'ಪ್ರೀತಿಯಲ್ಲಿ ಬೀಳುವುದೂ ಎಷ್ಟು ಕಷ್ಟವೋ, ಬ್ರೇಕಪ್ ಕೂಡ ಅಷ್ಟೇ': ನಟಿ ಮೀನಾಕ್ಷಿ ಪಂಚ್‌!

Published : Nov 23, 2026, 06:47 PM IST
Meenakshi Chaudhary

ಸಾರಾಂಶ

ಕ್ರಶ್ ಬಗ್ಗೆ ಕೇಳಿದ ಪ್ರಶ್ನೆಗೆ ‘ನನ್ನ ಜೀವನವೇ ಕ್ರಶ್ ಆಗಿದೆ’ ಎಂದು ತಮಾಷೆಯಾಗಿ ಉತ್ತರಿಸಿದ ನಟಿ ಮೀನಾಕ್ಷಿ ಚೌಧರಿ ಮಾತು ವೈರಲ್ ಆಗಿದೆ. ‘ವೃಷಕರ್ಮ’ ಚಿತ್ರದ ಪ್ರಚಾರದ ವೇಳೆ ಪ್ರೀತಿ, ಬ್ರೇಕಪ್ ಬಗ್ಗೆಯೂ ಮಾತನಾಡಿದ್ದಾರೆ.

ಸಿನಿರಂಗದಲ್ಲಿ ಸಾಲು ಸಾಲು ಯಶಸ್ಸುಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ಮೀನಾಕ್ಷಿ ಚೌಧರಿ, ತಮ್ಮ ಚುರುಕಿನ ಮಾತುಗಳು ಮತ್ತು ಸಹಜ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ನಾಗಚೈತನ್ಯ ನಾಯಕನಾಗಿ ನಟಿಸುತ್ತಿರುವ ‘ವೃಷಕರ್ಮ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 4ರಂದು ಈ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ನಡುವೆ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಕ್ರಶ್ ಬಗ್ಗೆ ಕೇಳಲಾದ ಪ್ರಶ್ನೆಗೆ ಮೀನಾಕ್ಷಿ ನೀಡಿರುವ ತಮಾಷೆಯ ಉತ್ತರ ಈಗ ಗಮನ ಸೆಳೆಯುತ್ತಿದೆ.

‘ನನ್ನ ಜೀವನವೇ ಕ್ರಶ್ ಆಗಿಹೋಗಿದೆ!’

ಸಂದರ್ಶನದ ವೇಳೆ ನಿರೂಪಕರು, ‘ಸದ್ಯ ನಿಮಗೆ ಯಾರ ಮೇಲಾದರೂ ಕ್ರಶ್ ಇದೆಯೇ?’ ಎಂದು ಮೀನಾಕ್ಷಿ ಚೌಧರಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ನಟಿ, ‘ನನಗೆ ಯಾರ ಮೇಲೂ ಕ್ರಶ್ ಇಲ್ಲ. ಅಸಲಿಗೆ ನನ್ನ ಜೀವನವೇ ಕ್ರಶ್ ಆಗಿಹೋಗಿದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಅವರ ಈ ಪಂಚ್ ಡೈಲಾಗ್ ಕೇಳಿ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದ್ದಾರೆ.

ಇದೇ ವೇಳೆ ಪ್ರೀತಿ ಮತ್ತು ಸಂಬಂಧಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮೀನಾಕ್ಷಿ, ಪ್ರೀತಿಯಲ್ಲಿ ಬೀಳುವುದು ಎಷ್ಟು ಕಷ್ಟವೋ, ಬ್ರೇಕಪ್ ಆಗಿ ಆ ಸಂಬಂಧದಿಂದ ಹೊರಬರುವುದು ಕೂಡ ಅಷ್ಟೇ ಕಷ್ಟ ಎಂದು ಹೇಳಿದ್ದಾರೆ. ಸತತ ಸಿನಿಮಾ ಕೆಲಸಗಳು, ಚಿತ್ರೀಕರಣ ಮತ್ತು ಪ್ರಯಾಣದ ನಡುವೆ ವೈಯಕ್ತಿಕ ಬದುಕಿಗೆ ಸಮಯ ನೀಡುವುದು ಸವಾಲಿನ ಸಂಗತಿಯಾಗಿದೆ ಎಂಬುದನ್ನು ಅವರ ಮಾತುಗಳು ಸೂಚಿಸಿವೆ. ಸಂದರ್ಶನದಲ್ಲಿ ಮೀನಾಕ್ಷಿ ಹಂಚಿಕೊಂಡಿರುವ ಈ ತಮಾಷೆಯ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.

