
ಟಿವಿಕೆ ನಾಯಕ, ಸೂಪರ್‌ಸ್ಟಾರ್ ವಿಜಯ್ ಗೆಲುವಿಗೆ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಅಭಿನಂದಿಸಿದ್ದಾರೆ. ‘ವಿಜಯ್ ಅವರೇ ಈ ಗೆಲುವಿಗೆ ನೀವು ಅರ್ಹರು’ ಎಂದಿರುವ ಶಿವಣ್ಣ, ‘ಹಿಂದೊಮ್ಮೆ ನಾನು ಟಿವಿಕೆ ಅಂದರೆ ಟ್ರೈ ವಿಜಯ್ ಆ್ಯಸ್ ಕಿಂಗ್ ಎಂದು ತಮಾಷೆಯಾಗಿ ಹೇಳಿದ್ದೆ. ಆ ಮಾತನ್ನು ನಿಜಮಾಡಿ ನೀವಿಂದು ರಾಜನಂತೆ ಎತ್ತರಕ್ಕೆ ಬೆಳೆದು ನಿಂತಿದ್ದೀರಿ. ಎಷ್ಟೇ ಟೀಕೆ ಬಂದರೂ ಮೌನವಾಗಿದ್ದು, ಕೆಲಸದ ಮೂಲಕವೇ ಉತ್ತರ ಕೊಡುವುದು ಎಲ್ಲಕ್ಕಿಂತ ದೊಡ್ಡ ಗೆಲುವು. ಅಂಥಾ ಗೆಲುವು ನಿಮ್ಮದಾಗಿದೆ. ತಮಿಳುನಾಡಿನ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ಅಭಿವೃದ್ಧಿ ನಿರಂತರವಾಗಿರಲಿ’ ಎಂದಿದ್ದಾರೆ.
ರಿಷಬ್ ಶೆಟ್ಟಿ, ‘ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವ ವಿಜಯ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯ ಅತ್ಯುತ್ತಮ ಅಭಿವೃದ್ಧಿ ಕಾಣಲಿ. ನಿಮ್ಮ ಈ ಸಾಧನೆ ಯುವಕರಿಗೆ ಸ್ಫೂರ್ತಿಯಾಗಲಿ’ ಎಂದಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್, ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಚಿತ್ರರಂಗದ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದನೆ ತಿಳಿಸಿದ್ದಾರೆ. ಮೋದಿಯವರಿಗೆ ವಿಜಯ್ ಕೂಡಾ ಧನ್ಯವಾದ ಸಮರ್ಪಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ‘ತಮಿಳುನಾಡು ಚುನಾವಣೆಯಲ್ಲಿ ಎನ್‌ಡಿಎಗೆ ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆಗಳು. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅವರ ಜೀವನವನ್ನು ಸುಧಾರಿಸುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ. ಟಿವಿಕೆಯ ಅದ್ಭುತ ಕಾರ್ಯನಿರ್ವಹಣೆಗೆ ಅಭಿನಂದನೆಗಳು’ ಎಂದಿದ್ದಾರೆ.
ಇದನ್ನು ರೀಟ್ವೀಟ್ ಮಾಡಿರುವ ವಿಜಯ್, ‘ಮಾನ್ಯ ಪ್ರಧಾನಿಗಳ ಶುಭಾಶಯಗಳಿಗೆ ಧನ್ಯವಾದಗಳು. ರಾಜಕೀಯವನ್ನು ಮೀರಿ ನಾವು ರಾಜ್ಯದ ಪ್ರಗತಿ ಮತ್ತು ಜನರ ಕಲ್ಯಾಣದ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಈ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಬೆಂಬಲವನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.