ಟೋಬಿ ಟ್ರೈಲರ್ 24 ಗಂಟೆಯಲ್ಲಿ 31 ಲಕ್ಷ ಹಿಟ್ಸ್, ಪರಭಾಷೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದು ಹೇಗೆ? ವಿಶ್ಲೇಷಣೆ, ವಿಮರ್ಶೆ ಮತ್ತು ಮೆಚ್ಚುಗೆ: ಟೋಬಿಗೆ ನಮಸ್ಕಾರ
2023ರ 7 ತಿಂಗಳು ಕಳೆದಿದೆ. ಈ ವರ್ಷದಲ್ಲಿ ಸ್ಪಷ್ಟವಾಗಿ ಹಿಟ್ ಅನ್ನಿಸಿಕೊಂಡಿದ್ದು 2 ಸಿನಿಮಾ. ಒಂದು ಡೇರ್ ಡೆವಿಲ್ ಮುಸ್ತಾಫ. ಇನ್ನೊಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ವಿಶಿಷ್ಟವಾಗಿ ರೂಪುಗೊಂಡಿರುವ ಹಾಸ್ಟೆಲ್ ಹುಡುಗರು ಸಿನಿಮಾ ಚಿತ್ರರಂಗದಲ್ಲಿ ಹರ್ಷ ತಂದಿತ್ತು. ಪ್ರೇಕ್ಷಕರನ್ನು ಮತ್ತೆ ಥಿಯೇಟರ್ ಕಡೆಗೆ ಮುಖ ಮಾಡುವಂತೆ ಮಾಡಿತ್ತು. ಅದರ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. 24 ಗಂಟೆಯಲ್ಲಿ 31 ಲಕ್ಷ ಹಿಟ್ಸ್ ಸಂಪಾದಿಸಿದೆ.
ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳಿರುವ ಯೂಟ್ಯೂಬ್ ಚಾನಲ್ ವೀಡಿಯೋ ಒಂದಕ್ಕೆ ಮೂರು ಮಿಲಿಯನ್ ಹಿಟ್ಸ್ ಸಂಪಾದಿಸುವುದು ದೊಡ್ಡ ವಿಷಯವಲ್ಲ. ಆದರೆ ಆ.4ರಂದು 60 ಸಾವಿರ ಚಿಲ್ಲರೆ ಸಬ್‌ಸ್ಕ್ರೈಬರ್ ಇದ್ದ ಯೂಟ್ಯೂಬ್ ಚಾನಲ್ ಒಂದರಲ್ಲಿ ಒಂದು ವಿಡಿಯೋ 31 ಲಕ್ಷ ಹಿಟ್ಸ್ ಸಂಪಾದಿಸಿದ್ದು ನಿಜಕ್ಕೂ ದೊಡ್ಡ ಸಾಧನೆ. ಅದಕ್ಕೆ ಕಾರಣ ಕಂಟೆಂಟ್.
ಈ ಕಂಟೆಂಟ್ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವುದಷ್ಟೇ ಅಲ್ಲ, ಪರಭಾಷೆಯ ಸಿನಿ ಪ್ರೇಮಿಗಳ ಹುಬ್ಬೇರಿಸಿದೆ. ಅದಕ್ಕೆ ಸಾಕ್ಷಿ ದೀಕ್ಷಾ ಶರ್ಮಾ ಎಂಬ ಖ್ಯಾತ ಬಾಲಿವುಡ್ ಯೂಟ್ಯೂಬರ್ ಮಾಡಿರುವ ಟ್ರೈಲರ್ ರಿವ್ಯೂ. ಆಕೆ ಈ ಟ್ರೈಲರ್ ಕುರಿತು ಮಾತನಾಡುತ್ತಾ ಈ ಸಿನಿಮಾ ಕಾಂತಾರ ಥರ ಈ ವರ್ಷದ ಸೂಪರ್‌ಹಿಟ್ ಸಿನಿಮಾ ಆಗಲಿದೆ ಎಂದಿದ್ದಾರೆ. ರಾಜ್ ಬಿ ಶೆಟ್ಟಿ ಇಂಡಿಯನ್ ಸಿನಿಮಾದ ಅಂಡರ್ ರೇಟೆಡ್ ನಟ ಎಂದೂ ಹೇಳಿದ್ದಾರೆ. ಟೋಬಿ ಟ್ರೈಲರ್ ನೋಡಿರುವ ಯಾರು ಕೂಡ ಆಕೆಯ ಮಾತನ್ನು ಅಲ್ಲಗಳೆಯುವುದಿಲ್ಲ. ಹಾಗಿದ್ದರೆ ಈ ಟ್ರೈಲರ್ ಅಷ್ಟೊಂದು ಹಿಟ್ ಆಗುವುದಕ್ಕೆ ಏನು ಕಾರಣ?
