
ನವದೆಹಲಿ (ಸೆ.17): ದಿವಂಗತ ಖ್ಯಾತ ನಟಿ ಶ್ರೀದೇವಿ (Sridevi) ಅವರ ಕುಟುಂಬಕ್ಕೆ ಸೇರಿದ ಚೆನ್ನೈನ ಬೆಲೆಬಾಳುವ 4.7 ಎಕರೆ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ಪ್ರಮುಖ ಆದೇಶ ನೀಡಿದ್ದು, ಸದ್ಯಕ್ಕೆ ವಿಷಯದಲ್ಲಿದ್ದ 'ಯಥಾಸ್ಥಿತಿ'ಯನ್ನು (Status Quo) ಕಾಯ್ದುಕೊಳ್ಳುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಹಾಗೂ ಅರುಣ್ ಪಲ್ಲಿ ಅವರನ್ನೊಳಗೊಂಡ ಪೀಠವು, ಮದ್ರಾಸ್ ಹೈಕೋರ್ಟ್ ನೀಡಿದ್ದ ಏಪ್ರಿಲ್ 20 ರ ಆದೇಶವನ್ನು ಪ್ರಶ್ನಿಸಿ ಎಂ.ಸಿ. ಶಿವಕಾಮಿ ಮತ್ತು ಅವರ ಸಹೋದರ ಎಂ.ಸಿ. ನಟರಾಜನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಇದರ ಜೊತೆಗೆ, ನಟಿ ಶ್ರೀದೇವಿ ಅವರ ಪತಿ, ನಿರ್ಮಾಪಕ ಬೋನಿ ಕಪೂರ್ (Boney Kapoor) ಹಾಗೂ ಪುತ್ರಿಯರಾದ ಜಾನ್ವಿ ಕಪೂರ್ (Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅವರ ಪ್ರತಿಕ್ರಿಯೆಯನ್ನು ಕೇಳಿದೆ.
ಅರ್ಜಿದಾರರಾದ ಶಿವಕಾಮಿ, ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಅವರು ಈ ಹಿಂದೆ ಚೆಂಗಲ್ಪಟ್ಟುವಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು (Additional District Judge at Chengalpattu) ಸಂಪರ್ಕಿಸಿದ್ದರು. 1988 ರ ಏಪ್ರಿಲ್ 19 ರಂದು ಎಂ.ಸಿ. ನಿತ್ಯಾನಂದ ಮೂದಲಿಯಾರ್ ಎಂಬವರಿಂದ ನಟಿ ಶ್ರೀದೇವಿ, ಅವರ ತಂಗಿ ಶ್ರೀಲತಾ ಮತ್ತು ತಾಯಿ ರಾಜೇಶ್ವರಿ ಅವರು ಖರೀದಿ ಮಾಡಿದ್ದ ಜಮೀನಿನ ಕ್ರಯಪತ್ರಗಳನ್ನು (Sale Deeds) "ಶೂನ್ಯ ಮತ್ತು ಸಿಂಧುವಲ್ಲ" (Null and Void) ಎಂದು ಘೋಷಿಸುವಂತೆ ಕೋರಿದ್ದರು. ನಿತ್ಯಾನಂದ ಮೂದಲಿಯಾರ್, ಎಂ.ಸಿ. ಚೊಕ್ಕಲಿಂಗಂ ಮೂದಲಿಯಾರ್ ಹಾಗೂ ಎಂ.ಸಿ. ಚಂದ್ರಶೇಖರನ್ ಮೂದಲಿಯಾರ್ ಅವರು ಎಂ.ಸಿ. ಸಂಬಂಧ ಮೂದಲಿಯಾರ್ ಎಂಬುವರ ಪುತ್ರರಾಗಿದ್ದರು.
ಅರ್ಜಿದಾರರು, ಈ ಆಸ್ತಿಯು ಮೂಲತಃ ತಮ್ಮ ತಾತ ಸಂಬಂಧ ಮುದಲಿಯಾರ್ ಅವರಿಗೆ ಸೇರಿದ್ದು, ತಮ್ಮ ತಂದೆ ಚಂದ್ರಶೇಖರನ್ ಮೂದಲಿಯಾರ್ ಅವರ ಮೂಲಕ ತಮಗೆ ಈ ಆಸ್ತಿಯಲ್ಲಿ 5 ನೇ 1 (1/5th share) ಭಾಗದಷ್ಟು ಪಾಲು ಬರಬೇಕಿದೆ ಎಂದು ವಾದಿಸಿದ್ದರು.
