
ಬಿಗ್‌ಬಾಸ್ ಇನ್ನೇನು ಶುರುವಾಗತ್ತೆ ಎಂದು ಸುದ್ದಿಯಾಗುತ್ತಲೇ, ಪ್ರತಿ ಸೀಸನ್‌ನಲ್ಲಿಯೂ ಇವರು ಹೋಗ್ತಾರೆ, ಅವರು ಹೋಗ್ತಾರೆ ಎನ್ನುವ ಸುದ್ದಿ ಸದ್ದು ಮಾಡುತ್ತದೆ. ಅದರಲ್ಲಿಯೂ ಹಲವು ಯುಟ್ಯೂಬ್ ಚಾನೆಲ್‌ನವರು ಖ್ಯಾತ ಸೆಲೆಬ್ರಿಟಿಗಳ ಹೆಸರು ಹಾಕಿ, ಅವರು ಹೋಗುತ್ತಿದ್ದಾರೆ ಎನ್ನುವ ರೀತಿಯಲ್ಲಿ ಹೇಳಿಕೆ ಕೊಟ್ಟು, ಲೈಕ್ಸ್, ಶೇರ್‌ಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಹಲವು ಸೆಲೆಬ್ರಿಟಿಗಳಿಗೆ ಪದೇ ಪದೇ ಕಿರಿಕಿರಿ ಉಂಟು ಮಾಡುವ ವಿಷಯವಾಗುತ್ತದೆ. ಅಷ್ಟಕ್ಕೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳ ಪೈಕಿ ಹಲವರು ಬಿಗ್‌ಬಾಸ್ ಆಫರ್ ಬಂದರೂ ಅದನ್ನು ಎಕ್ಸೆಪ್ಟ್ ಮಾಡುವುದಿಲ್ಲ. ಬಿಗ್‌ಬಾಸ್‌ಗೆ ಹೋಗಿ ತಮ್ಮ ಮರ್ಯಾದೆ ತೆಗೆದುಕೊಳ್ಳಲು ತಮಗೆ ಇಷ್ಟವಿಲ್ಲ ಎಂದು ಕೆಲವರು ಹೇಳಿದ್ರೆ, ತಮಗೆ ಡೇಟ್ಸ್ ಇಲ್ಲ, ಇಂಟರೆಸ್ಟ್ ಇಲ್ಲ ಇತ್ಯಾದಿ ಹೇಳಿಕೆ ಕೊಟ್ಟು ರಿಜೆಕ್ಟ್ ಮಾಡುವುದು ಇದ್ದೇ ಇದೆ.
ಪ್ರತಿಬಾರಿಯೂ ಕೆಲವು ನಟ-ನಟಿಯರು ಹೆಸರು ಮುನ್ನೆಲೆಗೆ ಬರುವುದು ಇದೆ. ಅಂಥವರಲ್ಲಿ ಒಬ್ಬರು ನಟಿ ಸುಧಾರಾಣಿ. ಶ್ರೀಮಸ್ತು ಶುಭಮಸ್ತು ಸೀರಿಯಲ್ ಮುಗಿದ ಬಳಿಕ ಬಿಗ್‌ಬಾಸ್ 13 ಹವಾ ಜೋರಾದ ಕಾರಣದಿಂದ ನಟಿ ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಅದಕ್ಕೆ ಸಿಕ್ಕಾಪಟ್ಟೆ ಗರಂ ಆಗಿದ್ದ ನಟಿ, ಹೀಗೆ ಸುಳ್ಳು ಸುದ್ದಿ ಹರಿಬಿಟ್ಟವರು ಮುಟ್ಟಿಕೊಳ್ಳುವ ಉತ್ತರ ನೀಡಿದ್ದರು. ಯಾರ್ ಹೇಳಿದ್ದು ಎನ್ನುವ ಕ್ಯಾಪ್ಶನ್ ಕೊಟ್ಟಿದ್ದ ನಟಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಗಳ ಜೊತೆಗೆ ವಾಸ್ತು ಪ್ರಕಾರ ಸಿನಿಮಾದ ಒಂದೆರಡು ಸೀನ್ ಗಳನ್ನು ಕೂಡ ಸೇರಿಸಿ, ಫನ್ನಿಯಾಗಿ ವಿಡಿಯೋ ಎಡಿಟ್ ಮಾಡಿ ಹಂಚಿಕೊಂಡಿದ್ದರು. . ವಿಡೀಯೋದ ಆರಂಭದಲ್ಲಿ ಸುಧಾರಾಣಿ ಬಿಗ್ ಬಾಸ್ ಕನ್ಫರ್ಮ್ ಎನ್ನುವ ಪೋಸ್ಟ್ ಇದ್ದು, ಬಳಿಕ ನಟಿ ಯಾರ್ ಹೇಳಿದ್ದು ಎನ್ನುವ ಅವರದ್ದೇ ಡೈಲಾಗ್ ವಿಡೀಯೋ ಹಾಕಿದ್ದಾರೆ, ನಂತರ ಮತ್ತೊಂದು ವೈರಲ್ ಪೋಸ್ಟ್ ಹಾಕಿ, ಯಾವ… ಬೋ… ಎನ್ನುವ ಅರ್ಧ ಡೈಲಾಗ್ ಹಾಕಿ, ಟ್ರೋಲ್ ಪೇಜ್ ಗಳೇ ಬೆಜ್ಜಿ ಬೀಳುವಂತೆ ಟ್ರೋಲ್ ಮಾಡಿ, ಅಭಿಮಾನಿಗಳು ನಕ್ಕು ನಗುವಂತೆ ಮಾಡಿದ್ದರು.
