ರಜನಿಕಾಂತ್ ಪಡೆದಿದ್ದು 2 ಸಾವಿರ ಸಂಭಾವನೆ: ಆದ್ರೆ ಆ ಸಿನಿಮಾ ಗಳಿಸಿದ್ದು ಬರೋಬ್ಬರಿ 3 ಕೋಟಿ!

Published : Nov 28, 2026, 07:17 PM IST
Moondru Mudichu Movie

ಸಾರಾಂಶ

ಸೂಪರ್‌ಸ್ಟಾರ್ ರಜನಿಕಾಂತ್ ‘ಮೂನ್ರು ಮುಡಿಚು’ ಸಿನಿಮಾದಲ್ಲಿ ಪಡೆದಿದ್ದು ಕೇವಲ 2 ಸಾವಿರ ರೂ. ಸಂಭಾವನೆಯಂತೆ. ಶ್ರೀದೇವಿ ಹಂಚಿಕೊಂಡ ಈ ಮಾಹಿತಿ ಹಾಗೂ ಸಿನಿಮಾ ಗಳಿಸಿದ 3 ಕೋಟಿ ಕಲೆಕ್ಷನ್ ಕುರಿತ ಕುತೂಹಲಕಾರಿ ವಿವರ ಇಲ್ಲಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಇಂದು ಭಾರತೀಯ ಚಿತ್ರರಂಗದ ಬಹುದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು. ಆದರೆ ಅವರ ಸಿನಿ ಪಯಣದ ಆರಂಭದ ದಿನಗಳಲ್ಲಿ ಸಂಭಾವನೆ ಎಷ್ಟಿತ್ತು ಗೊತ್ತಾ? ಒಂದು ಸಿನಿಮಾದಲ್ಲಿ ಅವರು ಪಡೆದಿದ್ದು ಕೇವಲ 2 ಸಾವಿರ ರೂಪಾಯಿ. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಇಲ್ಲಿದೆ ಆಸಕ್ತಿದಾಯಕ ಮಾಹಿತಿ.

ತಮಿಳು ಚಿತ್ರರಂಗದಲ್ಲಿ 70 ಮತ್ತು 80ರ ದಶಕದಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟ ರಜನಿಕಾಂತ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಸೂಪರ್‌ಸ್ಟಾರ್’ ಎಂದು ಕರೆಯುತ್ತಾರೆ. 1975ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ದಶಕಗಳ ಕಾಲ ತಮ್ಮ ವಿಭಿನ್ನ ಮ್ಯಾನರಿಸಂ, ಅಭಿನಯ ಮತ್ತು ಸ್ಟೈಲ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇಂದು ಅವರ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಆದರೆ ಆರಂಭದ ದಿನಗಳಲ್ಲಿ ರಜನಿಕಾಂತ್ ಪಡೆದ ಸಂಭಾವನೆ ಮಾತ್ರ ಅಚ್ಚರಿ ಮೂಡಿಸುವಂತಿದೆ.

ರಜನಿಕಾಂತ್‌ಗೆ ಚಿತ್ರರಂಗದಲ್ಲಿ ನೆಲೆ ಕಲ್ಪಿಸಿದ ಸಿನಿಮಾ ಯಾವುದು?

ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರ ಮೂಲಕ ರಜನಿಕಾಂತ್ ಚಿತ್ರರಂಗಕ್ಕೆ ಪರಿಚಯವಾದರು. ಕಮಲ್ ಹಾಸನ್ ಮತ್ತು ಶ್ರೀವಿದ್ಯಾ ಅಭಿನಯದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ 1975ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಂತರ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದರು. ಈ ಪೈಕಿ ಕಮಲ್ ಹಾಸನ್, ಶ್ರೀದೇವಿ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸಿದ್ದ ‘ಮೂನ್ರು ಮುಡಿಚು’ ಸಿನಿಮಾ ಅವರ ಆರಂಭಿಕ ಸಿನಿ ಪಯಣದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ. 1976ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಕೆ. ಬಾಲಚಂದರ್ ಅವರೇ ನಿರ್ದೇಶನ ಮಾಡಿದ್ದರು.

ರಜನಿಕಾಂತ್ ಸಂಭಾವನೆ ಕೇವಲ 2 ಸಾವಿರ ರೂ.!

