ಚಂದದ ಗೊಂಬೆ ಅಲ್ಲ, ರಗಡ್ ವಾರಿಯರ್: ‘ಮೈಸಾ’ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ

Published : Sep 01, 2026, 04:16 PM IST
Rashmika Mandanna Mysaa

ಸಾರಾಂಶ

ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ ನವೆಂಬರ್ 27, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ‘ಫೌಜಿ’ಗಿಂತ ಒಂದು ವಾರ ಮೊದಲೇ ರಶ್ಮಿಕಾ ಸಿನಿಮಾ ತೆರೆಗೆ ಬರಲಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಮಹಿಳಾ ಪ್ರಧಾನ ಪವರ್‌ಫುಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ ತನ್ನ ರಿಲೀಸ್ ಡೇಟ್ ಘೋಷಿಸುವ ಮೂಲಕ ಕುತೂಹಲ ಹೆಚ್ಚಿಸಿದೆ. ವಿಶೇಷವೆಂದರೆ, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರಕ್ಕಿಂತ ಬರೋಬ್ಬರಿ ಒಂದು ವಾರ ಮೊದಲೇ ‘ಮೈಸಾ’ ಪ್ರೇಕ್ಷಕರ ಮುಂದೆ ಬರಲಿದೆ.

ನವೆಂಬರ್ 27ಕ್ಕೆ ‘ಮೈಸಾ’ ವರ್ಲ್ಡ್‌ವೈಡ್ ರಿಲೀಸ್!

ಚಿತ್ರತಂಡ ಅಧಿಕೃತವಾಗಿ ಘೋಷಿಸಿರುವಂತೆ, 2026ರ ನವೆಂಬರ್ 27ರಂದು ‘ಮೈಸಾ’ ವಿಶ್ವಾದ್ಯಂತ ತೆರೆಕಾಣಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರತಂಡ ರಶ್ಮಿಕಾ ಅವರ ಪವರ್‌ಫುಲ್ ಲುಕ್ ಇರುವ ವಿಶೇಷ ಪೋಸ್ಟರ್‌ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸ್ವತಃ ಅವಳು ದಿಟ್ಟಳು, ಸ್ವಯಂ ನಿರ್ಭಯಳು, ಅಚಲ ಸ್ಫೂರ್ತಿಯುಳ್ಳವಳು. ಹಿಂದೆಂದೂ ಕಾಣದ ರೀತಿಯಲ್ಲಿ ರಶ್ಮಿಕಾ ಜೊತೆ ‘ಮೈಸಾ’ ಜಗತ್ತನ್ನು ಅನುಭವಿಸಲು ಸಿದ್ಧರಾಗಿ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದೇ ಮೊದಲ ಬಾರಿಗೆ ರಶ್ಮಿಕಾ ಹೈ-ಆಕ್ಟೇನ್ ಆ್ಯಕ್ಷನ್!

‘ಮೈಸಾ’ ಸಿನಿಮಾ ಗೊಂಡ್ ಬುಡಕಟ್ಟು ಸಮುದಾಯದ ಹಿನ್ನೆಲೆಯನ್ನು ಆಧರಿಸಿಕೊಂಡು ರೂಪುಗೊಳ್ಳುತ್ತಿದೆ. ಹೈ-ಆಕ್ಟೇನ್ ಎಮೋಷನಲ್ ಆ್ಯಕ್ಷನ್ ಥ್ರಿಲ್ಲರ್ ಆಗಿ ಚಿತ್ರ ಮೂಡಿಬರುತ್ತಿದ್ದು, ರಶ್ಮಿಕಾ ಇದುವರೆಗೆ ಕಾಣಿಸಿಕೊಂಡಿರದಷ್ಟು ಇಂಟೆನ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ರಶ್ಮಿಕಾ ಆ್ಯಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್, ಗ್ಲಿಂಪ್ಸ್ ಹಾಗೂ ವಿಶೇಷ ಪೋಸ್ಟರ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ‘ಮೈಸಾ’ ರಶ್ಮಿಕಾ ಅವರ ವೃತ್ತಿಜೀವನದ ವಿಭಿನ್ನ ಸಿನಿಮಾವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

‘ಮೈಸಾ’ vs ‘ಫೌಜಿ’; ಬಾಕ್ಸ್ ಆಫೀಸ್‌ನಲ್ಲಿ ಕುತೂಹಲ!

