
ಬೆಂಗಳೂರು ದಕ್ಷಿಣ: ಕನ್ನಡ ಬಿಗ್‌ಬಾಸ್ ಸೀಸನ್ 12ರ ಗಿಲ್ಲಿ ನಟ ಮತ್ತು ಕಾವ್ಯ ಶೈವ ಜೋಡಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಗಿಲ್ಲಿ ನಟ ಇಂದಿಗೂ ಎಲ್ಲೇ ಹೋದ್ರೂ ಅಭಿಮಾನಿಗಳು ಮಾತ್ರ ಕಾವು ಕಾವು ಎಂದು ಕೂಗುತ್ತಾರೆ. ಹಾಗೆಯೇ ಕಾವ್ಯಾ ಬಂದ್ರೆ ಗಿಲ್ಲಿ ಎಂದು ಕೂಗಲಾರಂಭಿಸುತ್ತಾರೆ. ಇದೀಗ ಇಂತಹವುದೇ ಒಂದು ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಕಾವ್ಯಾ ಅವರನ್ನು ಕರೆಸಿದ್ರೆ ಚೆನ್ನಾಗಿರುತ್ತಿತ್ತು ಎಂದು ಗಿಲ್ಲಿ ನಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ಮಂಗಳವಾರ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಲು ಗಿಲ್ಲಿ ನಟ ಆಗಮಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳೆಲ್ಲಾ ಕಾವು ಕಾವು ಕಾವು ಎಂದು ಕೂಗಲಾರಂಭಿಸಿದರು. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ಗಿಲ್ಲಿ ನಟ, ಕಾರ್ಯಕ್ರಮದ ಆಯೋಜಕರು ಕಾವ್ಯಾ ಅವರನ್ನ ಕರೆಸಿಲ್ಲ. ಕರೆದಿದ್ರೆ ಬರೋರು, ಕರೆಸಬಹುದಿತ್ತು ಅಲ್ಲವಾ ಸರ್ ಎಂದು ಹೇಳಿ ಎಲ್ಲರನ್ನು ನಗಿಸಿದರು. ಸದ್ಯ ಈ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಇದೇ ಕಾರ್ಯಕ್ರಮಕ್ಕೆ ನಟ ಸುದೀಪ್ ಸಹ ಆಗಮಿಸಿದ್ದರು. ಸುದೀಪ್ ಆಗಮಿಸಿದ ಸಂದರ್ಭದಲ್ಲಿ ಮಳೆ ಆರಂಭವಾಗಿತ್ತು. ಇದೇ ವೇದಿಕೆಯಲ್ಲಿದ್ದ ಶಾಸಕ ಇಕ್ಬಾಲ್ ಹುಸೇನ್, ಸುದೀಪ್ ಅವರಿಗೆ ಛತ್ರಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ನಮ್ಮ ಅಭಿಮಾನಿಗಳೆಲ್ಲಾ ಮಳೆಯಲ್ಲಿ ನಿಂತಿದ್ದಾರೆ. ನನಗೆ ಛತ್ರಿ ಬೇಡ ಎಂದು ಹೇಳುವ ಮೂಲಕ ಸರಳತೆ ಮರೆದ್ರು. ಸುದೀಪ್ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಅಭಿಮಾನಿಗಳೆಲ್ಲಾ ಖುಷಿಯಿಂದ ಕೂಗುವ ಮೂಲಕ ಮೆಚ್ಚುಗೆ ಸೂಚಿಸಿದರು.