‘ವೃಷಕರ್ಮ’ದಲ್ಲಿ ವಿಭಿನ್ನ ಪಾತ್ರದಲ್ಲಿ ಮೀನಾಕ್ಷಿ

‘ವಿರೂಪಾಕ್ಷ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಕಾರ್ತಿಕ್ ವರ್ಮ ದಂಡು ಇದೀಗ ‘ವೃಷಕರ್ಮ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಪೌರಾಣಿಕ ಅಂಶಗಳು, ಟ್ರೆಷರ್ ಹಂಟ್ ಮತ್ತು ಸಸ್ಪೆನ್ಸ್‌ಗಳ ಮಿಶ್ರಣದೊಂದಿಗೆ ಈ ಚಿತ್ರ ರೂಪುಗೊಳ್ಳುತ್ತಿದೆ. ನಾಗಚೈತನ್ಯ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪೋಸ್ಟರ್‌ಗಳಲ್ಲಿ ಕನ್ನಡಕ ಧರಿಸಿ, ಕೈಯಲ್ಲಿ ಉರಿಯುವ ಪಂಜು ಹಿಡಿದಿರುವ ಮೀನಾಕ್ಷಿ ಅವರ ಲುಕ್ ಕುತೂಹಲ ಮೂಡಿಸಿದೆ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಮತ್ತು ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಚಿತ್ರದ ಟ್ರೇಲರ್ ಅನ್ನು ನವೆಂಬರ್ 25ರಂದು ನೆಲ್ಲೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಡಿಸೆಂಬರ್ 4ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ದಂತ ವೈದ್ಯೆಯಿಂದ ಸ್ಟಾರ್ ನಟಿಯವರೆಗೆ ಮೀನಾಕ್ಷಿ ಪಯಣ

ಇನ್ನು ಹರಿಯಾಣದ ಪಂಚಕುಲದಲ್ಲಿ ಜನಿಸಿದ ಮೀನಾಕ್ಷಿ ಚೌಧರಿ, ದಂತ ವೈದ್ಯಕೀಯ ಪದವಿ (BDS) ಪೂರ್ಣಗೊಳಿಸಿದ್ದಾರೆ. 2018ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡರು. 2021ರಲ್ಲಿ ‘ಇಚ್ಚಟ ವಾಹನಮುಲು ನಿಲುಪರಾದು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಹಿಟ್: ದಿ ಸೆಕೆಂಡ್ ಕೇಸ್’, ಮಹೇಶ್ ಬಾಬು ಅಭಿನಯದ ‘ಗುಂಟೂರು ಕಾರಂ’ ಸಿನಿಮಾಗಳ ಮೂಲಕ ಗಮನ ಸೆಳೆದರು. ‘ಲಕ್ಕಿ ಭಾಸ್ಕರ್’, ‘ಸಂಕ್ರಾಂತಿಕಿ ವಸ್ತುನ್ನಾಂ’, ‘ಅನಗನಗಾ ಒ ರಾಜು’ ಚಿತ್ರಗಳ ಯಶಸ್ಸು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೀಗ ‘ವೃಷಕರ್ಮ’ ಮೂಲಕ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ಮೀನಾಕ್ಷಿ ಚೌಧರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿನ್ನನ್ನು ನೋಡುವ ಯೋಗ ಇಷ್ಟು ಬೇಗ ಬರುತ್ತೆ ಅಂದುಕೊಂಡಿರಲಿಲ್ಲ…. ತಿರುಪತಿಯಲ್ಲಿ ಭವ್ಯಾ ಗೌಡ
'ನನ್ನಂತೆಯೇ ನನ್ನ ಮಕ್ಕಳೂ ನಾಚಿಕೆ ಸ್ವಭಾವದವರು': ಯಾತ್ರಾ, ಲಿಂಗಾ ಬಗ್ಗೆ ಧನುಷ್ ಭಾವುಕ