
ರಾಮ್ ಚರಣ್ ಸಹೋದರಿ ಶ್ರೀಜಾ ಕೋನಿದೆಲಾ ಅವರು ತಮ್ಮ ಬದುಕಿನ ನೋವು, ಸಂಘರ್ಷ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ತಾವೊಬ್ಬ 'ಸಂತ್ರಸ್ತೆ' (victim) ಎಂಬ ಭಾವನೆಯಿಂದ ಹೊರಬಂದಿದ್ದು ಹೇಗೆ? 15 ತಿಂಗಳ ಒಂದು ಪ್ರಾಜೆಕ್ಟ್ ತಮ್ಮ ಜೀವನವನ್ನೇ ಹೇಗೆ ಬದಲಿಸಿತು? ಎಂಬುದರ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿವರಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಮತ್ತು ರಾಮ್ ಚರಣ್ ಅವರ ಸಹೋದರಿ ಶ್ರೀಜಾ ಕೋನಿದೆಲಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ಕೌಟುಂಬಿಕ ಚರ್ಚೆ ಅಥವಾ ವಿವಾದದಿಂದಲ್ಲ, ಬದಲಾಗಿ ತಮ್ಮ ವೈಯಕ್ತಿಕ ಬೆಳವಣಿಗೆಯ ಪಯಣದ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿರುವ ಶ್ರೀಜಾ, ತಮ್ಮ ಜೀವನದ ನೋವು, ಸಂಘರ್ಷ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಹಳ ಕಾಲದಿಂದ ತಮ್ಮನ್ನು ತಾವೇ ಒಬ್ಬ 'ಸಂತ್ರಸ್ತೆ' ಎಂದು ಭಾವಿಸಿದ್ದೆ, ಆದರೆ 15 ತಿಂಗಳ 'ಸೆಲ್ಫ್ ಮಾಸ್ಟರಿ ಪ್ರಾಜೆಕ್ಟ್' ನನ್ನ ಆಲೋಚನಾ ಕ್ರಮವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
'ಸಂತ್ರಸ್ತೆ' ಮನಸ್ಥಿತಿಯಿಂದ ಹೊರಬಂದ ರಾಮ್ ಚರಣ್ ಸಹೋದರಿ
ಶ್ರೀಜಾ ಕೋನಿದೆಲಾ ತಮ್ಮ ವಿಡಿಯೋದಲ್ಲಿ, "ನನ್ನ ಜೀವನದುದ್ದಕ್ಕೂ 'ನನಗೆ ಯಾಕೆ ಹೀಗಾಗುತ್ತಿದೆ?' ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಈಗ ನಾನು ಆ ಮಾನಸಿಕ ಸ್ಥಿತಿಯಿಂದ ಹೊರಬಂದಿದ್ದೇನೆ. ಜೀವನವೆಂದರೆ ಕೇವಲ ನಮ್ಮ ಜೊತೆ ನಡೆಯುವ ಘಟನೆಗಳಲ್ಲ, ಅದನ್ನು ನಾವೇ ರೂಪಿಸಿಕೊಳ್ಳಬಹುದು ಎಂಬುದನ್ನು ಈಗ ಅರ್ಥಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ನೋವೇ ಶ್ರೀಜಾ ಅವರ ಗುರುತಾಗಿತ್ತಂತೆ!
ತಮ್ಮ ನೋವು ಮತ್ತು ಸಂಘರ್ಷಗಳೇ ದೀರ್ಘಕಾಲದವರೆಗೆ ತಮ್ಮ ಗುರುತಾಗಿತ್ತು ಎಂದು ಶ್ರೀಜಾ ಒಪ್ಪಿಕೊಂಡಿದ್ದಾರೆ. "ನನ್ನ ಇಡೀ ಜೀವನವನ್ನು ನನ್ನ ನೋವು ಮತ್ತು ಗತಕಾಲದೊಂದಿಗೆ ಗುರುತಿಸಿಕೊಂಡಿದ್ದೆ. ಆದರೆ ನನ್ನೊಂದಿಗೆ ನಡೆದ ಕೆಟ್ಟ ಘಟನೆಗಳೇ ನಾನಲ್ಲ ಎಂಬುದನ್ನು ಈಗ ಅರಿತಿದ್ದೇನೆ" ಎಂದು ಅವರು ಹೇಳಿದ್ದಾರೆ. 'Sacred Paths' ಸಂಸ್ಥೆಯ 'ಸೆಲ್ಫ್ ಮಾಸ್ಟರಿ ಪ್ರಾಜೆಕ್ಟ್'ನಲ್ಲಿ ಭಾಗವಹಿಸಿದ್ದು ತಮ್ಮ ಆಲೋಚನೆಗಳನ್ನು ಬದಲಾಯಿಸಿತು ಎಂದು ಶ್ರೀಜಾ ತಿಳಿಸಿದ್ದಾರೆ. ಈ ಕಾರ್ಯಕ್ರಮದ ನಂತರ, ಅವರು ತಮ್ಮನ್ನು ಹೊಸ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ್ದಾರೆ.