ಇದರ ಬಗ್ಗೆ ಇದೀಗ ಮಾಧ್ಯಮವೊಂದಕ್ಕೆ ಮಾತನಾಡಿರುವ ನಟಿ, ನನಗೆ ಪ್ರತಿಸಲ ಬಿಗ್‌ಬಾಸ್‌ನಲ್ಲಿಯೂ ಇದೇ ಸಮಸ್ಯೆ ಉಂಟಾಗುತ್ತದೆ ಎನ್ನುವ ಮೂಲಕ ಈ ಫೇಕ್ ನ್ಯೂಸ್‌ನಿಂದ ಈ ಹಿಂದೆ ಕೆಲವು ಸಿನಿಮಾಗಳು ತಮ್ಮ ಕೈಬಿಟ್ಟ ಬಗ್ಗೆ ವಿವರಿಸಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಸುದ್ದಿಯಾಗಿತ್ತು. ಆಗ ನನಗೆ 3-4 ಒಳ್ಳೊಳ್ಳೆ ಸಿನಿಮಾ ಆಫರ್ಸ್ ಬಂದಿದ್ವು. ಕೆಲವೊಂದಕ್ಕೆ ಅಡ್ವಾನ್ಸ್ ಕೂಡ ಕೊಟ್ಟಿದ್ದರು.
ಆದರೆ ಅದೇ ವೇಳೆ ಬಿಗ್‌ಬಾಸ್‌ಗೆ ಹೋಗುತ್ತಿದ್ದೇನೆ ಎನ್ನುವ ಸುದ್ದಿಯನ್ನೇ ನಂಬಿದ ನಿರ್ಮಾಪಕ, ನಿರ್ದೇಶಕರು, ಪ್ರಾಜೆಕ್ಟ್‌ನಿಂದ ನನ್ನನ್ನು ಕೈಬಿಟ್ಟರು. ಒಬ್ಬರು ತಾವು ಸಿನಿಮಾ ಮಾಡ್ತಿಲ್ಲ ಎಂದು ಹೇಳಿ ಅಡ್ವಾನ್ಸ್ ಕೂಡ ವಾಪಸ್ ತೆಗೆದುಕೊಂಡರು. ಆಮೇಲೆ ಬೇರೆಯವರು ನಟಿಸಿದ್ದರು. ಇದ್ಯಾಕೆ ಆಯಿತು ಎಂದು ನನಗೆ ಶಾಕ್ ಆಗಿ ಆಮೇಲೆ ವಿಚಾರ ಮಾಡಿದಾಗ, ಬಿಗ್‌ಬಾಸ್ ಸುದ್ದಿಯನ್ನು ಅವರು ನಂಬಿದ್ದೇ ಇದಕ್ಕೆ ಕಾರಣವಾಗಿತ್ತು. ಆದ್ದರಿಂದ ನನಗೆ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಈ ಫೇಕ್‌ನ್ಯೂಸ್‌ನಿಂದ ಕೈತಪ್ಪಿದ್ದರಿಂದ ಈ ಸಲ ಹಾಗೆ ಸ್ಪಷ್ಟಪಡಿಸಿದ್ದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.