ಬೆಂಗಳೂರು ನಗರಕ್ಕೆ ಬರುವುದೆಂದರೆ ಸಂಭ್ರಮಿಸುತ್ತಿದ್ದ ಗಾಯಕ| ನಗರದಲ್ಲಿ ಹೆಜ್ಜೆ ಗುರುತು ಬಿಟ್ಟು ಹೋದ ಬಾಲಸುಬ್ರಹ್ಮಣ್ಯಂ| ಅತಿಥಿಯಾಗಿ ಬೆಂಗಳೂರಿಗೆ ಆಗಮಿಸಿ ದಿನವಿಡೀ ಪಾಲ್ಗೊಳ್ಳುತ್ತಿದ್ದ ಎಸ್‌ಪಿಬಿ|
ಬೆಂಗಳೂರು(ಸೆ.26): ದಶಕಗಳ ಕಾಲ ಕನ್ನಡಿಗರ ಹೃನ್ಮನ ಗೆದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ, ಕನ್ನಡಿಗರೆಂದರೆ ತುಸು ಹೆಚ್ಚು ಅಭಿಮಾನ, ಪ್ರೀತಿ. ಎಷ್ಟರ ಮಟ್ಟಿಗೆ ಎಂದರೆ ಮರು ಜನ್ಮ ಎಂಬುದು ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೃದಯ ತುಂಬಿ ಹೇಳುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು.
ಬೆಂಗಳೂರಿನ ಒಡನಾಟ ಸಹ ಕಡಿಮೆ ಏನೂ ಇಲ್ಲ. ಬೆಂಗಳೂರಿಗೆ ಬರುವುದೆಂದರೆ ಸಂಭ್ರಮಿಸುತ್ತಿದ್ದರು. ಬೆಂಗಳೂರಿನಲ್ಲಿ ಸಂಗೀತಕ್ಕೆ ಸಂಬಂಧ ಪಟ್ಟಂತೆ ಏರ್ಪಡಿಸುವ ಯಾವುದೇ ಕಾರ್ಯಕ್ರಮವನ್ನು ಎಂದೂ ಕೂಡಾ ತಪ್ಪಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ಹತ್ತಾರು ವರ್ಷಗಳ ಅವಧಿಯಲ್ಲಿ ನೂರಾರು ಒಡನಾಡಿಗಳು, ಸ್ನೇಹಿತರು, ಚಿತ್ರೋದ್ಯಮಿಗಳ ದೊಡ್ಡ ದಂಡನ್ನು ಸಂಪಾದಿಸಿದ್ದರು. ಕೇವಲ ಚಿತ್ರದ ಹಾಡುಗಳ ರಿಕಾರ್ಡಿಂಗ್ ಸ್ಟುಡಿಯೋಗೆ ಬಂದು ಹಾಡಿ ಹೋಗದೇ ಸ್ನೇಹಿತರ ಜೊತೆ ಕಾಲ ಕಳೆದು ಹೋಗುವುದನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದರು.
2 ದಿನದಲ್ಲಿ ಡಿಸ್ಚಾರ್ಜ್, ಐಯಾಮ್ ಪರ್‌ಫೆಕ್ಟ್ಲಿ ಆಲ್‌ರೈಟ್: ಎಸ್‌ಪಿಬಿ ಕೊನೆಯ ಮಾತು!
ನಾಲ್ಕೈದು ಭಾಷೆಗಳಲ್ಲಿ ಹಾಡುವ ಬಾಲಸುಬ್ರಹ್ಮಣ್ಯಂ ಅವರು ಒಂದು ಕಾಲದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಮುಂತಾದ ಕಡೆ ಹಾಡುಗಳ ರಿಕಾರ್ಡಿಂಗ್‌ಗೆ ಹೋಗುತ್ತಿದ್ದರು. ಹೆಚ್ಚು ಕಡಿಮೆ ಬೆಳಗ್ಗೆಯಿಂದ ರಾತ್ರಿವರೆಗೆ ಬ್ಯುಸಿಯಾಗಿರುತ್ತಿದ್ದ ದಿನಗಳು ಹೆಚ್ಚಿತ್ತು. ಹೀಗಿದ್ದರೂ ಬೆಂಗಳೂರಿನಲ್ಲಿ ಯಾವುದಾದರೂ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದರೆ, ಎಲ್ಲೇ ಇದ್ದರೂ ನೇರವಾಗಿ ವಿಮಾನ ನಿಲ್ದಾಣದಿಂದ ಬಂದು ಭಾಗವಹಿಸಿ ಮತ್ತೆ ವಾಪಸ್ ತೆರಳುತ್ತಿದ್ದ ಘಟನೆಗಳು ಬೇಕಾದಷ್ಟು ಇವೆ.