1. ಬರವಣಿಗೆ
ಟೋಬಿ ಎಂಬ ಪಾತ್ರವನ್ನು ಸೃಷ್ಟಿಸಿದ್ದು ಟಿ.ಕೆ. ದಯಾನಂದ ಎಂಬ ಕತೆಗಾರ. ಆ ಪಾತ್ರವನ್ನು ತನ್ನ ದೃಷ್ಟಿಕೋನದಲ್ಲಿ ನೋಡಿ, ತನ್ನ ಶೈಲಿಯನ್ನು ಕೊಟ್ಟು ಚಿತ್ರಕತೆ ರೂಪಿಸಿದ್ದು ರಾಜ್ ಬಿ ಶೆಟ್ಟಿ ಎಂಬ ದೈತ್ಯ ಬರಹಗಾರ. ಈ ಟ್ರೈಲರ್ ಕಟ್ಟಿಕೊಟ್ಟಿರುವ ರೀತಿ, ಅದರಲ್ಲಿ ಬರುವ ಪಾತ್ರಗಳು, ಆ ಪಾತ್ರಗಳು ಮಾತನಾಡುವ ಮಾತುಗಳೇ ರಾಜ್ ಶೆಟ್ಟಿ ಎಂಥಾ ಬರಹಗಾರ ಎಂಬುದಕ್ಕೆ ಪುರಾವೆ ಒದಗಿಸುತ್ತವೆ. ಉದಾಹರಣೆಗೆ ಸಂಭಾಷಣೆ ಸಾಲುಗಳನ್ನು ನೋಡಿ.
ತಣ್ಣಗಾದರೆ ಸೌದೆಗೇನು ಬೆಲೆ, ಬೆಂಕಿ ಬಿದ್ರೇನೇ ದೊಡ್ಡವರ ಮೈ ಕಾಯೋದು. ಯಾರಿಗೇ ಆದರೂ ಅರ್ಥವಾಗುವ ಸಾಲು ಇದು. ಆದರೆ ಇಲ್ಲಿ ಸೌದೆ ಸೌದೆಯಲ್ಲ. ಯಾರೇ ಇದ್ರೂ ತಣ್ಣಗಿದ್ದರೆ ಸೌದೆ. ಉರಿದರೆ ಬೆಂಕಿ. ಒಂದು ಪಾತ್ರವನ್ನು ಇಷ್ಟು ಸರಳವಾಗಿ ಅರ್ಥ ಮಾಡಿಸುವ ಶಕ್ತಿ ಇರುವುದಕ್ಕೆ ರಾಜ್ ಒಬ್ಬ ದೈತ್ಯ ಬರಹಗಾರ.
ಈ ಟ್ರೈಲರನ್ನು ಆರಂಭಿಸಿರುವ ರೀತಿ ನೋಡಿ.
ಹರಕೆ ಕುರಿಯೊಂದು ತಪ್ಪಿಸಿಕೊಂಡಿದೆ. ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡಿರುವ ಕುರಿ ಯಾವುದೇ ಕಾರಣಕ್ಕೂ ವಾಪಸ್ ಬರಬಾರದು. ಬಂದರೆ ಅದು ಕುರಿಯಾಗಿರುವುದಿಲ್ಲ, ಮಾರಿಯಾಗಿರುತ್ತದೆ.
