
ಭಾರತದ ಮೊದಲ 'A' ರೇಟೆಡ್ ಸಿನಿಮಾ ಯಾವುದು ಗೊತ್ತಾ? ಕೇವಲ 16 ವರ್ಷದ ಮಧುಬಾಲಾ ನಟಿಸಿದ್ದ ಆ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯಾಕೆ 'ದೊಡ್ಡವರಿಗೆ ಮಾತ್ರ' ಅಂತ ಸರ್ಟಿಫಿಕೇಟ್ ಕೊಟ್ಟಿತ್ತು? ಕೌಟುಂಬಿಕ ಹಿಂಸೆ ಮತ್ತು ಮಹಿಳಾ ಹಕ್ಕುಗಳ ಕಥೆ ಅಂದಿನ ಕಾಲಕ್ಕೆ ಅರಗಿಸಿಕೊಳ್ಳಲು ಕಷ್ಟವಾಗಿತ್ತಾ? ದೇಶಾದ್ಯಂತ ಯಾಕೆ ವಿವಾದದ ಕಿಡಿ ಹೊತ್ತಿಕೊಂಡಿತ್ತು? 75 ವರ್ಷಗಳ ಹಿಂದಿನ ಆ ಐತಿಹಾಸಿಕ ಸಿನಿಮಾದ ಸಂಪೂರ್ಣ ಕಥೆ ಇಲ್ಲಿದೆ.
ಈಗಿನ ಕಾಲದಲ್ಲಿ 'A' ರೇಟೆಡ್ ಸಿನಿಮಾಗಳು, ವೆಬ್ ಸೀರೀಸ್‌ಗಳು ತುಂಬಾನೇ ಕಾಮನ್. ಆದರೆ, ಭಾರತದ ಮೊಟ್ಟಮೊದಲ 'A' ರೇಟೆಡ್ ಸಿನಿಮಾ ಯಾವುದು ಅಂತ ನಿಮಗೆ ಗೊತ್ತಾ? ಈ ದಾಖಲೆ ಬರೆದಿದ್ದು 1950ರಲ್ಲಿ ತೆರೆಕಂಡ 'ಹಂಸತೇ ಆಂಸೂ' ಅನ್ನೋ ಸಿನಿಮಾ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಮಧುಬಾಲಾ ನಾಯಕಿಯಾಗಿದ್ದರು. ಆಗ ಅವರಿಗೆ ಕೇವಲ 16 ವರ್ಷ ವಯಸ್ಸು! ಇದೊಂದು ಫ್ಯಾಮಿಲಿ ಕಾಮಿಡಿ-ಡ್ರಾಮಾ ಅಂತ ಹೇಳಲಾಗಿತ್ತು. ಆದರೆ ಸೆನ್ಸಾರ್ ಬೋರ್ಡ್, ಈ ಸಿನಿಮಾ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸೂಕ್ತ ಅಂತ ತೀರ್ಪು ಕೊಟ್ಟಿತ್ತು. ಕೌಟುಂಬಿಕ ಹಿಂಸೆ, ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಾದ ಈ ಚಿತ್ರದ ಕಥೆ, ಆ ಕಾಲದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ಭಾರತದ ಮೊದಲ 'A' ರೇಟೆಡ್ ಸಿನಿಮಾ 'ಹಂಸತೇ ಆಂಸೂ'
1950ರಲ್ಲಿ ರಿಲೀಸ್ ಆದ 'ಹಂಸತೇ ಆಂಸೂ' ಚಿತ್ರವನ್ನು ಭಾರತೀಯ ಚಿತ್ರರಂಗದ ಮೊದಲ 'A' ಸರ್ಟಿಫಿಕೇಟ್ ಪಡೆದ ಸಿನಿಮಾ ಎಂದು ಪರಿಗಣಿಸಲಾಗಿದೆ. ಕೆ.ಬಿ. ಲಾಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು. 1949ರಲ್ಲಿ ಈ ಸಿನಿಮಾದ ಘೋಷಣೆ ಮಾಡಿದಾಗ, ಇದೊಂದು ಫ್ಯಾಮಿಲಿ ಕಾಮಿಡಿ-ಡ್ರಾಮಾ ಎಂದೇ ಹೇಳಲಾಗಿತ್ತು. ಆದರೆ, ಸೆನ್ಸಾರ್ ಬೋರ್ಡ್ ಪರಿಶೀಲನೆ ನಡೆಸಿದ ನಂತರ, ಈ ಚಿತ್ರ ವಯಸ್ಕ ಪ್ರೇಕ್ಷಕರಿಗೆ ಮಾತ್ರ ಸೂಕ್ತ ಎಂದು ನಿರ್ಧರಿಸಿ 'A' ಸರ್ಟಿಫಿಕೇಟ್ ನೀಡಿ ಬಿಡುಗಡೆ ಮಾಡಿತು.