ಶ್ರೀಜಾ ಅವರ ವೈಯಕ್ತಿಕ ಜೀವನ ಮತ್ತು ಸಂಘರ್ಷದ ಕಥೆ
ಶ್ರೀಜಾ ಅವರ ವೈಯಕ್ತಿಕ ಜೀವನವು ಸಾಕಷ್ಟು ಏಳುಬೀಳುಗಳಿಂದ ಕೂಡಿದೆ. 2007ರಲ್ಲಿ, ತಮ್ಮ 19ನೇ ವಯಸ್ಸಿನಲ್ಲಿ, ಕುಟುಂಬದ ವಿರೋಧದ ನಡುವೆ ತಮ್ಮ 22 ವರ್ಷದ ಬಾಯ್‌ಫ್ರೆಂಡ್ ಶಿರೀಶ್ ಭಾರದ್ವಾಜ್ ಅವರನ್ನು ಮದುವೆಯಾಗಿದ್ದರು. ಹೈದರಾಬಾದ್‌ನ ಆರ್ಯ ಸಮಾಜದಲ್ಲಿ ಇಬ್ಬರೂ ಮದುವೆಯಾದಾಗ, ಚಿರಂಜೀವಿ ಮಗಳು ಮನೆ ಬಿಟ್ಟು ಹೋಗಿ ಮದುವೆಯಾಗಿ, ಮಾಧ್ಯಮ ಮತ್ತು ಪೊಲೀಸರ ರಕ್ಷಣೆ ಕೇಳಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಚರ್ಚೆಯಾಗಿತ್ತು. 2008ರಲ್ಲಿ, 20ನೇ ವಯಸ್ಸಿನಲ್ಲಿ ಶ್ರೀಜಾ ಅವರು ನಿವೃತಿ ಭಾರದ್ವಾಜ್ ಎಂಬ ಮಗಳಿಗೆ ಜನ್ಮ ನೀಡಿದರು. 2011ರಲ್ಲಿ ಪತಿ ಶಿರೀಶ್ ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ತವರು ಮನೆಗೆ ಮರಳಿದರು. 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.
ಎರಡನೇ ಮದುವೆ ಕೇವಲ 4 ವರ್ಷಕ್ಕೆ ಅಂತ್ಯ
2016ರಲ್ಲಿ, ಶ್ರೀಜಾ ಅವರು ತಮ್ಮ ಬಾಲ್ಯದ ಗೆಳೆಯ ಮತ್ತು ಉದ್ಯಮಿ ಕಲ್ಯಾಣ್ ದೇವ್ ಅವರನ್ನು ಎರಡನೇ ಮದುವೆಯಾದರು. 2018ರಲ್ಲಿ ಇವರಿಗೆ ನಿವಿಷ್ಕಾ ಎಂಬ ಮಗಳು ಜನಿಸಿದಳು. 2022ರಲ್ಲಿ, ಈ ಜೋಡಿ ಅಜ್ಞಾತ ಕಾರಣಗಳಿಂದ ಬೇರ್ಪಟ್ಟಿತು. 2023ರಲ್ಲಿ ಕಲ್ಯಾಣ್ ದೇವ್ ಅವರೇ ಬೇರ್ಪಟ್ಟಿರುವುದನ್ನು ಖಚಿತಪಡಿಸಿದರು. 2024ರಲ್ಲಿ ಕಲ್ಯಾಣ್ ದೇವ್ ನಿಧನರಾದರು.
ಶ್ರೀಜಾ ಅವರಲ್ಲದೆ ಚಿರಂಜೀವಿ ಅವರಿಗೆ ಸುಶ್ಮಿತಾ ಕೋನಿದೆಲಾ ಎಂಬ ಇನ್ನೊಬ್ಬ ಮಗಳಿದ್ದಾಳೆ. ಸುಶ್ಮಿತಾ ಅವರು 2006ರಲ್ಲಿ ಉದ್ಯಮಿ ಎಲ್.ವಿ. ವಿಷ್ಣು ಪ್ರಸಾದ್ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಸಮಾರಾ ಮತ್ತು ಶಮಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಚಿರಂಜೀವಿ ಅವರ ಪುತ್ರ, ಸೂಪರ್‌ಸ್ಟಾರ್ ರಾಮ್ ಚರಣ್ ಅವರು ಉಪಾಸನಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಕ್ಲಿನ್ ಕಾರಾ, ಅನ್ವೀರಾದೇವಿ ಮತ್ತು ಶಿವರಾಮ್ ಎಂಬ ಮೂವರು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.