
ಚಿತ್ರ: ಶ್ರೀಕಂಠ
ಭಾಷೆ : ಕನ್ನಡ
ತಾರಾಗಣ: ಶಿವರಾಜ್ ಕುಮಾರ್, ಚಾಂದಿನಿ ಶ್ರೀಧರನ್, ವಿಜಯ್ ರಾಘವೇಂದ್ರ, ಅಚ್ಯುತ್ ಕುಮಾರ್, ದೀಪಕ್ ಶೆಟ್ಟಿ, ಸ್ಪರ್ಶ ರೇಖಾ, ಬುಲೆಟ್ ಪ್ರಕಾಶ್, ಅನಿಲ್ ಕುಮಾರ್
ನಿರ್ದೇಶನ: ಮಂಜು ಸ್ವರಾಜ್
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಸುರೇಶ್ ಬಾಬು
ನಿರ್ಮಾಣ: ಎಂ ಎಸ್ ಮನು ಗೌಡ
ರೇಟಿಂಗ್: ***
ಹೊಸ ವರ್ಷದ ಆರಂಭದಲ್ಲಿಯೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮನರಂಜನೆಯ ಫುಲ್‌ಮೀಲ್ಸ್ ಸಿಕ್ಕಿದೆ. ಅನಾಥ ಹುಡುಗನೊಬ್ಬ ದುಷ್ಟರಾಜಕಾರಣಕ್ಕೆ ಸಿಲುಕಿ ದುರಂತಕ್ಕೆ ಸಿಲುಕುವ ಹೊತ್ತಲ್ಲಿ ಪ್ರೀತಿ, ಪ್ರೇಮದೊಂದಿಗೆ ತನ್ನ ಬದುಕಲ್ಲಿ ಹೊಸಬೆಳಕು ಮೂಡಿಸಿದವಳಿಂದ ಒಳ್ಳೆಯವನಾಗುವ ‘ಶ್ರೀಕಂಠ'ನ ರೋಚಕ ಪಯಣ ಕುತೂಹಲಕಾರಿಯಾದದ್ದು. ಆದರೆ, ಒಳ್ಳೆಯವನಾಗುವ ಹೊತ್ತಿಗೆ ಆತ ಮತ್ತೆ ಅನಾಥನಾಗುವ ಪರಿ ಹೃದಯ ಕಲಕುವಂತೆ ಮಾಡುತ್ತದೆ. ಈ ಕಾರಣದಿಂದಲೇ ಹೊಸ ತರಹದ ಕತೆಯಾಗಿ ಗಮನ ಸೆಳೆಯುವ ಈ ಚಿತ್ರ ಹೊಸ ವರ್ಷವನ್ನು ಭರ್ಜರಿಯಾಗಿಯೇ ಶುಭರಾಂಭಗೊಳಿಸಿದೆ ಎಂದರೂ ತಪ್ಪಿಲ್ಲ.
ಅನಾಥ ಹುಡುಗನೊಬ್ಬ ಗೊತ್ತು ಗುರಿ ಇಲ್ಲದೆ ಬೆಳೆಯುವುದು, ಆನಂತರ ಆತ ಲಾಂಗು, ಮಚ್ಚು ಸಂಸ್ಕೃತಿಗೆ ಸಿಲುಕುವ ಕತೆಗಳು ಕನ್ನಡಕ್ಕೇನು ಹೊಸದಲ್ಲ. ಶಿವರಾಜ್ ಕುಮಾರ್ ಸಿನಿ ಜರ್ನಿಯಲ್ಲಿಯೇ ಇಂತಹ ಅದೆಷ್ಟೋ ಚಿತ್ರಗಳು ಬಂದು ಹೋಗಿವೆ. ಲೆಕ್ಕ ಹಾಕಿದರೆ ಆ ಪಟ್ಟಿದೊಡ್ಡದು ಬಿಡಿ. ಮೇಲ್ನೋಟದಲ್ಲಿ ಈ ಚಿತ್ರವೂ ಇಂಥದ್ದೇ ಒಂದು ಕತೆ ಎಂದೆನಿಸಿದರೂ, ಅದರಳೊಗಡೆ ಒಂದು ಹೊಸ ರೀತಿಯ ಸಂಬಂಧದ ತವಕ, ತಲ್ಲಣದ ಅಲೆಗಳಿವೆ. ಅನಾಥನನ್ನು ಪತಿಯಾಗಿ ಸ್ವೀಕರಿಸಿ ಬಂದವಳ ಕನಸು, ಕನವರಿಕೆಗಳ ಭಾವನಾತ್ಮಕ ಸಂಬಂಧದ ಎಳೆಯೊಳಗೆ ಚಿತ್ರದ ಹಲವು ಸನ್ನಿವೇಶಗಳು ಪ್ರೇಕ್ಷಕರ ಕರುಳು ಹಿಂಡುವಂತೆ ಮಾಡುತ್ತವೆ. ಅದಕ್ಕೊಂದಿಷ್ಟುಪ್ರಚಲಿತ ವಿದ್ಯಮಾನಗಳ ಮಸಾಲೆ ಸೇರಿಕೊಂಡಿವೆ. ಹೀಗಾಗಿ ಕತೆಯೊಳಗಿನ ಪಾತ್ರಗಳ ನೋಟ ಹಳತೆನಿಸಿದರೂ, ಹೊಸ ರೀತಿಯ ಕತೆಯೂ ವಿಶಿಷ್ಟರೀತಿಯ ನಿರೂಪಣೆಯೊಂದಿಗೆ ಎರಡೂವರೆ ತಾಸಿನ ಪಯಣವನ್ನು ವಿಮಾನದ ಗತಿಯಲ್ಲಿ ನುಗ್ಗಿಸಿಬಿಡುತ್ತದೆ.
