'ಸಿನಿಮಾನೂ ಬಿಡಲ್ಲ ರಾಜಕೀಯನೂ ಬಿಡಲ್ಲ'

By Suvarna Web DeskFirst Published Nov 14, 2017, 4:27 PM IST
Highlights

ಚುನಾವಣೆ ಮುಗಿಯುವ ತನಕ ಹೊಸ ಚಿತ್ರ ಇಲ್ಲ: ಉಪೇಂದ್ರ

ಉಪೇಂದ್ರ ರಾಜಕೀಯದತ್ತ ಮುಖ ಮಾಡುತ್ತಿರುವಂತೆಯೇ ಚಿತ್ರರಂಗದಲ್ಲಿ ಅವರ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ಶುರುವಾಗಿದೆ. ಉಪ್ಪಿ ನಟನೆಯಿಂದ ದೂರ ಸರಿಯುತ್ತಾರೆಯೇ? ಒಪ್ಪಿಕೊಂಡಿರುವ ಸಿನಿಮಾಗಳು ಯಾವುವು? ಚುನಾವಣೆ ಗದ್ದಲದಲ್ಲಿ ಯಾವ ಚಿತ್ರವನ್ನು ಮುಗಿಸುತ್ತಾರೆ? ಯಾವ ಚಿತ್ರ ಬಿಡುಗಡೆಗೆ ಸಿದ್ಧವಿದೆ? ಇಂಥ ಪ್ರಶ್ನೆಗಳು ಉಪ್ಪಿ ಮುಂದೆ ಕಾಲು ಚಾಚಿ ಕೂತಿವೆ. ಎಲ್ಲದಕ್ಕೂ ಒಂದೇ ಮಾತಿನಲ್ಲಿ ಉತ್ತರಿಸುವಂತೆ ಮಾತನಾಡಿದ್ದು ‘ಉಪೇಂದ್ರ ಮತ್ತೆ ಬಾ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ. ಓವರ್ ಟು ಉಪೇಂದ್ರ. ಸದ್ಯಕ್ಕೆ ನನ್ನ ಅಭಿನಯದ ‘ಉಪೇಂದ್ರ ಮತ್ತೆ ಬಾ’ ಸಿನಿಮಾ ಇದೇ ಶುಕ್ರವಾರ ನ.17ಕ್ಕೆ ತೆರೆ ಕಾಣುತ್ತಿದೆ.

ಈ ಚಿತ್ರದ ನಂತರ ‘ಹೋಂ ಮಿನಿಸ್ಟರ್’ ಸಿನಿಮಾ ತೆರೆಗೆ ಬರಲಿದೆ. ಯಾಕೆಂದರೆ ಚುನಾವಣೆ ಶುರುವಾಗುವ ಹೊತ್ತಿಗೆ ಈ ಚಿತ್ರವನ್ನು ಮುಗಿಸಿ ಕೊಡಲಿದ್ದೇನೆ. ಈ ಚಿತ್ರಗಳ ನಂತರ ಸಾಲಿನಲ್ಲಿರುವ ‘ಉಪ್ಪಿ ರುಪಿ’ ಸದ್ಯಕ್ಕೆ ಶುರುವಾಗಲ್ಲ. ಅದು ಚುನಾವಣೆಯ ನಂತರ ಟೇಕಾಫ್ ಆಗುವ ಸಾಧ್ಯತೆಗಳಿವೆ. ಈ ಚಿತ್ರಗಳ ನಂತರ ನಾನು ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಹಾಗೆ ನೋಡಿದರೆ ಚುನಾವಣೆ ಮುಗಿಯುವ ತನಕ ಯಾವ ಚಿತ್ರಕ್ಕೂ ಕಮಿಟ್ ಆಗಲ್ಲ. ಹಾಗಂತ ನಾನು ಚಿತ್ರರಂಗ ಬಿಟ್ಟು ಹೋಗುತ್ತೇನಾ? ರಾಜಕೀಯದಲ್ಲೇ ಖಾಯಂ ಆಗಿರುತ್ತೇನಾ? ಎಂಬುದು ಜನರಿಗೆ ಬಿಟ್ಟಿದ್ದು. ಮತ ಹಾಕುವ ಪ್ರಜೆಗಳಿಗೆ, ಸಿನಿಮಾ ನೋಡುವ ಪ್ರೇಕ್ಷಕರ ನಿರ್ಧಾರದ ಮೇಲೆ ನನ್ನ ನಡೆ ನಿಂತಿದೆ.

ಈ ಚುನಾವಣೆಯಲ್ಲಿ ನಿಂತು ಸೋತರೆ ಮತ್ತೆ ರಾಜಕೀಯಕ್ಕೆ ಹೋಗಲ್ಲ ಎಂದುಕೊಳ್ಳಬೇಡಿ. ನಾನು ಸಾಯುವವರೆಗೂ ಇಲ್ಲೇ ಇರುತ್ತೇನೆ. ಸೋಲು- ಗೆಲುವಿಗಾಗಿ ನಾನು ರಾಜಕೀಯ ಮಾಡುತ್ತಿಲ್ಲ. ಯಾಕೆಂದರೆ ನನ್ನದು ರಾಜಕೀಯ ಅಲ್ಲ, ಪ್ರಜಾಕೀಯ. ಈಗ ಕಾರಣಕ್ಕೆ ‘ಹೋಂ ಮಿನಿಸ್ಟರ್’ ಮುಗಿದ ಕೂಡಲೇ ಚುನಾವಣೆ ರಂಗೇರುತ್ತದೆ. ಹೀಗಾಗಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ನಾನು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳಬೇಕು ಅಥವಾ ‘ಉಪ್ಪಿ ರುಪಿ’ ಸಿನಿಮಾ ಪೂರ್ಣಗೊಳ್ಳ ಬೇಕು ಅಂದರೆ ಚುನಾವಣೆ ಮುಗಿಯಬೇಕು. ? (ಕನ್ನಡಪ್ರಭ ಸಿನಿವಾರ್ತೆ)

click me!