
ಬೆಂಗಳೂರು(ಫೆ.09): ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ರಾಜಕುಮಾರ' ಚಿತ್ರೀಕರಣವನ್ನು ಹೆಚ್ಚು ಕಮ್ಮಿ ಮುಗಿಸಿರುವ ಪುನೀತ್ ರಾಜ್‌ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಹೀಗೊಂದು ಲೆಕ್ಕಾಚಾರ ಶುರುವಾಗುವ ಮುನ್ನವೇ ಹರ್ಷ ನಿರ್ದೇಶನದಲ್ಲಿ ‘ಅಂಜನಿಪುತ್ರ' ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರಕ್ಕೆ ಪುನೀತ್ ಹೀರೋ. ‘ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ನಾಯಕಿ. ಈ ನಡುವೆ ನಿರ್ದೇಶಕ ಸೂರಿ ಜತೆ ಹೋಗಿ ಪುನೀತ್ ರಾಜ್‌ಕುಮಾರ್ ವೆಟ್ರಿಮಾರನ್ ಎಂಬ ತಮಿಳು ನಿರ್ದೇಶಕರನ್ನು ಭೇಟಿ ಮಾಡಿ ಬಂದಿರುವ ವರ್ತಮಾನ ಬಂದಿದೆ.
ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಅದು ಕನ್ನಡಕ್ಕೂ ರಿಮೇಕ್ ಆಗುತ್ತಿರುವ ಸರದಿಯಲ್ಲಿರುವ ‘ವಿಸಾರಣೈ' ಚಿತ್ರದ ನಿರ್ದೇಶಕನೇ ವೆಟ್ರಿಮಾರನ್. ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಿರುವ ವೆಟ್ರಿಮಾರನ್‌ಗೆ, ಸೂಕ್ಷ್ಮ ಕತೆಗಳನ್ನು ತೆರೆ ಮೇಲೆ ತರುವ ಜಾಣ್ಮೆ ಇದೆ. ಇಂಥ ನಿರ್ದೇಶಕರ ಜತೆ ತಮ್ಮ ಮುಂದಿನ ಸಿನಿಮಾ ಮಾಡುವುದಕ್ಕೆ ಪುನೀತ್‌ರಾಜ್‌ಕುಮಾರ್ ಯೋಚಿಸುತ್ತಿದ್ದಾರೆ. ಆ ನಿಟ್ಟಿನಲ್ಲೇ ವೆಟ್ರಿಮಾರನ್ ಅವರನ್ನು ಭೇಟಿ ಮಾಡಿ ಬಂದಿದ್ದು, ತಮ್ಮ ಮುಂದಿನ ಚಿತ್ರಕ್ಕೆ ಕತೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಅಪ್ಪು.
ಆ ಮೂಲಕ ಕನ್ನಡದ ಪವರ್ ಸ್ಟಾರ್ ಚಿತ್ರಕ್ಕೆ ಮತ್ತೊಬ್ಬ ಪರಭಾಷೆಯ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ಹಾಗೆ ನೋಡಿದರೆ ಕನ್ನಡದ ಸ್ಟಾರ್ ನಟರ ಪೈಕಿ ಪುನೀತ್‌ರಾಜ್‌ಕುಮಾರ್ ಅವರಂತೆ ಬೇರೆ ಯಾವ ನಟರು ಪರಭಾಷೆಯ ನಿರ್ದೇಶಕರನ್ನು ಆಕರ್ಷಿಸಿಲ್ಲ, ಸದ್ಯ ಸೆಟ್ಟೇರುವ ಸರದಿಯಲ್ಲಿರುವ ಗೌತಮ್ ಮೆನನ್ ಚಿತ್ರವೊಂದಕ್ಕೆ ಪುನೀತ್‌ರಾಜ್‌ಕುಮಾರ್ ಅವರೇ ಹೀರೋ. ಈ ಚಿತ್ರ ಶುರುವಾಗುವ ಮುನ್ನವೇ ಈಗ ವೆಟ್ರಿ ಮಾರನ್ ಅವರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀಚೆಗೆ ಪುನೀತ್ ಅವರು ಹೀಗೆ ಪರಭಾಷೆಯ ನಿರ್ದೇಶಕರನ್ನು ಆಕರ್ಷಿಸುತ್ತಿರುವುದು ಯಾಕೆ? ಅದರಲ್ಲೂ ತಮಿಳಿನಲ್ಲಿ ಹೊಸ ರೀತಿಯ ಸಿನಿಮಾಗಳನ್ನು ಕೊಟ್ಟನಿರ್ದೇಶಕರೇ ಹೆಚ್ಚಾಗಿ ಅಪ್ಪು ಮೇಲೆ ಕಣ್ಣಾಕಿದ್ದಾರೆ.