ಆ ಪಾತ್ರ ಬರಬಾರದು ಎನ್ನುತ್ತದೆ. ಬಂದರೆ ಮಾತ್ರ ಟೋಬಿ. ಅದು ಎಲ್ಲರಿಗೂ ಗೊತ್ತಿರುತ್ತದೆ. ಮಾರಿ ಹಬ್ಬ ಆಗಬೇಕಾದರೆ ಕುರಿ ವಾಪಸ್ ಬರಬೇಕು. ಬಂದೇ ಬರುತ್ತದೆ. ಅದು ವಾಪಸ್ ಬರುವಾಗ ಪ್ರೇಕ್ಷಕನಿಗೆ ಕೊಡುವ ಒಂದು ರೋಮಾಂಚನವನ್ನು ಆ ದೃಶ್ಯವಷ್ಟೇ ವಿವರಿಸಬಲ್ಲದು.
ಇನ್ನೊಂದು ಸಾಲು ಹೀಗಿದೆ- ಟೋಬಿ ಕಣ್ಣು ಮುಚ್ಚಿದರೆ ಒಳ್ಳೇದಿತ್ತು, ಆದರೆ ಅವನು ಕಣ್ಣು ಬಿಟ್ಟಾಗಿತ್ತು.
ಕ್ಲ್ಯೈಮ್ಯಾಕ್ಸ್‌ಗೆ ರೆಡಿ ಮಾಡೋದು ಅಂದ್ರೆ ಹೀಗೇ. ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಇದ್ದಂತೆ ಟ್ರೇಲರ್‌ನಲ್ಲೂ ಕ್ಲೈಮ್ಯಾಕ್ಸ್ ಇರುತ್ತದೆ. ಅದನ್ನು ತಿಳಿಸುವ ಸಂಭಾಷಣೆ ಇದು. ಆ ಸಂಭಾಷಣೆಯ ನಂತರ ಬರುವ ದೃಶ್ಯಗಳನ್ನು ಥಿಯೇಟರ್‌ನಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕಾಯುವುದರಲ್ಲಿ ಡೌಟೇ ಇಲ್ಲ.
2. ನಟನೆ
ನಾಯಕ ಎಂದರೆ ಹೀಗೇ ಇರಬೇಕು ಎಂಬ ಎಲ್ಲಾ ಗೈಡ್‌ಲೈನ್ಸ್‌ಗಳನ್ನು ಮತ್ತೊಮ್ಮೆ ಚಚ್ಚಿ ಬಿಸಾಕಿದ್ದಾರೆ ರಾಜ್. ಕಣ್ಣುಗಳಲ್ಲೇ ಮಾತನಾಡುವುದು ಎಂದು ಅನೇಕರನು ಹೇಳುವುದನ್ನು ಕೇಳಿರಬಹುದು. ಈ ಟ್ರೈಲರ್‌ನಲ್ಲಿ ರಾಜ್ ಕಣ್ಣುಗಳನ್ನು ನೋಡಿದರೆ ನಿಮಗೆ ಅರ್ಥವಾಗಬಹುದು. ಕಣ್ಣಲ್ಲೇ ಬೆಂಕಿ ಇದ್ದಂತೆ ಭಾಸವಾಗುತ್ತದೆ. ಅವರಷ್ಟೇ ಅಲ್ಲ, ಚೈತ್ರಾ ಆಚಾರ್ ಇಲ್ಲಿ ಮತ್ತೊಂದು ಕೆಂಡದುಂಡೆ. ಅವರ ಅಭಿನಯವೂ ಇಲ್ಲಿ ಟಾಪ್ ಕ್ಲಾಸ್. ಗೋಪಾಲ ಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಹೀಗೆ ಕಲಾವಿದರು ಪ್ರತಿಯೊಂದು ಪಾತ್ರವೂ ನೆನಪಲ್ಲಿ ಉಳಿಯುವಂತೆ ನಟಿಸಿದ್ದಾರೆ. ಎಲ್ಲರೂ ಕನ್ನಡಿಗರು ಅನ್ನುವುದು ವಿಶೇಷ. ಕನ್ನಡ ಸಿನಿಮಾವನ್ನು ಎತ್ತಿ ಹಿಡಿಯಲಿರುವ ಎಲ್ಲಾ ಕಲಾವಿದರಿಗೆ ನಮಸ್ಕಾರ.