ಚೆಂಗಲ್ಪಟ್ಟು ನ್ಯಾಯಾಲಯವು ಕಪೂರ್ ಕುಟುಂಬಕ್ಕೆ ಸಮನ್ಸ್ ಜಾರಿ ಮಾಡಿದ ನಂತರ, ಬೋನಿ ಕಪೂರ್ ಕುಟುಂಬವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕಪೂರ್ ಕುಟುಂಬವು ನ್ಯಾಯಾಲಯದಲ್ಲಿ ವಾದಿಸಿ, 'ಚಂದ್ರಶೇಖರನ್ ಮತ್ತು ಚಂದ್ರಭಾನು ದಂಪತಿ ಕೇವಲ ಸಹಜೀವನದಲ್ಲಿದ್ದರು (Live-in relationship). ಚಂದ್ರಶೇಖರನ್ ಅವರು 1957 ರ ಜೂನ್‌ನಲ್ಲಿ ಎಂ.ಸಿ. ಭಾನುಮತಿ ಎಂಬುವವರನ್ನು ವಿವಾಹವಾಗಿದ್ದರು ಮತ್ತು ಈ ಮೊದಲ ಮದುವೆಯನ್ನು ಯಾವುದೇ ನ್ಯಾಯಾಲಯ ರದ್ದುಗೊಳಿಸಿಲ್ಲ. ಹೀಗಾಗಿ ಶಿವಕಾಮಿ, ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಅವರು ಚಂದ್ರಶೇಖರನ್ ಅವರ ಕಾನೂನುಬದ್ಧ ವಾರಸುದಾರರಾಗಲು ಸಾಧ್ಯವಿಲ್ಲ' ಎಂದು ವಾದಿಸಿತ್ತು.
ಕಪೂರ್ ಕುಟುಂಬದ ವಾದವನ್ನು ಆಲಿಸಿದ್ದ ಮದ್ರಾಸ್ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ (Trial Court) ಆದೇಶವನ್ನು ವಜಾಗೊಳಿಸಿತ್ತು.'ಕೇವಲ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ, ಕಾನೂನಿನ ದುರುಪಯೋಗ ಪಡಿಸಿಕೊಂಡು ದಾವೆದಾರರು ಈ ಪಾಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಹಾಗೂ ದಾಖಲೆಗಳ ಆಧಾರದ ಮೇಲೆ ಇದು ಅನುಮತಿಸಲು ಸಾಧ್ಯವಿಲ್ಲ. ಕಾಲಮಿತಿಯ ನಿಯಮದ (Barred by Limitation) ಆಧಾರದ ಮೇಲೆ ಮತ್ತು ಯಾವುದೇ ಸಮಂಜಸವಾದ ಕಾರಣವಿಲ್ಲದೆ ಈ ದಾವೆ ಹೂಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ' ಎಂದು ಹೈಕೋರ್ಟ್ ಕಟುವಾಗಿ ಹೇಳಿತ್ತು.
ಅಲ್ಲದೆ, 1998 ರವರೆಗೆ ಜೀವಂತವಾಗಿದ್ದ ಭಾನುಮತಿ ಅವರೇ ಚಂದ್ರಶೇಖರನ್ ಅವರ ಮೊದಲ ಹೆಂಡತಿ ಮತ್ತು ಅವರಿಗೆ ಯಾವುದೇ ಮಕ್ಕಳಿರಲಿಲ್ಲ ಎಂಬುದನ್ನು ಕಂದಾಯ ಇಲಾಖೆಯ ನಡಾವಳಿಗಳ ವೇಳೆ ಅರ್ಜಿದಾರರು ಒಪ್ಪಿಕೊಂಡಿದ್ದರು. ಆದರೆ ಈ ಪ್ರಮುಖ ಸತ್ಯವನ್ನು ನ್ಯಾಯಾಲಯದಿಂದ ಮುಚ್ಚಿಟ್ಟಿದ್ದರು ಎಂದು ಹೈಕೋರ್ಟ್ ಎತ್ತಿ ತೋರಿಸಿತ್ತು. ಜೊತೆಗೆ, ಅರ್ಜಿದಾರರು ಚಂದ್ರಶೇಖರನ್ ಅವರ ಏಕೈಕ ಕಾನೂನುಬದ್ಧ ವಾರಸುದಾರರು ಎಂದು 2005 ರ ಜೂನ್ 21 ರಂದು ಪಡೆದುಕೊಂಡಿದ್ದ ಪ್ರಮಾಣಪತ್ರವನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದೂ ಹೈಕೋರ್ಟ್ ಉಲ್ಲೇಖಿಸಿತ್ತು.ಹೈಕೋರ್ಟ್‌ನ ಈ ತೀರ್ಪನ್ನು ಇದೀಗ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿ ಕಪೂರ್ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.