ಈಗಾಗಲೇ ಸೀಸನ್ 13ರ ಬಿಗ್‌ಬಾಸ್ ಪ್ರೋಮೋ ಬಿಡುಗಡೆಯಾಗಿದೆ. ಸೀಸನ್ ಆರಂಭದ ಮೊದಲ ಸಂಚಿಕೆಯಲ್ಲಿ ತೀರ್ಪುಗಾರರಾಗಿ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ತೀರ್ಪುಗಾರರ ಸ್ಥಾನದಲ್ಲಿ ಗಿಲ್ಲಿ ನಟ ಜೊತೆಯಲ್ಲಿ ಸೀಸನ್ 12ರ ಸ್ಪರ್ಧಿಗಳಾಗಿದ್ದ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮೂವರು ಯಾರು ಮನೆಯೊಳಗೆ ಹೋಗಬೇಕು ಎಂಬುದನ್ನು ನಿರ್ಧರಿಸಲಿದ್ದಾರಂತೆ. ಆದ್ರೆ ಈ ಬಗ್ಗೆ ವಾಹಿನಿ ಅಥವಾ ಬಿಗ್‌ಬಾಸ್ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಇದನ್ನೂ ಓದಿ: ಆಂಕರ್ ಅಪರ್ಣಾ ನೆನಪಲ್ಲಿ ಗಾಯಕಿ ಜೋಗಿ ಸುನೀತಾ ಹೆಜ್ಜೆ; ಹೊಸ ಕನಸು ತೆರೆದಿಟ್ಟ ಗೆಳತಿ
ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು, ‘ನಮಸ್ಕಾರ’ ಎಂದೇಳಿ ಭಾಷಣ ಮಾಡಲು ಮುಂದಾದರು. ಈ ವೇಳೆ ಚಿತ್ರನಟ ದರ್ಶನ್ ಅಭಿಮಾನಿಗಳು ‘ಡಿ ಬಾಸ್.... ಡಿ ಬಾಸ್....’ ಎಂದು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಯಾದರು. ಆಗ ಸಿಎಂ ‘ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ಆ ಕುರಿತು ಸಾರ್ವಜನಿಕವಾಗಿ ಮಾತನಾಡಲು ಆಗುವುದಿಲ್ಲ. ತಾಳ್ಮೆಯಿಂದ ಇರಿ’ ಎಂದರು.
ಆದರೂ ಸುಮ್ಮನಾಗದ ದರ್ಶನ್ ಅಭಿಮಾನಿಗಳು ಮತ್ತೇ ‘ಡಿ ಬಾಸ್.... ಡಿ ಬಾಸ್....’ ಘೋಷಣೆ ಜೋರಾಗಿಸಿದರು. ಇದರಿಂದ ಕೋಪಗೊಂಡ ಮುಖ್ಯಮಂತ್ರಿ, ‘ಆಯ್ತು, ಆಯ್ತು, ಆಯ್ತು ಸುಮ್ಮನಿರಿ. ಈ ರೀತಿ ಮಾಡಿಯೇ ಹಾಳು ಮಾಡಿಕೊಳ್ಳುತ್ತಿದ್ದೀರಾ’ ಎಂದು ಬುದ್ಧಿ ಹೇಳಿದರು. ಆಗಲೂ ಸುಮ್ಮನಾಗದ್ದರಿಂದ ಭಾಷಣವನ್ನು ಮೊಟಕುಗೊಳಿಸಿದ ಡಿಕೆಶಿ ಮರಳಿ ಹೋಗಿ ಕುರ್ಚಿಯಲ್ಲಿ ಕುಳಿತುಕೊಂಡು, ‘ಡಿ ಬಾಸ್ ಕಟ್ಟಿಕೊಂಡೆ ಹೋಗಲಿ ಅವ್ರು’ ಎಂದು ಆಕ್ರೋಶ ವ್ಯಕ್ತಪಡಿಸಿದರು
ಇದನ್ನೂ ಓದಿ: ಬಿಗ್‌ಬಾಸ್ 13 ಸ್ಪರ್ಧಿಗಳಿಗೆ ಕಾದಿದೆ ತ್ರಿಬಲ್ ಚಾಲೆಂಜ್? ಗಿಲ್ಲಿ, ವಿನಯ್, ಸಂಗೀತಾ ಎಂಟ್ರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.