16 ವರ್ಷದ ಮಧುಬಾಲಾ ಚಿತ್ರದ ನಾಯಕಿ
ಈ ಸಿನಿಮಾದಲ್ಲಿ ಮಧುಬಾಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆಗ ಅವರಿಗೆ ಕೇವಲ 16 ವರ್ಷ ವಯಸ್ಸು. ಅವರ ಜೊತೆ ಮೋತಿಲಾಲ್, ಗೋಪ್ ಮತ್ತು ಮನೋರಮಾ ಅವರಂತಹ ಕಲಾವಿದರು ಕೂಡ ಪ್ರಮುಖ ಪಾತ್ರಗಳಲ್ಲಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಧುಬಾಲಾ ನಿರ್ವಹಿಸಿದ ಈ ಪಾತ್ರ, ಆ ಕಾಲಕ್ಕೆ ಬಹಳ ಸವಾಲಿನದ್ದಾಗಿತ್ತು.
'ಹಂಸತೇ ಆಂಸೂ' ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದ್ದೇಕೆ?
ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಕೌಟುಂಬಿಕ ಹಿಂಸೆ, ವೈವಾಹಿಕ ಕಿರುಕುಳ ಮತ್ತು ಕೆಲವು ಸಂಭಾಷಣೆಗಳನ್ನು ಸೆನ್ಸಾರ್ ಬೋರ್ಡ್ 'ವಯಸ್ಕರ ವಿಷಯ' (Adult Content) ಎಂದು ಪರಿಗಣಿಸಿತ್ತು. ಇದಲ್ಲದೆ, ಚಿತ್ರದ ಶೀರ್ಷಿಕೆ ಮತ್ತು ಅದರ ಪ್ರೆಸೆಂಟೇಷನ್ ಬಗ್ಗೆಯೂ ಕೆಲವು ಆಕ್ಷೇಪಗಳು ಕೇಳಿಬಂದಿದ್ದವು. ಇದೇ ಕಾರಣಗಳಿಂದ 'ಹಂಸತೇ ಆಂಸೂ' ಭಾರತದ ಮೊದಲ 'A' ರೇಟೆಡ್ ಸಿನಿಮಾ ಎಂಬ ಹಣೆಪಟ್ಟಿ ಪಡೆಯಿತು.
ಈ ಸಿನಿಮಾದ ಕಥೆ ಉಷಾ ಎಂಬ ಮಹಿಳೆಯ ಸುತ್ತ ಹೆಣೆಯಲಾಗಿತ್ತು. ಈ ಪಾತ್ರವನ್ನು ಮಧುಬಾಲಾ ನಿರ್ವಹಿಸಿದ್ದರು. ಉಷಾ ತನ್ನ ಗಂಡ ಕುಮಾರ್‌ನ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾಳೆ. ನಂತರ ಒಂದು ದಿನ ಮನೆ ಬಿಟ್ಟು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಶುರು ಮಾಡುತ್ತಾಳೆ. ಚಿತ್ರದಲ್ಲಿ ಉಷಾ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುದನ್ನೂ ತೋರಿಸಲಾಗಿತ್ತು. ಆ ಕಾಲದಲ್ಲಿ, ಅನೇಕರು ಇದನ್ನು ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದರು. ಆದರೆ, ಇನ್ನು ಕೆಲವರು ಮಹಿಳೆಯರ ಪರ ಧ್ವನಿ ಎತ್ತುವ ಪ್ರಗತಿಪರ ಸಿನಿಮಾ ಎಂದು ಹೊಗಳಿದ್ದರು. ಏನೇ ಆದರೂ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.