡೆತಡೆಗಳಿದ್ದರೂ ಧರ್ಮೇಂದ್ರ ಅವರ ವ್ಯಕ್ತಿತ್ವಕ್ಕೆ ಹೇಮಾ ಸೋತಿದ್ದರು. "ನನ್ನ ಕುಟುಂಬದವರಿಗೆ ಧರ್ಮೇಂದ್ರ ಅಂದರೆ ಇಷ್ಟವಿತ್ತು, ಆದರೆ ಅಳಿಯನಾಗಿ ಅಲ್ಲ. ಆದರೆ ನನಗೆ ಅವರಿಂದ ದೂರ ಇರಲು ಸಾಧ್ಯವಾಗಲಿಲ್ಲ. ಅವರಲ್ಲಿ ಒಂದು ಶಾಂತತೆ ಮತ್ತು ಒಳ್ಳೆಯತನವಿತ್ತು," ಎನ್ನುತ್ತಾರೆ ಹೇಮಾ.
ಅಂತಿಮವಾಗಿ ಆ ಸುಂದರ ಕ್ಷಣ ಬಂದೇ ಬಿಡ್ತು. ಒಂದು ದಿನ ಶೂಟಿಂಗ್ ನಡೆಯುವಾಗ ಧರ್ಮೇಂದ್ರ ನೇರವಾಗಿ ಹೇಮಾ ಅವರ ಕಣ್ಣಲ್ಲಿ ಕಣ್ಣಿಟ್ಟು, "ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿಯೇ ಬಿಟ್ಟರು. ಆಗ ನಾಚಿಕೆಯಿಂದ ಕೆಂಪಾದ ಹೇಮಾ ಮಾಲಿನಿ, "ನಾನು ಯಾರನ್ನು ಪ್ರೀತಿಸುತ್ತೇನೋ, ಅವರನ್ನೇ ಮದುವೆಯಾಗುವುದು," ಎಂದು ಪರೋಕ್ಷವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡರಂತೆ!
ಹೀಗೆ, ಸ್ನೇಹದಿಂದ ಶುರುವಾದ ಈ ಸಂಬಂಧ, ಎಷ್ಟೇ ವಿರೋಧಗಳು ಬಂದರೂ ಗಟ್ಟಿಯಾಗಿ ನಿಂತು ಬಾಲಿವುಡ್‌ನ ಅತ್ಯಂತ ಐಕಾನಿಕ್ ಲವ್ ಸ್ಟೋರಿಯಾಗಿ ಬದಲಾಯಿತು. ಇಂದು ಐದು ದಶಕಗಳ ನಂತರವೂ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನವಜೋಡಿಗಳಂತೆ ನಗುತ್ತಾ ಬಾಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.