
ದಿವಂಗತ ನಟಿ ಸೌಂದರ್ಯ ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ತೆರೆಮೇಲೆ ತಮ್ಮ ಸಹಜ ಅಭಿನಯದಿಂದ ಮೋಡಿ ಮಾಡಿದ್ದ ಸೌಂದರ್ಯ, ವೈಯಕ್ತಿಕ ಜೀವನದಲ್ಲಿಯೂ ಅನೇಕರಿಗೆ ಆತ್ಮೀಯರಾಗಿದ್ದರು. ಇದೀಗ ಟಾಲಿವುಡ್ನ ಹಿರಿಯ ನಟಿ ಆಮನಿ ಅವರು ತಮ್ಮ ಆತ್ಮೀಯ ಗೆಳತಿ ಸೌಂದರ್ಯ ಜೊತೆಗಿನ ಒಡನಾಟ, ಮರೆಯಲಾಗದ ನೆನಪುಗಳು ಹಾಗೂ ಅವರ ಅಕಾಲಿಕ ನಿಧನದಿಂದ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಅವರ ಮನೆಗೆ ಹೋದಾಗ ಕಂಡ ಒಂದು ದೃಶ್ಯ ಇಂದಿಗೂ ತಮ್ಮನ್ನು ಕಾಡುತ್ತಿದೆ ಎಂದು ಹೇಳಿಕೊಂಡಿರುವ ಆಮನಿ ಭಾವುಕರಾಗಿದ್ದಾರೆ.
ಕನ್ನಡದ ನಂಟು ಇಬ್ಬರ ಸ್ನೇಹಕ್ಕೆ ಭದ್ರ ಬುನಾದಿ!
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮನಿ, ಸೌಂದರ್ಯ ಅವರನ್ನು ತಮ್ಮ ಆತ್ಮೀಯ ಗೆಳತಿ ಮಾತ್ರವಲ್ಲ, ಸ್ವಂತ ತಂಗಿಯಂತೆಯೇ ಭಾವಿಸಿದ್ದಾಗಿ ಹೇಳಿದ್ದಾರೆ. ಚಿತ್ರರಂಗದ ಮೂಲಕ ಪರಿಚಯವಾದ ಇವರ ಸ್ನೇಹ, ದಿನ ಕಳೆದಂತೆ ಗಾಢವಾಗಿತ್ತು. ಇಬ್ಬರೂ ಕನ್ನಡದ ಹಿನ್ನೆಲೆಯವರಾಗಿದ್ದರಿಂದ ಮೊದಲ ಸಿನಿಮಾದಿಂದಲೇ ಚೆನ್ನಾಗಿ ಹೊಂದಿಕೊಂಡಿದ್ದರಂತೆ. ಸೌಂದರ್ಯ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದಾಗ ತಮಗೆ ತುಂಬಾ ಖುಷಿಯಾಗುತ್ತಿತ್ತು ಎಂದು ಆಮನಿ ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಹಳೆಯ ಕನ್ನಡ ಹಾಡುಗಳ ಬಗ್ಗೆಯೂ ಇಬ್ಬರಿಗೂ ಒಂದೇ ರೀತಿಯ ಆಸಕ್ತಿ ಇತ್ತು. ಸೌಮ್ಯ ಸ್ವಭಾವದ ಸೌಂದರ್ಯ ತಮ್ಮ ವೈಯಕ್ತಿಕ ವಿಚಾರಗಳನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಒಬ್ಬರಿಗೊಬ್ಬರು ಮನದ ಮಾತುಗಳನ್ನು ಹೇಳಿಕೊಳ್ಳುವಷ್ಟು ಆಪ್ತರಾಗಿದ್ದೆವು ಎಂದು ಆಮನಿ ತಿಳಿಸಿದ್ದಾರೆ. ‘ಅಮ್ಮದೊಂಗ’ ಮತ್ತು ‘ಅಣ್ಣ-ತಂಗಿ’ ಸೇರಿದಂತೆ ಸುಮಾರು ಮೂರ್ನಾಲ್ಕು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ, ಸಿನಿಮಾಗಳಿಗಿಂತಲೂ ಆಚೆಗಿನ ಸ್ನೇಹವೇ ತಮಗೆ ಹೆಚ್ಚು ವಿಶೇಷವಾಗಿತ್ತು ಎಂದು ಆಮನಿ ಹೇಳಿದ್ದಾರೆ.
ತಂದೆಯ ಸಾವಿನ ನೋವನ್ನು ನನ್ನ ಮುಂದೆ ಹಂಚಿಕೊಂಡಿದ್ದರು!