'ತಣ್ಣಗಾದ್ರೆ ಸೌದೆಗೆ ಏನ್ ಬೆಲೆ..' ಯೂಟ್ಯೂಬ್‌ನಲ್ಲಿ ಟೋಬಿ ಟ್ರೇಲರ್ ಬೆಂಕಿ!
3. ಛಾಯಾಗ್ರಹಣ ಮತ್ತು ಸಂಗೀತ
ಪ್ರವೀಣ್ ಶ್ರೀಯಾನ್ ಮತ್ತು ಮಿದುನ್ ಮುಕುಂದನ್ ಕನ್ನಡ ಚಿತ್ರರಂಗದ ಅದ್ಭುತ ತಂತ್ರಜ್ಞರು ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಕಟ್ಟಿಕೊಡುತ್ತಾ, ರಾಜ್ ಕಣ್ಣುಗಳಲ್ಲಿ ಬೆಂಕಿಯನ್ನು ತೋರಿಸುತ್ತಾ ಸಿಟ್ಟನ್ನು, ಅಸಹಾಕತೆಯನ್ನು ಕ್ಯಾಮರಾ ಕಣ್ಣಲ್ಲಿ ದಾಟಿಸುವ ಪ್ರವೀಣ್ ಶ್ರೀಯಾನ್ ಎಂಬ ಮಾಂತ್ರಿಕ ಛಾಯಾಗ್ರಾಹಕ ಹೊಳೆ ದಂಡೆಯಲ್ಲಿ ಗಾಳ ಹಾಕುತ್ತಾ ಕೂರುವ ರಾಜ್ ಬಿ ಶೆಟ್ಟಿಯವರನ್ನು ತೋರಿಸುವಾಗ ಪ್ರಕೃತಿಯ ಮೇರು ಸೌಂದರ್ಯವನ್ನು ಕಾಣಿಸುತ್ತಾರೆ. ಈ ಎರಡೂ ದೃಶ್ಯಗಳಲ್ಲಿ ಬೇರೆ ಬೇರೆ ರೀತಿ ಕಲರ್ ಪ್ಯಾಟರ್ನ್ ಗಮನಿಸಬಹುದು. ಇನ್ನು ಮಿದುನ್ ಮುಕುಂದನ್ ಸಂಗೀತವೂ ಅಷ್ಟೇ. ಸನ್ನಿವೇಶಕ್ಕೆ ತಕ್ಕಂತೆ ಭಾವ ಬದಲಾಗುತ್ತದೆ, ಆ ಭಾವವನ್ನು ಉದ್ದೀಪಿಸುವ ಕೆಲಸವನ್ನು ಮಿದುನ್ ಸಂಗೀತದ ಮೂಲಕ ಮಾಡಿದ್ದಾರೆ.
ಮಾಸ್ಟರ್ ಪೀಸ್ ಅನ್ನಿಸುವಂತೆ ಈ ಟ್ರೈಲರ್ ರೂಪುಗೊಂಡಿದೆ. ಆದರೆ ಪಿಚ್ಚರ್ ಅಭೀ ಬಾಕಿ ಹೈ. ಟೋಬಿ ಆಗಸ್ಟ್ 25ರಂದು ಬಿಡುಗಡೆಯಾಗುತ್ತಿದೆ.
Toby: ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ 'ಟೋಬಿ', ನಟನೆ ಜೊತೆಗೆ ನಿರ್ದೇಶನ