ಪುನೀತ್ ಕನ್ನಡದ ನಟರಾಗಿದ್ದರೂ ಬೇರೆ ಬೇರೆ ಭಾಷೆಗಳಲ್ಲಿ ಮೂಡಿಬರುವ ಹೊಸ ರೀತಿಯ ಸಿನಿಮಾಗಳನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತಾರೆ. ಹೀರೋಯಿಸಂ ಹೊರತಾಗಿರುವ ಕತೆಗಳ ಕಡೆಗೂ ಮುಖ ಮಾಡುತ್ತಾರೆ. ಅದು ಕನ್ನಡದಲ್ಲೂ ಅಂಥ ಸಿನಿಮಾಗಳು ಬರಲಿ ಎನ್ನುವ ಆಸಕ್ತಿ ತೋರುತ್ತಾರೆ. ಈ ಕಾರಣಕ್ಕೆ ‘ಮೈತ್ರಿ' ಚಿತ್ರದಲ್ಲಿ ಅಪ್ಪು ನಟಿಸಿದ್ದು.
ತಮ್ಮ ಚಿತ್ರಗಳನ್ನು ನಿರ್ದೇಶನ ಮಾಡಲು ಮುಂದೆ ಬರುತ್ತಿರುವ ನಿರ್ದೇಶಕರು ಕೇವಲ ಕಮರ್ಷಿಲ್ ಸಿನಿಮಾಗಳನ್ನು ನಂಬಿ ಕೂತವರಲ್ಲ. ಅಪ್ಪಟ ನೆಲದ ಕತೆಗಳನ್ನು ಹುಡುಕುವಲ್ಲಿ ಪರಿಣಿತರು. ಜತೆಗೆ ಸಾಮಾನ್ಯ ಪ್ರೇಕ್ಷಕನಿಗೆ ಎಂಥ ಸಿನಿಮಾ ಮಾಡಬೇಕೆಂಬ ತಿಳುವಳಿಕೆ ಇದ್ದವರು. ಸಮುದ್ರ ಖಣಿ ಅವರನ್ನೇ ತೆಗೆದುಕೊಳ್ಳಿ, ತಮಿಳು ಚಿತ್ರರಂಗದಲ್ಲಿ ಹೊಸ ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳ ಹಿಂದೆ ಕೇಳಿಬರುವ ಕೆಲವೇ ಹೆಸರುಗಳಲ್ಲಿ ಇವರದ್ದು ಬಹು ಮುಖ್ಯ ಹೆಸರು. ನಿರ್ದೇಶನದ ಜತೆಗೆ ನಟನೆ ಕೂಡ ಮಾಡುವ ಸಮುದ್ರ ಖಣಿ ತಮ್ಮದೇ ಆದ ತಂಡ ಕಟ್ಟಿಕೊಂಡು ಹೊಸ ಕತೆಗಳನ್ನು ಹುಡುಕುವ ಅಸಾಮಿ. ಹೀಗಾಗಿ ಅವರದ್ದೇ ನಿರ್ದೇಶನದ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ಹೊರಟಾಗ ‘ಯಾರೇ ಕೂಗಾಡಲಿ' ಚಿತ್ರಕ್ಕೆ ಸಮುದ್ರ ಖಣಿ ಅವರನ್ನೇ ಕರೆತಂದರು. ವೆಟ್ರಿ ಮಾರನ್ ಕೂಡ ಇದೇ ಸಾಲಿಗೆ ಸೇರುವ ನಿರ್ದೇಶಕ.
ಪುನೀತ್ ಕಾಕಮುಟ್ಟೈ, ವಿಸಾರಣೈ ಮುಂತಾದ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡವರು. ಕಲಾತ್ಮಕ ಚಿತ್ರಗಳನ್ನು ಮಾಡಿದರೆ, ಆ ಮಟ್ಟದಲ್ಲಿ ಮಾಡಬೇಕು ಎಂದು ಆಸೆಪಟ್ಟವರು. ಹೀಗಾಗಿ ವೆಟ್ರಿಮಾರನ್ ಚಿತ್ರದಲ್ಲಿ ಪುನೀತ್ ನಟಿಸಲು ಒಪ್ಪಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಬೇರೆ ಥರದ ಸಿನಿಮಾ ಮಾಡುವ ಆಸೆಯನ್ನು ಅವರೂ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ವೆಟ್ರಿಮಾರನ್ ಮತ್ತು ಪುನೀತ್ ಒಂದಾಗುವುದು ಸಂಭವನೀಯ ಆಯ್ಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.