‘ಮೂನ್ರು ಮುಡಿಚು’ ಸಿನಿಮಾದಲ್ಲಿ ನಟಿಸಿದ್ದ ಮೂವರು ಕಲಾವಿದರ ಸಂಭಾವನೆಯ ಬಗ್ಗೆ ನಟಿ ಶ್ರೀದೇವಿ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದರು. ನಟ ಪ್ರಕಾಶ್ ರಾಜ್ ನಡೆಸಿಕೊಟ್ಟಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಆ ಸಮಯದಲ್ಲಿ ಕಮಲ್ ಹಾಸನ್ ಈಗಾಗಲೇ ಪ್ರಮುಖ ನಟರಾಗಿದ್ದರು. ಆದರೆ ತಾವು ಮತ್ತು ರಜನಿಕಾಂತ್ ಚಿತ್ರರಂಗದಲ್ಲಿ ಹೊಸಬರಾಗಿದ್ದೆವು ಎಂದು ನೆನಪಿಸಿಕೊಂಡಿದ್ದರು.

ಆ ಸಿನಿಮಾದಲ್ಲಿ ಕಮಲ್ ಹಾಸನ್ ನಾಯಕನಾಗಿ ನಟಿಸಿದ್ದರು. ಆಗ ಅವರು 30 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು. ನಾನು 5 ಸಾವಿರ ರೂಪಾಯಿ ಪಡೆದಿದ್ದೆ. ರಜನಿಕಾಂತ್ ಅವರು ಕೇವಲ 2 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ಶ್ರೀದೇವಿ ಹೇಳಿಕೊಂಡಿದ್ದರು. ಈ ಮಾತು ಇದೀಗ ರಜನಿಕಾಂತ್ ಅವರ ಆರಂಭಿಕ ದಿನಗಳ ಸಂಭಾವನೆ ಕುರಿತು ಮತ್ತೊಮ್ಮೆ ಚರ್ಚೆಯಾಗುವಂತೆ ಮಾಡಿದೆ. ಇಂದು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸೂಪರ್‌ಸ್ಟಾರ್, ವೃತ್ತಿಜೀವನದ ಆರಂಭದಲ್ಲಿ ಪಡೆದಿದ್ದ ಮೊತ್ತ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

10 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಾಣ; 3 ಕೋಟಿ ರೂ. ಗಳಿಕೆ!

‘ಮೂನ್ರು ಮುಡಿಚು’ ಸಿನಿಮಾ ಕೇವಲ ರಜನಿಕಾಂತ್ ಅವರ ವೃತ್ತಿಜೀವನದ ದೃಷ್ಟಿಯಿಂದಷ್ಟೇ ಅಲ್ಲ, ಬಾಕ್ಸ್ ಆಫೀಸ್ ವಿಚಾರದಲ್ಲೂ ಗಮನ ಸೆಳೆದಿತ್ತು. ವರದಿಗಳ ಪ್ರಕಾರ, ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಅಂದಿನ ಕಾಲದಲ್ಲೇ ಬರೋಬ್ಬರಿ 3 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ.

ಇನ್ನು ಕಮಲ್ ಹಾಸನ್, ಶ್ರೀದೇವಿ ಮತ್ತು ರಜನಿಕಾಂತ್ ಅವರ ಅಭಿನಯ, ಕೆ. ಬಾಲಚಂದರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಗಮನಾರ್ಹ ಯಶಸ್ಸು ಕಂಡಿತ್ತು. ಅದರಲ್ಲೂ ಇಂದು ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಬೆಳೆದಿರುವ ರಜನಿಕಾಂತ್ ಅವರ ಆರಂಭಿಕ ದಿನಗಳ ಈ ಸಂಭಾವನೆಯ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣದಲ್ಲಿ ರಾವಣನನ್ನು ವೈಭವೀಕರಿಸಲಾಗಿದೆಯೇ? ಚಿತ್ರತಂಡದ ಉದ್ದೇಶ ಸ್ಪಷ್ಟಪಡಿಸಿದ ನಿರ್ಮಾಪಕ ನಮಿತ್ ಮಲ್ಹೋತ್ರಾ
ಮತ್ತೋರ್ವ ಜನಪ್ರಿಯ ನಟನ ದಾಂಪತ್ಯ ಜೀವನ ಅಂತ್ಯ! ಒಟ್ಟಿಗೇ ಇದ್ದರೂ ಮಾತುಕತೆ ಇಲ್ಲದೇ ಡಿವೋರ್ಸ್​