ಬೆಂಗಳೂರಿನಿಂದ ಆಗುಂಬೆಗೆ ಮಹಿಳೆಯ ಮೃತ ದೇಹ ಸಾಗಿಸುವ ಕಾರಿನ ಪಯಣವದು. ಆ ಕಾರಿನ ಚಾಲಕನೇ ಶ್ರೀಕಂಠ. ಆತನೊಂದಿಗೆ ಮದುವೆಯ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗುಂಬೆಗೆ ಹೊರಟವ ಮತ್ತೊಬ್ಬ. ಅಕಸ್ಮಿಕವಾಗಿ ಒಂದೇ ಕಾರಿನಲ್ಲಿ ಹೊರಟವರಿಬ್ಬರ ನಡುವಿನ ಜರ್ನಿಯೊಳಗೆ ತೆರೆದುಕೊಳ್ಳುವ ಕತೆ ಇದು. ತದ್ವಿರುದ್ಧ ಮನಸ್ಸಿನ ಇಬ್ಬರ ಮಾತುಗಳು ಘರ್ಷಣೆಯ ರೂಪಕ್ಕೆ ತಿರುಗುವಾಗ ನಿಜವಾದ ಕತೆ ಫ್ಲ್ಯಾಷ್ ಬ್ಯಾಕ್‌ನಲ್ಲಿ ಕಾಣಿಸುತ್ತದೆ. ನಿರೂಪಣೆ ಶೈಲಿಗೆ ನಿರ್ದೇಶಕರು ಫ್ಲ್ಯಾಷ್ ಬ್ಯಾಕ್ ತಂತ್ರ ಬಳಸಿದ್ದು ಇಲ್ಲಿ ನಿಜಕ್ಕೂ ಪ್ಲಸ್ ಆಗಿದೆ. ಕಾರಿನ ವೇಗದಲ್ಲಿಯೇ ಕತೆ ಸಾಗುತ್ತಾ ಹೋಗುತ್ತದೆ. ಅದರ ಜತೆಗೆ ಅನಾಥನಾಗಿ ಬೆಳೆದವನ ಮನಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡ ರಾಜಕಾರಣದ ಹುನ್ನಾರಗಳು ನೋಡುಗರಲ್ಲಿಯೇ ಕಿಚ್ಚು ಹತ್ತಿಸುವಷ್ಟರ ಮಟ್ಟಿಗೆ ತೆರೆಯಲ್ಲಿ ಬಿಚ್ಚಿಕೊಳ್ಳುತ್ತವೆ. ಅದೇ ವೇಳೆ, ಅನಾಥನ ಬದುಕಲ್ಲಿ ಪತ್ನಿಯಾಗಿ ಬಂದವಳ ಕನಸು -ಕನವರಿಕೆಗಳು, ಜನರ ಅಪನಂಬಿಕೆ ಗಳು, ಮಾಧ್ಯಮಗಳ ಧೋರಣೆಗಳು, ರೋಗಿಗಳನ್ನು ಬಲಿ ತೆಗೆದುಕೊಳ್ಳುವ ಟ್ರಾಫಿಕ್ ಜಾಮ್ ಕಿರಿ ಕಿರಿಗಳೂ ಕಾಣಿಸಿಕೊಂಡು ಪ್ರೇಕ್ಷಕರ ಹೃದಯ ನಾಟುತ್ತವೆ.