ಸೌಂದರ್ಯ ಅವರ ಜೀವನದ ಕೆಲವು ಮರೆಯಲಾಗದ ಕ್ಷಣಗಳನ್ನು ಆಮನಿ ನೆನಪಿಸಿಕೊಂಡಿದ್ದಾರೆ. ಸೌಂದರ್ಯ ಅವರ ತಂದೆ ನಿಧನರಾದಾಗ, ಅವರು ತಮ್ಮನ್ನು ವಿಶೇಷವಾಗಿ ಕರೆಸಿಕೊಂಡು ಮನಬಿಚ್ಚಿ ಅತ್ತಿದ್ದರಂತೆ. ಕುಟುಂಬಕ್ಕೆ ತಂದೆಯೇ ಆಧಾರಸ್ತಂಭವಾಗಿದ್ದರು. ಆ ಸ್ತಂಭವೇ ಕುಸಿದುಬಿದ್ದಂತಾಗಿದೆ ಎಂದು ಸೌಂದರ್ಯ ದುಃಖಿಸುತ್ತಿದ್ದುದನ್ನು ಆಮನಿ ಭಾವುಕರಾಗಿ ಸ್ಮರಿಸಿದ್ದಾರೆ.
ಇನ್ನು ಸೌಂದರ್ಯ ತಮ್ಮ ಮದುವೆಯ ವಿಚಾರವನ್ನೂ ಫೋನ್ ಮೂಲಕ ಆಮನಿಗೆ ತಿಳಿಸಿದ್ದರಂತೆ. ಮದುವೆಗೆ ಬಂದು ಒಂದು ದಿನ ಪೂರ್ತಿ ತಮ್ಮ ಜೊತೆಗಿದ್ದು ಸಂಭ್ರಮಿಸಬೇಕು ಎಂದು ಆತ್ಮೀಯವಾಗಿ ಆಹ್ವಾನಿಸಿದ್ದರು. ಅದರಂತೆ ಆಮನಿ ಮದುವೆಗೆ ಹಾಜರಾಗಿದ್ದರು. ಸೌಂದರ್ಯ ಅವರ ಸಹೋದರ ಅಮರ್ ಜೊತೆ ಊಟ ಮಾಡಿ, ಮದುವೆಯಲ್ಲಿ ಖುಷಿಯಿಂದ ಸಮಯ ಕಳೆದಿದ್ದಾಗಿ ತಿಳಿಸಿದ್ದಾರೆ. ಸೌಂದರ್ಯ ಅವರ ಮದುವೆಗೆ ಹಾಜರಾಗಿದ್ದ ಕೆಲವೇ ಕೆಲವು ಚಿತ್ರರಂಗದ ಗಣ್ಯರಲ್ಲಿ ಆಮನಿ ಕೂಡ ಒಬ್ಬರಾಗಿದ್ದರು.
ಸೌಂದರ್ಯ ಸಾವಿನ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದ ಆಮನಿ!
ಸೌಂದರ್ಯ ಅವರ ನಿಧನದ ಸುದ್ದಿ ಕೇಳಿದ ಕ್ಷಣವನ್ನು ನೆನಪಿಸಿಕೊಂಡ ಆಮನಿ, ಆ ನೋವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಅಂದು ತಾವು ನಟಿ ಮೀನಾ ಜೊತೆ ಶ್ರೀ ಕಲ್ಯಾಣ್ ಅವರ ‘ಸ್ವಾಮಿ’ ಚಿತ್ರದ ಚಿತ್ರೀಕರಣದಲ್ಲಿದ್ದರಂತೆ. ಆಗ ಸೌಂದರ್ಯ ನಿಧನದ ಸುದ್ದಿ ತಿಳಿದ ತಕ್ಷಣ, “ಸೌಂದರ್ಯ ಅವರು ಇನ್ನಿಲ್ಲವೇ?” ಎಂದು ನಂಬಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.
ಮೀನಾ ಕೂಡ ಈ ಸುದ್ದಿ ಕೇಳಿ ಬೇಸರಗೊಂಡಿದ್ದರು. ಆದರೆ, ಆಮನಿಗೆ ಮಾತ್ರ ತಮ್ಮ ಮನೆಯವರನ್ನೇ ಕಳೆದುಕೊಂಡಷ್ಟು ನೋವಾಗಿತ್ತಂತೆ. ಮಾಧ್ಯಮಗಳ ಮುಂದೆಯೂ ಕಣ್ಣೀರು ಹಾಕಿದ್ದಾಗಿ ಅವರು ತಿಳಿಸಿದ್ದಾರೆ. ಸೌಂದರ್ಯ ಅವರನ್ನು ದೇವತೆಯಂತೆ ಕಾಣುತ್ತಿದ್ದ ಆಮನಿ, ಅವರ ಸಾವನ್ನು ಇಂದಿಗೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ.
ಸೌಂದರ್ಯ ಮನೆಗೆ ಹೋದಾಗ ಕಂಡ ಆ ದೃಶ್ಯ ಇಂದಿಗೂ ಕಾಡುತ್ತಿದೆ!