ಬೆಂಗಳೂರಿನಲ್ಲಿ ಗಣೇಶೋತ್ಸವ ಎಂದರೆ ನೆನಪಿಗೆ ಬರುವುದು ಬಸವನಗುಡಿಯ ‘ಬೆಂಗಳೂರು ಗಣೇಶೋತ್ಸವ ಸಮಿತಿ’. 1975ರಲ್ಲೇ ಮೊದಲ ಬಾರಿಗೆ ಬಸವನಗುಡಿಯಲ್ಲಿ ಈ ಸಮಿತಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಗಾನಸುಧೆ ಹರಿಸಿದರು. ಅಲ್ಲಿಂದೀಚೆಗೆ ಹತ್ತಾರು ಬಾರಿ ಈ ಸಮಿತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನ ವಿವಿಧ ಕಡೆ ಖಾಸಗಿ ಸಂಸ್ಥೆಗಳು ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಗಾನ ಮಾಧುರ್ಯದಿಂದ ರಸಿಕರ ಮನ ಗೆದ್ದಿದ್ದರು.
ನಗರದ ಶಂಕರ್ ಕ್ಯಾನ್ಸರ್ ಆಸ್ಪತ್ರೆಗಾಗಿ ದೇಣಿಗೆ ಸಂಗ್ರಹ, ಸಿಟಿಸಿ ಸಂಜೀವಿನಿ ದೇಣಿಗೆ ಸಂಗ್ರಹಿಸುವ ಸಂಬಂಧ ಏರ್ಪಡಿಸಿದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜ ಸೇವೆಗೆ ಕೈ ಜೋಡಿಸಿದ ಹೃದಯವಂತ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ‘ಪರಿಸರ ದಸರಾ’ ‘ಅಡಿ ದೇಸಿ ದಿಬ್ಬ ಹಾಡು ಹಬ್ಬ’ದಲ್ಲಿ ವೈವಿಧ್ಯಮಯ ಹಾಡುಗಳ ಮೂಲಕ ರಂಜಿಸಿದರು.
SPBಗೆ ಸ್ಯಾಂಡಲ್‌ವುಡ್ ದಿಗ್ಗಜರಿಂದ ನುಡಿನಮನ, ಸ್ಮರಣೆ
ಇತ್ತೀಚಿನ ವರ್ಷಗಳಲ್ಲಿ ವಿವಿಧ ಖಾಸಗಿ ಚಾನೆಲ್‌ಗಳು ಏರ್ಪಡಿಸುವ ಮಕ್ಕಳು, ದೊಡ್ಡವರ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಅತಿಥಿಯಾಗಿ ಬೆಂಗಳೂರಿಗೆ ಆಗಮಿಸಿ ದಿನವಿಡೀ ಪಾಲ್ಗೊಳ್ಳುತ್ತಿದ್ದರು. ಮತ್ತೊಂದು ವಿಶೇಷವೆಂದರೆ ಬೆಂಗಳೂರಿನಲ್ಲಿ ಇರುವ ಹತ್ತಾರು ಸಂಸ್ಥೆಗಳು, ಸಂಗೀತ, ಸಾಹಿತ್ಯ ಸಂಘಟನೆಗಳು ತಮಗೆ ನೀಡಿದ ಹಲವಾರು ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು. ಅನೇಕ ಸಂದರ್ಭದಲ್ಲಿ ಪ್ರಶಸ್ತಿಯೊಂದಿಗೆ ನೀಡುವ ಮೊತ್ತವನ್ನು ತಿರುಗಿ ಅದೇ ಸಂಸ್ಥೆಗೆ ದೇಣಿಗೆ ನೀಡಿದ ಪ್ರಸಂಗಗಳು ಸಹ ಸಾಕಷ್ಟು ಇವೆ.
ನಗರದ ರವೀಂದ್ರ ಕಲಾಕ್ಷೇತ್ರ, ಪುರಭವನ, ಗಾಯನ ಸಮಾಜ, ಕಬ್ಬನ್ ಪಾರ್ಕ್ನಲ್ಲಿರುವ ಟೆನ್ನಿಸ್ ಕೋರ್ಟ್, ಅರಮನೆ ಮೈದಾನ ಸೇರಿದಂತೆ ರಾಜಧಾನಿಯ ಹತ್ತಾರು ಕಡೆಗಳಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಜ್ಜೆ ಗುರುತುಗಳಿವೆ.