
‘ನಾನು ಕಾಸರಗೋಡು ಭಾಗದಿಂದ ಬಂದವನು. ಅಲ್ಲೇ ಆನಂದಾಶ್ರಮ ಶಾಲೆಯಲ್ಲಿ ಕನ್ನಡದಲ್ಲಿ ಓದಿ ಬೆಳೆದವನು. ಈ ಪ್ರಪಂಚದಲ್ಲಿ ಗಡಿ ಎಂಬ ವ್ಯವಸ್ಥೆಯನ್ನು ಯಾರು ಮಾಡಿದರೋ. ಬೇರೆ ಬೇರೆ ದೇಶಗಳ ಗಡಿ ವ್ಯವಸ್ಥೆಯಿಂದಾಗ ನೋವುಗಳನ್ನು ನಾನು ಇತಿಹಾಸದಲ್ಲಿ ಓದಿದ್ದೇನೆ. ಹಾಗೆಯೇ ಕಾಸರಗೋಡು ಭಾಗದಲ್ಲಿ ಯಾವುದೋ ಒಂದು ದಿನ ರಾತ್ರೋರಾತ್ರಿ ನಮ್ಮ ಭಾಷೆಯಲ್ಲಿದ್ದ ಫಲಕಗಳು ಮರೆಯಾದವು.
ಆಗ ನಮಗೆ ಏನೂ ಗೊತ್ತಾಗುತ್ತಾ ಇರಲಿಲ್ಲ. ಮುಂದೆ ನಿಧಾನವಾಗಿ ಆ ಪ್ರಾಂತ್ಯದಿಂದ ಕನ್ನಡ ಭಾಷೆಯೇ ಮರೆಯಾಗುವ ಹಾಗೆ ಮಾಡಲಾಯಿತು. ಈಗ ಆ ಭಾಗದಲ್ಲಿ ಓಡಾಡುವಾಗ ಆ ವಿಷಯ ತುಂಬಾ ಕಾಡುತ್ತದೆ. ಇಂಥಾ ಸಂದರ್ಭದಲ್ಲಿ ರಿಷಬ್ ಕನ್ನಡ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಲೈವ್ಲೀಯಾಗಿ ಒಂದು ಚೆಂದದ ಚಿತ್ರ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ಮಕ್ಕಳ ಜೊತೆ ಮಗುವಾಗಿ ನಟಿಸಿದ್ದೇನೆ.
ನೀವೆಲ್ಲರೂ ಈ ಚಿತ್ರವನ್ನು ಕೈ ಹಿಡಿದು ಮುನ್ನಡೆಸಬೇಕು.’ - ಹೀಗೆ ಅನಂತನಾಗ್ ಭಾವೋದ್ವೇಗದಿಂದ ನಿರರ್ಗಳವಾಗಿ ಮಾತನಾಡುತ್ತಿದ್ದರೆ ಇಡೀ ಸಭಾಂಗಣದಲ್ಲಿ ಮೌನ ತಾಂಡವ.
ಅನಂತ್‌ನಾಗ್ ಅವರು ಸಿನಿಮಾದ ಬಗ್ಗೆ ತೀವ್ರ ವ್ಯಾಮೋಹದಿಂದ ಮಾತನಾಡುವುದು ತುಂಬಾ ಅಪರೂಪ. ಅಂಥದ್ದರಲ್ಲಿ ಅವರು ಹೀಗೆ ಮಾತನಾಡುತ್ತಾರೆ ಅಂದ್ರೆ ಅವರಿಗೆ ಆ ಸಿನಿಮಾ ತುಂಬಾ ಕಾಡಿದೆ ಅಂತ ಅರ್ಥ. ಹೀಗೆ ಅವರನ್ನು ತುಂಬಾ ಕಲಕಿದ ಚಿತ್ರ ‘ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’. ಅದು ಈ ಚಿತ್ರದ ಒಂದು ಹಾಡು ಬಿಡುಗಡೆ ಸಂದರ್ಭ. ‘ದಡ್ಡ’ ಎನ್ನುವ ಹಾಡನ್ನು ಅನಂತ್‌ನಾಗ್
ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಸೇರಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಮೂಲಕ ರಿಲೀಸ್ ಮಾಡಿದರು.
ಆ ಹೊತ್ತಲ್ಲೇ ಅನಂತ್‌ನಾಗ್ ಪ್ರೀತಿಯಿಂದ ಮಾತನಾಡಿದ್ದು. ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಕಾರ್ಯಕ್ರಮಗಳ ವಿಶೇಷತೆ ಏನೆಂದರೆ ಅಲ್ಲೊಂದು ಆಪ್ತ ವಾತಾವರಣ ನಿರ್ಮಾಣ ಆಗಿರುತ್ತದೆ. ಅವರ ಗೆಳೆಯರೆಲ್ಲರೂ ಅವರ ಬೆನ್ನಿಗೆ ನಿಂತಿರುತ್ತಾರೆ. ಇಲ್ಲೂ ಹಾಗೇ ಆಯಿತು. ರಿಷಬ್ ಗೆಳೆಯರಾದ ರಕ್ಷಿತ್ ಶೆಟ್ಟಿ, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಸುಪ್ರೀತಾ, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಹತ್ತಾರು ಸಿನಿಮಾ ವ್ಯಾಮೋಹಿಗಳು ಅಲ್ಲಿ ಹಾಜರಿದ್ದರು. ವಿಡಿಯೋ ಸಾಂಗ್ ಪ್ರದರ್ಶನದ ನಂತರ ಅವರ ಸಂಭ್ರಮ ಹೇಳತೀರದು. ರಕ್ಷಿತ್ ಶೆಟ್ಟಿ ಅವರಂತೂ ಶಿಳ್ಳೆ ಹೊಡೆದು ಸಂತೋಷಪಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.