ಚಿತ್ರದ ಮೊದಲರ್ಧದಷ್ಟೇ ಲವಲವಿಕೆಯ ಓಟ ದ್ವಿತೀಯಾರ್ಧದಲ್ಲೂ ಇದೆ. ದ್ವಿತೀಯಾರ್ಧದ ಆರಂಭಕ್ಕೆ ನಿರ್ದೇಶಕರು, ಮದುವೆಯ ಟ್ವಿಸ್ಟ್ ನೀಡಿದ್ದು ಚಿತ್ರದ ಮುಂದಿನ ಪಯಣಕ್ಕೆ ಕುತೂಹಲ ಮೂಡುವಂತಾಗಿದೆ. ಬೆಂಗಳೂರಿನಲ್ಲಿಯೇ ಘಟಿಸುವ ಕತೆಯ ನಡುವೆಯೂ ಹಾಡುಗಳು ನೋಡುಗರನ್ನು ಏಕಾಏಕಿ ವಿದೇಶಕ್ಕೆ ಹಾರಿಸಿಕೊಂಡು ಹೋಗುವುದು ಸಂಬಂಧವೇ ಇಲ್ಲದಂತೆ ಮಾಡಿದೆ. ಆದರೂ ಸಹಿಸಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಸುರೇಶ್ ಬಾಬು ಛಾಯಾಗ್ರಹಣ ಬೆಂಗಳೂರು ಟು ಆಗುಂಬೆಯ ಜರ್ನಿಯೊಳಗೆ, ಬೆಂಗಳೂರಿನಲ್ಲಿ ಗಲ್ಲಿಗಳ ಮಧ್ಯೆ, ಹೊಡೆದಾಟದ ಸನ್ನಿವೇಶಗಳ ಜತೆಗೆ ವಿದೇಶದ ದೃಶ್ಯವೈಭವದಲ್ಲೂ ಆಪ್ತ ಎನಿಸುತ್ತದೆ. ಪ್ರಕಾಶ್ ಒಡೆಯರ್ ಸಂಭಾಷಣೆಯಲ್ಲಿ ಇನ್ನಷ್ಟುಖಡಕ್ ಮಾತುಗಳು ಸಿಡಿದಿದ್ದರೆ, ಚಿತ್ರದ ಕತೆಗೆ ಮತ್ತಷ್ಟುಶಕ್ತಿ ಬರುತ್ತಿತ್ತು.
ಕಲಾವಿದರ ಅಭಿನಯದ ವಿಚಾರಕ್ಕೆ ಬಂದರೆ, ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಅವರದ್ದು ಇಲ್ಲಿ ಭರ್ಜರಿ ಮಿಂಚಿಂಗ್. ಪ್ರತಿ ಕ್ಷಣವೂ ಸಿನಿರಸಿಕರು ತುದಿಗಾಲಲ್ಲಿ ನಿಲ್ಲುವಂತೆ ನಟಿಸಿದ್ದು ಅವರೊಳಗೆ ಈಗಲೂ ಇರುವ ನಟನೆಯ ಹಸಿವಿಗೆ ಕನ್ನಡಿ ಹಿಡಿಯುತ್ತದೆ. ನೃತ್ಯದಲ್ಲೂ ಇಷ್ಟವಾಗುತ್ತಾರೆ. ಕಾರಿನ ಪಯಣದಲ್ಲಿ ಕಾಣಿಸಿಕೊಳ್ಳುವ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ, ಶಿವಣ್ಣ ಅವರಿಗೆ ಪೈಪೋಟಿ ನೀಡುವ ಹಾಗೆ ಅಭಿನಯಿಸಿದ್ದು ವಿಶೇಷ. ನಾಯಕಿ ಚಾಂದಿನಿ ಶ್ರೀಧರನ್ ಅವರ ಮುದ್ದ ಮುಖ ನಟನೆಯಲ್ಲಿ ಇಷ್ಟವಾದಷ್ಟು, ದುಃಖದ ಸನ್ನಿವೇಶಗಳಲ್ಲಿ ಸಹಿಸಿಕೊಳ್ಳುವುದು ಕಷ್ಟಎನಿಸುತ್ತದೆ. ಬೆಳ್ಳಿತೆರೆಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡ ಸ್ಪರ್ಶ ರೇಖಾ ಅವರ ಭೋದನೆಯ ಮಾತುಗಳು ವಾಸ್ತವವನ್ನು ತೆರೆ ದಿಡುತ್ತವೆ. ಅಚ್ಯುತ್ ಕುಮಾರ್, ದೀಪಕ್ ಶೆಟ್ಟಿ, ಸ್ಪರ್ಶ ರೇಖಾ ಪಾತ್ರಗಳು ಪ್ರೇಕ್ಷಕರ ನೆನಪಲ್ಲಿ ಉಳಿಯುತ್ತವೆ. ಒಟ್ಟಿನಲ್ಲಿ ಇಡೀ ಚಿತ್ರ ಪ್ರತಿ ವಿಭಾಗದಲ್ಲೂ ನೋಡಿಸುವ, ಕಾಡಿಸುವ ತನ್ನ ವಿಶಿಷ್ಟಗುಣದೊಂದಿಗೆ ನಿರ್ದೇಶಕ ಮಂಜು ಸ್ವರಾಜ್ ಅವರ ಜಾಣ್ಮೆಯನ್ನು ಮೆರೆಸುವಂತೆ ಮಾಡಿವೆ.
- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
(epaper.kannadaprabha.in)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.