
ಕೆವಾಡಿಯಾ (ಗುಜರಾತ್): ‘ಈ ಮಹಾನ್ ದೇಶ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ ಮತ್ತು ಭಾರತ ನನ್ನ ಧರ್ಮಭೂಮಿ. ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದರೂ, ಅಲ್ಲೆಲ್ಲ ನಾನು ಕರ್ನಾಟಕದ ರಾಯಭಾರಿಯಾಗಿಯೇ ತೆರಳಿದೆ’ ಎಂದು ಕನ್ನಡದ ಹಿರಿಯ ನಟ ಅನಂತ್ ನಾಗ್ ನುಡಿದಿದ್ದಾರೆ.
ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿ ಮಂಗಳವಾರ ನಡೆದ 72ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ನಾನು ಚಿಕ್ಕಂದಿನಲ್ಲಿ ಆಶ್ರಮ ಮತ್ತು ಮಠಗಳಲ್ಲಿ ಬೆಳೆದೆ. 12ನೇ ವಯಸ್ಸಿಗೆ ಮುಂಬೈಗೆ ತೆರಳಿದೆ. ಅಲ್ಲಿ ರಂಗಭೂಮಿಯಲ್ಲಿ ಚೈತನ್ಯ ಮಹಾಪ್ರಭು ಪಾತ್ರದಲ್ಲಿ ನಟಿಸುವ ಮೂಲಕ ನನ್ನ ನಟನಾ ಪಯಣ ಪ್ರಾರಂಭವಾಯಿತು. ಆಗ ನನ್ನ ವೃತ್ತಿಜೀವನವು ಭವಿಷ್ಯದಲ್ಲಿ ಎಲ್ಲಿಗೆ ತಲುಪುತ್ತದೆ ಎಂಬ ಯಾವುದೇ ಕಲ್ಪನೆ ನನಗಿರಲಿಲ್ಲ’ ಎಂದು ನೆನಪಿಸಿಕೊಂಡರು.
‘ನಾನು ಮಠದಲ್ಲಿದ್ದಾಗ ಆದಿ ಶಂಕರಾಚಾರ್ಯರ ‘ಭಜ ಗೋವಿಂದಂ’ ಸ್ತೋತ್ರವನ್ನು ಕಲಿತೆ. ಅದರಲ್ಲಿ ‘ಉದರನಿಮಿತ್ತಂ ಬಹುಕೃತ ವೇಷಂ’ ಎಂಬ ಸಾಲು ಬರುತ್ತದೆ. ಕನ್ನಡದ ದಾಸ ಕನಕದಾಸರು ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದಿದ್ದಾರೆ. ಪ್ರತಿಯೊಬ್ಬರೂ ಹೊಟ್ಟೆಪಾಡಿಗಾಗಿ ವಿವಿಧ ವೇಷಗಳನ್ನು ಧರಿಸುತ್ತಾರೆ. ನಾನು ಕೂಡ ಹೊಟ್ಟೆಪಾಡಿಗಾಗಿ ರಂಗಭೂಮಿಯಿಂದ ಚಿತ್ರರಂಗದವರೆಗೆ 5 ದಶಕಗಳ ಕಾಲ ಕಲಾ ಸೇವೆಯನ್ನಷ್ಟೇ ಮಾಡಿದೆ. ರಂಗಭೂಮಿಯಲ್ಲಿ ಅಭಿನಯಿಸಿದ 50ಕ್ಕೂ ಹೆಚ್ಚು ನಾಟಕಗಳೇ ನನಗೆ ಚಿತ್ರರಂಗಕ್ಕೆ ದೊಡ್ಡ ತರಬೇತಿ ಶಿಬಿರವಾಯಿತು’ ಎಂದರು.
‘ರಂಗಭೂಮಿಯಿಂದ ಕನ್ನಡ ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ನಾನು, ಹಿಂದಿಯಲ್ಲಿ ಶ್ಯಾಮ್ ಬೆನೆಗಲ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡಿದೆ. ಹಿಂದಿಯಲ್ಲಿ ಹಲವು ಸಿನಿಮಾಗಳನ್ನು ಮಾಡಿದರೂ, ಆ ಸಮಯದಲ್ಲಿ ಕರ್ನಾಟಕದಲ್ಲಿ ಹೊಸ ಅಲೆಯ ಹಾಗೂ ಕಮರ್ಷಿಯಲ್ ಸಿನಿಮಾಗಳಿಗೆ ಉತ್ತಮ ವಾತಾವರಣವಿತ್ತು. ಹಾಗಾಗಿ ಬೆಂಗಳೂರಿಗೆ ಬಂದು ನೆಲೆಸಿದೆ. ಅದೇ ನನ್ನ ಕರ್ಮಭೂಮಿಯಾಯಿತು. ಇತರ ಭಾಷೆಗಳಲ್ಲಿ ನಟಿಸುವಾಗಲೂ ನಾನು ಕರ್ನಾಟಕದ ರಾಯಭಾರಿಯಾಗಿ ಭಾಗವಹಿಸಿದೆ’ ಎಂದು ಅನಂತ್ ನಾಗ್ ಹೆಮ್ಮೆಯಿಂದ ನುಡಿದರು.
ಕಳೆದ ವರ್ಷವಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದನ್ನು ನೆನೆದ ಅವರು, ‘ಮತ್ತೊಮ್ಮೆ ನಮ್ಮ ರಾಷ್ಟ್ರಪತಿಗಳ ಅಮೃತಹಸ್ತದಿಂದ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಭಾಗ್ಯ. ಈ ಯಶಸ್ಸಿನ ಶ್ರೇಯಸ್ಸನ್ನು ರಂಗಭೂಮಿ ಮತ್ತು ಚಿತ್ರರಂಗದ ಸಹಕಲಾವಿದರು, ತಾಂತ್ರಿಕ ವರ್ಗ ಹಾಗೂ ನನ್ನ ಪಾತ್ರಗಳನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋಟ್ಯಂತರ ಅಭಿಮಾನಿಗಳಿಗೆ ಸಮರ್ಪಿಸುತ್ತೇನೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.