
ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನ 'ಕಾಕಾ' ಸಿನಿಮಾ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ಸುದ್ದಿ ಹೊರಬೀಳುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದರೆ, ಇದೀಗ ಸೀನಿಯರ್ ನಟಿ ಸ್ನೇಹಾ ಈ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಿನಿಮಾದಲ್ಲಿ ಅವರು ಚಿರಂಜೀವಿ ಪತ್ನಿಯಾಗಿ ನಟಿಸಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.
ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ತಮ್ಮ ಬಹುಕಾಲದ ಆಸೆ ಎಂದು ನಟಿ ಸ್ನೇಹಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ 'ಕಾಕಾ' ಮೂಲಕ ಆ ಅವಕಾಶ ಒಲಿದುಬಂದಿದೆ. ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿರುವ ಸ್ನೇಹಾಗೆ, ಮೆಗಾಸ್ಟಾರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿರುವುದು ವಿಶೇಷ. ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿರುವ ಅವರ ಬಹುಕಾಲದ ಕನಸು ಈಗ ನನಸಾಗುತ್ತಿದೆ.
'ಕಾಕಾ' ಚಿತ್ರದಲ್ಲಿ ಚಿರಂಜೀವಿ 'ಕೆ. ಸತ್ಯಂ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ವಾ ಫ್ಯಾಕ್ಟರಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿಯಾಗಿ ಅವರ ಪಾತ್ರ ಪರಿಚಯವಾಗಲಿದೆ. ಆದರೆ ಆತನ ಸಾಮಾನ್ಯ ಬದುಕಿನ ಹಿಂದೆ ಒಂದು ಬಲವಾದ ಕಥೆ ಅಡಗಿದೆ ಅನ್ನೋದನ್ನು ಗ್ಲಿಂಪ್ಸ್ ವಿಡಿಯೋ ಸುಳಿವು ನೀಡಿದೆ. ಚಿರಂಜೀವಿ ಅವರ ಹಿಂದಿನ ಸಿನಿಮಾಗಳಿಗಿಂತ ಈ ಪಾತ್ರ ತೀರಾ ಭಿನ್ನವಾಗಿರಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮಲಯಾಳಂ ನಟಿ ಅನಸ್ವರಾ ರಾಜನ್ ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಅವರು 'ಅಮ್ಮುಲು ಪಾಪ' ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕಥೆಯಲ್ಲಿ ಈ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಚಿರಂಜೀವಿ ಹಾಗೂ ಅನಸ್ವರಾ ರಾಜನ್ ಪಾತ್ರದ ಸುತ್ತ ಕಥೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.
'ಕಾಕಾ' ಸಿನಿಮಾವನ್ನು 2027ರ ಜನವರಿ 13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಆದರೆ ಚಿರಂಜೀವಿ ನಟನೆಯ 'ವಿಶ್ವಂಭರ' ಕೂಡ ಸಂಕ್ರಾಂತಿಗೆ ಬರಲಿದೆ, ಹೀಗಾಗಿ 'ಕಾಕಾ' ಬೇಸಿಗೆಗೆ ಮುಂದೂಡಿಕೆಯಾಗಲಿದೆ ಎಂಬ ವದಂತಿ ಹಬ್ಬಿತ್ತು. ಈ ಎಲ್ಲಾ ಗಾಸಿಪ್‌ಗಳಿಗೆ ಬ್ರೇಕ್ ಹಾಕಿರುವ ನಿರ್ಮಾಪಕರು, ಸಿನಿಮಾ ಸಂಕ್ರಾಂತಿಗೇ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರ 2027ರ ಜನವರಿ 13ರಂದು ವಿಶ್ವಾದ್ಯಂತ ತೆರೆಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.