ಸೌಂದರ್ಯ ನಿಧನದ ಬಳಿಕ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿಕೊಂಡ ಆಮನಿ ಕಣ್ಣೀರಾಗಿದ್ದಾರೆ. ಮನೆಯ ದೊಡ್ಡ ಹಾಲ್ನಲ್ಲಿ ಸೌಂದರ್ಯ, ಅವರ ತಂದೆ ಹಾಗೂ ಸಹೋದರ ಅಮರ್ ಅವರ ಫೋಟೋಗಳನ್ನು ಒಟ್ಟಿಗೆ ನೋಡಿದಾಗ ಹೃದಯವೇ ಒಡೆದುಹೋದಂತಾಗಿತ್ತಂತೆ. ಅದರಲ್ಲೂ ಸೌಂದರ್ಯ ಅವರ ತಾಯಿ ಒಂಟಿಯಾಗಿ ಕುಳಿತಿದ್ದ ದೃಶ್ಯವನ್ನು ಕಂಡು ತೀವ್ರ ನೋವಾಗಿತ್ತು ಎಂದು ಆಮನಿ ಹೇಳಿದ್ದಾರೆ.
ಸೌಂದರ್ಯ ಅವರ ತಾಯಿ ಇದೀಗ ಅಮರ್ ಅವರ ಮಗನ ಜೊತೆ ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಒಂದೇ ಕುಟುಂಬದಲ್ಲಿ ಇಷ್ಟೊಂದು ನೋವು ಸಂಭವಿಸಿರುವುದನ್ನು ನೆನೆದಾಗ ಮನಸ್ಸಿಗೆ ತುಂಬಾ ದುಃಖವಾಗುತ್ತದೆ ಎಂದಿದ್ದಾರೆ. ಇಷ್ಟೇ ಅಲ್ಲ, ಸೌಂದರ್ಯ ತಮ್ಮದೇ ನಿರ್ಮಾಣದ ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮನ್ನು ಜೊತೆಯಾಗಿ ನಿಲ್ಲುವಂತೆ ಆಹ್ವಾನಿಸಿದ್ದರಂತೆ. ಆದರೆ, ಆಗ ತಮಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಕ್ಷಣವನ್ನು ಈಗ ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತದೆ ಎಂದು ಆಮನಿ ಹೇಳಿದ್ದಾರೆ.
ಸಂದರ್ಶನದಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆಯನ್ನೂ ಆಮನಿ ಹಂಚಿಕೊಂಡಿದ್ದಾರೆ. ಒಮ್ಮೆ ಸೌಂದರ್ಯ ಅವರ ತಂದೆ, ತಮ್ಮ ಮಗ ಅಮರ್ನನ್ನು ಮದುವೆಯಾಗುವಂತೆ ಆಮನಿ ಬಳಿ ತಮಾಷೆಯಾಗಿ ಕೇಳಿದ್ದರಂತೆ. ಅದಕ್ಕೆ ಆಮನಿ, ತಾವು ಚಿತ್ರರಂಗದಲ್ಲಿರುವುದರಿಂದ ಅದು ಸಾಧ್ಯವಾಗದೇ ಇರಬಹುದು ಎಂದು ಹೇಳಿದ್ದರಂತೆ. ಆಗ ಸೌಂದರ್ಯ ಕೂಡ ಚಿತ್ರರಂಗದಲ್ಲೇ ಇದ್ದಾರೆ, ಹಾಗಿದ್ದ ಮೇಲೆ ಇಬ್ಬರೂ ಚಿತ್ರರಂಗದಲ್ಲಿದ್ದರೆ ಏನಾಗುತ್ತದೆ ಎಂದು ಅವರ ತಂದೆ ಪ್ರಶ್ನಿಸಿದ್ದರಂತೆ.
ಆದರೆ, ಆ ರೀತಿಯ ಯಾವುದೇ ಯೋಚನೆ ತಮ್ಮ ಮನಸ್ಸಿನಲ್ಲಿ ಇರಲಿಲ್ಲ ಎಂದು ಆಮನಿ ಹೇಳಿದ್ದಾರೆ. ಅಮರ್ ಆಗಲೇ ಬೇರೊಬ್ಬರನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಸೌಂದರ್ಯ ನಂತರ ತಮಗೆ ತಿಳಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಇನ್ನು ಸೌಂದರ್ಯ ಜೊತೆಗಿನ ಸ್ನೇಹ, ಅವರ ಕುಟುಂಬದ ಆತ್ಮೀಯತೆ ಹಾಗೂ ಆಕೆಯ ಅಕಾಲಿಕ ನಿಧನದ ನೋವನ್ನು ನೆನಪಿಸಿಕೊಂಡ ಆಮನಿ ಭಾವುಕರಾಗಿದ್ದಾರೆ. ಕಾಲ ಕಳೆದರೂ ಕೆಲವು ನೆನಪುಗಳು ಮಾಸುವುದಿಲ್ಲ ಎಂಬುದಕ್ಕೆ ಈ ಮಾತುಗಳೇ ಸಾಕ್ಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.