
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ನಾಟಕ ಪ್ರದರ್ಶನ ವೇಳೆಯೇ ಕಲಾವಿದರೊಬ್ಬರು ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೋಗನಹಳ್ಳಿಯ ಕಲಾವಿದ ಶಿವಣ್ಣ (Shivanna) ಮೃತ ದುರ್ದೈವಿ. ಶಿವಣ್ಣ ಅವರಿಗೆ 45 ವರ್ಷಗಳಾಗಿತ್ತು. ಬೋಗನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 14 ರಂದು ವಿಶೇಷ ನಾಟಕ ಆಯೋಜನೆ ಆಗಿತ್ತು. 'ಹೃದಯ ಜಾರಿತು ಪ್ರೀತಿ ಉಳಿಯಿತು' ಎಂಬ ನಾಟಕವನ್ನು ಪ್ರದರ್ಶನ ನಡೆಯುತ್ತಿತ್ತು. ನಾಟಕದಲ್ಲಿ ಅಭಿನಯ ಮಾಡುತ್ತಿದ್ದಾಗ ಶಿವಣ್ಣ ಏಕಾಏಕಿ ಕುಸಿದುಬಿದ್ದಿದ್ದಾರೆ.
ಕುಸಿದು ಬೀಳುತ್ತಿದ್ದಂತೆಯೇ ಸಹ ಕಲಾವಿದರಲ್ಲೇ ಆಘಾತಕ್ಕೆ ಒಳಗಾಗಿದ್ದಾರೆ. ಬೆನ್ನಲ್ಲೇ ಕುಸಿದು ಬಿದ್ದ ಶಿವಣ್ಣನನ್ನು ಆರೈಕೆ ಮಾಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಶಿವಣ್ಣ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಕ್ಟೋಬರ್ 14ರಂದು ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿವಣ್ಣ ಅವರಿಗೆ ಹೃದಯಾಘಾತ ಸಂಭವಿಸಿದೆ.
ಬಣ್ಣ ಹಚ್ಚಿಅಭಿನಯ ಮಾಡುತ್ತಿದ್ದಾಗಲೇ ಪ್ರಾಣ ಕಳೆದುಕೊಂಡಿರೋದು ಸಹ ಕಲಾವಿದರಿಗೆ ತುಂಬಾ ನೋವಿನ ಸಂಗತಿ ಆಗಿದೆ. ಅಪರೂಪದ ಕಲಾವಿದನನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಇನ್ನು ನಾಟಕ ವೀಕ್ಷಣೆ ಮಾಡುತ್ತಿದ್ದ ಪ್ರೇಕ್ಷಕರೂ ಕೂಡ ಒಂದು ಕ್ಷಣ ಆಘಾತಕ್ಕೆ ಒಳಗಾದರು. ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ನಾಟಕವನ್ನು ಮಧ್ಯಕ್ಕೆ ನಿಲ್ಲಿಸಲಾಯಿತು. ಇನ್ನೊಂದು ವಿಚಾರ ಅಂದ್ರೆ ಶಿವಣ್ಣ ಅದೇ ಗ್ರಾಮದವನಾಗಿದ್ದರಿಂದ, ಎಲ್ಲರಿಗೂ ಚಿರಪರಿಚಿತರಿದ್ದರು.
ಇನ್ನು, ನಟನೆ ವೇಳೆ ಶಿವಣ್ಣ ಕುಸಿದು ಬಿದ್ದ ಸುದ್ದಿ ಕೇಳಿ ಕುಟುಂಬಸ್ಥರು ಸ್ಥಳಕ್ಕೆ ಓಡೋಡಿ ಬಂದಿದ್ದರು. ಆದರೆ ಮನೆಯ ಸದಸ್ಯನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದರಿಂದ ಕುಟುಂಬದ ಸದಸ್ಯರು ತುಂಬಾ ದುಃಖದಲ್ಲಿದ್ದಾರೆ. ಶಿವಣ್ಣನನ್ನು ಕಳೆದುಕೊಂಡ ಕುಟುಂಬ ಆಘಾತಕ್ಕೆ ಸಿಲುಕಿದೆ. ಇತ್ತ ಕಲಾವಿದ ಶಿವಣ್ಣನ ನಿವಾಸಕ್ಕೆ ಊರಿನ ಹಿರಿಯ ಮುಖಂಡರು, ಸಂಬಂಧಿಕರು, ಬಂಧುಗಳು ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳ್ತಿದ್ದಾರೆ.
ಕಲಾವಿದನೊಬ್ಬ ತನ್ನ ಕಲೆಯಲ್ಲೇ ಕಳೆದುಹೋಗಿ ಹೃದಯಾಘಾತಕ್ಕೆ ಒಳಗಾಗಿರೋದು ತುಂಬಾನೇ ಬೇಸರದ ವಿಚಾರ. ಅವರು ಇನ್ನಷ್ಟು ದಿನಗಳ ಕಾಲ ಇರಬೇಕಿತ್ತು. ನಮ್ಮನ್ನು ರಂಜಿಸಬೇಕಿತ್ತು ಅನ್ನೋದು ಊರಿನ ಜನರ ನೋವಿನ ಮಾತುಗಳಾಗಿವೆ. ಇನ್ನು ಕಲಾವಿದ ಏಕಾಏಕಿ ಕುಸಿದು ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇದೀಗ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.