ಇನ್ನು ‘ಮೈಸಾ’ ರಿಲೀಸ್ ಡೇಟ್ ಘೋಷಣೆಯಾಗುತ್ತಿದ್ದಂತೆ ಮತ್ತೊಂದು ಕುತೂಹಲಕಾರಿ ವಿಚಾರ ಮುನ್ನೆಲೆಗೆ ಬಂದಿದೆ. ಪ್ರಭಾಸ್ ನಾಯಕನಾಗಿ, ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫೌಜಿ’ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಅಂದರೆ ‘ಫೌಜಿ’ಗಿಂತ ಸರಿಯಾಗಿ ಒಂದು ವಾರ ಮೊದಲೇ, ನವೆಂಬರ್ 27ರಂದು ‘ಮೈಸಾ’ ತೆರೆಗೆ ಬರಲಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ‘ಫೌಜಿ’ ಬಾಕ್ಸ್ ಆಫೀಸ್ ಅಖಾಡಕ್ಕೆ ಇಳಿಯುವ ಮುನ್ನವೇ ರಶ್ಮಿಕಾ ಅವರ ‘ಮೈಸಾ’ ತನ್ನ ಅಬ್ಬರ ತೋರಿಸಬೇಕಿದೆ.

‘ಅವಳೇ ಮೈಸಾ’ ಎನ್ನುತ್ತಿರುವ ರಶ್ಮಿಕಾ!

‘ಮೈಸಾ’ ಚಿತ್ರದ ಬಗ್ಗೆ ರಶ್ಮಿಕಾ ಕೂಡ ಸಾಕಷ್ಟು ಎಕ್ಸೈಟ್ ಆಗಿದ್ದಾರೆ. “ಮೈಸಾ ಅಂದರೆ ಆವೇಶ, ನೋವು, ಹೃದಯ ವೇದನೆ, ದುಃಖ, ದೃಢ ಸಂಕಲ್ಪ, ಧೈರ್ಯ ಮತ್ತು ಊಹಿಸಲಾರದ ಶಕ್ತಿ” ಎಂದು ತಮ್ಮ ಪಾತ್ರದ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದಾರೆ. ಇದರಿಂದ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಎಷ್ಟು ಇಂಟೆನ್ಸ್ ಆಗಿರಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ರಣಬಾಲಿ’ ಬಳಿಕ ‘ಮೈಸಾ’ ಅಬ್ಬರ!

ರಶ್ಮಿಕಾ ಸದ್ಯ ‘ಮೈಸಾ’ ಮಾತ್ರವಲ್ಲದೆ ಮತ್ತೊಂದು ಬಹುನಿರೀಕ್ಷಿತ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮ ಪತಿ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ‘ರಣಬಾಲಿ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಸಿನಿಮಾ ಮುಂದೂಡಿಕೆಯಾಗಿದ್ದು, ಇದೀಗ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 16ರಂದು ‘ರಣಬಾಲಿ’ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

ಹೀಗಾಗಿ ಅಕ್ಟೋಬರ್‌ನಲ್ಲಿ ‘ರಣಬಾಲಿ’ ಮೂಲಕ ಪ್ರೇಕ್ಷಕರ ಮುಂದೆ ಬರಲಿರುವ ರಶ್ಮಿಕಾ, ಕೇವಲ ಒಂದು ತಿಂಗಳ ಅಂತರದಲ್ಲೇ ‘ಮೈಸಾ’ ಮೂಲಕ ಮತ್ತೊಂದು ವಿಭಿನ್ನ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ, ರಶ್ಮಿಕಾ ಅಭಿಮಾನಿಗಳಿಗೆ ಅಕ್ಟೋಬರ್ ಮತ್ತು ನವೆಂಬರ್ ಎರಡೂ ತಿಂಗಳು ಸಿನಿಮಾ ಹಬ್ಬವಾಗಲಿದ್ದು, ‘ಮೈಸಾ’ ಮೂಲಕ ನ್ಯಾಷನಲ್ ಕ್ರಶ್ ಹೊಸ ಅವತಾರದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದೇ ಈಗಿನ ಕುತೂಹಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ಸಿಂಧೋಗಿ ಮನೆಯಲ್ಲಿ ಅದ್ಧೂರಿ ವರಮಹಾಲಕ್ಷ್ಮಿ ಹಬ್ಬ: ತಾಯಿಯೊಂದಿಗೆ ಬಂದ ಶಿಶಿರ್ ಶಾಸ್ತ್ರಿ!
ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ಕಮಲಿ’ ಸೀರಿಯಲ್ ನಟಿ Photos Viral